ಬಿಡುಗಡೆಯ ಹಾಡುಗಳು (ಭಾಗ ೫)

ಬಿಡುಗಡೆಯ ಹಾಡುಗಳು (ಭಾಗ ೫)

‘ಬಿಡುಗಡೆಯ ಹಾಡುಗಳು' ಕೃತಿಯಿಂದ ನಾವು ಈ ವಾರ ಎರಡು ಕವನಗಳನ್ನು ಪ್ರಕಟ ಮಾಡಲಿದ್ದೇವೆ. ದುರಂತದ ಸಂಗತಿ ಎಂದರೆ ಈ ಎರಡೂ ಕವನಗಳ ಮೂಲ ಕವಿ ಯಾರು ಎಂದು ತಿಳಿದು ಬರುತ್ತಿಲ್ಲ. ಈ ಅನಾಮಿಕ ಕವಿಗಳಿಗೆ ಕೃತಜ್ಞತೆ ಸಲ್ಲಿಸುತ್ತಾ ಕವನಗಳನ್ನು ಓದೋಣ ಬನ್ನಿ…

ಭಾರತಾಂಬೆಯ ಹೀನ ಸ್ಥಿತಿ

ಭಾರತಾಂಬೆಯ ಹೀನ ಸ್ಥಿತಿಯನ್ನು ಕಣ್ಣು ತೆರೆಯುತ ನೋಡಿರಿ ।

ಪಾರತಂತ್ರ್ಯದಿ ಸಿಲುಕಿ ಬಳಲುವ ತಾಯಿಯನು ನೀವ್ ಬಿಡಿಸಿರಿ ॥ ಪಲ್ಲವಿ ॥

 

ಒಮ್ಮೆಯಾದರೂ ದೇಶಸೇವೆಯ ಮಾಡಿ ಪುಣ್ಯವ ಪಡೆಯಿರಿ ।

ಉಮ್ಮಳಿಸುತಿಹ ಭರತಭೂಮಿಯ ಸುಖದ ಯುದ್ಧಕೆ ನಡೆಯಿರಿ ॥೧॥

 

ನಮ್ಮ ನಾಡಿನ ಹೆಣ್ಣು ಮಕ್ಕಳು ವೀರಶ್ರೀಯನು ಬೀರುತ ।

ಒಮ್ಮನಸಿನೊಳೆ ರಾಷ್ಟ್ರಕಾರ್ಯಕೆ ಪ್ರಾಣ ಕೊಡುತಿಹರಲ್ಲವೇ ॥೨॥

 

ನಮ್ಮ ದೇಶದ ಸಿರಿಯು ಎಲ್ಲವು ಅನ್ಯ ದೇಶವ ಸೇರಿತು ।

ಒಮ್ಮೆಯಾದರೂ ಹೊಟ್ಟೆ ತುಂಬಾ ಅನ್ನಸಿಗದಂತಾಯಿತು ॥೩॥

 

ಸಕಲ ಸಂಪತ್ತುಗಳ ಶಿಖರವ ಪಡೆದ ನಮ್ಮೀ ದೇಶವು ।

ವಿಕಲವಾಗುತ ಪಾರತಂತ್ರ್ಯದಿ ಸಿಲುಕಿ ಆಯಿತು ನಾಶವು ॥೪॥

 

ದೇಶಸೇವೆಯ ಸಮರಕಾಲದಿ ಪ್ರಾಣಹೋದರು ನೋಡದೇ ।

ದೇವಕೃಪೆಯನು ಪಡೆದು ದೇಶವನುಳಿಸಿಕೊಳ್ಳಲು ನಡೆಯಿರಿ ॥೫॥

(‘ಬೆಳಗಾವಿಯ ಜಿಲ್ಲೆಯ ಸ್ವಾತಂತ್ರ್ಯ ಸಮರ' ಕೃತಿಯಿಂದ ಸಂಗ್ರಹಿತ ಅನಾಮಿಕ ಕವಿಯ ಕವನ)

***

ಪುಣ್ಯ ಭೂಮಿ

ಪುಣ್ಯಭೂಮಿ ಭಾರತೀ, ರಮ್ಯ ಭೂಮಿ ಭಾರತೀ ।

 

ಹಿಮಗಿರಿ ಕನ್ಯಾಕುವರಿ ವಿಹಾರೇ,

ಗೌರೀಶಂಕರ ತುಂಗ ಸಮೀರೇ,

ಪೂರವ ಪಶ್ಚಿಮ ಸಾಗರಧಾರೇ ॥

 

ಸಿಂಧೂ ಗಂಗಾ ಸುರಜಲ ರಂಗ,

ಆ ಕಾವೇರಿಯ ಸಲಿಲ ತರಂಗ,

ಋಷ್ಯಶ್ರಮಗಳ ಕೀರ್ತಿ ಪತಂಗ ॥

 

ಗಿರಿಕಂದರವನ ಕುಂಜಕುಟೀರೇ,

ಲಲಿತ ಲತಾಸುಮ ಪರಿಮಳ ಧಾರೇ,

ಮಂಜುಳ ಖಗಕುಲ ಕಂಠವಿಹಾರೇ ॥

 

ಮಲೆಯಾಭರಣದ ಚಂದನ ರಂಜಿನಿ,

ಶಾಲಿಯವನಗಳ ಸ್ವರ್ಣ ಪ್ರಕಾಶಿನಿ,

ಜೀವನ ಸುಖಸಾಮ್ರಾಜ್ಯ ಕಿರೀಟಿನಿ ॥

 

ಜೋಗ ಅಜಂತದ ಕೀರ್ತಿಯ ಕಿರಣೆ,

ತಾಜಾಮಹಲಿನ ದಿವ್ಯಾಭರಣೆ,

ಜಕಣನ ಶಿಲ್ಪದ ಶೋಭಾವರಣೆ ॥

 

ಪ್ರಾಚ್ಯ ಕಲಾಧ್ರುಮ ಕುಸುಮಿತ ನಯನೆ,

ಪಾವನ ಧರ್ಮವಿರಾಜಿತ ವದನೆ,

ಮಾನವಕುಲ ಕಲ್ಯಾಣದ ಸದನೆ ॥

(‘ಜೈ ಭಾರತ ರಾಷ್ಟ್ರಗೀತೆಗಳು' ಸಂಕಲನದಿಂದ ಆಯ್ದ ಅನಾಮಿಕ ಕವಿಯ ಕವನ)