ಬಿಳಿಮೊಲ ಮತ್ತು ನಕ್ಷತ್ರ




ಅದೊಂದು ದಿನ ರಾತ್ರಿ ಬಿಳಿಮೊಲ ಆಕಾಶ ನೋಡುತ್ತಾ ಕುಳಿತಿತ್ತು. ಆಗ ಆಕಾಶದಲ್ಲೊಂದು ನಕ್ಷತ್ರಪಾತವಾಯಿತು. ಹೊಳೆಯುವ ಪಥವೊಂದನ್ನು ಆಕಾಶದಲ್ಲಿ ಮೂಡಿಸಿದ ನಕ್ಷತ್ರ ಫಕ್ಕನೆ ಕಣ್ಮರೆಯಾಯಿತು.
ಬಿಳಿಮೊಲಕ್ಕೆ ಆಶ್ಚರ್ಯವಾಯಿತು. ಅದು ಅಲ್ಲಿಯ ವರೆಗೆ ಇಂಥದ್ದನ್ನು ನೋಡಿರಲೇ ಇಲ್ಲ. ಅದಕ್ಕೆ ಗಾಬರಿಯೂ ಆಯಿತು. “ಈಗೇನೋ ನಕ್ಷತ್ರ ಆಕಾಶದಿಂದ ಕೆಳಕ್ಕೆ ಬಿತ್ತು. ಕೆಲವೇ ದಿನಗಳಲ್ಲಿ ಚಂದ್ರನೂ ಹೀಗೆಯೇ ಕೆಳಕ್ಕೆ ಬೀಳಬಹುದು. ಓ ದೇವರೇ, ಹಾಗೇನಾದರೂ ಆದರೆ ಮಾಡೋದೇನು?” ಎಂದು ಯೋಚಿಸುತ್ತಾ ಅದು ನೆಗೆದುನೆಗೆದು ಓಡಿತು.
ಆಗ ಒಂದು ಪೊದೆಯಲ್ಲಿ ಅದಕ್ಕೊಂದು ಹೊಳೆಯುವ ವಸ್ತು ಕಾಣಿಸಿತು. ಅದುವೇ "ನೆಲಕ್ಕೆ ಬಿದ್ದ ನಕ್ಷತ್ರ" ಎಂದು ಬಿಳಿಮೊಲ ಭಾವಿಸಿತು. “ಓಹೋ, ಇದಂತೂ ಅಪರೂಪದ ಸಂಗತಿ. ಇದನ್ನು ಮಖಮಲ್ ಹೆಗ್ಗಣಕ್ಕೆ ಹೇಳಲೇ ಬೇಕು” ಎಂದುಕೊಳ್ಳುತ್ತಾ ಹೆಗ್ಗಣದ ಬಿಲದ ಹತ್ತಿರ ಓಡಿ ಬಂತು. ಆ ಹೆಗ್ಗಣ ಮಣ್ಣನ್ನು ಬಿಲದಿಂದ ಹೊರಕ್ಕೆ ಅಗೆದು ಹಾಕುತ್ತಿತ್ತು.
“ಓ ಹೆಗ್ಗಣ, ಇವತ್ತು ಏನಾಯಿತು ಗೊತ್ತಾ? ಆಕಾಶದಿಂದ ಒಂದು ನಕ್ಷತ್ರವೇ ಕೆಳಕ್ಕೆ ಬಿತ್ತು! ಅದೀಗ ಆ ಹಲಸಿನ ಮರದ ಬುಡದ ಮುಳ್ಳು ಪೊದೆಯಲ್ಲಿದೆ. ನಾನು ಕಣ್ಣಾರೆ ನೋಡಿದೆ” ಎಂದು ಉದ್ವೇಗದಿಂದ ಹೇಳಿತು ಬಿಳಿಮೊಲ. “ಓ ದೇವರೇ! ನಿಜಕ್ಕೂ ನಕ್ಷತ್ರ ಆಕಾಶದಿಂದ ನೆಲಕ್ಕೆ ಬಿತ್ತೇನು? ಹಾಗಾದರೆ ಈ ಸಂಗತಿಯನ್ನು ಮುಳ್ಳುಹಂದಿಗೆ ಹೇಳಲೇ ಬೇಕು. ಬಾ, ಹೋಗೋಣ" ಎಂದು ಹೊರಟಿತು ಮಖಮಲ್ ಹೆಗ್ಗಣ.
ಇವೆರಡೂ ಬಂದಾಗ ಮುಳ್ಳುಹಂದಿ ಮುಳ್ಳುಚೆಂಡಿನಂತೆ ಮುದುಡಿಕೊಂಡು ಮಲಗಿತ್ತು. “ಓ ಮುಳ್ಳುಹಂದಿ, ಇವತ್ತು ಏನಾಯಿತು ಗೊತ್ತಾ? ಆಕಾಶದಿಂದ ಒಂದು ನಕ್ಷತ್ರವೇ ಕೆಳಕ್ಕೆ ಬಿತ್ತು! ಅದೀಗ ಆ ಹಲಸಿನ ಮರದ ಬುಡದ ಮುಳ್ಳು ಪೊದೆಯಲ್ಲಿದೆ. ನಾನು ಕಣ್ಣಾರೆ ನೋಡಿದೆ” ಎಂದು ಉದ್ವೇಗದಿಂದ ಹೇಳಿತು ಬಿಳಿಮೊಲ. ಮುಳ್ಳುಹಂದಿ ನಿದ್ದೆಯಿಂದ ತಟ್ಟನೆ ಎದ್ದಿತು. "ಹೌದೇನು? ನಿಜಕ್ಕೂ ನಕ್ಷತ್ರ ಆಕಾಶದಿಂದ ನೆಲಕ್ಕೆ ಬಿತ್ತೇನು? ಹಾಗಾದರೆ ಈ ಸಂಗತಿಯನ್ನು ಪುಟ್ಟ ಅಳಿಲಿಗೆ ಹೇಳಲೇ ಬೇಕು. ಈಗಲೇ ಹೋಗೋಣ" ಎಂದು ಹೊರಟಿತು ಮುಳ್ಳುಹಂದಿ.
ಕಾಡಿನ ಹಣ್ಣು ತಿನ್ನುತ್ತಿದ್ದ ಪುಟ್ಟ ಅಳಿಲಿನ ಹತ್ತಿರ ಅವೆಲ್ಲವೂ ಧಾವಿಸಿ ಬಂದವು. “ಓ ಅಳಿಲೇ, ಇವತ್ತು ಏನಾಯಿತು ಗೊತ್ತಾ? ಆಕಾಶದಿಂದ ಒಂದು ನಕ್ಷತ್ರವೇ ಕೆಳಕ್ಕೆ ಬಿತ್ತು! ಅದೀಗ ಆ ಹಲಸಿನ ಮರದ ಬುಡದ ಮುಳ್ಳು ಪೊದೆಯಲ್ಲಿದೆ. ನಾನು ಕಣ್ಣಾರೆ ನೋಡಿದೆ” ಎಂದು ಉದ್ವೇಗದಿಂದ ಹೇಳಿತು ಬಿಳಿಮೊಲ. ಪುಟ್ಟ ಅಳಿಲು ಇದನ್ನು ಕೇಳಿ ದಿಗಿಲಿನಿಂದ ಪೇರಳೆ ಹಣ್ಣನ್ನು ಕೆಳಕ್ಕೆ ಬೀಳಿಸಿತು. “ಅಬ್ಬಬ್ಬಾ, ನಿಜಕ್ಕೂ ನಕ್ಷತ್ರ ಆಕಾಶದಿಂದ ನೆಲಕ್ಕೆ ಬಿತ್ತೇನು? ಹಾಗಾದರೆ ಈ ಸಂಗತಿಯನ್ನು ಗುಳ್ಳೆನರಿಗೆ ಹೇಳಲೇ ಬೇಕು. ಬನ್ನಿ, ಬನ್ನಿ” ಎನ್ನುತ್ತಾ ಹೊರಟಿತು ಪುಟ್ಟ ಅಳಿಲು.
ಅವೆಲ್ಲವೂ ಜೊತೆಯಾಗಿ ಬಂದಾಗ ಗುಳ್ಳೆನರಿ ತನ್ನ ರೋಮಗಳನ್ನು ನಾಲಗೆಯಿಂದ ನೆಕ್ಕಿನೆಕ್ಕಿ ಶುಚಿ ಮಾಡುತ್ತಿತ್ತು. “ಓ ಗುಳ್ಳೆನರಿಯೇ, ಇವತ್ತು ಏನಾಯಿತು ಗೊತ್ತಾ? ಆಕಾಶದಿಂದ ಒಂದು ನಕ್ಷತ್ರವೇ ಕೆಳಕ್ಕೆ ಬಿತ್ತು! ಅದೀಗ ಆ ಹಲಸಿನ ಮರದ ಬುಡದ ಮುಳ್ಳು ಪೊದೆಯಲ್ಲಿದೆ. ನಾನು ಕಣ್ಣಾರೆ ನೋಡಿದೆ” ಎಂದು ಉದ್ವೇಗದಿಂದ ಹೇಳಿತು ಬಿಳಿಮೊಲ. "ಹೌದೇನು? ನಿಜಕ್ಕೂ ನಕ್ಷತ್ರ ಆಕಾಶದಿಂದ ನೆಲಕ್ಕೆ ಬಿತ್ತೇನು? ಹಾಗಾದರೆ ಈ ಸಂಗತಿಯನ್ನು ನೆಲಗರಡಿಗೆ ಹೇಳಲೇ ಬೇಕು. ಈಗಲೇ ಹೋಗೋಣ" ಎನ್ನುತ್ತಾ ಹೊರಟಿತು ಗುಳ್ಳೆನರಿ.
ಇವೆಲ್ಲವೂ ನೆಲಗರಡಿಯ ವಾಸಸ್ಥಾನಕ್ಕೆ ಬಂದಾಗ ಅದು ಅಲ್ಲಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಅಲ್ಲಿಗೆ ಬಂದ ನೆಲಗರಡಿಗೆ ಇಷ್ಟೆಲ್ಲ ಪ್ರಾಣಿಗಳು ಕಾಯುತ್ತಿದ್ದುದನ್ನು ಕಂಡು ಅಚ್ಚರಿ. “ಓ ನೆಲಗರಡಿ, ಇವತ್ತು ಏನಾಯಿತು ಗೊತ್ತಾ? ಆಕಾಶದಿಂದ ಒಂದು ನಕ್ಷತ್ರವೇ ಕೆಳಕ್ಕೆ ಬಿತ್ತು! ಅದೀಗ ಆ ಹಲಸಿನ ಮರದ ಬುಡದ ಮುಳ್ಳು ಪೊದೆಯಲ್ಲಿದೆ. ನಾನು ಕಣ್ಣಾರೆ ನೋಡಿದೆ” ಎಂದು ಉದ್ವೇಗದಿಂದ ಹೇಳಿತು ಬಿಳಿಮೊಲ. “ಹೌದೇನು? ಹಾಗಾದರೆ ಹೋಗಿ ನೋಡೋಣ" ಎಂದು ಹೊರಟಿತು ನೆಲಗರಡಿ.
ಅಂತೂ ಅವೆಲ್ಲವೂ ಒಟ್ಟಾಗಿ ಆ ಮುಳ್ಳುಪೊದೆಯ ಹತ್ತಿರ ಬಂದವು. ದೂರದಿಂದಲೇ ಅವು ದಿಟ್ಟಿಸಿ ನೋಡಿದಾಗ ಅವುಗಳಿಗೆ ಪೊದೆಯಲ್ಲೊಂದು ಹೊಳೆಯುವ ವಸ್ತು ಕಾಣಿಸಿತು. “ಹೋಗು, ಅದನ್ನು ತಗೊಂಡು ಬಾ" ಎಂದು ಬಿಳಿಮೊಲಕ್ಕೆ ಹೇಳಿತು ಗುಳ್ಳೆನರಿ.
“ನನಗೆ ಹೆದರಿಕೆಯಾಗ್ತದೆ” ಎಂದಿತು ಬಿಳಿಮೊಲ. “ನನಗೂ ಹೆದರಿಕೆ" ಎಂದಿತು ಮಖಮಲ್ ಹೆಗ್ಗಣ. "ನಾನು ಅದರ ಹತ್ತಿರ ಹೋಗೋದಿಲ್ಲ” ಎಂದಿತು ಮುಳ್ಳುಹಂದಿ. “ನನಗೂ ಆಗೋಲ್ಲ" ಎಂದಿತು ಪುಟ್ಟ ಅಳಿಲು.
“ನನಗೇನೂ ಹೆದರಿಕೆಯಿಲ್ಲ" ಎನ್ನುತ್ತಾ ನೆಲಗರಡಿ ಆ ಪೊದೆಯ ಹತ್ತಿರ ಹೋಯಿತು. ಆಗ ಆ ಹೊಳೆಯುವ ವಸ್ತು ಚಲಿಸಿತು! ತಕ್ಷಣವೇ ಎಲ್ಲ ಪ್ರಾಣಿಗಳೂ ಅಲ್ಲಿಂದ ಓಡಿ ಹೋದವು. ಬಿಳಿಮೊಲ ಬಿಲದೊಳಗೆ ಹೋಯಿತು. ಮಖಮಲ್ ಹೆಗ್ಗಣವೂ ನೆಲದಡಿಗೆ ಓಡಿತು. ಮುಳ್ಳುಹಂದಿ ಒಂದು ಹೊಂಡದಲ್ಲಿ ಅಡಗಿತು. ಪುಟ್ಟ ಅಳಿಲು ಮರವೊಂದಕ್ಕೆ ಹತ್ತಿತು. ಗುಳ್ಳೆನರಿ ಪೊದೆಯೊಂದರಲ್ಲಿ ಅವಿತಿತು. ನೆಲಗರಡಿ ದೂರಕ್ಕೆ ಧಾವಿಸಿತು. ಈಗ ಯಾವ ಪ್ರಾಣಿಯೂ ನೆಲಕ್ಕೆ ಬಿದ್ದ ನಕ್ಷತ್ರವನ್ನು ಮುಟ್ಟಲು ತಯಾರಿರಲಿಲ್ಲ.
ಅವೆಲ್ಲವೂ ಅಲ್ಲಿಂದ ದೂರ ಹೋದಾಗ, ಆ ಪೊದೆಯಲ್ಲಿ ನಗುವ ಸದ್ದು ಕೇಳಿಸಿತು. ಯಕ್ಷಿಣಿಯೊಬ್ಬಳು “ನೆಲಕ್ಕೆ ಬಿದ್ದ ನಕ್ಷತ್ರ”ದ ಹತ್ತಿರ ಬಂದಳು. “ಎಂಥಾ ವಿಚಿತ್ರ! ಮಿಂಚುಹುಳವೇ, ಅವೆಲ್ಲವೂ ನಿನ್ನನ್ನು ನೋಡಿ ಹೆದರಿ ಬಿಟ್ಟಿವೆ. ನೀನೊಂದು ನೆಲಕ್ಕೆ ಬಿದ್ದ ನಕ್ಷತ್ರವೆಂದು ಅವೆಲ್ಲ ಭಾವಿಸಿವೆ. ಆದರೆ ನೀನು ರಾತ್ರಿಯಲ್ಲಿ ಮಿಂಚುವ ಪುಟಾಣಿ ಮಿಂಚುಹುಳ. ನಿನ್ನನ್ನು ಮುಟ್ಟಲು ನನಗೇನೂ ಹೆದರಿಕೆಯಿಲ್ಲ" ಎನ್ನುತ್ತಾ ಯಕ್ಷಿಣಿ ಮಿಂಚುಹುಳವನ್ನು ಎತ್ತಿಕೊಂಡಳು.
ಯಕ್ಷಿಣಿ ಮಿಂಚುಹುಳವನ್ನು ತನ್ನ ಲಾಂಟಾನಿನೊಳಗೆ ಇಟ್ಟಳು. ಅದು ಅವಳ ದಾರಿಯನ್ನು ಆ ಕಗ್ಗತ್ತಲ ರಾತ್ರಿಯಲ್ಲಿ ಝಗಝಗನೆ ಬೆಳಗಿತು. ಆ ಬೆಳಕಿನಲ್ಲಿ ಯಕ್ಷಿಣಿ ಅತ್ತ ನಡೆದಳು.
ಮರುದಿನ ಬೆಳಗ್ಗೆ ಅವೆಲ್ಲ ಪ್ರಾಣಿಗಳೂ ಅಲ್ಲಿಗೆ ಮತ್ತೆ ಬಂದವು - “ನೆಲಕ್ಕೆ ಬಿದ್ದ ನಕ್ಷತ್ರ” ಹಗಲಿನಲ್ಲಿ ಹೇಗೆ ಹೊಳೆಯುತ್ತದೆಂದು ನೋಡಲಿಕ್ಕಾಗಿ. ಅದರೆ ಆ ನಕ್ಷತ್ರ ಅಲ್ಲಿರಲೇ ಇಲ್ಲ!
“ಅರೆರೇ, ಅದೆಲ್ಲಿಗೆ ಹೋಯಿತು?” ಎಂದು ಕೇಳಿತು ಬಿಳಿಮೊಲ. “ಅದು ಮತ್ತೆ ಆಕಾಶಕ್ಕೆ ಹೋಗಿರಬೇಕು” ಎಂದಿತು ನೆಲಗರಡಿ. ಇವುಗಳ ಫಜೀತಿ ನೋಡಿ, ಯಕ್ಷಿಣಿ ಜೋರಾಗಿ ನಕ್ಕ ಸದ್ದು ಯಾವ ಪ್ರಾಣಿಗೂ ಕೇಳಿಸಲೇ ಇಲ್ಲ.
ಚಿತ್ರ ಕೃಪೆ: "ದ ಟೆಡ್ಡಿ ಬೇರ್ಸ್ ಟೇಯ್ಲ್" ಪುಸ್ತಕ