ಬಿದಿರು ಹೂಬಿಟ್ಟ ಮರುವರ್ಷ ಕ್ಷಾಮ ಬರುವುದಂತೆ...!

ಬಿದಿರು ಹೂಬಿಟ್ಟ ಮರುವರ್ಷ ಕ್ಷಾಮ ಬರುವುದಂತೆ...!

ಬಿದಿರು ಒಂದು ಅದ್ಬುತ ಸಸ್ಯ. ಮರದಂತೆ ಬೆಳೆದರೂ ಅದು ಮರವಲ್ಲ. ಹುಲ್ಲಿನ ಜಾತಿಗೆ ಸೇರಿದ ಸಸ್ಯವಾದ ಕಾರಣ, ಪುಟ್ಟ ಸಸಿಯಾಗಿದ್ದ ಬಿದಿರು ಕೆಲವೇ ದಿನಗಳಲ್ಲಿ ಮರದಷ್ಟು ಎತ್ತರವಾಗಿ ಬಿಡುತ್ತದೆ. ಬಿದಿರು ಮರದ ಬುಡದಿಂದ ಚಿಗುರೊಡೆಯುವ ಪುಟ್ಟ ಸಸಿಗಳನ್ನು ಎಳೇ ಬಿದಿರು ಅಥವಾ ಕಣಿಲೆ (ಕಣಲೆ) ಎನ್ನುತ್ತಾರೆ. ಇವುಗಳಿಂದ ಬಹಳಷ್ಟು ಸ್ವಾದಿಷ್ಟಕರ ಖಾದ್ಯಗಳನ್ನು ತಯಾರಿಸುತ್ತಾರೆ. ಕಣಿಲೆಯಿಂದ ಉಪ್ಪಿನ ಕಾಯಿ, ಪಲ್ಯ, ಸುಕ್ಕ, ಅಂಬೊಡೆ ಮೊದಲಾದುವುಗಳನ್ನು ತಯಾರಿಸುತ್ತಾರೆ. 

ಅಧಿಕಾಂಶ ಜಾತಿಯ ಬಿದಿರು ತನ್ನ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಹೂವು ಬಿಡುತ್ತದೆ. ಹೂವು ಬಿಟ್ಟ ಬಳಿಕ ಬಿದಿರು ಸಸಿ ಸತ್ತು ಹೋಗುತ್ತದೆ. ಸುಮಾರು ೫೦-೬೦ ವರ್ಷಗಳ ಬಳಿಕ ಬಿದಿರು ಹೂವು ಬಿಡುತ್ತದೆ. (ಕೆಲವು ತಳಿಗಳು ೧೨ ವರ್ಷದಲ್ಲಿ ಹೂ ಬಿಡುವುದೂ ಇದೆ) ಈ ಹೂವು ಬಿಟ್ಟ ಬಳಿಕ ಬಿದಿರು ಅಕ್ಕಿಯಂತಹ ಬೀಜಗಳನ್ನು ಉತ್ಪಾದನೆ ಮಾಡುತ್ತದೆ. ಇದನ್ನು ಬಿದಿರ ಅಕ್ಕಿ ಎನ್ನುತ್ತಾರೆ. ಬಿದಿರಕ್ಕಿ ಸ್ವಾದಿಷ್ಟಕರ ಆಹಾರವೂ ಹೌದು. ಗ್ರಾಮೀಣ ಭಾಗದಲ್ಲಿ ಬಿದಿರು ಹೂವು ಬಿಟ್ಟ ಮರು ವರ್ಷ ಬರ ಕಾಡುತ್ತದೆ ಎನ್ನುವ ಮಾತು ಪ್ರಚಲಿತದಲ್ಲಿದೆ. ಇದೊಂದು ಗ್ರಾಮಸ್ಥರ ಅನುಭವದ ನುಡಿ ಎಂದರೆ ತಪ್ಪಲ್ಲ. ಏಕೆಂದು ನಿಮಗೆ ಮುಂದೆ ತಿಳಿಸುತ್ತಾ ಹೋಗುವೆ. ಹೀಗೆ ಬಿದಿರು ಹೂವು ಬಿಡುವ ಸಮಯದಲ್ಲಿ ಕೆಲವೊಮ್ಮೆ ಎಕರೆಗಟ್ಟಲೆ ಬಿದಿರಿನ ಮೆಳೆಗಳು ಹೂವು ಬಿಡುವ ಸಾಧ್ಯತೆಗಳಿರುತ್ತವೆ. ಒಂದೇ ಸಲಕ್ಕೆ ಹೂ ಬಿಟ್ಟಾಗ ಅದರಲ್ಲಿ ಕೆಲವೇ ಸಮಯದಲ್ಲಿ ಬಿದಿರಕ್ಕಿಯ ಉತ್ಪಾದನೆಯಾಗುತ್ತದೆ. 

ಈ ಬಿದಿರಕ್ಕಿಯನ್ನು ತಿನ್ನಲು ಹಕ್ಕಿಗಳು, ಇಲಿಗಳು ನಾಮುಂದು-ತಾಮುಂದು ಎಂದು ಧಾವಿಸಿ ಬರುತ್ತವೆ. ಈ ಅಕ್ಕಿಯ ಸೇವನೆ ಅವುಗಳ ಸಂತಾನಾಭಿವೃದ್ಧಿಯಲ್ಲಿ ಗಣನೀಯ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಇಲಿಗಳೂ ಈ ಅಕ್ಕಿಯನ್ನು ತಿಂದ ಬಳಿಕ ವಿಪರೀತವಾಗಿ ವಂಶಾಭಿವೃದ್ಧಿ ಮಾಡುತ್ತವೆ. ಹೀಗೆ ಹುಟ್ಟಿಕೊಳ್ಳುವ ಇಲಿಮರಿಗಳು ಆಹಾರಕ್ಕಾಗಿ ಸಿಕ್ಕಸಿಕ್ಕಲ್ಲಿ ನುಗ್ಗುತ್ತವೆ. ಪೈರು ಪಚ್ಚೆ, ದವಸ-ಧಾನ್ಯ ಎಲ್ಲವನ್ನೂ ತಿನ್ನುತ್ತದೆ. ರೈತರು ಮುಂದಿನ ವರ್ಷಕ್ಕಾಗಿ ಸಂಗ್ರಹಿಸಿಟ್ಟ ಬೆಳೆಯೂ ಇಲಿ-ಹೆಗ್ಗಣಗಳ ಪಾಲಾಗಿ ಬಿಡುತ್ತವೆ. ಹೀಗಾಗಿ ಆಹಾರದ ಕೊರತೆಯಾಗಿ ಮುಂದಿನ ವರ್ಷಕ್ಕಾಗುವಾಗ ಬೀಜಗಳ ಕೊರತೆಯೂ ತಲೆದೋರುತ್ತದೆ. ಹೀಗಾಗಿ ಸಹಜವಾಗಿ ಮರು ವರ್ಷ ಬರದ ಛಾಯೆ ಆವರಿಸುತ್ತದೆ. ಈ ಕಾರಣದಿಂದಲೇ, ಹಳ್ಳಿಗಳಲ್ಲಿ ಬಿದಿರು ಹೂ ಬಿಟ್ಟಾಗಲೆಲ್ಲಾ ಜನರು ಬರಗಾಲದ ದಿನಗಳು ಬಂದಿತೆಂದು ಹೆದರುವುದು ಸಾಮಾನ್ಯ ಸಂಗತಿಯಾಗಿದೆ. ಇದಕ್ಕೆ ಪ್ರಮುಖ ಕಾರಣ ದಂಶಕಗಳು ಅಲ್ಲದೇ ಬೇರೇನೂ ಅಲ್ಲ. 

ಇಲಿಗಳ ಸಂತತಿ ವಿಪರೀತವಾಗಿ ಹೆಚ್ಚಲು ಕಾರಣವೇನು ಗೊತ್ತೇ? ಇಲಿಗಳು ವರ್ಷವಿಡೀ ಸಂತಾನೋತ್ಪತ್ತಿ ಮಾಡಬಲ್ಲುವು. ಹೆಣ್ಣು ಇಲಿಗಳು ಅಲ್ಲಲ್ಲಿ ದೊರಕುವ ಕಸ-ತ್ಯಾಜ್ಯ ವಸ್ತುಗಳಿಂದ ಗೂಡಿನಂತಹ ಆಕೃತಿಯನ್ನು ನಿರ್ಮಿಸುತ್ತದೆ. ಕೆಲವು ಬಾರಿ ನಾವು ಮಲಗುವ ಹಾಸಿಗೆಗೇ ತೂತು ಕೊರೆದು ಅದರೊಳಗಿನ ಹತ್ತಿಯನ್ನು ಬಳಸಿ ಗೂಡು ಕಟ್ಟುತ್ತದೆ. ಮರಿಗಳು ಹುಟ್ಟುವಾಗ ಕೆಂಪಗೆ ಇದ್ದು, ರೋಮ ರಹಿತವಾಗಿರುತ್ತವೆ. ಕಣ್ಣು ಬಿಟ್ಟಿರುವುದಿಲ್ಲ. ತಾಯಿಯ ಹಾಲನ್ನು ಕುಡಿದು ಬೆಳೆದು ೮-೧೦ ದಿನಗಳಲ್ಲಿ ಕಣ್ಣು ಬಿಡುವ ಮರಿಗಳು, ಸುಮಾರು ಒಂದು ತಿಂಗಳ ತನಕ ತಾಯಿಯ ಆರೈಕೆಯಲ್ಲಿರುತ್ತವೆ. ಎರಡು ತಿಂಗಳಾಗುವಾಗ ಆ ಮರಿಗಳು ಸಂಪೂರ್ಣವಾಗಿ ಬೆಳೆದು ಸಂತಾನೋತ್ಪತ್ತಿ ಮಾಡುವಷ್ಟು ಸಬಲವಾಗುತ್ತವೆ.

ಇಲಿ ಗಣಪತಿ ದೇವರ ವಾಹನ ಎಂಬ ಧಾರ್ಮಿಕ ನಂಬಿಕೆಯೂ ಇರುವುದರಿಂದ ಹಲವೆಡೆ ಇದರ ಹತ್ಯೆಯನ್ನು ಮಹಾ ಪಾಪ ಎಂದು ನಂಬಲಾಗಿದೆ. ರಾಜಸ್ಥಾನದ ಬಿಕಾನೇರ್ ನಲ್ಲಿರುವ ಕರ್ಣಿ ಮಾತಾ ದೇವಸ್ಥಾನದಲ್ಲಿ (ಚಿತ್ರ ನೋಡಿ) ಇಲಿಗಳಿಗೆ ಅಗ್ರಪೂಜೆ ಮಾಡಲಾಗುತ್ತದೆ. ಆ ದೇವಾಲಯದಲ್ಲೂ ಅಸಂಖ್ಯಾತ ಇಲಿಗಳು ಯಾವುದೇ ಅಡ್ಡಿ ಆತಂಕಗಳಿಲ್ಲದೇ ತಿರುಗಾಡುತ್ತಿರುತ್ತವೆ. 

(ಆಧಾರ) 

ಚಿತ್ರ ಕೃಪೆ: ಅಂತರ್ಜಾಲ ತಾಣ