ಬಿಡುಗಡೆಯ ಹಾಡುಗಳು (ಭಾಗ ೧೫) - ಹುಲಕುಂದ ಭೀಮ ಕವಿ

ಬಿಡುಗಡೆಯ ಹಾಡುಗಳು (ಭಾಗ ೧೫) - ಹುಲಕುಂದ ಭೀಮ ಕವಿ

ಬಿಡುಗಡೆಯ ಹಾಡುಗಳು ಕೃತಿಯಲ್ಲಿ ಪ್ರಕಟವಾಗಿರುವ ಒಂದು ನೀಳ್ಗವನದ ರಚನೆಕಾರರು ಹುಲಕುಂದ ಭೀಮ ಕವಿ. ಈ ಕವಿಯ ಬಗ್ಗೆ ಯಾವುದೇ ಅಧಿಕ ಮಾಹಿತಿಗಳು ದೊರೆಯುತ್ತಿಲ್ಲ. ಈ ಕವನವು ‘ರಾಷ್ಟ್ರೀಯ ಪದಗಳು’ ಎನ್ನುವ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಕವನ ತುಂಬಾ ದೀರ್ಘವಾಗಿರುವುದರಿಂದ ಎರಡು ಕಂತುಗಳಲ್ಲಿ ಪ್ರಕಟಿಸಲಾಗಿದೆ.

ಪವಿತ್ರ ಖಾದಿ (ಭಾಗ ೧)

ಮೂಲ ಮಾತ ನಿಮಗ ಕಾಲಬಿದ್ದ ಹೇಳತೀನಿ ಕೇಳಕೊಂಡ ನಡಿಬೇಕ್ರೀ

ಸರ್ವಜನಾ । ದೇಶದಭಿಮಾನಕ್ಕಾಗಿ ತ್ರಾಸ ಆದರು ಚಿಂತಿಲ್ಲ

ಮೀಸಲಿದ್ದ ಖಾದಿಯ ವಸ್ತ್ರವನಾ । ಧರಿಸಿರಿ ಯಿನ್ನಾ ॥ಪಲ್ಲವಿ॥

 

ಮೂವತ್ತೇಳು ಕೋಟಿ ಮಂದಿ ಇಂದ ಖಾದಿ ಧರಿಸಿದರೆ ಭರತಖಂಡ

ಆಗತತಿ ಸ್ವಾಧೀನಾ । ಗೋಳಾಡಿ ಇಂಗ್ಲಿಷರು ಹಾಳಾಗಿ ಹೋಗತಾರ

ಕೊಳಯಿಲ್ಲದ ಸಾಯತಾರ ಗಿರಣಿ ಜನಾ । ಇಲ್ಲ ಅನುಮಾನಾ ॥

 

ಗಿರಣಿ ಸಹಾಯದಿಂದ ನಿಮಗ ವರ್ಣಿಸಲಿಕ್ಕೆ ಬಾರದಂತ ಅರವಿ ನೆಯ್ಯ

ತಾರ ಇಂಗ್ಲಿಷ ಜನಾ । ಅಗ್ಗದಿಂದ ಅರವಿ ಮಾರಿ ಜಗ್ಗಿ ಹಣ

ಒಯ್ಯತಾರಾ ನುಗ್ಗಮಾಡಿ ಬಿಟ್ಟಾರಲ್ಲೊ ಹಿಂದೂಸ್ತಾನ । ಉಳಿಯಲಿಲ್ಲಯೇನಾ ॥

 

ಅರವಿ ಮಾಡಿ ನಮ್ಮಿಂದ ಅರವತ್ತು ಕೋಟಿ ಒಯ್ಯುತಾರ ಅರಗೆಟ್ಟು 

ಕೂತಿರೆಪ್ಪ ಯಲ್ಲಾ ಜನಾ । ಜಂತ್ರಾ ತಿರಿವಿ ನೀವೆಲ್ಲಾರು ಸ್ವಂತ

ನೂಲನೂತರ ನಿಂತ ಹೊಯ್ಯಕೋತಾರ ಪರದೇಶಿ ಜನಾ । ಸಿಗುದಿಲ್ಲ ಅನ್ನಾ ॥

 

ನಾಚಿಕೆಲ್ಲದವರು ನೀವು ನಾಡಿಗೆ ದೊಡ್ಡವರಪ್ಪ ಹೇಸವಲ್ಲದ್ಯಾಕ ಹೇಳ್ರೋ

ನಿಮ್ಮ ಮನಾ । ದೇಶಾಭಿಮಾನ ಬಿಟ್ಟ ಖಾಸದ್ರೋಹಿಗಳ ಅರವಿ ಬ್ಯಾಸರಿಲ್ಲದ

ತೊಡತಿರಲ್ಲೊ ಎಲ್ಲಾ ಜನಾ । ಇಲ್ಲ ಸುಜ್ಞಾನಾ ॥

 

ಜ್ಞಾನದಿಂದ ನಿಮ್ಮಲ್ಲಿಯ ಹೀನ ಗುಣಾ ತೆಗೆದು ಹಾಕಿ ಮಾನವಂತ

ರಾಗಿ ಖಾದಿ ವಸ್ತ್ರವನಾ । ಶ್ರೇಷ್ಟ ಅಂತ ಧರಿಸಿದರ ಸಾಷ್ಟಾಂಗ

ಹಾಕತಿನ ಕೋಟ್ಯಾವಧಿ ರೈತರ ಉಪಜೀವನಾ । ಆಗತತಿರಣ್ಣಾ ॥

 

ರೈತರ ಹಿತಗೋಸ್ಕರ ಖಾದಿ ಪ್ರಚಾರ ಚಳವಳಿ ಮಾಡ್ಯಾರ ಕಾಂಗ್ರೇಸ

ಜನಾ । ಅವರು ಹೇಳಿದಂಗ ನೀವು ಕೇಳಿಕೊಂಡ ನಡಿರಿನ್ನಾ

ಬಡತನದಿಂದ ಬಳಲೂರ ರೈತ ಜನರ ಕಷ್ಟಸೋಸೊರ ಹೊಟ್ಟೆಗಿಲ್ಲ ಅನ್ನಾ

ಸರಕಾರದ ಜನರು ತೆರೆದ ನೋಡಲ್ಲವರ ಕಂಣಾ ॥

 

ಸತ್ಯಶಾಂತಿ ತತ್ವಬೋಧಿಸುವರ । ಹುಟ್ಟಿಬಂದರ ।ತೊಟ್ಟು ಅವತಾರ ।

ಗಾಂಧಿ ಭಗವಾನಾ । ಅನ್ನಾ ಹಾಕಿ ರೈತರನ್ನ ಸಾಕಿಸಲವುತಾನ ಪೂರ್ಣಾ ।

ಅಜ್ಜ ಗಾಂಧಿ ಮಾತಿನಂತೆ ಸಜ್ಜಾಗಿ ನಡೆದರ ಲಗ್ಗಬಗ್ಗ ಬಡುತಾನಾ ದುಷ್ಟರನಾ ॥

 

ಒಂದೇ ಮನಸ್ಸಿನಿಂದ ಕೂತ ವಂದೇ ಮಾತರಂ ಅನ್ನುತ ಚಂದದಿಂದ ತಿರುವಿ

ರವ್ವಾ ಜಂತ್ರವನಾ । ಜಂತ್ರ ಅರವಿ ಉಟ್ಟ ತೊಟ್ಟ ದೇಶಿ ಹಸರ ಬಳಿ

ಯಿಟ್ಟ ಸ್ವಂತ ಹಿಂದು ದೇಶದ ಅಭಿಮಾನಾ । ಹಿಡಿರೆವ್ವಾಯಿನ್ನಾ ॥

 

ಒಂದುವರಿ ತಿಂಗಳ ನೀವು ಒಂದೇ ಮನಸ್ಸಿನಿಂದ ಕೂತು ಚೆಂದದಿಂದ ಅರಿ

ರವ್ವಾ ಹತ್ತಿಯನಾ । ಬೆಸಿಕಟ್ಟ ನೀವೆಲ್ಲರು ಕುಸಿಲಿಂದ ಕುತಕೊಂಡ ಕಸ

ರಿಲ್ಲದ ಹೊಡದ ಅರಳಿಯನಾ । ಹಾಕರಿ ಹಂಜಿಯನಾ ॥

 

ಇಷ್ಟೆಲ್ಲಾ ಕೆಲಸಾ ನೀವು ಕಷ್ಟಪಟ್ಟ ಮಾಡಿದರ ಶ್ರೇಷ್ಟ ಆಗತತಿ ನಿಮ ಮನಿ

ತನಾ । ಸಾಲಾ ಹರದ ನೀವೆಲ್ಲಾರು ಹಾಲುಬಾನ ಉಣತೀರಿ ಕಾಲಿ

ಕುಂಡ್ರಬ್ಯಾಡಿರವ್ವಾ ಎಲ್ಲಾ ಜನಾ । ಸಿಗತತಿ ಹಣಾ ॥

(ಇನ್ನೂ ಇದೆ)