ಬಿಡುಗಡೆಯ ಹಾಡುಗಳು (ಭಾಗ ೧) - ಶಾಂತಕವಿ
ಈಗಾಗಲೇ ನಾವು ಹಲವು ದಶಕಗಳಷ್ಟು ಹಳೆಯದಾದ ‘ಸುವರ್ಣ ಸಂಪುಟ', ‘ಹೊಸಗನ್ನಡ ಕಾವ್ಯಶ್ರೀ’ ಮತ್ತು ‘ಪಂಜೆಯವರ ಮಕ್ಕಳ ಪದ್ಯಗಳು’ ಕೃತಿಗಳಿಂದ ಬಹು ಅಪರೂಪದ ಕವನಗಳನ್ನು ಆಯ್ದು ಪ್ರಕಟ ಮಾಡಿದ್ದೇವೆ. ಈ ಮಾಲಿಕೆಗಳು ಹಲವರ ಮನಗೆದ್ದಿದೆ. ಬಹಳಷ್ಟು ಮಂದಿ ಇಂತಹ ಅಪರೂಪದ ಕೃತಿಗಳಲ್ಲಿರುವ ಕವನಗಳನ್ನು ಆಯ್ದು ಪ್ರಕಟಿಸುತ್ತಾ ಇರಿ ಎಂದಿದ್ದಾರೆ. ಅದೇ ಹುಮ್ಮಸ್ಸಿನಲ್ಲಿ ನಾವು ಈಗ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬರೆಯಲ್ಪಟ್ಟ ಕವನಗಳ ಸಂಗ್ರಹ ‘ಬಿಡುಗಡೆಯ ಹಾಡುಗಳು' ಎನ್ನುವ ಕೃತಿಯಲ್ಲಿರುವ ಕವನಗಳನ್ನು ಒಂದೊಂದಾಗಿ ಪ್ರಕಟ ಮಾಡಲಿದ್ದೇವೆ. ಈ ಕೃತಿಯನ್ನು ಸಂಪಾದನೆ ಮಾಡಿರುವವರು ಡಾ. ಸೂರ್ಯನಾಥ ಕಾಮತ. ಈ ಸರಣಿಯ ಮೊದಲ ಕವಿ ಶಾಂತಕವಿ (ಬಾಳಾಚಾರ್ಯ ಸಕ್ಕರಿ).
ಶಾಂತಕವಿ: ಆಧುನಿಕ ಕರ್ನಾಟಕ ನಾಟಕ ಪಿತಾಮಹ-’ಶಾಂತಕವಿ’ ಎಂದೇ ಖ್ಯಾತಿಯ ಬಾಳಾಚಾರ್ಯ ಗೋಪಾಲಾಚಾರ್ಯ ಸಕ್ಕರಿ ಅವರು ನಾಟಕಕಾರರು, ಕವಿಗಳು. ೧೮೫೬ರ ಜನವರಿ ೧೫ರಂದು ಹಾವೇರಿ ಜಿಲ್ಲೆಯ ಸಾತೇನಹಳ್ಳಿಯಲ್ಲಿ ಹುಟ್ಟಿದರು. ಈ ಮನೆತನದ ಶ್ರೀನಿವಾಸಾಚಾರ್ಯ ಎನ್ನುವವರು “ಶರ್ಕರಾ” (ಸಂಸ್ಕೃತದಲ್ಲಿ ಸಕ್ಕರೆ) ಎನ್ನುವ ಸಂಸ್ಕೃತ ಟೀಕೆಯನ್ನು ರಚಿಸಿದ್ದರಿಂದ ಇವರ ಮನೆತನಕ್ಕೆ “ಸಕ್ಕರಿ” ಎನ್ನುವ ಅಡ್ಡಹೆಸರು ಬಂದಿತು.
ಬಾಲ್ಯದಲ್ಲೇ ಜೈಮಿನಿ ಭಾರತ, ಮಹಾಭಾರತ ಪಠಣ ಹಾಗೂ ತಾಯಿಯಿಂದ ಕಲಿತ ದಾಸರ ಪದಗಳು. ಧಾರ್ಮಿಕ ಕಾವ್ಯ, ದಾಸರ ಪದಗಳಿಂದ ಬಂದ ಸಾಹಿತ್ಯ ಪ್ರಜ್ಞೆ. ಕೇವಲ ೧೪ರ ಹರೆಯದಲ್ಲೇ ರಾಣಿಬೆನ್ನೂರಿನಲ್ಲಿ ಶಾಲಾ ಶಿಕ್ಷಕರಾದರು. ಆಗಲೇ, ಮೊದಲ ನಾಟಕ ‘ಉಷಾಹರಣ’ ಬರೆದದ್ದು, ೧೭ರ ಹರೆಯದಲ್ಲೇ ೬೩ಕ್ಕೂ ಹೆಚ್ಚು ನಾಟಕ, ಕಾವ್ಯ ರಚನೆ ಮಾಡಿದ್ದರು. ‘ಮುಕುಂದ ದಾನಾಮೃತ’ ಕನ್ನಡದ ಕೃತಿ ರಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ೧೮೭೪ರಲ್ಲಿ ಕರ್ನಾಟಕದಲ್ಲಿ ನಾಟಕ ಕಂಪನಿ ಕಟ್ಟಿದರು.’ವತ್ಸಲಾಹರಣ, ಸುಧನ್ವವಧೆ, ಕೀಚಕವಧೆ, ಸುಂದರೋಪಸುಂದವಧೆ, ವಾಸಪ್ಪ ನಾಯಕನ ಫಾರ್ಸು ಮುಂತಾದ ನಾಟಕಗಳ ರಚನೆ. ಹಳೆ ಕಾವ್ಯ ಪರಂಪರೆಯ ಜೊತೆಗೆ ಆಧುನಿಕ ಭಾವಗೀತೆ ರಚಿಸಿದರು. ಧಾರವಾಡದ ಸಾಹಿತ್ಯ ಸಮ್ಮೇಳನಕ್ಕೆ ಆರ್ಥಿಕ ಮುಗ್ಗಟ್ಟಿನಿಂದ ಎದ್ದೇಳಲು ಕನ್ನಡದ ದಾಸಯ್ಯ (ಬೇಡಲು ಬಂದಿರುವೆ ದಾಸಯ್ಯ) ಹಾಡು ಕಟ್ಟಿ, ಅದನ್ನು ಹಾಡಿ-ಬೇಡಿ ಹಣ ಸಂಗ್ರಹಿಸಿದ್ದರು. ‘ರಕ್ಷಿಸು ಕರ್ನಾಟಕದೇವಿ’ ಮುಂಬೈ ಕರ್ನಾಟಕದ ನಾಡಗೀತೆಯಾಗಿ ಪ್ರಸಿದ್ಧಿ ಪಡೆದಿದೆ.
ಜಯದೇವ ಕವಿಯ ಗೀತಗೋವಿಂದ ಆಧಾರಿತ ವಿರಹತರಂಗ, ಕಾಳಿದಾಸನ ಮೇಘದೂತ ಮತ್ತು ಪಾರ್ವತಿ ಪರಿಣಯದ ಭಾಷಾಂತರದ ಕೃತಿಗಳು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ವಾಚನಾಲಯಕ್ಕೆ ಶಾಂತಕವಿಗಳ ಗೌರವದಲ್ಲಿ “ಶಾಂತೇಶ ವಾಚನಾಲಯ” ಎಂದು ಹೆಸರಿಸಲಾಗಿದೆ. ಒಟ್ಟು ೨೭ ನಾಟಕಗಳನ್ನು ರಚಿಸಿದ್ದಾರೆ. ಅಲಂಕಾರ ಶಾಸ್ತ್ರ, ಲಘು ಕವಿತಾ ಪದ್ಧತಿ (ಟಿಪ್ಪಣಿ), ಋತುಸಂಹಾರ, ಆನಂದ ಲಹರಿ ಸೇರಿದಂತೆ ೯ ಕವನ ಸಂಕಲನಗಳು, ಗಜೇಂದ್ರ ಮೋಕ್ಷ, ರಾವಣ ವೇದಾವತಿ ಸೇರಿದಂತೆ ೪ ಕೀರ್ತನೆಗಳನ್ನು ಬರೆದಿದ್ದಾರೆ. ೧೯೨೦ರಲ್ಲಿ ಹುಬ್ಬಳ್ಳಿಯಲ್ಲಿ ನಿಧನರಾದರು.
ಶಾಂತಕವಿ ಬರೆದ ಸ್ವಾತಂತ್ರ್ಯದ ಬಗ್ಗೆ ಒಂದು ಹಾಡನ್ನು ಆಯ್ದು ಇಲ್ಲಿ ಪ್ರಕಟ ಮಾಡಲಾಗಿದೆ.
ನಮ್ಮದೀ ನಮ್ಮದೀ ಭರತಭೂಮಿ
(ರಾಗ: ಕಾಂಬೋಧಿ, ತಾಳ : ಝಂಪೆ)
ನಮ್ಮದೀ ನಮ್ಮದೀ ಭರತಭೂಮಿ ॥ಪಲ್ಲವಿ॥
ಹೆರವರಂ ನಂಬದಲೆ ಜಗದೀಶ್ವರಂ ತಾನೇ ।
ಧರಿಸಿ ನಾನಾವತಾರಂಗಳನ್ನು ॥
ಕರೆವ ಸರ್ವಸ್ವಮಂ ಧರೆಯ ಸಂರಕ್ಷಿಸುವ ।
ತೆರವ ಕಲಿಸಿದಪೂರ್ವ ಪಾಠಶಾಲೆ ॥
ಉಚ್ಛಿ ತತ್ವಾರ್ಥಗಳನಾಚರಿಸಿ ಲೋಕವ ।
ನ್ನೆಚ್ಚರಿಸಿ ದೇವರಿಚ್ಛಾಜ್ಯೋತಿಯಂ ॥
ಅಚ್ಚಳಿಯದೊಲು ಗೈದ ಸಋಷಿಪದವೀಧರರು ।
ಸ್ವೇಚ್ಛೆಯಿಂ ನೆಲೆಗೈದ ಸುಕ್ಷೇತ್ರವು ॥
ಪದವೀಧರರ್ ಪೇಳ್ದ ಪದ್ಧತಿಗಳಂ ಬಿಡದೆ ।
ಸದಭಿಮಾನೈಕ್ಯ ಶೌರ್ಯೋತ್ಸಾಹದಿಂ ॥
ಉದಿತ ಸುಸ್ಪೂರ್ತಿಯಿಂದೆಮ್ಮ ಪೂರ್ವಜರಿದ್ದ ।
ಮುದದ ಭಾಗ್ಯದ ನಿಧಿಯ ಮಂದಿರವಿದು ॥
ದೇವಋಷಿ ಪೂರ್ವಜರುದಾತ್ತವೃತ್ತಿ ಪ್ರಭಾ ।
ಭಾವನಾಮೃತ ದೃಷ್ಟಿಯಿಂ ಬೆಳೆಯುವ ॥
ಭಾವಿಸುಖ ಸಾಮ್ರಾಜ್ಯವೆಂಬ ಸತ್ ಫಲಗಳ ।
ನ್ನೀವ ಸರ್ವೋತ್ಕೃಷ್ಟ ನಂದನವನಂ ॥
(‘ಜೈ ಭಾರತ ರಾಷ್ಟ್ರಗೀತೆಗಳು' ಸಂಗ್ರಹದಿಂದ)
ವಿ.ಸೂ: ‘ಬಿಡುಗಡೆಯ ಹಾಡುಗಳು' ಕೃತಿಯ ಪರಿಚಯ ೨೩-೦೫-೨೦೨೪ರ ‘ಸಂಪದ' ದಲ್ಲಿದೆ. ಅಧಿಕ ಮಾಹಿತಿ ಬೇಕಾದವರು ಅದನ್ನು ಗಮನಿಸಬಹುದು.
ಕೃಪೆ: ಬಿಡುಗಡೆಯ ಹಾಡುಗಳು