ಬಿಡುಗಡೆಯ ಹಾಡುಗಳು (ಭಾಗ ೨೮) - ಬಿ. ನೀಲಕಂಠಯ್ಯ

ಬಿಡುಗಡೆಯ ಹಾಡುಗಳು (ಭಾಗ ೨೮) - ಬಿ. ನೀಲಕಂಠಯ್ಯ

ಬಿ. ನೀಲಕಂಠಯ್ಯನವರ ‘ಕಾಂಗ್ರೆಸ್ ಲಾವಣಿ’ ಯ ಕೊನೆಯ ಭಾಗವನ್ನು ಈ ವಾರ ಪ್ರಕಟ ಮಾಡಿದ್ದೇವೆ. 

ಕಾಂಗ್ರೆಸ್ ಲಾವಣಿ -೩

ಚಾಲ್

ಕಾಂಗ್ರೆಸ್ ಒಂದನೆ ಬೆಂಗ್ಳೂರ್ ಮೂರನೆ ಜಂಗಾಯಿತು ಇದು ಎನುತೊಬ್ಬ ।

ಕಾಂಗ್ರೆಸ್ ಘನಸಂಗ್ರಾಮವ ಕೇಳಿದ ಆಂಗ್ಲರಿಗಾಯಿತು ಅಬ್ಬಬ್ಬಾ ॥

ಈ ಕರ್ನಾಟಕ ಸ್ವರಾಜ್ಯ ಪಕ್ಷದ ಕಾಂಗ್ರೆಸ್ಸಿನ ಘನ ಶೋಭಾನ ।

ಶ್ರೀ ಕೆ. ಚಂಗಲರಾಯರೆಡ್ಡಿಗಳ ಸರ್ವಾಧಿಕಾರದ ಸುಧಾರಣ ॥

ಲೋಕದಿ ವಿ ಎಸ್ ನಾರಾಯಣರಾಯರ ಕಾರ್ಯದರ್ಶಿತನ ಮಹಾಘನ ।

ಶ್ರೀಕರ ಹೆಚ್ ಸಿ ದಾಸಪ್ಪನವರಾ ಶೀಘ್ರಾಲೋಚನ ಸುಭಾಷಣ ॥

ಸ್ತ್ರೀಕುಲಭೂಷಿಣಿ ಶ್ರೀಮತಿ ಬಳ್ಳಾರಿ ಸಿದ್ದಮ್ಮನವರಾ ಧೀರತನ ।

ವ್ಯಾಕುಲವಳಿಯುವ ಬಂಧುಭಗಿನಿಯರ ಸ್ವದೇಶಭಕ್ತಿಯ ಅಭಿಮಾನ ॥

ದೊಡ್ಡುಡನ್

ದೇಶದ ಸೇವೆಯ ಮಾಡುವುದೆ ಈ ದೇಶಬಾಂಧವರ ಉದ್ದೇಶ ।

ದೇಶದ ಬಡತನ ನಾಶಮಾಡಲು ಹೇಸದೆ ದುಡಿಯುವದತಿ ಹರುಷ ॥

ದೇಶ ಪ್ರೀತಿಗಿದು ವಿಶೇಷಭೂಷಣ ಚಂದೂರರ ಮಹ ಉಪವಾಸ ।

ದೇಶದ ದುಸ್ಥಿತಿ ದೂಡುವದೇ ನಮ್ ಕಾಂಗ್ರೆಸ್ಸಿನ ಕಡೆ ಸಂದೇಶ ॥

ಉಡನ್

ರೈತಾಪಿಯ ಕಷ್ಟವೆ ತಮ್ಮಯ ಕಷ್ಟವೆಂದಿರುವರು ।

ರೈತಾಪಿಸುಧಾರಣೆ ಸಾಧಿಸುತಲಿರುತಿಹರು ॥

ರೈತಾಪಿಜನಾಂಗದ ಕುಂದುಕೊರತೆ ಅರಿತಿವರು ।

ರೈತಾಪಿಯ ಕಷ್ಟಗಳೆಲ್ಲ ಬಿಡದೆ ಹರಿಸುವರು ॥

ಗುಲ್ಲುಡನ್

ಇದುವೆ ನಿಜ ಬೂಟಕವೇನಲ್ಲ । ಬುಧರೆ ಇದು ಯೋಚಿಸಿ ನೀವೆಲ್ಲ ।

ಚದುರ ಸರಿಯಿಲ್ಲವರರಿಗೆ । ಮದರಾಸಿನ ಘನ ಪ್ರಧಾನಮಾತ್ಯರ ಉದಾರ ವ್ಯಾಕಿಲ್ಲಾ ॥

ಶ್ಲೋಕ

ವಾಕ್, ಸಭಾ ಮೇಣ್ ಪತ್ರಿಕಾಸ್ವಾತಂತ್ರ್ಯ ಮೈಸೂರ್ ಜನರಿಗೆ ।

ಬೇಕಾಗಿರುವುದು ಜಬಾಬ್ದಾರ್ ಸರಕಾರ ಘನ ಮೈಸೂರಿಗೆ ॥

ಚಾಲ್ 

ಮಂಗಳ ಸುಬ್ರಹ್ಮಣ್ಯ ಜೋಯಿಸ್ ರಂಗರಾಮರಿಗೆ ಏನುತೊಬ್ಬ ।

ಕಾಂಗ್ರೆಸ್ ಘನ ಸಂಗ್ರಾಮವ ಕೇಳಿದ ಆಂಗ್ಲರಿಗಾಯಿತು ಅಬ್ಬಬ್ಬಾ॥

ಘಾತಕ ಜನರಿಗೆ ನೀತಿಯ ಬೋಧಿಸಿ ಖ್ಯಾತಿಯವೊಂದಿದೆ ನಮ್ ಕಾಂಗ್ರೆಸ್ ।

ಬೋತೆರ ದೀನನಾಥರ ಪರಿಪರಿ ಯಾತನೆ ಕಳೆಯುವುದೀ ಕಾಂಗ್ರೆಸ್ ॥

 

ಪ್ರೀತಿಲಿ ಸರ್ವಜನಾಂಗದ ಹಿತವನೆ ಸಾಧಿಸುತ್ತಿರುವುದು ನಮ್ ಕಾಂಗ್ರೆಸ್ ।

ಕಾತುರದಿಂದಲಿ ನೂತನ ವ್ಯಥೆಗಳ ಘಾತಕ ಹರಿಸುವುದೀ ಕಾಂಗ್ರೆಸ್ ॥

ಜಾತಿಯ ಭೇದದ ರೀತಿಯ ವರ್ಜಿಸಿ ಕೀರ್ತಿಯವೊಂದಿದೆ ನಮ್ ಕಾಂಗ್ರೆಸ್ ।

ರೈತರು ಏಳಿಗೆ ಕರ್ತವ್ಯ ಲಾಲಿಸಿ ಪ್ರಾರ್ಥಿಸುತ್ತಿರುವುದು ನಮ್ ಕಾಂಗ್ರೆಸ್ ॥