ಬಿಡುಗಡೆಯ ಹಾಡುಗಳು (ಭಾಗ ೧೯) - ಅನಾಮಿಕ ಕವಿ

ಬಿಡುಗಡೆಯ ಹಾಡುಗಳು (ಭಾಗ ೧೯) - ಅನಾಮಿಕ ಕವಿ

ಬಿಡುಗಡೆಯ ಹಾಡುಗಳು ಕೃತಿಯಲ್ಲಿರುವ ಎಲ್ಲಾ ಕವನಗಳು ಸ್ವಾತಂತ್ರ್ಯ ಪೂರ್ವದಲ್ಲಿ ಬರೆದವುಗಳು. ಈ ಕಾರಣದಿಂದಾಗಿ ಕೆಲವು ಕವನಗಳ ಕವಿಗಳು ಯಾರು ಎಂಬುದೇ ತಿಳಿದು ಬರುತ್ತಿಲ್ಲ. ಅಂತಹುದೇ ಒಂದು ಕವನವನ್ನು ಈ ವಾರ ಆಯ್ದು ಪ್ರಕಟಿಸಲಾಗಿದೆ.

ದುರ್ವ್ಯಸನಗಳನ್ನು ಬಿಡಿ

(‘ಎನ್ನದು ಈ ಕನ್ನಡ ನಾಡು’ ಎಂಬಂತೆ)

ಕುಡಿಯಬೇಡಿ ಸೆರೆಸೇಂದಿಗಳ । ಬಿಡಿರಿ ಬಿಡಿರಿ ದುರ್ವ್ಯಸನಗಳ ॥ಪ॥

ಮಾಡುವೆ ನಿಮಗೆ ವಿನತಿಗಳನಾ । ಬೇಡುವೆ ಮುಗಿಯುತ ಕರಗಳನಾ ॥ಅ॥

 

ಸರಕಾರಕೆ ಕರರೂಪದಲಿ । ಪರಿಪರಿ ಲಾಭವ ಮಾಡುತಲಿ ।

ಪರದೇಶಕೆ ಹಣ ಹಾಕುತಲಿ । ದಾರಿದ್ರ್ಯವ ನಮಗೀಯುತಲಿ ॥

ಪರಸತ್ತೆಯ ಸ್ಥಿರಗೊಳಿಸುತಲಿ । ಪರದಾಸ್ಯದುರಿಯೊಳೊಗೆಯುತಲಿ ।

ಸಿರಿಸಂಪದಗಳ ಸೆಳೆಯುತಲಿ । ದರವೇಶಿಗಳಿವರೆನಿಸುತಲಿ ॥

ಧರೆಯಲಿ ಸುಖ ಸಂಹರಿಸುವದು ।

ಅರಸನ ತಿರುಕನ ಮಾಡುವದು ॥

ನರಕದ ಯಾತನೆ ತೋರುವರು

ವರಣಿಸಲಾಗದು ಈ ಸೆರೆಯ । ಪರಿಪರಿ ಕೊಡುತಿಹ ವ್ಯಥೆಯ ॥೧॥

 

ಜ್ಞಾನಿಯ ಜ್ಞಾನವ ಕೆಡಿಸುವದು । ಬಲವಂತನ ಬಲವಳಿಸುವದು ॥

ಮಾನ ಮಾನ್ಯತೆ ಕಳೆಯುವದು । ಗುಣವಂತಹನ ಗುಣ ಹಿಂಗಿಸುವುದು ॥

ಮನುಜನ ಮಾನುಷತನವನ್ನೇ । ಕ್ಷಣದಲಿ ಮಾಯವ ಮಾಡುವದು ॥

ಮಾನಭಂಗವನು ಪೊಂದಿಸುತೆ । ಹೀನ ದೀನತೆಯ ತಂದಿಡುತೆ ॥

ಧರ್ಮಾಧರ್ಮ ವಿಚಾರವನು ।

ನೀತಿ - ಅನೀತಿ ವಿವೇಕವನು ।

ನಾಶ ಮಾಡುವದು ಬುದ್ಧಿಯನು ।

ಸಾಕು ಸಾಕು ಸೇಂದಿಯ ಸಂಗ । ಸಾಕು ಸಾಕು ಸಹಿಸಿದ ಭಂಗ ॥೨॥

 

ಕುಡಿದಾಕ್ಷಣ ಹುರಿದುಂಬಿಪುದು । ಕಡೆಗತಿ ನಿತ್ರಾಣವು ನಿಜವು ॥

ನಾಲಿಗೆಗಿದು ರುಚಿಕರ ರಸವು । ಆರೋಗ್ಯಕೆ ನಾಶಕ ವಿಷವು ॥

ಕಣ್ಣಿಗೆ ನುಣ್ಣಗೆ ಕಾಣುವದು । ಗುಣದಲ್ಲಿ ಘಾತಕವಾಗಿಹುದು ॥

ಹೊರಗಡೆ ಹೊಂಬಣ್ಣದ ಕೊಡವು । ಒಳಗೆ ನೋಡೆ ವಿಷ ತುಂಬಿಹುದು ॥

ಮೊದಲಿಗೆ ಸವಿ ಸವಿ ತೋರುವದು ।

ತರತರದಲಿ ಮನ ಸೆಳೆಯುವದು ॥

ಕುಡಿಯಲು ಕರುಳನುಕೊರೆಯುವದು ।

ಹಿತಶತ್ರುಗಳಂದದಿ ಜನರ । ಹತಿಸುವದೈ ತಿಳಿಸದೆ ತಿರುಳ ॥೩॥

 

ವಿಷವನು ಕುಡಿದರೆ ಒಮ್ಮಲೆಯೇ । ಅಸುವನು ಹೀರುವದಾಕ್ಷಣವೇ ॥

ಸೆರೆ ಕುಡಿದರೆ ಉಸುರಿರುವವರೆಗೂ । ಬರುವವು ತರತರ ಕಷ್ಟಗಳೂ ॥

ವಿಷ ಕುಡಿದರೆ ಪ್ರಾಣವನೊಂದ । ಕಸಕೊಳ್ಳುವದೆಂಬುದು ಸಹಜ ॥

ಸೆರೆ ತನುಮನ ಪ್ರಾಣವ ಸಹಿತ । ಆತ್ಮವನು ಹತಗೊಳಿಸುವದು ॥

ಸರ್ವನಾಶಕರವೀ ಹೆಂಡ ।

ಕುಡಿದವನಾಗುವನೈ ಭಂಡ ॥

ಆತನ ನರ ಜನ್ಮವೆ ದಂಡ ।

ಈ ಪರಿ ಘಾತಕವಾಗಿಹುದು । ತಾಪತ್ರಯದಾಯಕ ಸೆರೆಯು ॥೪॥

 

ಭಾರತ ಮಂಗಲ ಭೂಮಿಯೊಳು । ಇರಬಾರದು ಸೇಂದಿಯ ಮಲವು ॥

ಆರ್ಯ ಋಷಿಗಳ ಸ್ಥಾನದೊಳು । ದುರ್ಗುಣ ರಾಶಿಯು ಶೋಭಿಸದು ॥

ಮಾರಿಮಸಣಿ ರಕ್ಕಸರೆಂದು । ದೂರಕೆ ತೊಲಗಿಸಬೇಕೆಂದು ॥

ಹುರುಪಿನಿಂದ ಹೋರಾಡುವುದು । ವರ ನೀತಿಯ ಸಂಗ್ರಾಮವಿದು ॥

ನಿರ್ವ್ಯಸನದ ಸುಖ ಸೇವಿಸಲು ।

ನಿರ್ಮಲ ಜೀವನ ಸಾಗಿಸಲು ॥

ನಿರ್ಮಾದಕ ನಾಡೆನಿಸಲು ।

ಕರ್ಮ ಕುಶಲತೆಯ ತೋರಿಸಿರಿ । ನಿರ್ಮೋಹದಿ ದುಡಿಯುವ ಬನ್ನಿ ॥೫॥