ಬಿಡುಗಡೆಯ ಹಾಡುಗಳು

ಬಿಡುಗಡೆಯ ಹಾಡುಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಸೂರ್ಯನಾಥ ಕಾಮತ: ಸಂಪಾದಕರು
ಪ್ರಕಾಶಕರು
ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಪುಸ್ತಕದ ಬೆಲೆ
ರೂ. 40/-

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಹಲವು ಹಾಡುಗಳು ಹೋರಾಟದ ಕಿಚ್ಚು ಹಚ್ಚಿಸುತ್ತಿದ್ದವು. ಸಭೆಗಳಲ್ಲಿ, ಪ್ರತಿಭಟನೆಗಳಲ್ಲಿ, ಮೆರವಣಿಗೆಗಳಲ್ಲಿ ಜನಸಾಮಾನ್ಯರೂ ಮುಕ್ತಕಂಠದಿಂದ ಹಾಡುತ್ತಿದ್ದ ಗೀತೆಗಳು ನೂರಾರು. ದೀರ್ಘ ಹೋರಾಟದ ಅವಧಿಯಲ್ಲಿ ಜನರ ಉತ್ಸಾಹ ಹೆಚ್ಚುವಂತೆ ಮಾಡುವಲ್ಲಿ ಇಂತಹ ಗೇಯಪದಗಳ ಕೊಡುಗೆಗೆ ಬೆಲೆ ಕಟ್ಟಲಾಗದು. ಕೆಲವು ಗೇಯಪದಗಳಂತೂ ಕೆಲವೇ ನಿಮಿಷಗಳಲ್ಲಿ ಹಾಡುತ್ತಿದ್ದವರ ಮೈಮನಗಳಲ್ಲಿ ರೋಮಾಂಚನ ಹುಟ್ಟಿಸುತ್ತಿದ್ದವು. ಗುಂಪಿನಲ್ಲಿ ಹಾಡುವಾಗಲಂತೂ ಪ್ರತಿಯೊಬ್ಬರಿಗೂ ಹಾಡು ಹಾಡುತ್ತಾ ಭೀಮಬಲ ಬಂದಂತೆ ಅನಿಸುತ್ತಿತ್ತು.

ಕಾಲ ಸರಿದಂತೆ ಅಂತಹ ಅದ್ಭುತ ಗೇಯಪದಗಳು ಸಮುದಾಯದ ನೆನಪಿನಿಂದ ಮರೆಯಾಗುತ್ತಿವೆ. ಆದರೆ, ಅಂದಿನ ಹೋರಾಟದ, ತ್ಯಾಗದ, ಬಲಿದಾನದ ನೆನಪುಗಳನ್ನು ಜೀವಂತವಾಗಿರಿಸಲು ಆ ಗೇಯಪದಗಳನ್ನು ಸಮುದಾಯದ ನೆನಪಿನಲ್ಲಿ ಉಳಿಸುವುದು ಅತ್ಯಗತ್ಯ. ಆ ಪವಿತ್ರ ಕೆಲಸವನ್ನು ಸಮರ್ಥವಾಗಿ ಮಾಡಿದೆ “ಬಿಡುಗಡೆಯ ಹಾಡುಗಳು” ಎಂಬ ಈ ಸಂಕಲನ.

ಸಂಪಾದಕರಾದ ಡಾ. ಸೂರ್ಯನಾಥ ಕಾಮತರು ಈ ಹಾಡುಗಳ ಬಗ್ಗೆ “ಮುನ್ನುಡಿ"ಯಲ್ಲಿ ಬರೆದ ಮಾತುಗಳು: ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಹಾಡುತ್ತಿದ್ದ ಹಾಡು, ಕವನ, ಗೀತೆ, ಲಾವಣಿ, ಗೀಗೀಪದ, ರಿವಾಯತ್ ಮುಂತಾದ ಗೇಯ ಪ್ರಕಾರಗಳ ಸಂಗ್ರಹ ಈ ಕಿರು ಹೊತ್ತಿಗೆ. ಅಂದಿನ ಹೋರಾಟದ ವಿಚಾರಗಳೇನು, ಕರ್ನಾಟಕದಲ್ಲಿ ಅವರನ್ನು ಪ್ರಚೋದಿಸಿದ ಸಂಗತಿಗಳೇನು, ಆ ಹೋರಾಟಗಾರರ ಆಶಯಗಳೇನು ಎಂದು ತಿಳಿಯಲು ಈ ಸಂಗ್ರಹ ಸಹಾಯಕವಾಗಿದೆ. ಇದನ್ನು ಹಾಡಿದವರು, ಕೇಳಿದವರು ಸಂಗ್ರಹಿಸಿಕೊಟ್ಟ ಹಾಡುಗಳು ಇದರಲ್ಲಿವೆ. ಬೇರೆ ಬೇರೆ ಸಂದರ್ಭದಲ್ಲಿ ಮುದ್ರಿಸಿದ ಕಿರು, ಹಿರಿ ಪುಸ್ತಕಗಳಿವೆ. ಇವನ್ನು ರಚಿಸಿದವರಲ್ಲಿ ಗಣ್ಯ ಕವಿಗಳಿದ್ದಾರೆ; ಸಾದಾ ಜಾನಪದ ಪ್ರತಿಭಾಶಾಲಿಗಳಿದ್ದಾರೆ …

ಇನ್ನೆಷ್ಟೋ ಕವಿತೆಗಳನ್ನು ಬರೆದವರು ಯಾರೆಂದು ಖಚಿತವಾಗಿ ತಿಳಿದಿಲ್ಲ. ಅದನ್ನು ಸಂಗ್ರಹಿಸಿ ಕೊಟ್ಟವರ ಹೆಸರುಗಳನ್ನು ಇಲ್ಲಿ ಹೇಳಲಾಗಿದೆ. ಹಾಡುಗಳ ಬಗ್ಗೆ ವಿಶೇಷ ಮಾಹಿತಿ ಪ್ರತೀ ಹಾಡಿನ ಜೊತೆ ಕೊಡಲಾಗಿದೆ.

ದೇಶದ ಘನತೆ, ಇತಿಹಾಸ, ದೇಶದ ದೀನಸ್ಥಿತಿ, ಪರಕೀಯರ ಆಡಳಿತದಿಂದ ಆದ ಹಾವಳಿ, ದೇಶಭಕ್ತನಿಗಿರಬೇಕಾದ ತ್ಯಾಗ, ಅಹಿಂಸೆ, ಕಷ್ಟಸಹಿಷ್ಣುತೆಗಳ ಮಹತ್ವ, ಖಾದಿಯ ಮಹತ್ವ, ಸ್ವದೇಶೀ ವ್ರತದ ಅವಶ್ಯಕತೆ, ಮದ್ಯಪಾನದ ವಿರುದ್ಧ ನಡೆದ ಸಮರ, ಅಸ್ಪೃಶ್ಯತಾ ನಿವಾರಣೆ, ಸಾಮಾಜಿಕ ಐಕ್ಯ ಮುಂತಾದ ಆ ಕಾಲದಲ್ಲಿ ಎತ್ತಿ ಹಿಡಿದ ಮೌಲ್ಯಗಳು, ಗಾಂಧೀಜಿಯವರ ನಾಯಕತ್ವದ ಮಹತ್ವ, ಅಂದಿನ ಹೋರಾಟಗಾರರ ವಿವಿಧ ಪ್ರೇರಕ ಭಾವನೆಗಳು, ಆಶಯಗಳು ಇಲ್ಲಿ ಪ್ರಕಟವಾಗಿವೆ. ಒಳ್ಳೆಯ ಕಾವ್ಯಗುಣದ ಕವಿತೆಗಳೂ ಇಲ್ಲಿ ಉಂಟು. ಪ್ರಭಾವಿಯಾಗಿ ಹಾಡಲು ಬರುವಂತೆ ರಚಿಸಿದ ಲಾವಣಿಗಳು. ಗೀಗೀ ಪದಗಳಲ್ಲಿ ಪ್ರಾಸದ ಒತ್ತಾಸೆ ಇದೆ. ಅಂದಿನ ಜನರು ಇವನ್ನು ಕೇಳಿ ಸ್ಫೂರ್ತಿಗೊಂಡಿದ್ದರು. ಮೆರವಣಿಗೆಗಳಲ್ಲಿ ಸಾಮೂಹಿಕವಾಗಿ ಕೂಡ ಇಲ್ಲಿನ ಕವಿತೆಗಳನ್ನು ಹಾಡುತ್ತಿದ್ದರು …"

ಡಾ. ಸೂರ್ಯನಾಥ ಕಾಮತರು ಸ್ವಾತಂತ್ರ್ಯದ 40ನೆಯ ಜಯಂತಿಯ ಸಂದರ್ಭದಲ್ಲಿ ಸಂಗ್ರಹಿಸಿದ್ದ ಇಂತಹ 400 ಹಾಡುಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ “ಸ್ವಾತಂತ್ರ್ಯ ಸಂಗ್ರಾಮದ ಗೇಯ ಗೀತೆಗಳು” ಹೆಸರಿನಲ್ಲಿ 1988ರಲ್ಲಿ ಪ್ರಕಟಿಸಿದೆ ಎಂಬುದು ಗಮನಾರ್ಹ. “ಬಿಡುಗಡೆಯ ಹಾಡುಗಳು” ಸಂಕಲನದಲ್ಲಿ ಇರುವುದು ಅದರಿಂದ ಆಯ್ದ ಹಾಡುಗಳು ಎಂದು ಅವರು ಮುನ್ನುಡಿಯಲ್ಲಿ ದಾಖಲಿಸಿದ್ದಾರೆ.

“ದೇಶೀಯ ದುಮದುಮ್ಮೆ” ಈ ಸಂಕಲನದ ದೀರ್ಘ ಕವಿತೆ. ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಕವಾದ ಭಾರತದ ಇತಿಹಾಸ, ನಮ್ಮ ದೇಶದ ಅಂದಿನ ಸ್ಥಿತಿಗತಿ, ಆಡಳಿತಗಾರರ ಅನ್ಯಾಯ ಹಾಗೂ ಕ್ರೂರತನ - ಇವನ್ನೆಲ್ಲ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವ ಶ್ರೇಷ್ಠ ಕವಿತೆ. ಇದನ್ನು ಬರೆದವರು “ಸೀತಾತನಯ" ಕಾವ್ಯನಾಮದ ದಿ. ಶ್ರೀಧರ ಖಾನೋಲ್ಕರ್. ಅವರ ಇದೇ ಹೆಸರಿನ ಪುಸ್ತಕವನ್ನು 1921ರಲ್ಲಿ ಪ್ರಕಟಿಸಿದ್ದಕ್ಕೆ ಅದರ ಪ್ರಕಾಶಕರಾದ ದಿ. ರಂ. ರಾ. ದಿವಾಕರ ಅವರಿಗೆ ಎರಡು ವರುಷ ಶಿಕ್ಷೆಯಾಗಿತ್ತು ಎಂದರೆ ನಂಬುತ್ತೀರಾ? ಈಗ “ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆಯಾಗುತ್ತಿದೆ” ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಯದ್ವಾತದ್ವಾ ಬರೆಯುವ ಕೆಲವರು ಇಂತಹ ಘಟನೆಗಳ ಬಗ್ಗೆ ತಿಳಿದುಕೊಂಡು ನಂತರ ತಮ್ಮ ಅಭಿಪ್ರಾಯ ಪರಾಮರ್ಶಿಸಬೇಕು, ಅಲ್ಲವೇ?

ಕರ್ನಾಟಕದ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಕಲಿಯುತ್ತಿರುವ ಕನ್ನಡದ ಮಕ್ಕಳಿಗೆ ನಮ್ಮ ಸಂಸ್ಕೃತಿಗೆ ತಾಳೆಯಾಗದಂತಹ ಯಾವ್ಯಾವುದೋ ಇಂಗ್ಲಿಷ್ ಕವನಗಳನ್ನು ಕಲಿಸಿ, ಅವರಲ್ಲಿ ಗುಲಾಮಿ ಮನೋಭಾವ ಬೆಳೆಸುವ ಬದಲಿಗೆ, ದೇಶಭಕ್ತಿಯ ಭಾವ ಉಕ್ಕಿಸುವ ಈ ಸಂಕಲನದ ಹಾಡುಗಳನ್ನು ಕಲಿಸಬಹುದು, ಅಲ್ಲವೇ?

(“ಬಿಡುಗಡೆಯ ಹಾಡುಗಳು” ಸಂಕಲನದ ಎರಡು ಹಾಡುಗಳನ್ನು “ಸಂಪದ"ದ ಬರಹಗಳು ವಿಭಾಗದಲ್ಲಿ ಇವತ್ತು ಪ್ರಕಟಿಸಲಾಗಿದೆ.)