ಬಿಡುಗಡೆಯ ಹಾಡುಗಳು (ಭಾಗ ೯) - ಬಿ.ನೀಲಕಂಠಯ್ಯ
ಲಾವಣಿ ವಿದ್ವಾನ್ ಬಿ.ನೀಲಕಂಠಯ್ಯ ಮೈಸೂರು ಸಂಸ್ಥಾನದ ಅಪರೂಪದ ಲಾವಣಿ ಕಲಾವಿದರು. ಪ್ರಥಮ ದರ್ಜೆಯ ಗುರುಮುಖೇನ ಲಾವಣಿ ದೀಕ್ಷೆ ಪಡೆದವರು. ಲಾವಣಿ ಗಾಯನ, ರಚನೆಯಲ್ಲಿ ಸಿದ್ಧಹಸ್ತರು. ಯಾವುದೇ ವಿಷಯದ ಬಗೆಗಾದರೂ ಮಾಹಿತಿ ಸಂಗ್ರಹಿಸಿ, ಅಚ್ಚುಕಟ್ಟಾಗಿ ಲಾವಣಿ ರಚಿಸುವ ಕಲೆ ಅವರಿಗೆ ಸಿದ್ಧಿಸಿತ್ತು. ಮೈಸೂರು ಸಂಸ್ಥಾನದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅವರ ಲಾವಣಿಗಳು ಬೀರಿದ ಪ್ರಭಾವ ಅಷ್ಟಿಷ್ಟಲ್ಲ. ಅವರ ಟಿಪ್ಪೂಸುಲ್ತಾನ್ ಲಾವಣಿ ಬ್ರಿಟೀಷರಿಂದ ನಿಷೇಧಕ್ಕೆ ಒಳಗಾಗಿತ್ತು. ಬೆಂಗಳೂರು ಗಣಪತಿ ಸತ್ಯಾಗ್ರಹ ಲಾವಣಿ ನವಜಾಗೃತಿಗೆ ನಾಂದಿಯಾಯಿತು. ೧೯೩೮ರಲ್ಲಿ ನಡೆದ ಶಿವಪುರ ರಾಷ್ಟ್ರಕೂಟ, ವಿದುರಾಶ್ವತ್ಥ ಹತ್ಯಾಕಾಂಡ ಲಾವಣಿ ಇತಿಹಾಸದಲ್ಲಿ ಮರೆಯದ ಅಧ್ಯಾಯಗಳ ದಾಖಲೆ. ಭಾರತ ಸ್ವಾತಂತ್ರ್ಯ ಚಳುವಳಿಯ ಲಾವಣಿ ಭಾರತ ಸ್ವಾತಂತ್ರ್ಯ ಹೋರಾಟದ ಹಿನ್ನಲೆಯ ಮಹಾಗಾಥೆ. ಇವುಗಳಲ್ಲದೆ ಇಪ್ಪತ್ತೈದಕ್ಕೂ ಹೆಚ್ಚು ವೈವಿಧ್ಯಮಯವಾದ ಲಾವಣಿಗಳನ್ನು ನೀಲಕಂಠಯ್ಯ ರಚಿಸಿದ್ದಾರೆ.
ಬಿ.ನೀಲಕಂಠಯ್ಯ ಅವರ ಬಹಳಷ್ಟು ಕವನಗಳು ಮುದ್ರಿತ ರೂಪದಲ್ಲಿರದೇ ಕಳೆದು ಹೋಗಿದೆ. 'ರಾಷ್ಟ್ರಗೀತಾವಳಿ' ಎನ್ನುವ ಕವನ ಸಂಕಲನಗಳ ಕೃತಿಯಿಂದ ‘ವಂದೇಮಾತರಂ’ ಎನ್ನುವ ಕವನವನ್ನು ಆಯ್ದು ‘ಬಿಡುಗಡೆಯ ಹಾಡುಗಳು’ ಕೃತಿಯಲ್ಲಿ ಪುನರ್ ಮುದ್ರಿಸಿದ್ದಾರೆ. ಅದನ್ನು ಆಯ್ದು ಪ್ರಕಟಿಸಲಾಗಿದೆ.
ವಂದೇಮಾತರಂ
ನಾವೆಂತ ಮನುಜರೇಳಿ? ಸ್ವಾತಂತ್ರ್ಯವಿಲ್ಲದವರು ॥
ನೀವಾರು ಎನಲು ಪರರು? ನಿಮ್ಮ ದಾಸರೆನ್ನುವವರು ॥ಪಲ್ಲವಿ॥
ವಿಪಿನಾಂತ ಪಶುವಿಗಿಂತ । ಅಪಕೀರ್ತಿ ಪಡೆದು ಧರೆಲಿ ॥
ಅಪಮಾನವಾಗಲೆಮಗೆ । ಉಪಮಾನವೆನ್ನುವವರು ॥೧॥
ದೇಶಾಭಿಮಾನವಿಲ್ಲ । ಲೇಸೈಕ್ಯಮತ್ಯವಿಲ್ಲಾ ॥
ದಾಸಾನುದಾಸರಾಗಿ । ಪರಸೇವೆ ಮಾಡುವವರು ॥೨॥
ನಮಗಾಗಿ ಗಾಂಧಿಯವರೂ । ಶ್ರಮದಿಂದ ಹೋರುತಿಹರು ॥
ಗಮನಿಸದೆ ನಮ್ಮ ಜನರು । ತಮ್ಮ ದೆಚ್ಚು ಎಂಬುವವರು ॥೩॥
ವರ್ಜಿಸದೆ ಮದ್ಯಪಾನ । ದುರ್ಬಲದಿ ನರಳಿ ಕಡೆಗೆ ॥
ನಿರ್ಜೀವವಂತರಾಗಿ । ನಿರ್ಭಾಗ್ಯರೆನ್ನುವವರು ॥೪॥
ಪರಸೇವೆಹಿತವೆ ನಮಗೆ । ಗುರುಮಂತ್ರವೆನ್ನುತಿಹೆವು ॥
ಭಾರತೀಯ ಪುತ್ರರಾಗಿ । ಪುರುಷಾರ್ಥವಿಲ್ಲದವರು ॥೫॥
ನಾರಿಯರ ಮೋಹದಿಂದ । ಮನೆಮಠಗಳೆಲ್ಲ ಮಾರಿ ॥
ತಿರಿದುಂಬ ಜನರ ತೆರದಿ । ಬರಿದಾಗಿ ನರಳುವವರು ।।೬॥
ಲಾಲಾಜಿ ಭಗತಸಿಂಗ। ಶುಕದೇವ ರಾಜಗುರುವು ॥
ಬಲಿಯಾಗೆ ದೇಶಹಿತಕೆ । ಕರತಾಳ ಹೊಡೆಯುವವರು ॥೭॥
ಶ್ರೀಪತಿಯಸಖನೆ ನಿಮ್ಮ । ಭೋಪರಿಲಿ ಬೇಡುತಿಹೆವು ॥
ನೀ ಪೊರೆಯೊ ನೀಲಕಂಠ । ಕಾಪಾಡು ಎನ್ನದವರು ॥೮॥
ಧಾಟಿ: ‘ಸಾರೇ ಜಹಾಂಸೆ ಅಚ್ಛಾ’ ಎಂಬಂತೆ
ರಾಗ : ಹಿಂದೂಸ್ತಾನಿ, ತಾಳ : ಆದಿ
ಸೂಚನೆ: ಲಾವಣಿ ವಿದ್ವಾನ್ ಬಿ ನೀಲಕಂಠಯ್ಯನವರ ಭಾವ ಚಿತ್ರ ಎಲ್ಲೂ ಲಭ್ಯವಾಗಿಲ್ಲ. ಅವರದ್ದು ಎಂದು ಹೇಳಲಾದ ಒಂದು ಭಾವಚಿತ್ರ ಅವರ ‘ಸ್ವಾತಂತ್ರ್ಯ ಸಂಗ್ರಾಮದ ಲಾವಣಿಗಳು’ ಎಂಬ ಕೃತಿಯಲ್ಲಿ ಮುದ್ರಿಸಲಾಗಿದೆ. ಇದು ಅವರದ್ದೇ ಎಂದು ಹೇಳುವ ಯಾವುದೇ ಉಲ್ಲೇಖಗಳು ಇಲ್ಲ. ಓದುಗರಿಗೆ ಇದರ ಬಗ್ಗೆ ಮಾಹಿತಿ ಇದ್ದಲ್ಲಿ ದಯವಿಟ್ಟು ಅಭಿಪ್ರಾಯದಲ್ಲಿ ಬರೆದು ತಿಳಿಸಿ.