ಬಿಲ್ ಗೇಟ್ಸ್ ಮತ್ತು ಅನಾಫಿಲಿಸ್ ಸೊಳ್ಳೆ!

ಬಿಲ್ ಗೇಟ್ಸ್ ಮತ್ತು ಅನಾಫಿಲಿಸ್ ಸೊಳ್ಳೆ!

ಬರಹ

ಇಮಾಮ್ ಸಾಬೀಗೂ ಗೋಕುಲಾಷ್ಟಮೀಗೂ ಅದೇನ್ರೀ ಸಂಬಂಧ ಅಂತ ಕೇಳ್ತೀರಾ?

ಐಟಿ ಕ್ಷೇತ್ರದ ಮಹಾನ್ ಸಾಧಕ ಬಿಲ್ ಗೇಟ್ಸ್ಗೂ ಮತ್ತು ಒಂದು ಯ:ಕಷ್ಚಿತ್ ಸೊಳ್ಳೆಗೂ ಸಂಬಂಧ ಕಲ್ಪಿಸೋದು ಇದೆಂಥಾ ತರಲೆ ಕೆಲಸಾ ಅಂತ ಅಂದುಕೋತೀರೇನೋ? ಒಂದು ರೀತಿ ಸಂಬಂಧ ಇದೆ ಅಂತ ಮುಂದೆ ನಿಮಗೇ ವೇದ್ಯವಾಗುತ್ತೆ.

ನಮ್ಮ ಇಂಫೋಸಿಸ್ ನಾರಾಯಣ ಮೂರ್ತಿಗಳ ತರಹಾನೇ ಗೇಟ್ಸ್ ಕೂಡಾ ತಾವೇ ಹುಟ್ಟು ಹಾಕಿದ ಮೈಕ್ರೋಸಾಫ್ಟ್ ಕಂಪನಿಯಿಂದ ನಿವೃತ್ತರಾದದ್ದು ಎಲ್ಲರಿಗೂ ತಿಳಿದ ವಿಚಾರ. ಆದರೆ ನಮ್ಮ ಮೂರ್ತಿಗಳು ಅದೇ ಕಂಪನಿಯ ಚೇರ್ಮನ್ ಮತ್ತು ಚೀಫ್ ಮೆಂಟರ್ ಆಗಿ ಮುಂದುವರೆಯುತ್ತಿರೋದು ಎಲ್ಲರಿಗೂ ತಿಳಿದ ವಿಚಾರವೇ? ಆದರೆ ವಿಶ್ವದ ಅತಿ ಹೆಚ್ಚು ಶ್ರೀಮಂತರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಈಗೇನು ಮಾಡುತ್ತಿದ್ದಾರೆ ಅಂತ ಅದೆಷ್ಟು ಜನರಿಗೆ ತಿಳಿದಿದೆ?

ಅವರೀಗ ಸೊಳ್ಳೆ ಹೊಡೆಯುತ್ತಿದ್ದಾರೆ! ನಿಜಕ್ಕೂ ಸೊಳ್ಳೆ ಹೊಡೆಯುತ್ತಿದ್ದಾರೆ.

ವಿಶ್ವವ್ಯಾಪಿ ಮಲೇರಿಯಾ ಪಿಡುಗನ್ನು ನಿವಾರಿಸುವ ನಿಟ್ಟಿನಲ್ಲಿ ತಾವು ತಮ್ಮ Bill & Melinda Gates Foundation ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಲು, “ವಿಶ್ವವನ್ನು ನಾನು ಹೇಗೆ ಬದಲಾಯಿಸಲು ಯತ್ನಿಸುತ್ತಿದ್ದೇನೆ” ಎಂಬ ಶೀರ್ಷಿಕೆಯಡಿ ಕಳೆದ ತಿಂಗಳು ಲಾಂಗ್‍ಬೀಚ್ ಕ್ಯಾಲಿಫೋರ್ನಿಯಾದಲ್ಲಿ ನಡೆದ TED Conferenceನಲ್ಲಿ ಅವರು ಮಾಡಿದ ಭಾಷಣವನ್ನು ಕೆಳಗಿನ ಕೊಂಡಿಯನ್ನು ಚಿಟುಕಿಸಿ ನೋಡಿ/ಕೇಳಬಹುದು.

http://www.youtube.com/watch?v=tsgvhP07BC8&feature=related

ಮಲೇರಿಯಾ ಹಾವಳಿಯ ಬಗ್ಗೆ ಬಹಳಷ್ಟು ತಿಳುವಳಿಕೆ ದೊರಕುವುದಷ್ಟೇ ಅಲ್ಲದೆ, ಅವರ ಸಾಮಾಜಿಕ ಕಳಕಳಿ ಮತ್ತು ಸಂವೇದನಾಶೀಲತೆಯ ಬಗ್ಗೆ ನಮಗೆ ಸ್ವಲ್ಪವಾದ್ರೂ ಪರಿಚಯವಾಗುತ್ತೆ ಅಂತ ನನ್ನ ಅನಿಸಿಕೆ.

ಈ ಭಾಷಣದ ಮಧ್ಯೆ “ ಸೊಳ್ಳೆಗಳ ಕಡಿತವನ್ನು ಕೇವಲ ಬಡವರೇ ಏಕೆ ಸಹಿಸಬೇಕು? ನೀವು ಸ್ವಲ್ಪ ರುಚಿ ನೋಡಿ” ಎನ್ನುತ್ತ ಒಂದು ಗಾಜಿನ ಬಾಟಲಿಯಲ್ಲಿ ಬಂಧಿತವಾಗಿದ್ದ ಹಲವಾರು ಸೊಳ್ಳೆಗಳನ್ನು ಸಭಾಂಗಣದಲ್ಲಿ ಮುಕ್ತಗೊಳಿಸಿದ ಬಹುಚರ್ಚಿತ ವಿನೋದಕರ ಘಟನೆಯನ್ನೂ ನೋಡಬಹುದು.