ಬಿಡುಗಡೆಯ ಹಾಡುಗಳು (ಭಾಗ ೨೯) - ತಿಪ್ಪಯ್ಯ ಮಾಸ್ತರ್

ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ನಾವು ತಿಪ್ಪಯ್ಯ ಮಾಸ್ತರ್ ಎನ್ನುವ ಕವಿಯ ಕವನವೊಂದನ್ನು ಆರಿಸಿ ಪ್ರಕಟ ಮಾಡಲಿದ್ದೇವೆ. ಮುದವೀಡು ಕೃಷ್ಣ ರಾಯರ ಹಾಗೂ ತಿಪ್ಪಯ್ಯ ಮಾಸ್ತರರ ಕವನಗಳಲ್ಲಿ ಸ್ವಲ್ಪ ಮಟ್ಟಿಗೆ ಸಾಮ್ಯತೆ ಇರುವುದರಿಂದ ಬಹಳಷ್ಟು ಕಡೆ ಯಾರು ಬರೆದ ಕವನ ಎಂದು ಗೊಂದಲಗಳಿವೆ. ಇಲ್ಲಿ ಪ್ರಕಟಿಸಲಾದ ಕವನ ‘ಸುಮ್ಮನೆ ದೊರಕುವುದೇ ಸ್ವರಾಜ್ಯ’ ಇದನ್ನು ಬರೆದವರು ಯಾರು ಎನ್ನುವ ಬಗ್ಗೆ ಕೃತಿಯ ಸಂಪಾದಕರಿಗೇ ಬಹಳ ಗೊಂದಲವಿದೆ. ಅವರು ತಮ್ಮ ಟಿಪ್ಪಣಿಯಲ್ಲಿ ಹೀಗೆ ಬರೆದಿದ್ದಾರೆ.
“ತಿಪ್ಪಯ್ಯ ಮಾಸ್ತರ್ ಅಥವಾ ಮುದವೀಡು ಕೃಷ್ಣ ರಾವ್. ತಿಪ್ಪಯ್ಯ ಮಾಸ್ತರರ ಹಾಡುಗಳ ಸಂಗ್ರಹ ‘ರಾಷ್ಟ್ರೀಯ ಪದ್ಯಗಳು’ ೧೯೩೦ರಲ್ಲಿ ಈ ಹಾಡು ಬಂದಿದೆ. ಆದರೆ ‘ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಸಮರ’ ಸಂಪುಟ ೨ರಲ್ಲಿ ಮುದವೀಡರ ಹೆಸರು ಸೂಚಿಸಿದೆ. ಕೊನೆಗೆ ಬಂದಿರುವ ‘ಯದುರಾಯ ಕೃಷ್ಣನ ಗೀತೆಯನು ನಂಬಬೇಕು’ ಎಂಬಲ್ಲಿ ‘ಕೃಷ್ಣ’ ಎಂಬುದು ಮುದವೀಡರ ಮುದ್ರಿಕೆಯೇ? ಅಥವಾ ಭಗವದ್ಗೀತೆಯ ಉಲ್ಲೇಖವೇ? ಮುದವೀಡರು ತಮ್ಮ ಬೇರೆ ಹಾಡುಗಳಲ್ಲಿ ಮುದ್ರಿಕೆ ಬಳಸಿಲ್ಲ. ಹೀಗಾಗಿ ಇದು ತಿಪ್ಪಯ್ಯ ಮಾಸ್ತರರ ಕವಿತೆ ಇರಬೇಕು” ಉಳಿದಂತೆ ತಿಪ್ಪಯ್ಯ ಮಾಸ್ತರ್ ಬಗ್ಗೆ ಅಧಿಕ ಮಾಹಿತಿಗಳು ಸಿಗುತ್ತಿಲ್ಲ.
ಸುಮ್ಮನೆ ದೊರಕುವುದೇ ಸ್ವರಾಜ್ಯ ?
ಸುಮ್ಮನೆ ದೊರಕುವುದೇ ಸ್ವರಾಜ್ಯವು । ಸುಮ್ಮನೆ ದೊರಕುವುದೇ ।
ಕಮ್ಮಗೆ ಕುಳಿತುಂಡು ಒಣ ಮಾತಾಡಿದರೇ ॥ಪಲ್ಲವಿ॥
ಮನದಲ್ಲಿ ದೃಢವಿರಬೇಕು । ಹೆಣ್ಣು । ಹಣ ಮಣ್ಣು
ಸುಖದಾಶೆಯ ಬಿಡಬೇಕು । ಜನುಮವ ತೃಣ ಮಾಡಬೇಕು ।
ತನ್ನ । ತನುವ ದೇಶಕಾರ್ಯಕೀಡಾಡಬೇಕು ॥೧॥
ಭೇದ ಬುದ್ಧಿಯನಳಿಯಬೇಕು ॥ನಿಜ॥
ಸೋದರ ಭಾವವೆಲ್ಲರೊಳಿರಬೇಕು ।
ಕ್ರೋಧಾದಿಗಳ ನೀಗಬೇಕು । ಕಾರ್ಯ ।
ಸಾಧಿಸಿಕೊಳ್ಳುವ ಧೀರತೆ ಮುಂಚೆ ಬೇಕು ॥೨॥
ಕಾಯ ಕಷ್ಟವ ಪಡಬೇಕು ।ಎಲ್ಲಾ।
ಮಾಯ ಪಾಶವ ಕತ್ತರಿಸಿ ಚೆಲ್ಲಬೇಕು ।
ಸಾಯಲಂಜಿಕೆ ಬಿಡಬೇಕು ।ಯದು।ರಾಯ
ಕೃಷ್ಣನ ಗೀತೆಯನು ನಂಬಬೇಕು ॥೩॥