ಬಿಲಿಯನೇರ್ ಒಬ್ಬನ ನಿಜವಾದ ಸಂತೋಷದ ಕ್ಷಣ...
ಅವರು ಮಧ್ಯಮ ವರ್ಗದಿಂದ ಬೆಳೆದು ಉದ್ಯಮಿಯಾಗಿ ಕೋಟ್ಯಧಿಪತಿಯಾದವರು. ಒಂದು ಸಾರಿ ಈ ಬಿಲಿಯನೇರ್ ನ ಸಂದರ್ಶನ ನಡೆದಿತ್ತು.
ಸಂದರ್ಶಕ ಕೇಳಿದರು: ಜಗತ್ತೇ ತಿರುಗಿ ನೋಡುವ ಮಹಾ ಸಾಧಕ ನೀವು. ಈ ಹಾದಿಯಲ್ಲಿ ನಿಮಗೆ ಅತ್ಯಂತ ಖುಷಿ ಕೊಟ್ಟ ಕ್ಷಣ ಯಾವುದು?
ಅದಕ್ಕೆ ಬಿಲಿಯನೇರ್ ಉತ್ತರಿಸಿದರು: ನಾನು ಸಂತೋಷದ ಐದು ಹಂತಗಳನ್ನು ದಾಟಿ ಬಂದಿದ್ದೇನೆ. ಒಂದನೆಯದು ಮಧ್ಯಮ ವರ್ಗದಿಂದ ಬಂದ ನಾನು ನನ್ನ ಕಲ್ಪನೆಗೂ ಮೀರಿದ ಸಂಪತ್ತನ್ನು ಪಡೆಯಲು ಸಾಧ್ಯವಾದಾಗ. ಆದರೆ ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ.
ಎರಡನೆಯದು, ಜಗತ್ತಿನ ಅತ್ಯಂತ ಅಪರೂಪದ ವಸ್ತುಗಳನ್ನು ಸಂಗ್ರಹಿಸುವ ನನ್ನ ಕನಸು ಸಾಕಾರಗೊಂಡಾಗ. ಆದರೆ ಅದೂ ಸ್ವಲ್ಪ ದಿನದಲ್ಲೇ ಇದೆಲ್ಲ ದೊಡ್ಡ ಸಾಧನೆಯಲ್ಲ ಅನಿಸತೊಡಗಿತು.
ಮೂರನೆಯದು, ನನಗೊಂದು ದೊಡ್ಡ ಪ್ರಾಜೆಕ್ಟ್ ಸಿಕ್ಕಿತು. ದೇಶದ 95% ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆದಾರ ನಾನಾಗಿದ್ದೆ. ಜಗತ್ತಿನ ಅತಿ ದೊಡ್ಡ ಶಿಪ್ ಓನರ್ ನಾನಾಗಿದ್ದೆ. ಆದರೆ ಅದರಲ್ಲೇನೂ ಭಾರಿ ತೃಪ್ತಿ ಅಂತ ಸಿಗಲಿಲ್ಲ.
ನಾಲ್ಕನೆಯದು, ನಮ್ಮ ಸಂಸ್ಥೆಗಳ ಸಿಎಸ್ ಆರ್ ನಿಧಿಯಿಂದ ದೊಡ್ಡ ಪ್ರಮಾಣದಲ್ಲಿ ಜನರಿಗೆ ಸಹಾಯ ಮಾಡಿದಾಗ.. ಕೇಳಿದವರಿಗೆಲ್ಲ ದುಡ್ಡು ಕೊಟ್ಟೆ. ಆಗೆಲ್ಲ ಧನ್ಯತೆಯ ಅನುಭವ ಆಗ್ತಾ ಇತ್ತು..
ಇನ್ನು ಐದನೆಯದು ತುಂಬ ಮುಖ್ಯ. ನನ್ನ ಗೆಳೆಯನೊಬ್ಬ ಕೆಲವು ವೀಲ್ ಚೆಯರ್ ಕೊಡಿಸಬಹುದೇ ಎಂದು ಕೇಳಿಕೊಂಡ. ಆಗಬಹುದು ಎಂದೆ. ಅದನ್ನು ವಿತರಿಸಲು ನೀನೇ ಬರಬೇಕು ಎಂದ. ನಾನು ಅಲ್ಲಿವರೆಗೆ ಆ ತರದ ಕಾರ್ಯಕ್ರಮಗಳಿಗೆ ಹೋಗಿರಲಿಲ್ಲ. ಮೊದಲು ಒಪ್ಪಲಿಲ್ಲ. ಕೊನೆಗೆ ಅವನು ಒಪ್ಪಿಸಿದ.
ಆವತ್ತು ಸಮಾರಂಭಕ್ಕೆ ಹೋದೆ.. ಸುಮಾರು 50 ಮಕ್ಕಳಿಗೆ ವೀಲ್ ಚೆಯರ್ ಕೊಡುವ ಏರ್ಪಾಟು ಮಾಡಿದ್ದರು. ವೀಲ್ ಚೆಯರ್ ಸಿಕ್ಕಿದ್ದೇ ತಡ. ಆ ಮಕ್ಕಳು ಖುಷಿಯಿಂದ ಸಭಾಂಗಣದಲ್ಲಿ ಓಡಾಡಿದವು. ಏನು ಸಂಭ್ರಮ, ಏನು ಆತ್ಮವಿಶ್ವಾಸ, ಮುಖದಲ್ಲಿ ಅದೆಂಥ ಹೊಳಪು. ನಿಜವಾದ ಸಂತೋಷ, ಎಂದೂ ಕಳೆದುಹೋಗದ ಸಂತೋಷ ಆವತ್ತು ಸಿಕ್ಕಿತು.
ಅದಾಗಿ, ಇನ್ನೇನು ಕಾರ್ಯಕ್ರಮ ಮುಗಿಯೋ ಹೊತ್ತಿಗೆ ಒಂದು ಮಗು ಬಂದು ಕಾಲಿಗೆ ತೊಡರಿಕೊಂಡಿತು.. ನಾನು ಎತ್ತಿ ಹಿಡಿದು ಕೇಳಿದೆ: ನಿಂಗೆ ಇನ್ನೇನು ಬೇಕು ಮಗು?
ಮಗು ಹೇಳಿತು: ನಿನ್ನ ಹೆಸರೇನು?
ನಾನು ಹೆಸರು ಹೇಳುತ್ತಾ ಕೇಳಿದೆ: ನಿಂಗಿದು ಯಾಕೆ ಮಗು?
ಮಗು ಹೇಳಿತು: ದಿನಾ ದೇವರಲ್ಲಿ ಪ್ರಾರ್ಥನೆ ಮಾಡ್ತೀನಲ್ಲ... ಆಗ ನಿಂಗೂ ಒಳ್ಳೆದಾಗ್ಲಿ ಅಂತ ಕೇಳ್ಕೊಳೋಕೆ..
ಆವತ್ತು ನಂಗೆ ಇನ್ನೇನೂ ಬೇಕಿಲ್ಲ, ಬದುಕೇ ಮುಗಿದು ಹೋದರೂ ಸಂತೃಪ್ತ ನಾನು ಅನಿಸಿತು. ಮಗುವಿಗೆ ಮುತ್ತಿಕ್ಕಿ ಮತ್ತೆ ವೀಲ್ ಚೆಯರಲ್ಲಿ ಕೂರಿಸಿದೆ... ಅಪ್ಪ- ಅಮ್ಮ ಕೈ ಮುಗಿದು ನಿಂತಿದ್ದರು.
-ಎ ಕೃಷ್ಣ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ