ಬಿಟಿ ಹತ್ತಿ "ಜ್ವರ" ಇಳಿಯಿತೇ?

5

ನಮ್ಮ ದೇಶದ ಹತ್ತಿ ಬೆಳೆಗಾರರಿಗೆ ೨೦೦೨ರಲ್ಲಿ ಸಂಭ್ರಮ. ಕುಲಾಂತರಿ ಹತ್ತಿ ತಳಿಯ ಬೀಜಗಳು ಮಾರುಕಟ್ಟೆಗೆ ಲಗ್ಗೆಯಿಟ್ಟ ವರುಷವದು. ಅದಾಗಿ ಒಂದೇ ವರುಷದಲ್ಲಿ ಇದೇ ತಳಿ “ಬಿಟಿ ಹತ್ತಿ ತಳಿ” ಎಂಬ ಹೆಸರಿನಲ್ಲಿ ಜನಪ್ರಿಯ. ಅನಂತರ ನಮ್ಮ ದೇಶ ಜಗತ್ತಿನಲ್ಲಿ ಅತ್ಯಧಿಕ ಹತ್ತಿ ಉತ್ಪಾದಕ ದೇಶವಾಗಿ ದಾಖಲಾದದ್ದು ಈಗ ಹಳೆಯ ಕತೆ.
ದೈತ್ಯ ಕೃಷಿವಾಣಿಜ್ಯ ಕಂಪೆನಿ ಮೊನ್ಸಾಂಟೋ ಅಭಿವೃದ್ಧಿ ಪಡಿಸಿದ ಈ ಕುಲಾಂತರಿ ಹತ್ತಿ ತಳಿ ನಮ್ಮ ರೈತರ ಕಣ್ಮಣಿಯಾಯಿತು. ಇದಕ್ಕೆ ಕಾರಣ ಹತ್ತಿ ಬೆಳೆ ಬೆಳೆಸುವಾಗ ರೈತರು ಸಿಂಪಡಿಸ ಬೇಕಾಗಿದ್ದ ಕೀಟನಾಶಕ ಮತ್ತು ಪೀಡೆನಾಶಕ (ವಿಷ ರಾಸಾಯನಿಕಗಳು) ವೆಚ್ಚದಲ್ಲಿ ಗಣನೀಯ ಕಡಿತ. ಈಗಂತೂ ಭಾರತದ ಒಟ್ಟು ಹತ್ತಿ ಬೆಳೆಯುವ ಪ್ರದೇಶದ ಶೇಕಡಾ ೯೬ ಭಾಗದಲ್ಲಿ ಇದೇ ತಳಿಯನ್ನು ಬೆಳೆಸಲಾಗುತ್ತಿದೆ.
ಬಿಟಿ ಹತ್ತಿ ತಳಿ ಭಾರತದಲ್ಲಿ ರೈತರ ಹೊಲಗಳಲ್ಲಿ ಬೆಳೆಸಲು ಪರವಾನಗಿ ಪಡೆದಿರುವ ಏಕೈಕ ಕುಲಾಂತರಿ ತಳಿ. ಇದನ್ನು ಬೆಳೆಸುತ್ತಿರುವ ಭಾರತದ ಎಂಟು ದಶಲಕ್ಷ ಹತ್ತಿ ಬೆಳೆಗಾರರಿಗೆ “ಕಹಿ ಸುದ್ದಿ” ಕಾದಿದೆ. ಬಿಟಿ ಹತ್ತಿ ಗಿಡಗಳನ್ನು ಗುಲಾಲಿ ಕಾಯಿಕೊರಕ (ಪಿಂಕ್ ಬಾಲ್ವರ್ಮ್) ನಾಶ ಮಾಡುತ್ತಿದೆ.
ನಾಗ್ಪುರದ ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆಯ (ಐಸಿಎಆರ್ ಅಧೀನ ಸಂಸ್ಥೆ) ಇತ್ತೀಚೆಗಿನ ವರದಿಯು ಭಾರತದ ಹತ್ತಿ ಬೆಳೆಯುವ ಪ್ರದೇಶದಲ್ಲೆಲ್ಲ ಗುಲಾಲಿ ಕಾಯಿಕೊರಕದ ತೀವ್ರ ಧಾಳಿಯನ್ನು ದಾಖಲಿಸಿದೆ. ಅದಲ್ಲದೆ, ಹತ್ತಿ ಬೆಳೆಯುವ ಎಲ್ಲ ರಾಜ್ಯಗಳಲ್ಲಿಯೂ ಈ ಕೀಟವು ಬಿಟಿ ಹತ್ತಿಗೆ ಪ್ರತಿರೋಧ ಬೆಳೆಸಿಕೊಂಡಿದೆ ಎಂಬುದನ್ನೂ ತಿಳಿಸಿದೆ. ಕಳೆದ ೧೫ ವರುಷಗಳಲ್ಲಿ ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆ ಬಿಟಿ ಹತ್ತಿಯ ಕೃಷಿ ಹಾಗೂ ಫಸಲಿನ ಮೇಲೆ ಕಣ್ಣಿಟ್ಟಿದೆ. ಅದು ಇತ್ತೀಚೆಗೆ “ಹತ್ತಿ ಕೀಟದ ಪ್ರತಿರೋಧ ಅಧ್ಯಯನ” ನಡೆಸಿದ್ದು ೨೦೧೫-೧೬ರಲ್ಲಿ; ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳ ೪೬ ಜಿಲ್ಲೆಗಳಿಂದ ಗುಲಾಲಿ ಕಾಯಿಕೊರಕದ ಲಾರ್ವಾ ಸಂಗ್ರಹಿಸಿ ಪರೀಕ್ಷಿಸಿತು. ಆ ಜಿಲ್ಲೆಗಳಲ್ಲಿ ಮೊನ್ಸಾಂಟೋದ ಬಿಟಿ ಹತ್ತಿ ಬೀಜ ಬಿತ್ತಿದ ರೈತರು ಗಣನೀಯ ನಷ್ಟ ಅನುಭವಿಸಿದ್ದರು. ಈ ಅಧ್ಯಯನವು ಅದನ್ನು ಖಚಿತ ಪಡಿಸಿದೆ.
೨೦೧೨ರಿಂದಲೇ ಹತ್ತಿ ಬೆಳೆಗೆ ಗುಲಾಲಿ ಕಾಯಿಕೊರಕದ ಧಾಳಿ ವರದಿಯಾಗಿದೆ. ಆದರೆ, ಅತ್ಯಧಿಕ ಹಾವಳಿ ಆದದ್ದು ಅಕ್ಟೋಬರ್ ೨೦೧೫ರಿಂದ ಜನವರಿ ೨೦೧೬ರ ಅವಧಿಯಲ್ಲಿ – ಕೊಯ್ಲಿನ ಸಮಯದಲ್ಲಿ. ನಮ್ಮ ದೇಶದಲ್ಲಿ ಹತ್ತಿ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ಗುಜರಾತಿನಲ್ಲಿ “೨೦೧೬ರ ಡಿಸೆಂಬರ್ ಹೊತ್ತಿಗೆ ಹತ್ತಿ ಬೆಳೆಯೆಲ್ಲ ನಾಶವಾದೀತು” ಎನ್ನುತ್ತಾರೆ ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ನಾನಿ.
ದಕ್ಷಿಣ ಭಾರತದ ರಾಜ್ಯಗಳಲ್ಲಿಯೂ ಡಿಸೆಂಬರ್ ೨೦೧೫ರಿಂದಲೇ ಬಿಟಿ ಹತ್ತಿ ತಳಿಗಳು ಗುಲಾಲಿ ಕಾಯಿಕೊರಕದ ಧಾಳಿಗೆ ತುತ್ತಾಗಿವೆ. ಆಂಧ್ರಪ್ರದೇಶದಲ್ಲಿ ೩ನೇ ಮತ್ತು ೪ನೇ ಕೊಯ್ಲಿನ ಹೊತ್ತಿಗೆ, ಈ ಪೀಡೆಕೀಟದಿಂದಾಗಿ ಹಾಳಾದ ಹತ್ತಿಯ ಹಸುರುಕಾಯಿಗಳ ಪ್ರಮಾಣ ಗುಂಟೂರು ಜಿಲ್ಲೆಯಲ್ಲಿ ಶೇ.೬೫.೬ ಆಗಿದ್ದರೆ ಕರ್ನೂಲ್ ಜಿಲ್ಲೆಯಲ್ಲಿ ಶೇ.೫೫.೭.ಹತ್ತಿ ಬೆಳೆಗಾರರು ಕುಲಾಂತರಿ ಹತ್ತಿ ತಳಿಗಳ ಕೈಬಿಡಬೇಕಾದ ಸಮಯ ಬಂದಿದೆ. ಯಾಕೆಂದರೆ, ನಮ್ಮ ದೇಶದಲ್ಲಿ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹತ್ತಿಯ ಬೆಲೆ ಕುಸಿಯುತ್ತಿದ್ದು, ಬಿಟಿ ಹತ್ತಿ ಬೀಜಗಳ ದುಬಾರಿ ಬೆಲೆಯಿಂದಾಗಿ ರೈತರ ನಷ್ಟಕ್ಕೆ ಕಾರಣವಾಗುತ್ತಿದೆ. ಹತ್ತಿ ಬೆಳೆಗಾರರೆಲ್ಲರೂ ತಮ್ಮ ಕಹಿ ಅನುಭವದಿಂದಾಗಿ ಹೇಳುತ್ತಿರುವ ಮಾತು: “ಬಿಟಿ ಹತ್ತಿ ತಳಿ ಪೀಡೆಕೀಟಗಳನ್ನು ಎದುರಿಸುವುದರಲ್ಲಿ ಸೋತಿದೆ.”

ಬಿಟಿ ಹತ್ತಿ ಬೆಳೆಸಿದ ಗುಜರಾತಿನ ಬೊಟಡ್ ಜಿಲ್ಲೆಯ ಕಾನುಭಾಯಿ ವಾಲಾ ಅವರಿಗೆ ಎರಡೆರಡು ಆಘಾತ. ೨೦೧೫ರಲ್ಲಿ ಕಡಿಮೆ ಮಳೆಯಿಂದಾಗಿ ಬಿಟಿ ಹತ್ತಿ ಬೆಳೆ ನಷ್ಟವಾದರೆ, ೨೦೧೬ರಲ್ಲಿ ಮಳೆಯೂ ಕಡಿಮೆ; ಜೊತೆಗೆ ಗುಲಾಲಿ ಕಾಯಿಕೊರಕದ ಧಾಳಿಯಿಂದಾಗಿ ಬೆಳೆಯೆಲ್ಲ ನಷ್ಟ. ವಾಲಾ ಅವರ ಒಳಸುರಿಗಳ ವೆಚ್ಚವೂ ಗಗನಕ್ಕೇರಿದೆ. “ಏಳೆಂಟು ವರುಷಗಳ ಹಿಂದೆ, ಬಿಟಿ ಹತ್ತಿ ಬೆಳೆಗೆ ಹಾಕಬೇಕಾದ ಕೀಟನಾಶಕಗಳ ವೆಚ್ಚ ಎಕ್ರೆಗೆ ಕೇವಲ ೫೦ ರೂಪಾಯಿ. ಆದರೆ ಈ ವರುಷ ನಾನು ಕೀಟನಾಶಕಗಳಿಗಾಗಿ ಎಕ್ರೆಗೆ ೩,೦೦೦ ರೂಪಾಯಿಗಳಷ್ಟು ಖರ್ಚು ಮಾಡಿದ್ದೇನೆ” ಎನ್ನುತ್ತಾರೆ ವಾಲಾ. ಅವರ ಹೊಲದ ಫಸಲೂ ಕಡಿಮೆಯಾಗಿದೆ. ಕೆಲವು ವರುಷಗಳ ಮುಂಚೆ ಎಕ್ರೆಗೆ ೫೦ – ೬೦ ಮಾನ್ ಹತ್ತಿ ಬೆಳೆಯುತ್ತಿದ್ದರೆ ಈಗ ಎಕ್ರೆಗೆ ೨೦ ಮಾನ್ಗೆ (ಒಂದು ಮಾನ್ = ೨೦ ಕಿಗ್ರಾ.) ಇಳಿದಿದೆ. ಇದೆಲ್ಲ ಸಾಲದೆಂಬಂತೆ, ಹತ್ತಿಯ ಬೆಲೆಯೂ ಕುಸಿದಿದೆ. ಕೆಲವು ವರುಷಗಳ ಮುಂಚೆ ಒಂದು ಮಾನ್ಗೆ ರೂ.೧,೨೦೦ – ರೂ.೧,೫೦೦ ಇದ್ದರೆ, ಈಗ ಮಾನ್ಗೆ ರೂ.೭೫೦ - ರೂ.೯೦೦. (ಈಗಿನ ಕನಿಷ್ಠ ಬೆಂಬಲ ಬೆಲೆ ಮಾನ್ಗೆ ರೂ.೮೧೦  ಗುಜರಾತಿನ ಹತ್ತಿ ಬೆಳೆಗಾರರಿಗೆ ಹತ್ತಿ ಕೃಷಿ ಸಾಕೋ ಸಾಕಾಗಿದೆ. ಇತರ ರಾಜ್ಯಗಳ ಹತ್ತಿ ಬೆಳೆಗಾರರದ್ದೂ ಇದೇ ಅನಿಸಿಕೆ. ಹಾಗಾಗಿ,ಭಾರತದ ಒಟ್ಟು ಹತ್ತಿ ಬೆಳೆಯುವ ಪ್ರದೇಶ ೨೦೧೫ರಲ್ಲಿದ್ದ ೧೧.೬ ದಶಲಕ್ಷ ಹೆಕ್ಟೇರಿನಿಂದ ೨೦೧೬ರಲ್ಲಿ ೧೦.೨ ದಶಲಕ್ಷ ಹೆಕ್ಟೇರಿಗೆ ಕುಸಿದಿದೆ. ಪಂಜಾಬ್ ಮತ್ತು ಹರಿಯಾಣದ ಹತ್ತಿ ಬೆಳೆಗಾರರ ಬಿಟಿ ಹತ್ತಿ ಬೆಳೆ ೨೦೧೫ರಲ್ಲಿ ಬಿಳಿನೊಣದ ಧಾಳಿಯಿಂದಾಗಿ ನೆಲಕಚ್ಚಿತು. ದೇಸಿ ಹತ್ತಿ ತಳಿಗಳೇ ಸೂಕ್ತವೆಂದು ಅವರಿಗೀಗ ಅರ್ಥವಾಗಿದೆ. ಯಾಕೆಂದರೆ ಒಂದು ಹೆಕ್ಟೇರ್ ಬಿತ್ತನೆಗೆ ಬೇಕಾಗುವ ದೇಸಿ ಹತ್ತಿ ಬೀಜಗಳ ವೆಚ್ಚ ಕೇವಲ ರೂ.೨೦೦. ಆದರೆ ಅದೇ ಬಿತ್ತನೆಗೆ ಬೇಕಾಗುವ ಬಿಟಿ ಹತ್ತಿ ತಳಿ ಬೀಜದ ವೆಚ್ಚ ೨೨.೫ ಪಟ್ಟು ದುಬಾರಿ ಅಂದರೆ ರೂ.೪,೫೦೦. ಈ “ಸುಲಿಗೆ” ಬೆಲೆ, ಹತ್ತಿ ಬೆಳೆಗಾರರು ಬಿಟಿ ಹತ್ತಿ ಕೃಷಿ ತ್ಯಜಿಸಲು ಇನ್ನೊಂದು ಕಾರಣ. ಭಾರತಕ್ಕೆ ದೈತ್ಯ ಬೀಜಕಂಪೆನಿ ಮೊನ್ಸಾಂಟೋದ ಬಿಟಿ ಹತ್ತಿ ತಳಿ ಬಂದಾಗಿನಿಂದ ಹತ್ತಿ ಬೀಜದ ಬೆಲೆಯಲ್ಲಿ ಸುಮಾರು ೩೫೦ ಪಟ್ಟು ಹೆಚ್ಚಳವಾಗಿದೆ! ೧೯೯೮ರಲ್ಲಿ ಒಂದು ಕಿಲೋ ದೇಸಿ ಹತ್ತಿ ಬೀಜದ ಬೆಲೆ ರೂ.೫ – ರೂ.೯ ಇದ್ದದ್ದು ಈಗ ೪೫೦ ಗ್ರಾಮ್ ಬಿಟಿ ಹತ್ತಿ ಬೀಜ ಪೊಟ್ಟಣದ ಬೆಲೆ ರೂ.೧,೬೦೦.
 
 
ಈ ಸುಲಿಗೆಯನ್ನು ತಡೆಯಲಿಕ್ಕಾಗಿಯೇ ೯ ಮಾರ್ಚ್ ೨೦೧೬ರಲ್ಲಿ ಭಾರತ ಸರಕಾರ “ಬೀಜ ಬೆಲೆ ನಿಯಂತ್ರಣ ಆದೇಶ” ಜ್ಯಾರಿ ಮಾಡಿದೆ. ಇದರ ವಿರುದ್ಧ ಮೊನ್ಸಾಂಟೋ ಕಂಪೆನಿ ಕೋರ್ಟುಗಳಲ್ಲಿ ಕಾನೂನು ಸಮರ ನಡೆಸುತ್ತಿದೆ. ಮೊನ್ಸಾಂಟೋದ ಧೋರಣೆಗೆ ಉತ್ತರವಾಗಿ ಭಾರತ ಸರಕಾರದ ಕೃಷಿ ರಾಜ್ಯ ಸಚಿವ ಸಂಜೀವ್ ಕುಮಾರ್ ಬಲ್ಯಾನರು “ನಮ್ಮ ಸರಕಾರ ನಿರ್ಧರಿಸಿದ ಬೀಜ ಬೆಲೆಯನ್ನು ಒಪ್ಪಿಕೊಳ್ಳದಿದ್ದರೆ ಮೊನ್ಸಾಂಟೋ ದೇಶ ತೊರೆದು ಹೋಗಬಹುದು” ಎಂದು ಎಚ್ಚರಿಸಿದ್ದಾರೆ. ಅಂತೂ ಮೊನ್ಸಾಂಟೋ ಕಂಪೆನಿಯ ಬಿಟಿ ಹತ್ತಿ ಬೀಜ ಮಾರಾಟ ನಮ್ಮ ದೇಶದಲ್ಲಿ ೨೦೧೬ರಲ್ಲಿ ಶೇ.೧೫ ಕುಸಿದಿದೆ. ಇದು ಹತ್ತಿ ಬೆಳೆಯುವ ಪ್ರದೇಶದಲ್ಲೆಲ್ಲ ಏರಿದ್ದ ಬಿಟಿ ಹತ್ತಿ “ಜ್ವರ” ಇಳಿಯುತ್ತಿದೆ ಎಂಬುದರ ಸೂಚನೆ.
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.