ಬಿಗ್ ಬ್ಯಾಂಗ್ - ವಿಶ್ವದಂತರಾಳವರಿವ ತವಕ

ಬಿಗ್ ಬ್ಯಾಂಗ್ - ವಿಶ್ವದಂತರಾಳವರಿವ ತವಕ

ಬರಹ

ಇರುವುದೆಲ್ಲವ ಬಿಟ್ಟು  ಕಣ್ಣಿಗೆ ಕಾಣದ್ದನ್ನ , ತನ್ನ ಊಹೆಗೆ ನಿಲುಕದ್ದನ್ನ, ಬ್ರಹ್ಮ ಸೃಷ್ಠಿಯನ್ನ ಅರ್ಥಮಾಡಿಕೊಳ್ಳಲಿಕ್ಕೆ ಹವಣಿಸುವುದು, ತನ್ನನ್ನ ತಾನು ಪರೀಕ್ಷೆಗೆ ಒಡ್ಡಿ ಕೊಳ್ಳುವುದು, ಪ್ರಕೃತಿಯೊಡನೆ ಆಟಕ್ಕೂ ಇಳಿಯುವುದು ಮಾನವ ಸಹಜ ಗುಣ. ಈ ಗುಣವೇ ಅನೇಕ ಅನ್ವೇಷಣೆಗಳಿಗೆ ಕಾರಣವಾಗಿದೆ ಕೂಡ. ಇಂದು ಅದರ ದೈತ್ಯ ಉದಾಹರಣೆಯೊಂದು ನಮ್ಮ ಮುಂದಿದೆ.

೮೦ಕ್ಕೂ ಹೆಚ್ಚು ದೇಶಗಳ ೩ ಸಾವಿರಕ್ಕೂ ಹೆಚ್ಚು ವಿಜ್ಞಾನಿಗಳು ೧೪ ವರ್ಷಗಳಿಂದ ೧೦ಬಿಲಿಯನ್ ಡಾಲರ್ ವೆಚ್ಚ ಮಾಡಿ CERN (ಯುರೋಪಿಯನ್ ಆರ್ಗನೈಸೇಶನ್ ಫಾರ್ ನ್ಯೂಕ್ಲಿಯರ್ ರಿಸರ್ಚ್) ನಡಿಯಲ್ಲಿ,  ಎಲ್.ಎಚ್.ಎಸ್ (LHS - Large Hadron Collider) ಎಂಬ ಅಣು ವೇಗವರ್ಧಕದ  ವೃತ್ತಾಕಾರದ ಕೊಳವೆ ಯನ್ನ ಫಾನ್ಸ್ ಮತ್ತು ಸ್ವಿಡ್ಜರ್ ಲ್ಯಾಂಡಿನ  ಗಡಿಯಲ್ಲಿ ಭುವಿಯ ಗರ್ಭದಲ್ಲಿ ನೂರಾರು ಅಡಿಗಳ ಕೆಳಗೆ ಹುದುಗಿಸಿಟ್ಟು , ಭೌತಶಾಸ್ತ್ರದ ಮಹಾ ಪ್ರಯೋಗವನ್ನ ಮಾಡಲಿಕ್ಕೆ ಶುರು ಹಚ್ಚಿ ಕೊಂಡಿದ್ದಾರೆ. ಇದರ ಉದ್ದ ಸುಮಾರು ೨೭ ಕಿಲೋಮೀಟರ್ ಗಳು.  ಪ್ರಪಂಚದಾಧ್ಯಂತ ೬೦ ಸಾವಿರಕ್ಕೂ ಹೆಚ್ಚಿನ ಕಂಪ್ಯೂಟರುಗಳು ಈ ಪ್ರಯೋಗದ ಅಂಕಿಅಂಶಗಳನ್ನ ಪರಿಶೀಲಿಸಲಿವೆ.

ಚಿತ್ರ : ಎಲ್.ಎಚ್.ಎಸ್ . ಬೋಸ್ಟನ್ ಡಾಟ್ ಕಾಮ್.

ಇತರೆ ಚಿತ್ರಗಳನ್ನ ಇಲ್ಲಿ ಪಡೆಯಿರಿ.

ಬಿಲಿಯಾಂತರ ವರ್ಷಗಳ ಹಿಂದೆ  ವಿಶ್ವ ಈಗಿನ ಸ್ಥಿತಿಗೆ ಬರಲು ಇಟ್ಟ ಮೊದಲ ಹೆಜ್ಜೆ "ಮಹಾ ಸ್ಪೋಟ" ಅಥವಾ "ಬಿಗ್ ಬ್ಯಾಂಗ್". ಅಣು ಪರಮಾಣುಗಳ ಸಂಫರ್ಷ ಇದಕ್ಕೆ ಕಾರಣವೆನ್ನುವುದು ಇಂದಿಗೂ ಥಿಯರಿಯಷ್ಟೆ. ಅಂದು ಆದ ಆ ಸ್ಫೋಟಕ್ಕೆ ಅಗಾಧ ಪ್ರಮಾಣದ ವೆಚ್ಚವಾಗಿತ್ತು ಅನ್ನುವ ಅಂದಾಜು ಮಾತ್ರ ನಮ್ಮಲ್ಲಿದೆ.  ನಮ್ಮ ಎಷ್ಟೋ ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಳ್ಳಲು, ವಿಶ್ವದ ಹೊಸ ಆಯಾಮವನ್ನ ಅರಿಯಲು, ನಮ್ಮ ನಿಲುಕಿಗೆ ಸಿಗದ ವಿಶ್ವದ ೯೬% ಭಾಗವನ್ನ ತನ್ನಲ್ಲಡಗಿಸಿಕೊಂಡಿದೆ ಎನ್ನಲಾದ  ಡಾರ್ಕ್ ಪಾರ್ಟಿಕಲ್ಸ್ ಗಳ ಬಗ್ಗೆ ಅರಿಯಲು , "ಹಿಗ್ಸ್ ಬೊಸನ್" ಎಂಬ ಕಣದ ಬಗ್ಗೆ ಅರಿಯಲು  ಇಂದಿನಿಂದ ಒಂದು ತಿಂಗಳ ಕಾಲ ನೆಡೆಯುವ ಈ ಬಿಗ್ ಬ್ಯಾಂಗ್ ಅಣಕು ಎಂತಲೇ ಕರೆಯ ಬಹುದಾದ ಈ ಪ್ರಯೋಗ ಸಹಕಾರಿಯಾಗಲಿದೆ. ಮಹಾಸ್ಪೋಟದ ಪ್ರಾಥಮಿಕ ಹಂತದ ಒಂದು ಅವಸ್ಥೆಯನ್ನ ಮಾನವ ನಿಯಂತ್ರಿತ ವ್ಯವಸ್ಥೆಯಲ್ಲಿ ನಿರ್ಮಿಸುವ ಪ್ರಯತ್ನ ಕೂಡ ಇದಾಗಿದೆ.

ವಿಶ್ವದ ಆರಂಭವನ್ನ ಅರಿಯಲಿಕ್ಕೇ ನೆಡೆಯುತ್ತಿದೆ ಎನ್ನುವ ಈ ಪ್ರಯೋಗದ ಬಗ್ಗೆ ನೂರಾರು ವಿಡಿಯೋಗಳು ಯೂಟ್ಯೂಬ್ ಮತ್ತು ಇತರೆ ವೆಬ್ಸೈಟ್ಗಳಲ್ಲಿ ಆಗಲೇ ಅನೇಕರನ್ನ ಆಕರ್ಷಿಸಿವೆ.

ಭಾರತದ ಕೊಡುಗೆ:

೩೦ ಭಾರತೀಯ ವಿಜ್ಞಾನಿಗಳು ಈ ಒಂದು ಪ್ರಯೋಗದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವುದೇ ಅಲ್ಲದೆ, ಬೃಹತ್ ಪ್ರಮಾಣದ ವೈಜ್ಞಾನಿಕ ತಂತ್ರಜ್ಞಾನದ ಕೊಡುಗೆಯನ್ನ Raja Ramanna Center for Advanced Technology (RRCAT) ಯ ಮುಖ್ಯಸ್ಥತೆಯಲ್ಲಿ  ಭಾರತದ ಅನೇಕ ವೈಜ್ಞಾನಿಕ ಲ್ಯಾಬೋರೇಟರಿಗಳು ನೀಡಿವೆ. ಅದರ ಕೆಲವು ವಿಷಯಗಳು ಈ ಪಿ.ಡಿ.ಎಫ್ ಪ್ರತಿಯಲ್ಲಿವೆ.  ಅಂತರರಾಷ್ಟ್ರೀಯ ನಿಕರತೆ ಯ ಬೇಡಿಕೆಯನ್ನ ಭಾರತೀಯ ಲ್ಯಾಬೊರೇಟರಿಗಳು ಒದಗಿಸಿರುವುದು ಶ್ಲಾಘನೀಯ.

ಬೆಂಗಳೂರಿನ ಪಾತ್ರ:

ಈ ಒಂದು ಪ್ರಯೋಗಕ್ಕೆ ಬೇಕಾದ ೬೮೦೦ PMPS ಜಾಕ್ ಗಳು, ಇತರೆ ವೈಜ್ಞಾನಿಕ ಉಪಕರಣಗಳನ್ನ ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲಾಗಿದೆ. ಇದರ ಜೊತೆಗೇ ಕೆಲವು ಪ್ರಾಯೋಗಿಕ ಪರೀಕ್ಷೆಗಳನ್ನ ನೆಡೆಸಿರೋದು ಮೇಲೆ ಕೊಟ್ಟಿರುವ ಪಿ.ಡಿ.ಎಫ್ ನಲ್ಲಿದೆ.

ಟಾಟ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್(TIFR) ತನ್ನ ಬ್ಯಾಂಡ್ ವಿಡ್ತನ ಬಲದ ಮೇಲೆ ಈ ಪ್ರಯೋಗವನ್ನ ವಿಶ್ವದ ಎಲ್ಲರಿಗೆ ಲೈವ್ ಫೀಡ್ ಮೂಲಕ ಪಸರಿಸ್ತಿದೆ.

ಇವೆಲ್ಲವೂ ನಮಗೆಲ್ಲ ಹೆಮ್ಮೆಯ ವಿಚಾರಗಳಾಗಿವೆ. ಭೌತಶಾಸ್ತ್ರದ ಅನೇಕ ಥಿಯರಿಗಳನ್ನ ಈ ಪ್ರಯೋಗ ತಿಳಿಯಾಗಿಸಿದರೆ ಆಶ್ಚರ್ಯವಿಲ್ಲ. 

ಕೊಸರು: ಇಷ್ಟೆಲ್ಲಾ ವರ್ಷ ಕಷ್ಟ ಪಟ್ಟು ವಿಶ್ವದ ಮರ್ಮವನ್ನ ಅರಿಯಲು ವಿಜ್ಞಾನಿಗಳು ಅಣಿಯಾಗಿರುವಾಗಲೇ ವಿಶ್ವದ ಕೊನೆಯನ್ನ ಈ ಪ್ರಯೋಗ ಬರೆಯತ್ತೆ ಅನ್ನೋರು ಹಲವಾರು ಮಂದಿ. ಇದಕ್ಕೆ ಪ್ರತ್ಯುತ್ತರವನ್ನ ಅನೇಕ ವಿಜ್ಞಾನಿಗಳು ಈಗಾಗಲೇ ನೀಡಿದ್ದಾರೆ, ಸಂಪದದಲ್ಲಿ ಅದರ ಬಗೆಗೂ ಒಂದು ಲೇಖನ ಬರಲಿದೆ.

 ಲೈವ್ ಫೀಡ್ :  ಈ ಪ್ರಯೋಗವನ್ನ ಪ್ರಪಂಚದಾದ್ಯಂತ ಎಲ್ಲರಿಗೆ ತಿಳಿಸಲು CERN ಅಣಿಯಾಗಿದೆ. ಈ ವಿಡಿಯೋಲಿಂಕ್ ನೋಡಿ