ಬಿರುಕಡಲು
ಕವನ
ದುಂಬಿ ಕುಳಿತ ಹೂದಳದ ಪುಳಕ
ಮೆಲುಗಾಳಿಗೆ ಮೆಲ್ಲನೆ ಅಲಗುವ
ಜುಳು ಜುಳು ಹರಿವ ನದಿಯ
ಅಲೆಗಳ ಹಾಗೆ ನವಿರು ಕಂಪನ
ನೀಲಿ ಬಾನಲ್ಲಿ ರೆಕ್ಕೆಬಿಚ್ಚಿ
ಹಾರುವ ಮನಸು
ಹಿಮಾಲಯ ಪರ್ವತದ
ತುದಿಯ ಮಂಜು ಕರಗಿ
ಬಿಳಿ ಹೊಗೆಯಾಗಿ
ಸುತ್ತೆಲ್ಲಾ ಹರಡುವಂತೆ ಹರುಷ!
ಧೋ ಧೋ ಹೊಯ್ಯುವ
ಬಿರುಮಳೆಗೆ
ತುಂಬಿ ಹರಿವ ಹೊಳೆ
ಯಾವುದು ಒಳಗೆ ?
ಯಾವುದು ಹೊರಗೆ ?
ನಿಲ್ಲದ ಕೊರಗು ಕೊನೆತನಕ
ಬೀಸಿ ಬರುವ ಬಿರುಗಾಳಿಗೊಡ್ಡಿದ
ದೀಪದ ಹಾಗೆ ಹೊಯ್ದಾಡುವ ಮನ
ಹುಟ್ಟಿನಲ್ಲಿ ಮುಲುಕಾಡುವ ರಾಗಗಳು
ಬಿರಿಯಲಾರದ ಮೊಗ್ಗುಗಳಂತೆ
ನೋವು ಮಿಡಿಯುವ ಎದೆಗೆ
ನಿರ್ಲಿಪ್ತತೆಯ ಸೆರಗು ಹೊದಿಸಿ
ನಿಶ್ಚಲವಾಗಿ ಬಿದ್ದಿರುವ ಮರಳುದಂಡೆಯನ್ನು
ಮೀರದ ಬಿರುಕಡಲು ನಾನು