ಬಿಡುಗಡೆಯ ಹಾಡುಗಳು (ಭಾಗ ೧೩) - ನಲವಡಿ ಶ್ರೀಕಂಠ ಶಾಸ್ತ್ರಿಗಳು

ನಲವಡಿ ಶ್ರೀಕಂಠ ಶಾಸ್ತ್ರಿಗಳು ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಲವಡಿ ಗ್ರಾಮದವರು. ೧೮೮೯ರ ನವೆಂಬರ್ ೧೪ರಂದು ಜನಿಸಿದರು. ತಂದೆ ಅಮರಯ್ಯ, ತಾಯಿ ಗುರುಲಿಂಗಮ್ಮ. ಇವರ ಮೂಲ ಹೆಸರು ರಾಚಯ್ಯ. ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ‘ವಿಧಿ ವಿಲಾಸ’ ನಾಟಕ ರಚಿಸಿ, ವಿದ್ಯಾರ್ಥಿ ಮಿತ್ರರೊಂದಿಗೆ ಆಡಿ ತೋರಿಸಿ, ತಮ್ಮ ಪ್ರತಿಭೆ ಮೆರೆದಿದ್ದರು. ೧೯೧೬ರಲ್ಲಿ ಊರವರೆಲ್ಲರ ನೆರವಿನೊಂದಿಗೆ ಕಾಶಿಗೆ ತೆರಳಿ ಸಂಸ್ಕೃತ ಕಲಿತು ಊರಿಗೆ ಮರಳಿದಾಗ ಮೆರವಣಿಗೆ ಮಾಡಿದರು. ಊರವರ ಋಣ ತೀರಿಸಲು ಅವರು ತಮ್ಮ ಹೆಸರನ್ನು ‘ನಲವಡಿ ಶ್ರೀಕಂಠಶಾಸ್ತ್ರೀ ಎಂದು ಹೆಸರು ಬದಲಿಸಿಕೊಂಡರು.
ಗದುಗಿನ ತೋಂಟದಾರ್ಯ ಮಠದಲ್ಲಿ ಸಂಸ್ಕೃತ ಅಧ್ಯಾಪಕರಾದರು. ಇವರು ಬರೆದ ೫೦ ನಾಟಕಗಳ ಪೈಕಿ ೪೪ ಮುದ್ರಣಗೊಂಡಿವೆ. ೧೯೬೫ರಲ್ಲಿ ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಯಲ್ಲಿ ಉಬ್ಬಸ ರೋಗಕ್ಕೆ ಚಿಕಿತ್ಸೆ ಪಡೆಯುವಾಗಲೂ ಅವರು ‘ಉಜ್ಜಯಿನಿ ಸಿದ್ಧಲಿಂಗ ವಿಜಯ’ ಹಾಗೂ ‘ಲೀಲಾವತಾರ’ ಎಂಬ ನಾಟಕಗಳನ್ನು ಬರೆದಿದ್ದರು.
ಉಜ್ಜಯಿನಿ ಶ್ರೀ ಸಿದ್ಧಲಿಂಗ ಮಹಾತ್ಮೆ, ತ್ರಿಮೂರ್ತಿಗಳ ಲೀಲಾವತಾರ, ಭೌಮಾಸುರ ಜಗಜ್ಯೋತಿ ಬಸವೇಶ್ವರ, ಚಿ-ಜ್ಯೋತಿ ಉಳವಿ ಚನ್ನಬಸವೇಶ್ವರ, ಮಹಾನಂದ, ಭಕ್ತ ಸುಧನ್ವ, ಪ್ರಪಂಚ ಪರೀಕ್ಷೆ, ಶಿವಶರಣೆ ನಂಬೆಕ್ಕ, ಭಕ್ತ ಮಾರ್ಕಾಂಡೇಯ, ದೇವರ ದುಡ್ಡು, ರೇಣುಕ ವಿಜಯ ಹೀಗೆ ಭಕ್ತಿರಸ ಪ್ರಧಾನ ನಾಟಕಗಳು. ದೈವಚಿತ್ರ, ವಿಚಿತ್ರ ವಿಲಾಸ, ಮಂಗಲಸೂತ್ರ, ಸೋಹಂ ಇತ್ಯಾದಿ ಸಾಮಾಜಿಕ ನಾಟಕಗಳು ಬರೆದಿದ್ದಾರೆ. .
ಭಾವಗೀತೆ, ಭಜನಾ ಪದ, ಗೀಗೀಪದ, ಲಾವಣಿ, ರಿವಾಯತ, ಲಾಲಿಹಾಡು, ಡೊಳ್ಳಿನ ಪದ ಇತ್ಯಾದಿ. ಕೀರ್ತನ ತರಂಗಿಣಿ, ಜ್ಯೋತಿಷ್ಯ ಫಲ ದರ್ಶನ ಕೃತಿಗಳನ್ನೂ ರಚಿಸಿದ್ದಾರೆ. ಉಜೈನಿಯ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳಿಂದ 'ಕರ್ನಾಟಕ ಕವಿಚಂದ್ರ' ಬಿರುದು, ಕರ್ನಾಟಕ ನಾಟಕ ಅಕಾಡೆಮಿ ವರ್ಷಾಸನ, ಪ್ರಶಸ್ತಿ ಲಭಿಸಿದೆ. ಚಂದ್ರಹಾಸ ಈ ಚಲನಚಿತ್ರದ ಹಾಡುಗಳನ್ನು ಇವರೇ ಬರೆದಿದ್ದು.
ಇವರು ರಚಿಸಿದ ‘ಮೋದವ ಪಡೆಯಿರಿ’ ಎನ್ನುವ ಕವನವನ್ನು ಡಾ. ಮೃತ್ಯುಂಜಯ ಹೊರಕೇರಿ ಎಂಬವರು ಸಂಗ್ರಹಿಸಿ ‘ಬಿಡುಗಡೆಯ ಹಾಡುಗಳು’ ಕೃತಿಯಲ್ಲಿ ಅಳವಡಿಸಿದ್ದಾರೆ.
ಮೋದವ ಪಡೆಯಿರಿ
ಮೊಹರಂದ ಹಬ್ಬವ ಮಾಡಿ ಮೋದವ ಪಡೆಯಿರಿ ಸರ್ವಾರಾ ।
ಭಾರತ ದೇಶದ ಪಾರತಂತ್ರ್ಯವ ಕಡಿಯುವ ವಿಚಾರಾ ।
ಮಾರ್ಗದಿ ನಡೆಯಿರಿ ಸರ್ವರಾ ।
ಕೇಳಿರಿ ಮೊಹರಂದ ಶಾಸ್ತ್ರವ ॥೧॥
ಉಡಬ್ಯಾಡ್ರಿ ಪರದೇಶದಿಂದ ಬಂದ ಜಿನಗಾದ ಧೋತರಾ ।
ಸುಟ್ಟುಹಾಕ್ರಿ ಸರ್ವರ ಬೂಟು-ಹ್ಯಾಟು-ನೆತ್ ಟಾಯ್-ಕಾಲರಾ ।
ಮೇಲಾದಂಥ ಬಡಿವಾರಾ ।
ಬಿಟ್ಟುಬಿಡಿ ಎಲ್ಲಾರಾ ॥೨॥
ಕೈರಾಟೆಯಿಂದ ನೂಲ ತೆಗೆಯಿರಿ ಖಾದಿಯ ಭಂಡಾರಾ ।
ಹಿಂದುಸ್ತಾನದ ಅರಿವಿನ ಧರಿಸಿ ಮೆರೆಯಿರಿ ಬಾಂಧವರಾ ।
ಹಿಂಗ ನಡದಿದ್ರೊ ಹಿರಿಯರಾ ।
ನಮ್ಮ ಅಜ್ಜ-ಮುತ್ತಜ್ಜಂದಿರಾ ॥೩॥
ಕುಡಿಬ್ರಾಡ್ರಿ ಚಹಾ ಅಂಗಡಿಗೆ ಹಾಕ್ರಿ ಬೇಗ ಬಹಿಷ್ಕಾರಾ ।
ಒಡೆದು ಹಾಕ್ರಿ ಕಪ್ಪು-ಬಸಿ ಮೊದಲಾದ ಅದ್ದರ ಸಾಮಾನಾ ।
ಫಳಾರ ಬ್ರೇಡು - ಬಿಸ್ಕೀಟು ।
ಅದರಿಂದ ಸುಖವಿಲ್ಲ ಎಳ್ಳಷ್ಟು ॥೪॥
ಚಹಾದ ಪುಡಿಯೊಳ್ಗ ಕೊಡಿಸಿ ರಕ್ತವ ಬಿಸಿಲಿಗೆ ಹಾಕುವರಾ ।
ಇಂಥ ಹೀನ ಚಟವ ಹಿಂದೂ ಜನರಿಗೆ ತಂದ ಕಲಿಸಿದರಾ ।
ಇಂಥ ಕೆಟ್ಟ ವ್ಯಾಪಾರಾ ।
ಮಾಡಿ ದುಡ್ಡು ಸೆಳೆಯುವರಾ ॥೫॥
ಸೋಡಾ ಲಿಂಬು ತಯ್ಯಾರು ಮಾಡಿ ಹಾಳು ಮಾಡು ಯಂತರಾ ।
ಹೀಗೆ ವಿಸ್ತಾರಾ ಮಾಡಿ ನಮ್ಮ ದೇಶದ ದುಡ್ಡು ಸೆಳೆಯುವರಾ ।
ಇಂಥ ಕೆಟ್ಟ ವಿಚಾರಾ
ಬಿಟ್ಟು ಬಿಡಿರಿ ಎಲ್ಲಾರಾ ॥೬॥
ಮೀಸಿಗೆ ಪ್ರೆಂಚಕಟ್ಟಿ ಮಾಡಿಸಿ ಸಿಗ್ರೇಟ್ ಸಿಗಿಸಿ ಸೇದುವರಾ ।
ಷಂಡರಾಂಗ ಕಾಣಿಸ್ತೀರಿ ಗಂಡಸ್ತನಾ ಇಲ್ಲದವರಾ ।
ಇಂಥ ಪರದೇಶದ ಬಡಿವಾರಾ ।
ಅದರಾಗ ಏನೈತಿ ಮಜಕೂರಾ ॥೭॥
ಸರಕಾರದೊಡನೆ ಅಸಹಕಾರ ಮಾಡಿ ದೇಶೋದ್ಧಾರ ।
ಸರ್ವರೂ ತಯ್ಯಾರಾಗಿ ನಿಲ್ಲಿರಿ ಗಾಂಧಿ ಮಹಾತ್ಮಾರಾ ।
ಹೇಳಿದ ತತ್ವವಿಚಾರ ।
ಕೇಳಿರಿ ಶ್ರೀಕಂಠ ಕವಿಸಾರ ॥೮॥