ಬಿಳಿಆನೆ ಮತ್ತು ತಾಯಿಆನೆ
ನೂರಾರು ವರುಷಗಳ ಮುಂಚೆ, ಒಂದು ಕಾಡಿನಲ್ಲಿ ಒಂದು ಬಿಳಿಆನೆ ಇತ್ತು. ಭಾರೀ ಗಾತ್ರದ, ಬಲಶಾಲಿಯಾದ ಈ ಆನೆಯ ಚರ್ಮ ಹಾಲಿನಂತೆ ಬಿಳಿ.
ಬಿಳಿಆನೆ ತನ್ನ ತಾಯಿಯನ್ನು ಬಹಳ ಬಹಳ ಪ್ರೀತಿಸುತ್ತಿತ್ತು. ಈ ಪ್ರಪಂಚದ ಎಲ್ಲದಕ್ಕಿಂತಲೂ ಹೆಚ್ಚಾಗಿ, ತನಗಿಂತಲೂ ಹೆಚ್ಚಾಗಿ ಅದು ತನ್ನ ತಾಯಿಯನ್ನು ಪ್ರೀತಿಸುತ್ತಿತ್ತು.
ಆದರೆ ತಾಯಿಆನೆಗೆ ಕಣ್ಣು ಕಾಣಿಸುತ್ತಿರಲಿಲ್ಲ. ಬಿಳಿಆನೆ ತಾಯಿಯನ್ನು ಜೋಪಾನವಾಗಿ ನೋಡಿಕೊಳ್ಳುತ್ತಿತ್ತು. ಅವಳನ್ನು ಒಂದು ತಂಪಾದ ಗವಿಯಲ್ಲಿ ಇರಿಸಿತ್ತು. ಆ ಗವಿಯ ಎದುರಿನಲ್ಲೇ ಇದ್ದ ಸರೋವರದಲ್ಲಿ ಶುಭ್ರವಾದ ನೀರಿತ್ತು. ಆನೆಗಳಿಗೆ ನೀರೆಂದರೆ ಪಂಚಪ್ರಾಣ ತಾನೇ? ಬಿಳಿಆನೆ ನೀರಿನಲ್ಲಿ ಆಗಾಗ ಆಟವಾಡುತ್ತಿತ್ತು. ಸರೋವರದಲ್ಲಿ ನೂರಾರು ತಾವರೆ ಹೂಗಳಿದ್ದವು.
ಬಿಳಿಆನೆ ಯಾವಾಗಲೂ ತನ್ನ ತಾಯಿಗೆ ಆಹಾರ ಕೊಟ್ಟ ನಂತರವೇ ತಾನು ತಿನ್ನುತ್ತಿತ್ತು. ಅವಕಾಶವಾದಾಗೆಲ್ಲ ಇದು ಅಮ್ಮನಿಗೆ ಕತೆ ಹೇಳುತ್ತಿತ್ತು. ಬೇಸಗೆಯಲ್ಲಿ ಮತ್ತು ಮಳೆಗಾಲದಲ್ಲಿ ಕಾಡು ಹೇಗಿರುತ್ತದೆ ಎಂಬುದನ್ನು ವರ್ಣಿಸುತ್ತಿತ್ತು. ಗುಡ್ಡಗಳು, ಮರಗಳು, ಅಳಿಲುಗಳು, ಹಕ್ಕಿಗಳು ಮತ್ತು ಚಂದದ ರೆಕ್ಕೆಗಳ ಚಿಟ್ಟೆಗಳ ಸಂಗತಿಗಳನ್ನೂ ಅಮ್ಮನೊಂದಿಗೆ ಮಾತಾಡುತ್ತಿತ್ತು. ದೊಡ್ಡ ಮತ್ತು ಸಣ್ಣ ಹೂಗಳು, ಬಣ್ಣಬಣ್ಣದ ಹೂಗಳ ಬಗ್ಗೆಯೂ ಅಮ್ಮನಿಗೆ ತಿಳಿಸುತ್ತಿತ್ತು.
ಹೀಗೆ ದಿನಗಳು ದಾಟುತ್ತಿದ್ದವು. ಮಳೆಗಾಲ ಮತ್ತೆಮತ್ತೆ ಬರುತ್ತಿತ್ತು. ಹುಲ್ಲು ಎತ್ತರಕ್ಕೆ ಬೆಳೆದು ಗಾಳಿಯಲ್ಲಿ ತೊನೆಯುತ್ತಿತ್ತು. ಮಂಗಗಳು ಮರಗಳಲ್ಲಿ ಕಿಚಾಯಿಸುತ್ತಿದ್ದವು. ಅವುಗಳೂ, ಮಕ್ಕಳೂ, ಮೊಮ್ಮಕ್ಕಳೂ ಕೊಂಬೆಯಿಂದ ಕೊಂಬೆಗೆ ಹಾರುತ್ತಿದ್ದವು. ವರುಷಗಳು ಸರಿದಂತೆ ಬಿಳಿಆನೆ ಇನ್ನಷ್ಟು ದಷ್ಟಪುಷ್ಟವಾಗಿ, ಮತ್ತಷ್ಟು ಬುದ್ಧಿವಂತನಾಗಿ ಬೆಳೆಯಿತು.
ಅದೊಂದು ದಿನ ಬನಾರಸ್ ನಗರದಿಂದ ಕಾಡಿನೊಳಗೆ ಬಂದಿದ್ದವನೊಬ್ಬ ಕಾಡಿನಲ್ಲಿ ದಾರಿ ತಪ್ಪಿ ಅಲೆಯುತ್ತಿದ್ದ. ಅವನು ಅಳುತ್ತಾ, ತಲೆ ಚಚ್ಚಿಕೊಳ್ಳುತ್ತಾ ಕೂಗುತ್ತಿದ್ದ, “ಓ, ಜೀವನದಲ್ಲಿ ನನ್ನದೆಲ್ಲವೂ ಮುಗಿಯಿತು. ನಾನು ಈ ಕಾಡಿನಿಂದ ಹೊರಗೆ ಹೋಗಲು ಸಾಧ್ಯವೇ ಇಲ್ಲ. ದಯವಿಟ್ಟು ಯಾರಾದರೂ ನನ್ನನ್ನು ಕಾಪಾಡಿ, ಕಾಪಾಡಿ.”
ಬಿಳಿಆನೆ ಅವನನ್ನು ಕಂಡಿತು. “ಪಾಪದ ಮನುಷ್ಯ, ಅವನು ಯಾಕೆ ಅಳುತ್ತಿದ್ದಾನೆ? ನಾನು ಅವನಿಗೆ ಸಹಾಯ ಮಾಡಬೇಕು” ಎಂದು ಯೋಚಿಸಿತು. ಅದು ಅವನ ಹತ್ತಿರ ನಡೆದುಕೊಂಡು ಹೋಯಿತು. ಆದರೆ ಆ ಮನುಷ್ಯ ಹೆದರಿ ಓಡತೊಡಗಿದ. ಬಿಳಿಆನೆ ಅವನನ್ನು ಹಿಂಬಾಲಿಸಿ, ಮೃದುವಾದ ಧ್ವನಿಯಲ್ಲಿ ಹೇಳಿತು, "ಗೆಳೆಯಾ, ನೀನು ಹೆದರಬೇಡ. ನಿನಗೆ ಸಹಾಯ ಮಾಡಲಿಕ್ಕಾಗಿ ಬಂದಿದ್ದೇನೆ. ಹೇಳು, ಯಾಕೆ ಅಳುತ್ತಾ ಇದ್ದೀಯಾ?”
ಬಿಳಿಆನೆ ತನ್ನನ್ನು ಗೆಳೆಯಾ ಎಂದು ಕರೆದದ್ದನ್ನು ಕೇಳಿ ಅವನು ಅಲ್ಲೇ ನಿಂತು ಹೇಳಿದ, "ನಾನು ಏಳು ದಿನಗಳಿಂದ ಈ ಕಾಡಿನಲ್ಲಿ ಸುತ್ತುತ್ತಾ ಇದ್ದೇನೆ. ಆದರೆ ನನಗೆ ಇಲ್ಲಿಂದ ಹೊರಗೆ ಹೋಗುವ ದಾರಿ ತಿಳಿಯುತ್ತಿಲ್ಲ.”
ಬಿಳಿಆನೆ ಅವನೆದುರು ಮುಂಗಾಲುಗಳನ್ನು ಬಗ್ಗಿಸಿ ನಿಂತು ಹೇಳಿತು, "ನನ್ನ ಬೆನ್ನಿನ ಮೇಲೆ ಹತ್ತು. ನಿನ್ನನ್ನು ಸುರಕ್ಷಿತವಾಗಿ ಈ ಕಾಡಿನಿಂದ ಹೊರಗೆ ಕರೆದೊಯ್ಯುತ್ತೇನೆ ಮತ್ತು ನಿನ್ನ ಮನೆಗೆ ಹೋಗುವ ದಾರಿ ತೋರಿಸುತ್ತೇನೆ.”
ಅಂತೂ ಬಿಳಿಆನೆಯ ಸಹಾಯದಿಂದ ಆ ಮನುಷ್ಯ ಬನಾರಸಿನ ತನ್ನ ಮನೆ ಸೇರಿದ. ಅದೊಂದು ದಿನ ಮಹಾರಾಜನ ಆಳುಗಳು ರಸ್ತೆಗಳಲ್ಲಿ ಡಂಗುರ ಹೊಡೆಯುತ್ತಿದ್ದುದನ್ನು ಅವನು ಕೇಳಿಸಿಕೊಂಡ: “ಕೇಳಿರಿ, ಕೇಳಿರಿ. ಮಹಾರಾಜರ ಆನೆ ಸತ್ತು ಹೋಗಿದೆ. ಮಹಾರಾಜರಿಗೆ ಹೊಸ ದರ್ಬಾರ್ ಆನೆ ಬೇಕಾಗಿದೆ! ಇದನ್ನು ಪಡೆಯಲು ಸಹಾಯ ಮಾಡುವ ವ್ಯಕ್ತಿಗೆ ದೊಡ್ಡ ಬಹುಮಾನ ಕೊಡಲಾಗುವುದು.”
“ಆಹಾ, ಇದೀಗ ಸಿರಿವಂತನಾಗಲು ನನಗೆ ಅವಕಾಶ ಸಿಕ್ಕಿತು” ಎಂದುಕೊಂಡ ಬಿಳಿಆನೆಯ ಸಹಾಯದಿಂದ ಕಾಡಿನಿಂದ ಪಾರಾಗಿದ್ದ ಮನುಷ್ಯ. ಅವನು ರಾಜನ ಬಳಿ ಹೋಗಿ ಹೇಳಿದ, “ಮಹಾರಾಜ, ನಾನು ಕಾಡಿನಲ್ಲಿ ಅದ್ಭುತವಾದ ಆನೆಯೊಂದನ್ನು ನೋಡಿದ್ದೇನೆ. ಅದು ದೊಡ್ಡದಾದ, ಭವ್ಯವಾದ ಮತ್ತು ರಾಜನ ದರ್ಬಾರಿಗೆ ಸೂಕ್ತವಾದ ಆನೆ. ಅದರ ಚರ್ಮ ಅಪ್ಪಟ ಬಿಳಿ. ನಿಮ್ಮ ಕೆಲವು ಸೈನಿಕರನ್ನು ಮತ್ತು ಮಾವುತರನ್ನು ನನ್ನೊಂದಿಗೆ ಕಾಡಿಗೆ ಕಳಿಸಿ. ನಾವು ಈ ಆನೆಯನ್ನು ಹಿಡಿದು ತರುತ್ತೇವೆ.”
"ನಿನಗೆ ಬೇಕಷ್ಟು ಜನರನ್ನು ಕರೆದುಕೊಂಡು ಹೋಗು. ನನ್ನ ಅರಮನೆಯಲ್ಲಿ ಅಂತಹ ಆನೆ ಇದ್ದರೆ ನನಗೆ ಸಂತೋಷ” ಎಂದು ಆದೇಶಿಸಿದ ಮಹಾರಾಜ. ಹಾಗಾಗಿ, ಹಲವಾರು ಸೈನಿಕರು ಮತ್ತು ಮಾವುತರ ಜೊತೆ ಆ ವ್ಯಕ್ತಿ ಕಾಡಿಗೆ ಸಾಗಿದ.
ಕಾಡಿನಲ್ಲಿ ಬಿಳಿಆನೆಯು ತನ್ನ ಗವಿಯ ಎದುರು ಸರೋವರದ ತಂಪಾದ ನೀರಿನಲ್ಲಿ ತಾವರೆಗಳ ಮಧ್ಯೆ ನಿಂತಿತ್ತು. ಅದರ ದಂತಗಳು ಸೂರ್ಯ ಪ್ರಕಾಶದಲ್ಲಿ ಹೊಳೆಯುತ್ತಿದ್ದವು.
ಆ ಮನುಷ್ಯ ಬಿಳಿಆನೆಯ ಹತ್ತಿರ ಹೋಗಿ, ಅದರ ಸೊಂಡಿಲನ್ನು ಹಿಡಿದು ಹೇಳಿದ, "ನೀನೀಗ ನನ್ನ ಜೊತೆ ಬರಲೇ ಬೇಕು. ನೀನು ಬಾರದಿದ್ದರೆ ಈ ಮಾವುತರು ಮತ್ತು ಸೈನಿಕರು ನಿನ್ನನ್ನು ಎಳೆದುಕೊಂಡು ಬನಾರಸ್ಗೆ ಒಯ್ಯುತ್ತಾರೆ.”
ಬಿಳಿಆನೆ ಸದ್ದು ಮಾಡದೆ ನಿಂತಿತು. ಬಿಳಿಆನೆಗೆ ಗೊತ್ತಿತ್ತು, ತಾನು ಆ ಮನುಷ್ಯನಿಗಿಂತಲೂ, ಎಲ್ಲ ಸೈನಿಕರಿಗಿಂತಲೂ, ಎಲ್ಲ ಮಾವುತರಿಗಿಂತಲೂ ಬಲಶಾಲಿ ಎಂದು ಗೊತ್ತಿತ್ತು. ತನ್ನನ್ನು ಹಿಡಿಯಲು ಬಂದ ಯಾರನ್ನು ಬೇಕಾದರೂ ಕೊಂದು ಹಾಕಬಲ್ಲೆ ಎಂದು ಬಿಳಿಆನೆಗೆ ಚೆನ್ನಾಗಿ ಗೊತ್ತಿತ್ತು.
ಆದರೆ "ನಾನು ಯಾರಿಗೂ ಹಾನಿ ಮಾಡುವುದಿಲ್ಲ" ಎಂದು ತನ್ನಷ್ಟಕ್ಕೆ ಹೇಳಿಕೊಂಡ ಬಿಳಿಆನೆ ತಲೆ ಕೆಳಗೆ ಹಾಕಿಕೊಂಡು ನಿಂತಿತು. ಅಂತೂ, ಬಿಳಿಆನೆ ಯಾರಿಗೆ ಸಹಾಯ ಮಾಡಿತ್ತೋ ಆ ಮನುಷ್ಯನೇ ಅದನ್ನು ನಡೆಸಿಕೊಂಡು, ಮಾವುತರು ಮತ್ತು ಸೈನಿಕರೊಂದಿಗೆ ಬನಾರಸ್ ನಗರಕ್ಕೆ ಬಂದ.
ಅಲ್ಲಿ ಕಾಡಿನ ಗವಿಯಲ್ಲಿ ಏಕಾಂಗಿಯಾಗಿದ್ದ ಕುರುಡ ತಾಯಿಆನೆ ದುಗುಡದಿಂದ ತಲೆಯಾಡಿಸಿ ದುಃಖಿಸಿತು, “ಹಲವು ದಿನಗಳಾಗಿವೆ, ನನ್ನ ಮಗ ಕಾಣಿಸುತ್ತಿಲ್ಲ. ಅವನಿಗೆ ಏನಾಗಿರಬಹುದು? ಓ, ನನಗೆ ಮರಗಿಡಗಳ ಮತ್ತು ಮಳೆಯ ಸಂಗತಿ ಹೇಳಲು ನನ್ನ ಮಗ ಈಗ ನನ್ನ ಹತ್ತಿರವಿಲ್ಲ. ನಿಜವಾಗಿಯೂ ನಾನೀಗ ಕುರುಡಿಯಾಗಿದ್ದೇನೆ, ಯಾಕೆಂದರೆ ನನ್ನ ಮಗನೇ ನನ್ನ ಕಣ್ಣುಗಳಾಗಿದ್ದ.”
ಒಬ್ಬ ಮಾವುತ ಎಲ್ಲರಿಗಿಂತ ಮುಂಚೆ ಓಡಿ ಹೋಗಿ, ಅರಮನೆ ತಲಪಿ, ಮಹಾರಾಜನಿಗೆ ಉದ್ವೇಗದಿಂದ ಘೋಷಿಸಿದ, “ಮಹಾರಾಜಾ, ಭವ್ಯವಾದ ಬಿಳಿಆನೆ ಬರುತ್ತಿದೆ! ಇಡೀ ಜಗತ್ತಿನಲ್ಲಿಯೇ ಅತ್ಯಂತ ಸುಂದರವಾದ ಆನೆ ಬರುತ್ತಿದೆ.”
ಮಹಾರಾಜ ಸಿಂಹಾಸನದಿಂದ ಮೇಲೆದ್ದು, ತನ್ನ ಸೇವಕರನ್ನು ಕರೆದು ಆದೇಶಿಸಿದ, “ಇಡೀ ನಗರವನ್ನು ಅಲಂಕರಿಸಿ! ಸಂಗೀತಗಾರರನ್ನು ಕರೆಯಿರಿ! ಕೊಂಬುಕಹಳೆ ಊದುವವರನ್ನು ಕರೆಯಿರಿ! ಎಲ್ಲ ನರ್ತಕಿಯರನ್ನು ಕರೆಯಿರಿ! ಎಲ್ಲ ನಗರವಾಸಿಗಳನ್ನು ಕರೆಯಿರಿ! ಎಲ್ಲ ಮಕ್ಕಳನ್ನೂ ಕರೆಯಿರಿ! ಅರಮನೆಯ ಹತ್ತಿರ ದರ್ಬಾರಿನ ಆನೆಗೆ ಬಹಳ ದೊಡ್ದ ಲಾಯ ತಯಾರು ಮಾಡಿ! ಅದನ್ನು ಹಲವು ಬಣ್ಣಗಳ ಬಟ್ಟೆಗಳಿಂದ ಅಲಂಕರಿಸಿ! ಇಲ್ಲೆಲ್ಲ ಬಿದಿರಿನ ಕೋಲುಗಳನ್ನು ರೇಷ್ಮೆಯಿಂದ, ಧ್ವಜಗಳಿಂದ, ಹೂಮಾಲೆಗಳಿಂದ ಅಲಂಕರಿಸಿ! ನನ್ನ ಹೊಸ ದರ್ಬಾರಿನ ಆನೆಗಾಗಿ ಒಳ್ಳೆಯ ಅನ್ನ ತಯಾರಿಸಿ!”
ಏಳು ದಿನಗಳ ನಂತರ ಭವ್ಯವಾದ ಬಿಳಿಆನೆ ಬನಾರಸಿಗೆ ಬಂತು. ನಗರದ ನಿವಾಸಿಗಳು ಹೇಳಿದರು, “ಎಷ್ಟು ಅದ್ಭುತವಾಗಿದೆ! ಎಷ್ಟು ಗಂಭೀರವಾಗಿ ನಡೆಯುತ್ತದೆ! ಎಷ್ಟು ದಿವ್ಯವಾಗಿ ಕಿವಿಗಳನ್ನು ಬೀಸುತ್ತದೆ! ಅದರ ಮೈ ಹೇಗೆ ಹೊಳೆಯುತ್ತದೆ!”
ಬಿಳಿಆನೆಯನ್ನು ಅದರ ವಿಶೇಷ ಲಾಯಕ್ಕೆ ಕರೆದೊಯ್ಯಲಾಯಿತು. ಸಂಗೀತಗಾರರು ಸಂಗೀತವಾದ್ಯಗಳನ್ನು ಬಾರಿಸುತ್ತಿದ್ದರು. ನಗರದಲ್ಲಿ ಎಲ್ಲೆಡೆಯಲ್ಲಿ ಸಂಭ್ರಮ. ಮಹಾರಾಜ “ಸ್ವಾಗತ, ಕಾಡಿನ ಬಿಳಿಆನೆಗೆ ಸ್ವಾಗತ” ಎನ್ನುತ್ತಾ ಆನೆಯನ್ನು ಎದುರುಗೊಂಡ.
ಅನಂತರ, ಮಹಾರಾಜ ಚಿನ್ನದ ಪಾತ್ರೆಯಲ್ಲಿ ಅನ್ನವನ್ನು ಬಿಳಿಆನೆಗೆ ಕೊಡುತ್ತಾ “ತಿನ್ನು, ತಿನ್ನು” ಎಂದು ಒತ್ತಾಯಿಸಿದ. ಬಿಳಿಆನೆ ಯಾವುದೇ ಚಲನೆಯಿಲ್ಲದೆ ನೇರವಾಗಿ ನಿಂತಿತು. "ನನ್ನ ಅಮ್ಮನಿಗೆ ಆಹಾರ ಕೊಡದೆ ನಾನು ಏನನ್ನೂ ತಿನ್ನುವುದಿಲ್ಲ” ಎಂದಿತು.
"ಬಿಳಿಆನೆಯೇ, ನನಗೋಸ್ಕರ ಒಂದು ತುತ್ತಾದರೂ ತಿನ್ನು” ಎಂದು ಆಗ್ರಹಿಸಿದ ಮಹಾರಾಜ. “ಇಲ್ಲ, ಇಲ್ಲ. ನನ್ನ ಅಮ್ಮನಿಗೆ ತಿನ್ನಿಸದೆ ನಾನು ತಿನ್ನುವುದಿಲ್ಲ. ನನ್ನ ಅಮ್ಮ ಕುರುಡಿ. ಅವಳೀಗ ಅಲ್ಲಿ ಕಾಡಿನ ಗವಿಯ ಪ್ರವೇಶದಲ್ಲಿ ಮಲಗಿ ನನಗಾಗಿ ಕೊರಗುತ್ತಿರಬೇಕು. ನನಗೆ ಅವಳು ಇಲ್ಲಿಂದಲೇ ಕಾಣಿಸುತ್ತಿದ್ದಾಳೆ, ದುಃಖದಿಂದ, ಹತಾಶೆಯಿಂದ ಅವಳ ಕಾಲುಗಳನ್ನು ಮರವೊಂದರ ಬೇರುಗಳಿಗೆ ಬಡಿಯುತ್ತಿದ್ದಾಳೆ” ಎಂದು ಖಡಾಖಂಡಿತವಾಗಿ ಹೇಳಿತು ಬಿಳಿಆನೆ.
ಮಹಾರಾಜ ಒಂದು ಕ್ಷಣ ಮೌನವಾಗಿ ನಿಂತಿದ್ದ. ಅನಂತರ, ಮಾವುತರು ಮತ್ತು ಸೈನಿಕರತ್ತ ತಿರುಗಿ ಹೇಳಿದ, “ಈ ಬಿಳಿಆನೆಯನ್ನು ಕಾಡಿಗೆ ವಾಪಾಸು ಕರೆದುಕೊಂಡು ಹೋಗಿ! ಇದರ ತಾಯಿಯ ಬಳಿಗೆ ಕರೆದುಕೊಂಡು ಹೋಗಿ.” ಅಲ್ಲಿ ಜಮಾಯಿಸಿದ್ದವರೆಲ್ಲ ಚಪ್ಪಾಳೆ ತಟ್ಟಿ, ಸಂತೋಷದಿಂದ ಜೈಕಾರ ಹಾಕಿದರು.
ಈ ರೀತಿಯಲ್ಲಿ ಬಿಳಿಆನೆ ಕಾಡಿಗೆ ಮರಳಿ ಬಂತು. ಗವಿಯ ಎದುರಿನ ತಾವರೆ ಸರೋವರದ ಹತ್ತಿರ ಬಂದೊಡನೆ, ಬಿಳಿಆನೆ ತನ್ನ ಬೆಳ್ಳಿ ಬಣ್ಣದ ಸೊಂಡಿಲಿನಲ್ಲಿ ತಂಪಾದ ನೀರನ್ನು ಸೆಳೆದುಕೊಂಡಿತು. ಗವಿಯ ಪ್ರವೇಶದಲ್ಲಿ ನೆಲದಲ್ಲಿ ಮಲಗಿದ್ದ ತನ್ನ ತಾಯಿಯ ಮೇಲೆ ಆ ನೀರನ್ನು ಸಿಂಪಡಿಸಿತು. ತಾಯಿಆನೆ ತಕ್ಷಣವೇ ಎದ್ದು ನಿಂತಿತು.
“ಈ ಗವಿಯೊಳಗೆ ತುಂತುರು ಮಳೆ ಹೇಗೆ ಬೀಳುತ್ತಿದೆ? ನನ್ನ ಮಗ ಮರಳಿ ಬಂದಿದ್ದಾನೆಯೇ?" ಎಂದು ತಾಯಿಆನೆ ಕೇಳಿತು. "ಹೌದು, ಹೌದು. ನಾನು ಮರಳಿ ಬಂದಿದ್ದೇನೆ. ಮಹಾರಾಜ ನನ್ನನ್ನು ವಾಪಾಸು ಕಳಿಸಿದ್ದಾರೆ" ಎಂದಿತು ಬಿಳಿಆನೆ.
ಮಗನ ಮಾತು ಕೇಳಿ ಕುರುಡಿ ತಾಯಿಆನೆಗೆ ಆನಂದ ತುಂಬಿ ತುಳುಕಿತು. “ಮಹಾರಾಜ ದೀರ್ಘ ಕಾಲ ಬಾಳಲಿ” ಎಂದು ಅದು ಹರಸಿತು. ಬಿಳಿಆನೆ ಅಮ್ಮನಿಗೆ ಕಾಡಿನ ಹಣ್ಣುಗಳನ್ನು ತಿನ್ನಲು ಕೊಟ್ಟಿತು. ತಾಯಿಆನೆ ತಿಂದ ನಂತರವೇ ಬಿಳಿಆನೆ ತಾನೂ ಹಣ್ಣು ತಿಂದಿತು. ಇಡೀ ದಿನವನ್ನು ತಾಯಿ ಮತ್ತು ಮಗ ನೆಮ್ಮದಿ ಮತ್ತು ಸಂತೋಷದಿಂದ ಕಳೆದರು.
ಅಲ್ಲಿ ಬನಾರಸಿನಲ್ಲಿ, ಮಹಾರಾಜ ಕಾಡಿನಲ್ಲಿರುವ ಭವ್ಯ ಬಿಳಿಆನೆ ಮತ್ತು ಅದರ ಕುರುಡಿ ತಾಯಿಯ ಬಗ್ಗೆ ಆಗಾಗ ಯೋಚಿಸುತ್ತಿದ್ದ. "ಆ ಬಿಳಿಆನೆ ಮತ್ತು ಅದರ ತಾಯಿಯ ಜೊತೆಗೆ ನಾನೂ ಇರುವಂತಾಗಿದ್ದರೆ ಎಷ್ಟು ಚೆನ್ನಾಗಿತ್ತು” ಎನ್ನುತ್ತಿದ್ದ.
ಮುಂದೊಮ್ಮೆ ಮಹಾರಾಜ ಕಾಡಿನ ತಾವರೆ ಸರೋವರದ ಹತ್ತಿರ ಹೊಸ ನಗರವೊಂದನ್ನು ಕಟ್ಟಿ ಅಲ್ಲೇ ವಾಸ ಮಾಡ ತೊಡಗಿದ. ಪ್ರತಿ ದಿನವೂ ಮಹಾರಾಜ ಬಿಳಿಆನೆ ಮತ್ತು ಅದರ ಕುರುಡಿ ತಾಯಿಗೆ ಹಣ್ಣು ಮತ್ತು ಗೆಡ್ದೆಗಳನ್ನು ಕೊಡುತ್ತಾ ಸ್ವಲ್ಪ ಸಮಯ ಕಳೆಯುತ್ತಿದ್ದ.
ಚಿತ್ರ ಕೃಪೆ: ನ್ಯಾಷನಲ್ ಬುಕ್ ಟ್ರಸ್ಟಿನ ಪುಸ್ತಕ “ರೀಡ್ ಮಿ ಎ ಸ್ಟೋರಿ”
ಮೂಲ ಇಂಗ್ಲಿಷ್ ಕತೆ ಮತ್ತು ಚಿತ್ರ ರಚನೆ: ಬದ್ರಿ ನಾರಾಯಣ