ಬಿಡುಗಡೆಯ ಹಾಡುಗಳು (ಭಾಗ ೧೧) - ಶ್ರೀಧರ ಖಾನೋಲ್ಕರ್
‘ಬಿಡುಗಡೆಯ ಹಾಡುಗಳು’ ಕೃತಿಯಿಂದ ಈ ವಾರ ನಾವು ಆಯ್ದ ಕವಿ ಶ್ರೀಧರ ಖಾನೋಳ್ಕರ (ಖಾನೋಳಕರ, ಖಾನೋಲ್ಕರ್) ಇವರು ೧೮೯೬ರಲ್ಲಿ ಜನಿಸಿದರು. ೧೯೧೯ರಲ್ಲಿ ಬಿ ಎ ಪದವಿಯನ್ನು ಪಡೆದು ಧಾರವಾಡದ ರಾಷ್ಟ್ರೀಯ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ೧೯೪೧ರಲ್ಲಿ ನಿವೃತ್ತರಾದರು. ಇವರ ಮುಖ್ಯ ಕೃತಿಗಳು ನೌಕಾ ಕ್ರೀಡನ, ಸಮರ ಸನ್ಯಾಸ ಮತ್ತು ಹೂಗೆಂಪು. ಶ್ರೀಧರ ಎಂಬ ಹೆಸರಿನಲ್ಲಿ ಕವನಗಳನ್ನು ಬರೆಯುತ್ತಿದ್ದರು. ಇವರು ದ ರಾ ಬೇಂದ್ರೆಯವರ ಸಮಕಾಲೀನರೂ, ಆಪ್ತರೂ ಆಗಿದ್ದರು. ಜಾನಪದ ಸಾಹಿತ್ಯದಲ್ಲಿ ಅಪಾರ ಒಲವುಳ್ಳವರಾಗಿದ್ದರು. ಸೊಗಸಾದ ಕವಾಲಿಗಳನ್ನು ರಚಿಸಿಸುತ್ತಿದ್ದರು. ಖಾನೋಳ್ಕರರ ಬಗ್ಗೆ ಅಧಿಕ ಮಾಹಿತಿ, ಭಾವಚಿತ್ರ ಲಭ್ಯವಿಲ್ಲ. ಓದುಗರಿಗೆ ಮಾಹಿತಿ ಇದ್ದರೆ ನಮ್ಮ ಗಮನಕ್ಕೆ ತರಬಹುದು.
ಶ್ರೀಧರ ಖಾನೋಲ್ಕರ್ ಅವರ ‘ಶರಣು ಮೋಹನದಾಸಗೆ’ ಎನ್ನುವ ಪುಟ್ಟ ಕವನವನ್ನು ಸಿಂಪಿ ಲಿಂಗಣ್ನನವರು ಸಂಗ್ರಹಿಸಿದ್ದಾರೆ. ಈ ಕವನ ನಿಮ್ಮ ಓದಿಗಾಗಿ…
ಶರಣು ಮೋಹನದಾಸಗೆ
ಶರಣು ಮೋಹನದಾಸಗೆ ।ಶರಣು।
ಶರಣು ಮೋಹನದಾಸಗೆ ॥ಪಲ್ಲವಿ॥
ಶರಣು ಕರುಣವ ಸುರಿವ ತರುಣಗೆ ।
ಶರಣು ಭಾರತ ತನಯಗೇ ॥ಅನುಪಲ್ಲವಿ॥
ಕಾಮವನು ಕಡಿಕಡಿದು ಕ್ರೋಧದ
ಧಾಮವನು ಸದೆಬಡಿದು ತಪದಿಂ
ಸೋಮರಸವನು ಕುಡಿದು ನಿಂತಿಹ
ರಾಮರಾಜ್ಯದ ವೀರಗೇ ॥
ಧರ್ಮವೇ ತಳಹದಿಯು ಕರ್ಮಕೆ
ಕರ್ಮವೇ ತಳಹದಿಯು ಧರ್ಮಕೆ
ಧರ್ಮದಿಂದಲೆ ಪಾರತಂತ್ರ್ಯದ
ಮರ್ಮಹಿಂಗುವುದೆಂಬ ವೀದಗೆ ॥
***
ರಣಗೀತ
ಬರುವುದು ಬರಲೆಂದೆನ್ನುವೆವು ।
ಪರದಾಸ್ಯವನಿಂದಳಿಸುವೆವು ॥
ಬಿಸಿಲನು ಚಳಿಯನು ಲೆಕ್ಕಿಸೆವು।
ಹಸಿವಿನ ಕಿಚ್ಚನು ಸಹಿಸುವೆವು ॥
ಬೆತ್ತದ ಬಡಿತವ ತಿನ್ನುವೆವು ।
ಕತ್ತಿಯ ಕಡಿತವ ಸಹಿಸುವೆವು ॥
ಕುಣಿಕುಣಿಯುತ ಹೋರಾಡುವೆವು ।
ರಣದೊಳು ಶೌರ್ಯವ ತೋರುವೆವು ॥
ನಗುತಲೆ ಶೂಲವನೇರುವೆವು ।
ಜಗದೊಳು ಕೀರ್ತಿಯನುಳಿಸುವೆವು ॥
ಹಾಡುತ ರಣದೊಳು ಸಾಯುವೆವು ।
ನಾಡಿನ ಮಾನವ ಕಾಯುವೆವು ॥
-ಅನಾಮಿಕ ಕವಿ
(೧೯೪೬ರಲ್ಲಿ ಪ್ರಕಟಿತ ಧಾರವಾಡದ ‘ಸೇವಾದಲ ಗೀತೆಗಳು’ ಸಂಕಲನದಿಂದ ಆಯ್ದದ್ದು)