ಬಿಡುಗಡೆಯ ಹಾಡುಗಳು (ಭಾಗ ೧೮) - ತಿಪ್ಪಯ್ಯ ಮಾಸ್ತರ್

ಬಿಡುಗಡೆಯ ಹಾಡುಗಳು (ಭಾಗ ೧೮) - ತಿಪ್ಪಯ್ಯ ಮಾಸ್ತರ್

ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ನಾವು ತಿಪ್ಪಯ್ಯ ಮಾಸ್ತರ್ ಎನ್ನುವ ಕವಿಯ ಕವನವೊಂದನ್ನು ಆರಿಸಿ ಪ್ರಕಟ ಮಾಡಲಿದ್ದೇವೆ. ಮುದವೀಡು ಕೃಷ್ಣ ರಾಯರ ಹಾಗೂ ತಿಪ್ಪಯ್ಯ ಮಾಸ್ತರರ ಕವನಗಳಲ್ಲಿ ಸ್ವಲ್ಪ ಮಟ್ಟಿಗೆ ಸಾಮ್ಯತೆ ಇರುವುದರಿಂದ ಬಹಳಷ್ಟು ಕಡೆ ಯಾರು ಬರೆದ ಕವನ ಎಂದು ಗೊಂದಲಗಳಿವೆ. ಇಲ್ಲಿ ಪ್ರಕಟಿಸಲಾದ ಕವನ ೧೯೩೦ರಲ್ಲಿ ಮುದ್ರಿತವಾದ ‘ರಾಷ್ಟ್ರೀಯ ಪದ್ಯಗಳು’ ಸಂಕಲನದಲ್ಲಿದೆ. ತಿಪ್ಪಯ್ಯ ಮಾಸ್ತರ್ ಬಗ್ಗೆ ಅಧಿಕ ಮಾಹಿತಿಗಳು ಸಿಗುತ್ತಿಲ್ಲ.

ಲಾವಣಿ

ಜಪಿಸಿರಿ ಸ್ವರಾಜ್ಯ ಮಂತ್ರವನೂ । ಧರಿಸಿರಿ ಸ್ವದೇಶಿವಸ್ತ್ರವನೂ ॥ಪಲ್ಲವಿ॥

 

ಮೂರವತಾರದ ಮೂರ್ತಿಗಳಾಗಿಹ । ಧೀರರು ದೇಶದೊಳು ।

ಪುಟ್ಟಿದರೂ । ಧೀರರು ದೇಶದೊಳು ॥ ಪಾರತಂತ್ರ್ಯವೀ

ಸೂತ್ರವ ಹರಿಯುವ ನೀತಿಯ ಮಂತ್ರವಿದೂ ॥೧॥

 

ಜ್ಯೇಷ್ಟ ಪಿತಾಮಹ ದಾದಾಭಾಯಿಯರು । ಸೃಷ್ಟಿಸಿ ತೋರಿದರೂ ॥

ಕಷ್ಟವ ಕಳೆಯುವ ಗುಟ್ಟು ಇದೆನ್ನುತ । ದೃಷ್ಟಿಗೆ ತೋರಿದರು ॥೨॥

 

ಸಫಲವಿದೆನ್ನುತ ಚಿಪುಳುಣಕಾರರು । ಗುಪಿತವ ತೋರಿದರು ।

ತಪಿಸುವದೀ ಕಾರ್ಯವ ನೀವೆಲ್ಲವ । ಸುಕೃತ ಗೈಯುವದು ।

ಸ್ವರಾಜ್ಯಕೆ ಉಪಕೃತ ಗೈಯ್ಯುವದೂ ॥೩॥

 

ಬಾಲಗಂಗಾಧರ ತಿಲಕರು ಲೋಕಕೆ । ಮಾನ್ಯರು ತಾವೆನಿಸಿ ।

ಚಾಲನಗೈದರು ಮುಂದರಿಯಲು ಬಲು । ಕೆವಡುಗಳನು ಸಹಿಸಿ ॥೪॥

 

ವೀರರು ನಮ್ಮ ವಿಚಾರಕೆ ತನುಮನ । ಸೂರೆಯಗೊಟ್ಟಿಹರೊ ।

ಕಾರಾಗೃಹ ವಾಸವನನುಭವಿಸುತ ತೋರಿದ ಮಾರ್ಗವಿದೂ ॥೫॥

 

ಲಾಲ ಲಜಪತರಾಯರು ತಿಳಿದರು । ಮೂಲ ಮಂತ್ರವೆನುತಾ ।

ಕಾಲಕೆ ಬಂದಿವ ಕಷ್ಟವ ಸಹಿಸುತ ಮುಂದಕೆ ನಡೆಯುವರೂ ॥೬॥

 

ಪಾಲ ಚಂದ್ರರನುಗಾಲವು ಲೋಕಕೆ । ಮೇಲನು ತಿಳಿಸಿದರು ।

ಸ್ಥೂಲ ಸೂಕ್ಸ್ಮಗಳ ತ್ಳಿಯುತ ನೋಡಿರಿ । ಕಾಲವ ಕಳೆಯದಿರೆ ॥೭॥

 

ಹಿಂದೆಮುಂದಿನವರಿಂದಕೆ ತಪ್ಪದೆ ಸಂಧಿಯನನುಸರಿಸೀ ।

ಮುಂದೆ ಮಹಾತ್ಮಾ ಗಾಂಧಿಯರೀಪರಿ । ಸಂದೇಶವ ತಿಳಿಸಿ ॥೮॥

 

ಪರಿಪರಿ ಕಷ್ಟವ ಸುರಿಸುರಿದನು ದಿನ । ತರಹರಿಸದೆ ಮನಕೆ ।

ಕರುಣಿಸಿ ಪೇಳ್ದರು ಸ್ವದೇಶಿ ಮಂತ್ರವ ಪರರಿಗರಿಯದಂತೆ ॥೯॥

 

ನಿದ್ರೆಯೊಳಿರುವರ ಮುದ್ರೆಯನೀಕ್ಷಿಸಿ । ಬುದ್ದಿಯೊಳೆಚ್ಚರಿಸಿ ।

ಸಿದ್ಧನಗರ ಶ್ರೀ ದೇವನ ನೆನಯಂತ । ಬುದ್ಧಿಯ ನೆರೆ ಕಲಿಸೀ ॥೧೦॥