ಬಿಳಿ ಬಂಗಾರ ಹತ್ತಿಗೊಂದು ದಿನ
ಹತ್ತಿ ಬಹುಪಯೋಗಿ ವಸ್ತು. ಬಿಳಿ ಬಂಗಾರವೆಂದೇ ಹೆಸರು. ಶ್ವೇತವರ್ಣದ ಕೋಮಲಾಂಗಿ. ಮೃದು ಮನಸ್ಸಿನವರನ್ನು ಹತ್ತಿಗೆ ಹೋಲಿಸುವುದಿದೆ. ಹತ್ತಿಯಿಲ್ಲದೆ ನಾವಿಲ್ಲ, ತುಂಬಿದೆ ಈ ಜಗವೆಲ್ಲ. ಪ್ರತಿವರ್ಷ ಅಕ್ಟೋಬರ ೭ ನೇ ತಾರೀಕಿನಂದು “ವಿಶ್ವ ಹತ್ತಿ ದಿನ” ಆಚರಿಸಲಾಗುವುದು. ಸರಿಸುಮಾರು ೧೦--೧೧ ಕೋಟಿ ಜನರು ಹತ್ತಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆಂದೂ, ಅದರಲ್ಲಿ ಸುಮಾರು ಅರ್ಧದಷ್ಟು ಮಹಿಳೆಯರೆಂದು ಓದಿದ ನೆನಪು. ೮೦% ಹತ್ತಿಯ ಉತ್ಪಾದನೆ ವಸ್ತ್ರ ತಯಾರಿಕೆಗಾಗಿ ಬಳಸುತ್ತಾರೆ. ಬಡವ --ಬಲ್ಲಿದ, ರೋಗಿ-ಆರೋಗ್ಯವಂತ, ಗಂಡು-ಹೆಣ್ಣು, ಜಾತಿ ಭೇದ ಯಾವುದು ಹತ್ತಿಗಿಲ್ಲ.
ಹತ್ತಿ ಬೀಜದಿಂದ ಎಣ್ಣೆ ತಯಾರಿಸುತ್ತಾರೆ. ಹತ್ತಿ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಕೆಲವೊಂದು ಪ್ರದೇಶದಲ್ಲಿ ಬೆಳೆಸುತ್ತಾರೆ. ಚೀನಾ, ಅಮೇರಿಕಾ, ಬ್ರೆಜಿಲ್ ಮುಂತಾದೆಡೆ ಹೆಚ್ಚು ಹತ್ತಿ ಬೆಳೆಯುವ ರಾಷ್ಟ್ರಗಳು. ಹತ್ತಿ ಉದ್ಯಮ ಇಂದು ಬೃಹದಾಕಾರವಾಗಿ ನಿಂತಿದೆ. ಭಾರತ ದೇಶದ ಮಹಾರಾಷ್ಟ್ರ ಹತ್ತಿ ಬೆಳೆಯಲ್ಲಿ ಮುಂಚೂಣಿಯಲ್ಲಿದೆ. ಹತ್ತಿ ಎಣ್ಣೆ ಸೌಂದರ್ಯವರ್ಧಕಗಳಲ್ಲಿ, ಅಡುಗೆ, ಸಾಬೂನು ತಯಾರಿಕೆಯಲ್ಲಿ ಬೇಕು. ಹತ್ತಿ ಹಿಂಡಿ ಪಶು ಆಹಾರವಾಗಿ ಬಳಸಲ್ಪಡುತ್ತದೆ.
ಹತ್ತಿ ಬಟ್ಟೆ ಗೌರವದ ಸಂಕೇತವಾಗಿದೆ. ಯಾವುದೇ ಬಣ್ಣವಾದರೂ ಹತ್ತಿ ಬಟ್ಟೆ ಚಂದ. ವೈವಿಧ್ಯಮಯ ಬಟ್ಟೆ ವಿನ್ಯಾಸಗಳನ್ನು ಹತ್ತಿ ಬಟ್ಟೆಯಲ್ಲಿ ತಯಾರಿಸುವರು. ಇದಕ್ಕೆ ಸರಿಸಾಟಿ ಬೇರಾವುದೂ ಇಲ್ಲ. ಉತ್ತಮ ಬಾಳಿಕೆ ಜೊತೆಗೆ ಬೇಡಿಕೆಯೂ ಇದೆ. ಹತ್ತಿಯ ಹಾಸಿಗೆ ಬೆನ್ನು ನೋವನ್ನು ತಡೆಗಟ್ಟುವುದಂತೆ. ಅತ್ಯಂತ ಮೃದುವಾದ ಮತ್ತು ಹಿತವೆನಿಸುವ ಸಾಧನವೆಂದರೆ ಹತ್ತಿಯೇ ಸರಿ.
ಹತ್ತಿಯನ್ನು ಬಿಳಿಯ ಬಣ್ಣದ ಮೋಡಗಳಿಗೆ ಹೋಲಿಸುತ್ತಾರೆ. ಕವಿಗಳು ಪದ್ಯ ಕಟ್ಟಿ ಹಾಡಿದ್ದೂ ಇದೆ. ಹತ್ತಿ ಬೆಳೆಗಾರನಿಗೆ ನೆಟ್ಟು ಬೆಳೆಸಿದ ಹತ್ತಿ ಗಿಡಗಳೆಲ್ಲ ಉಪಯೋಗಕ್ಕೆ ಸಿಗುವುದು ಒಂದು ತಪಸ್ಸು ಎನ್ನಬೇಕು. ರೋಗ, ವಿಪರೀತ ಮಳೆ, ನೀರಿನ ಹರಿವು ಹತ್ತಿ ಗಿಡಗಳ ನಾಶಕ್ಕೆ ಕಾರಣ. ಹತ್ತಿಯ ವಿಶೇಷವೆಂದರೆ ಸಂಪೂರ್ಣ ಗಿಡ ಉಪಯೋಗವಿದೆ. ಹಾಗೆ ಕಾಂಡವನ್ನು ಉರುವಲಾಗಿಯೂ ಉಪಯೋಗಿಸುವರು. ಬೇರು ಮಣ್ಣಿಗೆ ಫಲವತ್ತಾದ ಗೊಬ್ಬರವಾಗುತ್ತದೆ. ಹಾಗೆಯೇ ನೋಟುಗಳನ್ನು ಹತ್ತಿಯಿಂದ ತಯಾರಿಸಲಾಗುತ್ತದೆಯೆಂದು ಯಾವಾಗಲೋ ಓದಿದ ನೆನಪಿದೆ. ಕಡಿಮೆ ನೀರು ಒದಗಿಸಿದರೂ ಹತ್ತಿಗಿಡಕ್ಕೆ ಸಾಕಾಗುತ್ತದೆ. ಹಾಸಿಗೆ ಹತ್ತಿಯ ಇನ್ನೊಂದು ಪ್ರಭೇದವೂ ಇದೆ. ಅದು ಸಣ್ಣ ಮರವಾಗುತ್ತದೆ.
ಬಿಳಿ ಬಂಗಾರ, ರೈತರಿಗೆ ವರದಾನವಾದ ಹತ್ತಿ ಉದ್ಯಮಕ್ಕೆ,ಕಾರ್ಮಿಕರಿಗೆ ಸಹಾಯಹಸ್ತ ನೀಡಬೇಕು. ಬೆಳೆಸಿದ ರೈತನಿಗೆ ನಷ್ಟವಾಗದಂತೆ ನೋಡಿಕೊಳ್ಳಬೇಕು. ಬಹು ಉಪಯೋಗಿಯಾದ, ಎಲ್ಲರಿಗೂ ಬೇಕಾದ ಶ್ವೇತ ಸುಂದರಿ ಹತ್ತಿಯ ಬಟ್ಟೆಯನ್ನೇ ಧರಿಸುವುದರ ಮೂಲಕ ಬೆಂಬಲ ನೀಡೋಣ.
-ರತ್ನಾ ಕೆ ಭಟ್,ತಲಂಜೇರಿ*
(ವಿವಿದ ಮೂಲಗಳಿಂದ)
ಚಿತ್ರ ಕೃಪೆ: ಇಂಟರ್ನೆಟ್ ತಾಣ