ಬಿಜೆಪಿ 25 + 1 ಕರ್ನಾಟಕದಲ್ಲಿ ಕಮಲ ಅರಳಿದ ಕತೆ

ಬಿಜೆಪಿ 25 + 1 ಕರ್ನಾಟಕದಲ್ಲಿ ಕಮಲ ಅರಳಿದ ಕತೆ

ಪುಸ್ತಕದ ಲೇಖಕ/ಕವಿಯ ಹೆಸರು
ರಮೇಶ್ ದೊಡ್ಡಪುರ
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೯೯.೦೦ ಮೊದಲ ಮುದ್ರಣ : ಸೆಪ್ಟೆಂಬರ್ ೨೦೨೦

ಪತ್ರಕರ್ತ ರಮೇಶ್ ದೊಡ್ಡಪುರ ಇವರು ೨೦೧೯ರ ಲೋಕಸಭಾ ಚುನಾವಣೆಯನ್ನು ಹತ್ತಿರದಿಂದ ಕಂಡು ವರದಿ ಮಾಡಿದವರು. ಅವರು ಕಂಡ ಚುನಾವಣೆಯ ಸಾರ ಸಂಗ್ರಹವೇ ಬಿಜೆಪಿ ೨೫ + ೧ ಕರ್ನಾಟಕದಲ್ಲಿ ಕಮಲ ಅರಳಿದ ಕತೆ ಎಂಬ ಪುಸ್ತಕ. ಈ ಪುಸ್ತಕದ ಬೆನ್ನುಡಿಯಲ್ಲಿ ಬರೆದಂತೆ ‘೨೦೧೮ರ ವಿಧಾನ ಸಭೆ ಚುನಾವಣೆ ಹಾಗೂ ೨೦೧೯ ರ ಲೋಕಸಭಾ ಚುನಾವಣೆ ಅವಧಿಯೇ ದಾಖಲೆಗಳ ಕಾಲಮಾನ. ದೇಶದ ಇತಿಹಾಸದಲ್ಲೇ ಒಂದು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರವನ್ನು ಪ್ರವಾಸ ಮಾಡಿದ ದಾಖಲೆ ನಿರ್ಮಾಣವಾದದ್ದು (ಬಿ.ಎಸ್. ಯಡಿಯೂರಪ್ಪ) ಇದೇ ಅವಧಿಯಲ್ಲಿ. ದೇಶದ ನ್ಯಾಯಾಂಗ ಇತಿಹಾಸದಲ್ಲಿ ರಾತ್ರಿಯಿಡೀ ವಿಚಾರಣೆ ನಡೆದ ಮೊದಲ ರಾಜಕೀಯ ಪ್ರಕರಣ, ಸುಮಲತಾ ಅಂಬರೀಷ್ ಜಯಿಸುವ ಮೂಲಕ ಪಕ್ಷೇತರ ಅಭ್ಯರ್ಥಿಯೊಬ್ಬರು ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾದ ಅರ್ಧ ಶತಮಾನದ ದಾಖಲೆ, ರಾಜ್ಯದ ಲೋಕ ಇತಿಹಾಸದಲ್ಲಿ ಕಾಂಗ್ರೆಸ್ ಪಡೆದ ಅತಿ ಕಡಿಮೆ ಸೀಟು, ಲೋಕ ಸಭೆಯಲ್ಲಿ ಒಂದು ಪಕ್ಷ ಪಡೆದ ಅತಿ ಹೆಚ್ಚು ಮತಗಳು, ಘಾಟಾನುಘಟಿ ನಾಯಕರು ಊಹೆಗೂ ಮೀರಿ ನೆಲ ಕಚ್ಚಿದ್ದು. ಹುಡುಕುತ್ತಾ ಹೋದಂತೆ ಹೆಜ್ಜೆ ಹೆಜ್ಜೆಗೆ ಸಿಗುವ ದಾಖಲೆಗಳ ನಡುವೆ ಚುನಾವಣಾ ತಂತ್ರಗಳ ಒಳಹೊರಗು, ತಂತ್ರಜ್ಞಾನದ ಬಳಕೆ, ಬದಲಾದ ರಾಜಕೀಯ ಸೆಣಸಾಟದ ವೈಖರಿ, ನಾಯಕರ ಅಂತರಂಗ-ಬಹಿರಂಗ ನಡವಳಿಕೆಗಳು, ಸಂಕೀರ್ಣ ವ್ಯಕ್ತಿತ್ವಗಳ ನೈಜ ಚಿತ್ರಣ, ವರದಿಗಾರನ ಕಣ್ಣಲ್ಲಿ'. ಎಂದು ಬರೆಯಲಾಗಿದೆ.

ಲೇಖಕರಾದ ರಮೇಶ್ ದೊಡ್ಡಪುರ ಇವರು ಹಾಸನ ಜಿಲ್ಲೆಯ ದೊಡ್ಡಪುರ ಗ್ರಾಮದವರು. ಪತ್ರಿಕೋದ್ಯಮದತ್ತ ಆಕರ್ಷಣೆ ಮತ್ತು ಸ್ನಾತಕೋತ್ತರ ಡಿಪ್ಲೋಮಾ. ಪ್ರಸ್ತುತ ವಿಜಯವಾಣಿ ಪತ್ರಿಕೆಯಲ್ಲಿ ಜನರಲ್ ವರದಿಗಾರಿಕೆ ವಿಭಾಗದ ಉಪ ಮುಖ್ಯ ವರದಿಗಾರ. ಇವರು ರಾಷ್ಟ್ರೋತ್ಥಾನ ರಿಸರ್ಚ್ ಫೌಂಡೇಷನ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಇವರ ಜೊತೆಗಾರರಾಗಿದ್ದ ಡಾ. ಜಿ.ಬಿ.ಹರೀಶ್ ಅವರು ಈ ಪುಸ್ರಕಕ್ಕೆ ಮುನ್ನುಡಿ ಬರೆದಿದ್ದಾರೆ. ಪುಸ್ತಕದ ಹಾದಿ.. ಯಲ್ಲಿ ರಮೇಶ್ ಅವರು ಪುಸ್ತಕ ಹೊರತಂದ ಕಾರಣಗಳು ಹಾಗೂ ಇತರೆ ವಿಷಯಗಳ ಬಗ್ಗೆ ಸವಿವರವಾಗಿ ಬರೆದಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ೯ ಅಧ್ಯಾಯಗಳಿವೆ. 

ಪುಸ್ತಕದಲ್ಲಿರುವ ಹೊಸತನವೆಂದರೆ ಪುಸ್ತಕದ ರಕ್ಷಾಪುಟ ಹಾಗೂ ಒಳಪುಟಗಳಲ್ಲಿ ಕ್ಯೂಆರ್ ಕೋಡ್ ಮುದ್ರಿಸಿದ್ದಾರೆ. ಅಧಿಕ ಮಾಹಿತಿಯನ್ನು ಬಯಸುವ ಓದುಗರು ಆ ಕೋಡ್ ನ್ನು ತಮ್ಮ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದರೆ ಪುಸ್ತಕದಲ್ಲಿರುವ ಮಾಹಿತಿಯ ವಿಡಿಯೋ ವಿವರಗಳು ದೊರೆಯುತ್ತವೆ. ಇದರಿಂದ ಪುಸ್ತಕದಲ್ಲಿರುವ ಲೇಖನ ಬರಹಗಳಿಗೆ ಪುರಾವೆ ನೀಡಿದಂತಾಗುತ್ತದೆ. ಪುಸ್ತಕದ ಒಳಗಡೆ ಯಾವುದೇ ಛಾಯಾ ಚಿತ್ರಗಳನ್ನು ಬಳಸದೇ ಇರುವುದಕ್ಕೂ ಇದೇ ಕಾರಣವಿರಬಹುದು. ೨೦೦ಕ್ಕೂ ಅಧಿಕ ಪುಟಗಳಿರುವ ಈ ಪುಸ್ತಕ ಅಯೋಧ್ಯಾ ಪ್ರಕಾಶನದಿಂದ ಹೊರಬಂದಿರುವ ೭ ನೇ ಕೃತಿ.