ಬಿಡುಗಡೆಯ ಹಾಡುಗಳು (ಭಾಗ ೨೦) - ಬಿಷ್ಟಪ್ಪ ಕುಬೇರಪ್ಪ ಮಂಡೇದ
ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ಬಿಷ್ಟಪ್ಪ ಕುಬೇರಪ್ಪ ಮಂಡೇದ ಎನ್ನುವ ಕವಿಯ ಒಂದು ಕವನವನ್ನು ಆಯ್ದು ಪ್ರಕಟ ಮಾಡಲಿದ್ದೇವೆ. ಈ ಕವನವು ಹಸ್ತಪ್ರತಿಯಲ್ಲಿದ್ದು ನಂತರ ಬಿಡುಗಡೆಯ ಹಾಡುಗಳು ಕೃತಿಯಲ್ಲಿ ಪ್ರಕಟವಾಗಿದೆ. ಕುಬೇರಪ್ಪ ಅವರ ಬಗ್ಗೆ ಯಾವುದೇ ಮಾಹಿತಿಗಳು ದೊರಕುತ್ತಿಲ್ಲ.
ನಾವು ಬಂದದ್ದು ಯಾತಕ್ಕ
(‘ನಾವು ಬಂದೇವ ಶ್ರೀಶೈಲ ನೋಡದಕ್ಕ’ ಎಂಬಂತೆ)
ನಾವು ಬಂದೇವ, ನಾವು ಬಂದೇವ, ನಾವು ಬಂದೇವ ।
ರಾಷ್ಟ್ರ ಸ್ವತಂತ್ರ ಮಾಡೋದಕ್ಕ ।
ರಾಷ್ಟ್ರ ಸ್ವತಂತ್ರ ಮಾಡೀ ಕಷ್ಟಾ ಕಳಿಯೋದಕ್ಕ ॥ಪಲ್ಲವಿ॥
ನಿಷ್ಟಾವಂತ್ರಾಗೀಯಲ್ಲಾರ್ನಾವು ದುಡಿಯ್ಯೋದಕ ।
(ವ) ರಿಷ್ಟ ಮಂದಿಂಕರದೇವೀ ಸಭಾಕ್ಕ ।
ಶ್ರೇಷ್ಟ ಭಾರತ ಮಾತೇ ಸೇವಾ ಮಾಡೋದಕ್ಕ । ಸೇವಾ ಮಾಡೋದಕ್ಕ ।
ರಾಷ್ಟ್ರ ಸ್ವತಂತ್ರ ಮಾಡೀ ಕಷ್ಟಾ ಕಳಿಯೋದಕ್ಕ ॥ನಾವು॥
ಕಟ್ಟ ಕಡೆಯಲ್ಲಿ ಬಿಷ್ಟಂಣ ಬಂದ ಹಾಡೋದಕ್ಕ ।
ಬಿಷ್ಟ ಹಾಡೋದಿಲ್ಲ ನಿಷ್ಟೂರಾಗಿ ಮನಕ್ಕ ।
ಅಷ್ಟೂರೊಟ್ಟಾಗಿ ನಿಂದ್ರೂ ನಮ್ಮ ಕಡತಕ್ಕ ॥ಕಷ್ಟ ಸೋಸೋದ॥
ಕಷ್ಟ ಸೋಸೋದ ಬಿಟ್ಟೋಡ್ತತೀ ಯಾತಕ್ಕ ।
ರಾಷ್ಟ್ರ ಸೇವಾ ಮಾಡೀ ಕಷ್ಟಾ ಕಳಿಯೋದಕ್ಕ ॥ನಾವು॥
ಕಷ್ಟಸೋಸೋದಕ್ಕ ಒಟ್ಟಾ ಗ್ರೆಪಾ ಚೊಕ್ಕ ।
ಶ್ರೇಷ್ಟಗಾಂಧೀ ಅಹಿಂಸಾ ತತ್ವಕ್ಕ ।
ಭ್ರಷ್ಟರಾಳಿಕೇ ಮುದ್ದ ಮೂಲಿಗೊತ್ತೋದಕ್ಕ । ನಿಷ್ಟೂರಾಗೀ ।
ಅಷ್ಟುರೊಟ್ಟಾಗ್ರೆಪ್ಪಾ ನೀವು ತತ್ಕಾಲಕ್ಕ ।
ರಾಷ್ಟ್ರ ಸೇವಾ ಮಾಡೀ ಕಷ್ಟಾ ಕಳಿಯೋದಕ್ಕ ॥ನಾವು॥
ವಟ್ಟಿಗೊಂದ್ಮಾತ ಹೇಳುವೆನಾ ಠೀಕ ।
ಅಟ್ಟಾಯೇರಿ ಬಂದ ಹೇಳಿದ್ದ ಕವನಕ್ಕ ।
ರಾಷ್ಟ್ರ ಯೋಧರಾಗೀ ರಾಷ್ಟ್ರ ಸೇವಾದಲಕ್ಕ । ನಿಷ್ಟೆಯಿಂದ।
ನಿಷ್ಟೆಯಿಂದ ಬಂದ ಕಷ್ಟಾ ಬಿಡಸೋದಕ್ಕ ।
ರಾಷ್ಟ್ರ ಸ್ವತಂತ್ರ ಮಾಡೀ ಕಷ್ಟಾ ಕಳಿಯೋದಕ್ಕ ॥ನಾವು॥