'ಶ್ರೀ' ಕಾವ್ಯನಾಮದಿಂದ ಪ್ರಸಿದ್ಧ ರಾದವರು ಶ್ರೀ ಬಿ ಎಂ ಶ್ರೀ , ' ಕನ್ನಡದ_ಕಣ್ವ' ಎಂದೇ ಹೆಸರಾದ ಇವರು ಕನ್ನಡದ ಜನರೇ ಕನ್ನಡ ಮಾತಾಡಲು ಹಿಂದೆಗೆಯುತ್ತಿದ್ದ ಕಾಲದಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿದ್ದೂ ಕನ್ನಡದಲ್ಲಿ ಕೃತಿಗಳನ್ನು ರಚಿಸಿದವರು. ಇವರ ' ಅಶ್ವತ್ತಾಮನ್ '' ಗದಾಯುದ್ಧ ನಾಟಕಮ್ ' ಎಷ್ಟು ಪ್ರಸಿದ್ಧವೋ ಅಷ್ಟೇ ಅವರ ರಚನೆಯ ' ಇಂಗ್ಲೀಷ್ ಗೀತಗಳು ' ಕೂಡ. ಅನೇಕ ಇಂಗ್ಲೀಷ್ ಕವನಗಳನ್ನು ಕನ್ನಡಕ್ಕೆ ತಂದು ಕನ್ನಡಿಗರಿಗೆ ಇಂಗ್ಲೀಷ್ ಕವನ ಸಾಹಿತ್ಯದ ಸೊಬಗನ್ನು ಉಣಬಡಿಸಿದ್ದಾರೆ. ಮೂಲ ಕವನದ ಸೊಗಸಿಗೆ ಸ್ವಲ್ಪವೂ ಭಂಗ ಬರದಂತೆ ಕವನಗಳನ್ನು ರಚಿಸಿದ್ದಾರೆ. ಇವ್ಯಾವುವೂ ಪದಶಃ ಅನುವಾದವಲ್ಲ. ಎಲ್ಲ ಭಾವಾನುವಾದಗಳು. ಮೂಲ ಆಂಗ್ಲ ಕವನದ ಭಾವಗಳ ರಸಘಟ್ಟಿಯನ್ನು ಕನ್ನಡದಲ್ಲಿಯೂ ಹಾಗೆಯೇ ಇಳಿಸಿದ್ದಾರೆ ಎನ್ನಬಹುದು. ತಮ್ಮ ಪ್ರಯತ್ನದ ಬಗ್ಗೆ ಬರೆಯುತ್ತಾ ಕವಿ ಶ್ರೀ ಅವರು ಸುಂದರ ಸಾಲುಗಳಲ್ಲಿ ಹೀಗೆ ಬರೆದಿದ್ದಾರೆ
" ಇವಳ ಸೊಬಗನವಳು ತೊಟ್ಟು
ನೋಡ ಬಯಸಿದೆ;
ಅವಳ ತೊಡಿಗೆ ಇವಳಿಗಿಟ್ಟು
ಹಾಡ ಬಯಸಿದೆ. "
ಕವನ ಸಂಕಲನದ ಆರಂಭದಲ್ಲಿಯೇ ಬಿ. ಎಂ. ಶ್ರೀ.ಯವರು ಹೀಗೆ ಅರಿಕೆ ಮಾಡಿಕೊಂಡಿದ್ದಾರೆ: “ಯಾರ ಸಂತೋಷಕ್ಕಾಗಿ ಮೊದಲು ನಾನು ಈ ಗೀತಗಳನ್ನು ಬರೆದೆನೋ ಆ ಕಣ್ಣುಗಳು ಬೇಗ ಮುಚ್ಚಿ ಹೋಗಿ, ಕೆಲವು ವರ್ಷ ಗ್ರಂಥ ನನ್ನಲ್ಲಿಯೇ ಉಳಿದುಕೊಂಡಿತು…… ಇಂಗ್ಲಿಷ್ ಕಾವ್ಯಮಾರ್ಗವನ್ನು ಕನ್ನಡಿಗರು ಈ ಸಣ್ಣ ಗ್ರಂಥದಿಂದ ಸ್ವಲ್ಪ ಮಟ್ಟಿಗೆ ತಿಳಿಯಬಹುದಾಗಿದೆ. “ಭಾಷಾಂತರಕಾರರು ಕೊಲೆಗಾರರು” ಎಂದು ಪಾಶ್ಚಾತ್ಯರಲ್ಲಿ ಒಂದು ಗಾದೆಯುಂಟು. ಆ ಅಪವಾದವನ್ನು ತಪ್ಪಿಸಿಕೊಂಡಿರುವೆ-ನೆಂದು ನಾನು ತಿಳಿದುಕೊಂಡಿಲ್ಲ. ಆದರೆ, ನನ್ನ ಬುದ್ಧಿ ಬಲವಿರುವ ಮಟ್ಟಿಗೂ ಮೂಲವನ್ನು ಪ್ರತಿಬಿಂಬಿಸುವ ಕರ್ತವ್ಯವನ್ನೇ ಮುಂದಿಟ್ಟುಕೊಂಡು ಕೆಲಸಮಾಡಿದ್ದೇನೆ……. “
ಇಂಗ್ಲಿಷ್ ಗೀತಗಳು ಈಗ ಲಭ್ಯವಿರುವ ಆವೃತ್ತಿಗೂ ಮೊದಲು ಅನೇಕ ಮಜಲುಗಳನ್ನು ದಾಟಿಬಂದಿದೆ. ಶ್ರೀಯವರೇ ಹೇಳಿಕೊಂಡಂತೆ ಅವರ ಗುರುಗಳಾದ ಬಾಪು ಸುಬ್ಬರಾಯರು ಶ್ರೀಯವರ ಮೂರು ಅನುವಾದಿತ ಕವಿತೆಗಳನ್ನು 1919ರ ಹೊತ್ತಿಗೆ 'ವಿದ್ಯಾದಾಯಿನಿ' ಪತ್ರಿಕೆಯಲ್ಲಿ ಪ್ರಕಟಪಡಿಸಿದರು. ಶ್ರೀಯವರೇ ಹೇಳಿಕೊಂಡಂತೆ 'ಕರ್ಣಾಟಕ ಜನಜೀವನ'ದ ಸಂಚಿಕೆಗಳಲ್ಲಿ ಹಲವಾರು ಅನುವಾದಗಳು ಪ್ರಕಟಗೊಂಡವು. 1921ರ ಹೊತ್ತಿಗೆ ಹನ್ನೆರಡು ಕವಿತೆಗಳು ಪ್ರಕಟಗೊಂಡವು. 1924ರ ಹೊತ್ತಿಗೆ ಇಪ್ಪತ್ತನಾಲ್ಕು ಕವಿತೆಗಳಷ್ಟು ಒಂದು ಸಂಗ್ರಹದಲ್ಲಿ ಬಂದವು. 1926ರ ಹೊತ್ತಿಗೆ ಇಂಗ್ಲಿಷ್ ಗೀತಗಳು ಸಮಗ್ರವಾಗಿ ಪ್ರಕಟಗೊಂಡಿತು. ತೀನಂಶ್ರೀಯವರು ಉಲ್ಲೇಖಿಸುವಂತೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದವರು ಒಟ್ಟು ಅರವತ್ತು ಅನುವಾದಗಳನ್ನು ಅವರ ಸ್ವತಂತ್ರ ಕವಿತೆಗಳಾದ ಕಾಣಿಕೆ, ಭರತಮಾತೆಯ ವಾಕ್ಯ, ಮೈಸೂರು ಮಕ್ಕಳು ಎಂಬವುಗಳನ್ನು ಸೇರಿಸಿ 1926ನೆಯ ಇಸವಿಯಲ್ಲಿ 'ಪ್ರಬುದ್ಧ ಕರ್ಣಾಟಕ'ದ ಚಂದಾದಾರರಿಗೆ ಉಡುಗೊರೆಯಾಗಿ ನೀಡಿದರು (1952ರಲ್ಲಿ ಇಂಗ್ಲಿಷ್ ಗೀತೆಗಳಿಗೆ ಬರೆದ ಪ್ರಸ್ತಾವನೆ). ಈಗಿನ ಪ್ರಕಟಣೆಗಳಲ್ಲಿಯೂ ಇಂಗ್ಲಿಷ್ ಗೀತಗಳು ಎನ್ನುವುದು ಅರವತ್ತು ಕವಿತೆಗಳ ಸಂಗ್ರಹವೇ ಆಗಿ ದೊರೆಯುತ್ತಲಿದೆ. ಈ ಒಟ್ಟು ಅರವತ್ತು ಕವಿತೆಗಳನ್ನು ಅನುವಾದ ಮಾಡುವ, ಪರಿಷ್ಕಾರಗೊಳಿಸುವ ಈ ಅವಧಿಯು ಸಹ ದೀರ್ಘಾವಧಿಯದೇ. ಶ್ರೀಯವರು ತಮ್ಮ ಈ ಅನುವಾದಗಳನ್ನು ಹತ್ತಿರ ಹತ್ತಿರ ಒಂದು ದಶಕದಷ್ಟು ಕಾಲದಲ್ಲಿ ಮಾಡಿದ್ದು ಅವರ ಪರಿಷ್ಕರಣೆಗಳು ಸಹ ಸಾಂಸ್ಕೃತಿಕ ಪ್ರಭಾವಗಳಿಂದ ಮತ್ತೆ ಮತ್ತೆ ಮರು ರೂಪಗಳನ್ನು ಪಡೆದುಕೊಂಡಿದೆ ಎನ್ನಬಹುದು.
“ಇಂಗ್ಲಿಷ್ ಗೀತಗಳ"ಲ್ಲಿ ಛಂದಸ್ಸಿನ ಹೊಸದೊಂದು ಹೆದ್ದಾರಿಯನ್ನೇ ತೆರೆದುಕೊಂಡಿತು. ಕನ್ನಡ ಕಾವ್ಯದ ಚರಿತ್ರೆಯಲ್ಲಿ ಅವರ ಹೆಸರು ಚಿರಸ್ಮರಣೀಯವಾಗಿ ನಿಲ್ಲುವಂತಾಯಿತು. “ಕಾಣಿಕೆ" ಕವನದಲ್ಲಿ ತಾನು ಇಂಗ್ಲಿಷ್ ಕವಿತೆಗಳ ಅನುವಾದದ ಕಾಯಕ ಕೈಗೆತ್ತಿಕೊಂಡ ಉದ್ದೇಶವನ್ನು ಬಿ. ಎಂ. ಶ್ರೀ. ಸ್ಪಷ್ಟ ಪಡಿಸಿರುವ ಪರಿ:
“ಹೀಗೆ ನನಗೆ ಹಬ್ಬವಾಗಿ,
ಇನಿಯರಿಬ್ಬರನ್ನು ತೂಗಿ,
ಇವಳ ಸೊಬಗನವಳು ತೊಟ್ಟು,
ನೋಡ ಬಯಸಿದೆ;
ಅವಳ ತೊಡಿಗೆ ಇವಳಿಗಿಟ್ಟು
ಹಾಡ ಬಯಸಿದೆ.”
ಕವಿತೆಗಳಲ್ಲಿ ಆಸಕ್ತರು, ಕನ್ನಡ ಸಾಹಿತ್ಯದ ಕುರುತು ತಿಳಿದುಕೊಳ್ಲಬೇಕೆನ್ನುವವರು ಓದಿ ಆಸ್ವಾದಿಸಲೇ ಬೇಕಾದ ಪುಸ್ತಕ “ಇಂಗ್ಲಿಷ್ ಗೀತಗಳು”. ಜೊತೆಗೆ, ಅನುವಾದ ಅಂದರೇನು? ಅನುವಾದ ಹೇಗಿರಬೇಕು? ಎರಡೂ ಭಾಷೆಗಳ ಮೇಲೆ ಪ್ರಭುತ್ವವಿದ್ದಾಗ ಮಾತ್ರ ಅನುವಾದ ಹೇಗೆ ಅದ್ಭುತವಾಗಿ ಮೂಡಿ ಬರಲು ಸಾಧ್ಯ ಎಂಬುದನ್ನು ಮತ್ತೆಮತ್ತೆ ಮನಮುಟ್ಟುವಂತೆ ತೋರಿಸುವ ಕೃತಿ ಇದಾಗಿದೆ.
- ರಾಘವೇಂದ್ರ ಅಡಿಗ ಎಚ್ಚೆನ್.