"ಬಿಳಿಲುಗಳು"(ಕವನ)

"ಬಿಳಿಲುಗಳು"(ಕವನ)

ಊರ ಅಗಸಿಯ ಬಯಲು 
ಮುಂದಿರುವ ಸೀಬಾರ ಬಿಳಿಯ ಬಣ್ಣದಲಿ 
ಮಿರುಗುವ ಗೋಡೆಗಳು 
ವೀರಭದ್ರ ದೇವಳದ ಹೊಳೆಯುವ ಕಳಶ
ವಿಶಾಲ ಫೌಳಿಯ ದಿವಿನಾದ ಆವರಣ 
ಒಳ ಭಾಗದಲೊಂದು ಬೃಹತ್ತಾದ ಆಲ 
ಸುತ್ತ ಮುತ್ತಲಲೆಲ್ಲ ವಿಸ್ತಾರಕೆ ವ್ಯಾಪಿಸಿ 
ಅಸಂಖ್ಯ ಬಿಳಿಲುಗಳ ನೆಲದಾಳಕಿಳಿಸಿ
ಗಗನದೆತ್ತರಕೆ ತಲೆಯೆತ್ತಿ ನಿಂತಿದೆ 
ಗತಕಾಲದ ಕುರುಹಾಗಿ ವರ್ತಮಾನದ 
ಸಾಕ್ಷಿ ಪ್ರಜ್ಞೆಯಾಗಿ ಬರಲಿರುವ 
ಕಾಲದ ಕುರಿತು ಕುತೂಹಲಿಯಾಗಿ 
 
ಆ! ಆಲದ ವಯಸೆಷ್ಟು? ಶತಮಾನಗಳೆ 
ಸಂದು ಹೋಗಿರಬಹುದು 
ಇನ್ನೂ ನಿಂತಿಲ್ಲ ಅದರ ಜೀವನೋತ್ಸಾಹ
ವಸಂತದಲಿ ಚಿಗುರುತ್ತ ಶ್ರಾವಣದಿ 
ವರ್ಧಿಸುತ ಶಿಶಿರದಲಿ ಬೆತ್ತಲಾಗುತ್ತ ಹೊಸ 
ವರುಷಕೊಮ್ಮೆ ನವ ಜೀವ ಪಡೆಯುತ್ತ 
ಹರುಷದ ನೆಲೆಗಳ ಎಲ್ಲಡೆಗೆ ವಿಸ್ತರಿಸುತ 
ನೂರ್ಕಾಲ ಬಾಳುವ ಆಶೆಯ ಛಲದಿ 
ತಲೆಯೆತ್ತಿ ನಿಂತಿದೆ ಬಿಳಿಲುಗಳ ಆಲ !
 
ಅದೊಂದು ಯುಗವಿತ್ತು ಜನಪದರ ಕಾಲ 
ಶೀಬಾರ ಆಲ ದೇವಳಗಳು ಶ್ರದ್ಧಾ ಭಕ್ತಿ 
ಕೇಂದ್ರಗಳ ತಾಣವಾಗಿದ್ದ ತುಂಬು ಜೀವನದ ಕಾಲ 
ಮದುವೆ ಮುತ್ತೈದೆತನ ಸಂತಾನಾಪೇಕ್ಷೆ 
ಕುಟುಂಬದ ಶ್ರೇಯಸ್ಸುಗಳೆಂಬ ಚಕ್ರದ ಮಿತಿಯಲೆ 
ಸುತ್ತುತ್ತ ಬಾಳ ನೋವು ನಲಿವುಗಳ ಮಧ್ಯದಲಿ
ಬದುಕಿ ನಂಬಿಕೆ ಹರಕೆ ಮುಡಿಪುಗಳ 
ಕಪಿ ಮುಷ್ಟಿಯಲಿ ಸಿಲುಕಿ ನಲುಗುತ್ತ ಶೋಷಣೆಯ 
ಬಲೆಯಲಿ ಸಿಲುಕಿದ ಸ್ತ್ರೀ ಸಂಕುಲ ! 
 
ಅದೊಂದು ಸಮೃದ್ಧಯುಗ ! ಬದುಕಿನಲಿ 
ಮುದವಿತ್ತು ಚಕ್ರವರ್ತಿಗಳು ಅರಸರು ಸಾಮಂತರು 
ಪಾಳೆ ಪಟ್ಟುಗಳ ಕಟ್ಟಿ ಮೆರೆದ ವೀರ 
ಪರಂಪರೆಯ ಕಾಲ! ಕುದುರೆಗಳ ಖರಪುಟಗಳ ಸದ್ದು 
ಕತ್ತಿ ಖಡ್ಗ ಈಟಿಗಳ ಮೆರೆದಾಟ ಯುದ್ಧ 
ಕಾಳಗಗಳು ಸೋಲು ಗೆಲುವುಗಳು ಸಂಭಾವ್ಯ ಸಾವು 
ನೋವುಗಳು ಯಾವನೋ ಒಬ್ಬ ಆಕಾಂಕ್ಷಿ 
ಸುಪ್ಪತ್ತಿಗೆಗೇರಲು ಯಾರು ಯಾರೋ ಯಾರಿಗೋ 
ಮೆಟ್ಟಿಲು ಗಲ್ಲುಗಳಾಗುವ ಯಜಮಾನಿಕೆಯ ಕಾಲ 
ತಂದೆ ಮಗ ಗಂಡ ಇಲ್ಲವಾಗುವ ನೋವು ಎಲ್ಲದಕೂ 
ಬಲಿಪಶು ಹೆಣ್ಣು ಎಲ್ಲರ ಯಶಸ್ಸು ಹಾರೈಸುತ್ತ ನಂಬಿಕೆ 
ಅಂಧಾನುಕರಣೆಗಳಿಗೆ  ಒಡ್ಡಿಕೊಳ್ಳುತ್ತ ಅಸಹಾಯಕ 
ಬದುಕಿನ ಬಂದಿಯಾಗಿದ್ದವಳು ಅವಳು 
 
ಪರಂಪರಾಗತ ಆಲದ ಬಿಳಿಲುಗಳಿಗೆ
ಆರಿಷಣದ ಕೊಂಬು ಹಸಿರು ಬಳೆಗಳ ಸಹಿತ 
ಹಸಿರು ಬಟ್ಟೆಯ ಚೌಕದಲಿ ಬಿಗಿದ ಬಂಧ
ಬದುಕಿನ ಉನ್ನತಿಗೂ ಅವನತಿಗೂ 
ನಂಬಿದ ದೈವವನು ಹೊಣೆಮಾಡಿ ಮನದುಂಬಿ 
ಶ್ರದ್ಧಾ ಭಕ್ತಿ ಭಾವದಲಿ ಬದುಕಿದ ಕಾಲ !
ಕಾಲನ ಆಗಮನ ನಿರ್ಗಮನ ನಿರಂತರ 
ಹರಕೆ ಕೇಳುವ ಮುಡಿಪು ಕಟ್ಟುವ ನಂಬಿಕೆಗಳು 
ಇಂದಿಗೂ ಜೀವಂತ ಅಜ್ಜ ನೆಟ್ಟ ಆಲಕ್ಕೆ 
ಹುತ್ತ ಕಟ್ಟುವ ಬಯಕೆ ಕನಸುಗಳ ನನಸಿಗೆ 
ಅಂಧ ಶ್ರದ್ಧೆಯ ಬೆನ್ನು ಇಂದಿನ ಆಧುನಿಕ ವೈಜ್ಞಾನಿಕ 
ಜಾಗತಿಕರಣದ ಈ ಯುಗದಲೂ !
 
ಅಂತರಂಗದ ಭಾವ ನಂಬಿಕೆಯ ತೋರಣ 
ನಿಲ್ಲದ ಆಶೆಗಳ ಮಹಾಪೂರ 
ಜಗದ ಶ್ವಾಸ ನಿಶ್ವಾಸ ಹಸಿರಿನ ಪಲ್ಲವ ಸವಕಲು 
ಆಚರಣೆಗಳ ಜಾಲದಲಿ ಸಿಕ್ಕು ಪಡುವ ಬವಣೆ !
ಬಿಸಲ ಧಗೆಯಲಿ ನಿಂತ ಬೋಳು ಮರವೆ 
ಚಿಗುರುವ ಛಲ ತೋರುವಾಗ ನಾವಿನ್ನೂ 
ಹರಕೆ ಮುಡಿಪುಗಳ ಚಕ್ರವ್ಯೂಹದಲಿ ಸುತ್ತುತ್ತಲೆ 
ಅಪ್ಪ ನೆಟ್ಟ ಆಲಕ್ಕೆ ನೇಣು ಬಿಗಿದು ಕೊಳ್ಳುತ್ತಿದ್ದೇವೆ
 
ಜೀವ ಜಲದ ಚಿಲುಮೆ ಹಸಿರು ಪಲ್ಲವದ ನಿರೀಕ್ಷೆ 
ಕಾಲ ಯಾವುದೆ ಇರಲಿ ಗಿಡ ಮರ ಪ್ರಕೃತಿ 
ಪರಿಸರಕೆ ದೈವತ್ವ ಕಲ್ಪಿಸಿ ನಂಬಿ ಕೆಟ್ಟವರಿಲ್ಲ ಅಂದು 
ಇಂದು ಎಂದೂ ಬಿಳಿಲುಗಳ ಕುಣಿಕೆಗೆ ಕುತ್ತಿಗೆ 
ಕೊಡುತ್ತಲಿದ್ದೇವೆ ನಂಬಿಕೆಯ ಆಲಗಳು ಬಿಳಿಲು 
ಹರಡುವುದನ್ನು ಎಂದೂ ನಿಲ್ಲಿಸಿಲ್ಲ ಹೊಸ ಕಾಲದಲಿ 
ಹೊಸ ರೂಪ ಹೊಸ ವೇಷದಲಿ ಬರುತಲಿರುವ 
ಆಲಗಳು ಬಿಳಿಲುಗಳನ್ನು ಭದ್ರವಾಗಿ ಅಂತರಾಳಕಿಳಿಸಿ 
ಗಟ್ಟಿಗೊಳ್ಳುತ್ತಲೆ ಸಾಗಿ ಬಂದಿವೆ ಸಮಾನಾಂತರದಲಿ 
ಮೂಧ ನಂಬಿಕೆಗಳು ಬಲಗೊಳ್ಳುತಲೆ ಸಾಗಿವೆ 
ಹೃದಯ ತಲೆ ಮಸನುಗಳ ವಿಚಾರ ವಿನಿಮಯದಿ 
ಅಂಧಾನುಕರಣೆಗೆ ಕಡಿವಾಣ ಹಾಕಬಹುದು 
ನಿಯಂತ್ರಕರು ಯಾರು? ನಿಯಂತ್ರಿಸಿ ಕೊಳುವವರು ಯಾರು? 
ಇದೊಂದು ಬಗೆ ಹರಿಸಲಾಗದ ಪರಂಪರಾಗತ ಪ್ರಶ್ನೆ?
                         *