ಬಿಡುಗಡೆಯ ಹಾಡುಗಳು (ಭಾಗ ೨೪) - ಪೆ. ರ. ಮ.(ರಘುರಾಮ)

ಬಿಡುಗಡೆಯ ಹಾಡುಗಳು (ಭಾಗ ೨೪) - ಪೆ. ರ. ಮ.(ರಘುರಾಮ)

ಬಿಡುಗಡೆಯ ಹಾಡುಗಳು ಕೃತಿಯಲ್ಲಿ ‘ಭಾರತ ಬೋಧೆ’ ಎನ್ನುವ ಒಂದು ಕವನ ಇದೆ. ಇದನ್ನು ಬರೆದವರು ‘ಪೆ. ರ. ಮ.’ ಎಂದು ಇದೆ. ಇವರ ಹೆಸರ ಎದುರು ಪ್ರಶ್ನಾರ್ಥಕ ಚಿನ್ಹೆಯನ್ನು ಹಾಕಿರುವುದರಿಂದ ಕೃತಿಯ ಸಂಪಾದಕರಿಗೂ ಅವರು ಯಾರು ಎನ್ನುವ ಬಗ್ಗೆ ಸಂದೇಹವಿದೆ ಎಂಬ ಭಾವನೆ ಬರುತ್ತದೆ. ‘ಈ ಕವಿ ದಕ್ಷಿಣ ಕನ್ನಡದವರು, ಯಾರೆಂದು ಖಚಿತವಾಗಿ ತಿಳಿಯದು. ರಘುರಾಮ ಎಂಬ ಮುದ್ರಿಕೆ ಇದೆ’ ಎನ್ನುವ ಶರಾ ಬರೆದಿದ್ದಾರೆ. 

ಭಾರತ ಬೋಧೆ

ಭಾರತೇಯರೆ ನಮ್ಮ ಭಾಗ್ಯ ಸಂಪತ್ತೂ ।

ಸೂರೆ ಸುಲಿಗೆಯಾಗಿ ಹೋಗುತ್ತ ಬಂತೂ ॥

ಘೋರ ನಿದ್ದೆಯ ಕಾಲವದು ಹಿಂದೆ ಸಂತೂ ।

ಜೋರಿನಿಂದೇಳುವ ಹೊತ್ತೀಗ ಬಂತೂ ॥೧॥

 

ಬೆಳ್ಳಿಭಂಗಾರವಿದ್ದುದು ಬರಿದಾಯ್ತು ।

ಟೊಳ್ಳು ಕಾಗದ ಎಲುಮಿನ ತುಂಬಿಹೋಯ್ತು ॥

ಒಳ್ಳೊಳ್ಳೆ ನವರತ್ನಗಳು ಕಾಣದಾಯ್ತು ।

ಕೊಳ್ಳೆಯಾದವು ಪರದೇಶಿಯರ್ಗಿಂತೂ ॥೨॥

 

ಮನೆಯೊಳ್ ಹಿಂದಿದ್ದ ಕಂಚಿನ ಬಟ್ಟಲಿಲ್ಲಾ ।

ಗಣನೆಯಿಲ್ಲದ ತಾಂಬ್ರ ಪಾತ್ರೆ ಈಗಿಲ್ಲಾ ॥

ಮಿನುಗುವ ಗಾಜು ಪಿಂಗಾಣಿಯೇ ಎಲ್ಲಾ ।

ಜನರಿಗೂ ಚಿಮಿಣಿ ಬುರ್ಡೆಯೆ ಬೇಕಾಯ್ತಲ್ಲಾ ॥೩॥

 

ವೀರಭಾರತ ಭಾಗ್ಯನಿಧಿ ರಾಷ್ಟ್ರವೆನಿಸೀ ।

ದಾರಿಕಾಯಲು ಬೇಕಾಯ್ತೀಗ ಪರದೇಶೀ ॥

ದೂರದಿಂದಲ್ಲಿ ವಸ್ತ್ರದ ರಾಶಿರಾಶೀ ।

ಹೇರುಗಳ್ ಬಂದು ಗೈದವು ನಮ್ಮ ಘಾಸೀ ॥೪॥

 

ಕೈಗಾರಿಕೆಯು ದೇಶದೊಳ್ ನಾಶವಾಯ್ತೂ ।

ಮೈಗಾವಲಿಗು ಪರಜನರೇ ಬೇಕಾಯ್ತೂ ॥

ಸೈಗುಟ್ಟಲಿಕೆ ನಾವು ಚೆನ್ನಾಗಿ ಕಲಿತೂ ।

ಐಗಳಿಲ್ಲದ ಮಠದಂತಾಗಿ ಹೋಯ್ತೂ ॥೫॥

 

ಬೀಡಿ ಸಿಗ್ರೇಟ್ ಚುಟ್ಟಾ ನಮಗೀಗ ಬೇಕೂ ।

ಓಟ್ಯಾಟಕ್ಕಾಗಿ ಬ್ಯಾಯ್ಸ್ಕಲ್ಯಾಗ ಬೇಕೂ ॥

ಲೇಡಿ ರಿಸ್ಟ್ ವೋಚ್ ಕೈಗೆಟ್ಟಿದರ್ಸಾಕೂ ।

ಬ್ರಾಂದಿ ಶರಾಬ್ ಸೇಂದಿ ಕುಡಿವ ಧಡಾಕೂ ॥೬॥

 

ತಲೆಗಿಡಲಿಕೆ ಬೇಕೇಬೇಕೊಂದು ಹ್ಯಾಟೂ ।

ಚಲುವಾಗಿ ಮೈಗಿರಬೇಕು ಲೋಂ-ಕೋಟು ॥

ಬಲವಾಗಿ ಕಾಲಿಗೆ ಕಟ್ಟಲು ಬೂಟೂ ॥

ಗೆಲವಾಗಿ ನಡೆ, ನುಡಿ, ದರ್ಬಾರು, ಥೇಟೂ ॥೭॥

 

ದೊರೆಯಾಗಿ ಮೆರೆಯುವಾತುರದ ತಮಾಸೇ ।

ಸರಿಯಾಗಿ ಫ್ರೆಂಚ್ ಕಟ್ಟು ಮಾಡಿದ ಮೀಸೆ ॥

ಬರೆಹುಲಿ ಮೈಬಣ್ಣಕ್ಕಾಶೆಯ ನಿರಿಸೇ ।

ನರಿಯಣ್ಣ ಮೈಸುಟ್ಟು ಕೊಂಬುದು ಲೇಸೇ ॥೮॥

 

ಶರಧಿರಾಜನಿಗೂ ನಮಗೂ ನಂಟತನವೂ ।

ಸ್ಥಿರವನೆ ಉಪ್ಪಿಗೇಕಿಲ್ಲ ಬಡತನವೂ ॥

ಪುರಕ್ಷೀರ ನಿಧಿವಾಸ ಸ್ಥಾನವೇ ಘನವೂ ।

ಇರಲು ಮಜ್ಜಿಗೆಗೇಕೆ ನಾಸ್ತಿ ವಚನವೂ ॥೯॥

 

ಧರೆಯೋಳ್ ನಮ್ಮವರ ಪೂರ್ವಭಿಮಾನವೆಲ್ಲಿ ।

ತರಗತಿ ನಿರ್ಣೈಸಿಹರು ನೋಡಿರಲ್ಲಿ ॥

ಕರಿಜನ ನಾವೆಂದು ಬಿಳಿವರ್ಗದಲ್ಲಿ ।

ಬೆರೆತಿಬಿಡರು ಪೂರ್ವಾಫ್ರೀಕದಲ್ಲಿ ॥೧೦॥

(ರಾಗ, ತಾಳ, ಮಟ್ಟು : “ರಾಷ್ಟ್ರೀಯದೇಳಿಗೆಗೆ ಮನವ ನೀನಿರಿಸು” ಎಂಬಂತೆ)

(ಇನ್ನೂ ಇದೆ)