ಬಿಟ್ಟು ಬಂದಳ್ಳಿಯ ನೆನಪುಗಳು

ಬಿಟ್ಟು ಬಂದಳ್ಳಿಯ ನೆನಪುಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಮಂಜಯ್ಯ ದೇವರಮನಿ
ಪ್ರಕಾಶಕರು
ಸುದೀಕ್ಷಾ ಸಾಹಿತ್ಯ ಪ್ರಕಾಶನ, ರಾಣಿಬೆನ್ನೂರು, ಹಾವೇರಿ.
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೩

ಉದಯೋನ್ಮುಖ ಲೇಖಕರಾದ ಮಂಜಯ್ಯ ದೇವರಮನಿ ಇವರು ತನ್ನ ನೂತನ ಕೃತಿ “ಬಿಟ್ಟು ಬಂದಳ್ಳಿಯ ನೆನಪುಗಳು” ಯಲ್ಲಿ ತಮ್ಮ ಊರಿನ ನೆನಪುಗಳನ್ನು ಕೆದಕಲು ಹೊರಟಿದ್ದಾರೆ. ಗ್ರಾಮೀಣ ಬದುಕು ಆಧುನಿಕತೆಯತ್ತ ವಾಲುತ್ತಿದೆ ಎನ್ನುವ ಲೇಖಕರು ತಮ್ಮ ಕೃತಿಗೆ ಬರೆದ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಸಾಲುಗಳು... 

“ಚಿಕ್ಕಯ್ಯ ಊರಿನಿಂದ ಬಂದಿದ್ದರು. ತಿಂಗಳಿಗೋ ಆರು ತಿಂಗಳಿಗೋ ಏನಾದರೂ ಒಂದು ಕೆಲಸದ ನಿಮಿತ್ತ ಬೆನ್ನೂರಿಗೆ ಬರುತ್ತಿರುತ್ತಾರೆ. ಜಮೀನಿನ ಕಾಗದಪತ್ರ ಮಾಡಿಸಲೋ... ದನದ ವ್ಯಾಪಾರಕ್ಕೋ... ಇಲ್ಲವೇ ನಾನು ಚಿಕ್ಕವನಿದ್ದಾಗ ಬಗೆಹರಿಯದ ಒಂದು ವ್ಯಾಜ್ಯದ ಸಂಬಂಧ ಕೋರ್ಟಿಗೋ... ಅಪ್ಪನ ಆರೋಗ್ಯವನ್ನು ವಿಚಾರಿಸಲೋ... ಬರುತ್ತಿರುತ್ತಾರೆ. ಇದು ಅವರ ಜೀವನ ಕ್ರಮದ ವೇಳಾಪಟ್ಟಿಯಲ್ಲೊಂದು. ಬರುವಾಗ ಬರಿಗೈಯಲ್ಲಿ ಬಂದಿದ್ದು ನಾನಂತೂ ಕಂಡಿಲ್ಲ. ಬರಿಗೈಯಲ್ಲಿ ಬರುವ ಜಾಯಮಾನವೂ ಕೂಡ ಅವರದಲ್ಲ. ಹೊಲದಲ್ಲಿ ಬೆಳೆದ ಅವರೆಕಾಯಿ, ಹಸಿ ಶೇಂಗಾಕಾಯಿ, ಇಲ್ಲವೇ ಅಕ್ಕಡಿಕಾಳು, ಒಣಕೊಬ್ಬರಿ, ಕೊನೆಗೆ ಮಣಬಾರದ ರಾಗಿಹಿಟ್ಟಿನ ಗಂಟನ್ನು ತೆಲೆಯ ಮೇಲಿಟ್ಟುಕೊಂಡು ಒಂಚೂರು ದಣಿಯದೆ ಬರುತ್ತಾರೆ.

ಅಮ್ಮನಿಗೆ ಚಿಕ್ಕಯ್ಯ ಬಂದರೆ ಖುಷಿಯೋ ಖುಷಿ. ಅಡುಗೆಗೆ ಬೇಕಾದ ಗುಣಮಟ್ಟದ ಪದಾರ್ಥಗಳು ಸಿಗುತ್ತವೆ. ಜೊತೆಗೆ ದೊಡ್ಡದೊಂದು ಕಥಾಬುಟ್ಟಿಯನ್ನು ಹೊತ್ತು ತಂದಿರುತ್ತಾರೆ. ಅವರ ತಲೆ ಮೇಲೆ ಊರು ಕುಳಿತಿರುತ್ತದೆಯೋ... ಇಲ್ಲವೇ ಇವರೇ ಊರನ್ನು ತಲೆ ಮೇಲೆ ಕಟ್ಟಿಕೊಂಡಿದ್ದಾರೋ... ನನಗಂತೂ ಗೊತ್ತಿಲ್ಲ.

ಅಮ್ಮನಂತೂ "ತಮ್ಮಾ.... ಊರು ಸುದ್ದಿ ತಗೊಂಡು ದಾಸಪ್ಪ ಸೊರಗಿದ್ದನಂತೆ ಅಂಗಾತು ಕಣಪ್ಪ ನಿನ್ನ ಕಥಿ, ನಿನ್ನ ಕಷ್ಟನೇ ಬಗಿಹರಿಯದೆ ಕಾಲು ಮೂರ್ಕೊಂಡು ಕುಂತಾವೆ... ಮೊದಲು ಅವ್ನ ಸರಿ ಮಾಡ್ಕೋ" ಎಂದು ತರಾಟೆಗೆ ತೆಗೆದುಕೊಳ್ಳುತ್ತಾಳೆ. "ತ್ಯಗಿ ಅತ್ತಿಗೆಮ್ಮ ನಾಕು ಮಂದಿ ಮನೆ ಬಾಗಿಲಿಗೆ ಬಂದು ಇಂಗಪ್ಪ ಅಂದ್ರೆ ಚೂರು ಪಾರು ಆಗದಿದ್ರೆ ಈ ಜಲ್ಮ ಏನುಕ್ಕೆ?" ಎಂದು ತಮ್ಮ ಪರೋಪಕಾರ ಗುಣ ತೋರುವರು. ಪ್ರತಿಸಲ ಬಂದಾಗಲೂ ಅಮ್ಮ ಮಾಡುವ ಉಪದೇಶವನ್ನು ಕೇಳಿ ಕೇಳಿ ಚಿಕ್ಕಪ್ಪನಿಗಿರಲಿ ನನಗೂ ಕೂಡ ಸಾಕು ಸಾಕಾಗಿ ಹೋಗುತಿತ್ತು. 'ನಮ್ಮವ್ವನದು ಇದೆ ಆಯ್ತು' ಎಂದು ಕೊಳ್ಳುತ್ತಾ ಸಂತೆಯಿಂದ ಬರುವ ಚೀಲವನ್ನು ಆಸೆಗಣ್ಣಿನಿಂದ ನೋಡುವ ಹುಡುಗರ ರೀತಿ ಚಿಕ್ಕಯ್ಯನ ಕಥಾಬುಟ್ಟಿಯನ್ನು ಕುತೂಹಲದಿಂದ ನೋಡುತ್ತಿದ್ದೆ ;ಏನಾದರೂ ಕತೆಗೆ ಮಸಾಲೆ ಸಿಗಬಹುದೇನೋ ಎಂಬ ಆಸೆಯಿಂದ. ಇನ್ನೇನು ಕಥಾಬುಟ್ಟಿಯ ಚಿಬ್ಬಲ ತೆರೆಯಬೇಕೆನ್ನುವಾಗಲೇ ಅಮ್ಮ "ಬಾ ಕೈ ಕಾಲು ಮುಖ ತೊಳ್ಕೊ ತಿಂಡಿ ತಿನ್ನುವಂತಿ" ಎನ್ನುತ್ತಿದ್ದಳು. "ರಾಗಿಮುದ್ದೆ ಬಸ್ಸಾರು ಪುಂಡಿಪಲ್ಯ ಉಂಡ್ಕೊಂಡು ಬಸ್ಸು ಹತ್ತಿಕೊಂಡು ಬಂದೀನಿ ಹಸುವಿಲ್ಲ. ಮಧ್ಯಾಹ್ನ ಕಡೆ ಉಣ್ಣುತಿನಿ" ಎಂದು ಎಲೆ ಅಡಿಕೆ ನುರಿಸಲು ಚೀಲಕ್ಕೆ ಕೈ ಹಾಕುತ್ತಿದ್ದ. ಚಿಕ್ಕಯ್ಯನ ಕಥಾ ಬುಟ್ಟಿಗೆ ಕೈಹಾಕಲು ಇದೇ ಒಳ್ಳೆಯ ಸಮಯವೆಂದು ತಿಳಿದ ನಾನು "ಊರು ಹೆಂಗೈತೆ ಚಿಕ್ಕಯ್ಯ" ಎಂದು ಮಾತಿಗಿಳಿಯುತ್ತಿದ್ದೆ. ಹಾವಡಿಗ ಬುಟ್ಟಿ ತರೆಯುವ ಮುನ್ನ ಬುಟ್ಟಿಯೊಳಗಿನ ವಿಷ ಜಂತುವಿನ ತಾರೀಪು ಮಾಡುವ ರೀತಿಯಲ್ಲಿ ಊರಿನ ಅಂತರಾತ್ಮದ ಕಥನಕ್ಕೆ ಚಿಕಪ್ಪ ಸಲಿಕೆ ಹಾಕುತ್ತಿದ್ದ. ನನಗೆ ಚೆನ್ನಾಗಿ ಗೊತ್ತು ನಮ್ಮ ಚಿಕ್ಕಯ್ಯನ ಕಥಾಬುಟ್ಟಿಯಲ್ಲಿ ಹೆಬ್ಬಾವುಗಳಿಂದ ಏರೆಹುಳುಗಳವರೆಗೂ ಜಾಗವಿದೆ. ಅವನ ಸ್ವಾರಸ್ಯಕರ ಆಂಗಿಕ ಹಾವಭಾವದಿಂದ ಹೆಬ್ಬಾವು ಎರೆಹುಳುವಾಗಿಯೂ... ಎರೆಹುಳು ಹೆಬ್ಬವಾಗಿಯೂ ಪರಿವರ್ತನೆಗೊಳ್ಳುತ್ತಿದ್ದವು. ಕಡು ಕಠೋರ ಕೇಡು ಕೂಡಾ ಕರಗಿ ಒಳ್ಳೆಯತನದ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡು ಆರಾಧನೆಗೊಳ್ಳುತ್ತಿತ್ತು.

ಮಾದ್ಲಿ ಮಹಾದೇವನಿಂದ ಬಾಡುಪ್ರೀಯ ಪೀರಣ್ಣನೂ... ಬಡೇಸಾಬನಿಂದ ಸಣಕಲು ಮೂಗನೂ...
ಗೊಡ್ಡು ಜಲ್ಲಕ್ಕನಿಂದ ಐದು ಹೆಣ್ಣು ಹಡೆದ ಗಂಗಕ್ಕನೂ...
ಕಳ್ಳ ಸಂತೀರನಿಂದ ಸಾಧು ಸೋಮಣ್ಣನೂ...
ಮರಕುಟಿಗ ನೀಲಣ್ಣನಿಂದ ಕತ್ತೆನಾಗನೂ... ಚಂದ ಚಂದ ಬಣ್ಣಹಚ್ಚಿ ಪಾತ್ರ ಕಟ್ಟಿಕೊಂಡು ಕುಣಿಯುತ್ತಿದ್ದರು. ಚಿಕ್ಕಯ್ಯ ಒಂದು ರೀತಿ ನಿಜವಾದ ಸೂತ್ರದಾರಿಯಾಗಿದ್ದ ನನ್ನ ಕಥಾಮಂದಿರಕ್ಕೆ.

ಚಿಕ್ಕಯ್ಯ ಯಾವುದೇ ಕೆಲಸವಿರಲಿ ತುಂಬಾ ಅಚ್ಚುಕಟ್ಟಾಗಿ ಮಾಡುವ ಮನುಷ್ಯ. ಹೊಲಮನಿ ಕೆಲಸಗಳೇ ಇರಲಿ... ಮದುವೆ ಮುಂಜಿ ಸಮಾರಂಭವೇ ಇರಲಿ... ಹಬ್ಬ ಹರಿದಿನಗಳೇ ಇರಲಿ... ಕರೆಯುವುದು ಕಳಿಸುವುದು ಎಲ್ಲರೂ ಹೌದು ಎನ್ನಬೇಕು ಹಾಗೆ ಮಾಡುತ್ತಿದ್ದ. ಮೇವು ತರುವುದು, ಮೇವು ಕತ್ತರಿಸುವುದು, ಕತ್ತರಿಸಿದ ಮೇವನ್ನು ಗೊಂದಲಗೆ ಸುರಿಯುವುದು. ಕಣ ಒಕ್ಕಲು ಎಲ್ಲವೂ ಅಚ್ಚುಕಟ್ಟು. ಭಜನೆ, ದುಂಡಿ ಎತ್ತುವುದು, ಎಲ್ಲವಕ್ಕೂ ಸಾಕಷ್ಟು ತಾಲೀಮು ಇರುತ್ತಿತ್ತು.

ಚಿಕ್ಕಪ್ಪನ ಹಳ್ಳಿಹಾದಿ ತುಂಬಾ ದೂರವಿದೆ. ಅವರು ಆ ಹಳ್ಳಿ ಹಾದಿಯಲ್ಲಿ ಕಾಲ್ಮರಿಗಳನ್ನು ತುಂಬಾ ಸವೆಸಿದ್ದಾರೆ. ಕೆಲವು ವರ್ಷ ನಾನು ಕೂಡ ಅವರ ಜೊತೆಯಲ್ಲಿ ಆ ಹಳ್ಳಿ ಹಾದಿಯನ್ನು ತುಳಿದಿದ್ದೇನೆ. ಆ ಹಾದಿಯಲ್ಲಿ ಕಲ್ಲು, ಮುಳ್ಳು, ಹಳ್ಳ, ದಿಣ್ಣೆಗಳು ಬಂದಾಗ ಬಿಸುಸುಯ್ದರು, ಕಾಲು ಸೋತರು, ದಣಿವಾರಿಸಿಕೊಂಡು ಮುಂದೆ ಸಾಗಿದ್ದೇನೆ.

ಹಳ್ಳಿಗಳು ಸಾಕಷ್ಟು ಬದಲಾಗಿವೆ. ಅಲ್ಲಿ ಆಧುನಿಕತೆ ಇಣುಕಿದೆ. ಹಳ್ಳಿಗರು ನಗರ ಜೀವನಶೈಲಿಗೆ ಶರಣಾಗಿದ್ದಾರೆ. ಸಹಜ ಸಾವಯವ ಕೃಷಿ ಮರೆತಿದ್ದಾರೆ. ಯಾರ ಮನೆಯಲ್ಲಿ ಒಂದು ಮುಷ್ಟಿ ಸಾಸಿವೆ, ಸಾವೆ, ನವಣೆಗಳಿಲ್ಲ.

ಇಲ್ಲಿನ ಬರಹಗಳಲ್ಲಿ ಗ್ರಾಮೀಣ ಸಂವೇದನೆಗಳನ್ನು ಚಿತ್ರಿಸಲು ಪ್ರಯತ್ನಿಸಿದ್ದೇನೆ. ಇದು ನನ್ನ ಹುಟ್ಟೂರಾದ 'ಸಂಗಾಪುರದ' ಕಲ್ಪನೆಯನ್ನು ನೀಡಬಹುದಾದರೂ ಅದೇ ಆಗಿಲ್ಲ. ಇಲ್ಲಿನ ಯಾವ ಪಾತ್ರಗಳು ಜೀವಂತ ಜನರ ಪ್ರತೀಕಗಳಲ್ಲ. ಪ್ರತಿ ಗ್ರಾಮಗಳಲ್ಲಿ ಇರಬಹುದಾದ ಸಾಮಾಜಿಕ ವರ್ತನೆಗಳಾಗಿವೆ. ಗ್ರಾಮಗಳಲ್ಲಿ ನಡೆಯಬಹುದಾದ ಘಟನೆ ಮತ್ತು ಸಂಗತಿಗಳನ್ನು ಮಾದರಿಯಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ಜನಗಳಲ್ಲಿನ ದ್ವೇಷ, ಅಸೂಯೆ, ಬಡತನ, ಹಣದ ಸೊಕ್ಕು ಸಾಮಾಜಿಕ ಶ್ರೇಣಿಕರಣ ಮತ್ತು ಸಾಮಾಜಿಕ ಚಲನೆಯ ಪ್ರತಿರೂಪಗಳಂತೆ ಕಂಡುಬರುತ್ತವೆ. ಜಾತಿ, ಪಂಥ, ಪಂಗಡ, ಕೋಮುಗಳನ್ನು ಮೀರಿ ಬೆಳೆಯಬಹುದಾದ ಅಂಶಗಳನ್ನು ಇಲ್ಲಿನ ಬರಹಗಳು ಪ್ರತಿನಿಧಿಸುತ್ತವೆ.

ಗ್ರಾಮೀಣ ಬದುಕು ಆಧುನಿಕತೆಯ ಕಡೆಗೆ ವಾಲುತ್ತಿದೆ. ಗ್ರಾಮಗಳು ಸಾಕಷ್ಟು ಬದಲಾಗಿವೆ, ಆದರೆ ಅವರಲ್ಲಿನ ಮೌಡ್ಯತೆ, ಹಿಂಸೆ, ದಬ್ಬಾಳಿಕೆ, ಕ್ರೌರ್ಯ ಇನ್ನು ಹಾಗೆ ಉಳಿದಿವೆ. ಇವುಗಳನ್ನು ಮೀರಿ ಬದುಕುವ ಮಾರ್ಗವಾಗಿ ಇಲ್ಲಿನ ಬರಹಗಳು ಕಂಡರೆ ಅದೇ ಸಾರ್ಥಕತೆ.”