ಬಿಳಿ ಹಾಲಿನ ಕಪ್ಪು ವಹಿವಾಟು

ಬಿಳಿ ಹಾಲಿನ ಕಪ್ಪು ವಹಿವಾಟು

ಈಗ ಜಗತ್ತಿನಲ್ಲೇ ಅತ್ಯಧಿಕ ಹಾಲು ಉತ್ಪಾದಿಸುವ ದೇಶ ಭಾರತ. ೨೦೧೭-೧೮ರಲ್ಲಿ ಯುರೋಪಿಯನ್ ಒಕ್ಕೂಟಕ್ಕಿಂತಲೂ ಹೆಚ್ಚು ಹಾಲು ಉತ್ಪಾದಿಸುವ ಮೂಲಕ ಮೊದಲ ಸ್ಥಾನಕ್ಕೇರಿದೆ.

ಆರ್ಥಿಕ ರಂಗದ ಜಾಗತಿಕ ವಿಶ್ಲೇಷಣೆ ಮಾಡುವ ಕಂಪೆನಿ “ಕ್ರಿಸಿಲ್” (ಸಿಆರ್‍ಐಎಸ್‍ಐಎಲ್) ಪ್ರಕಟಿಸಿದ ಇತ್ತೀಚೆಗಿನ ವರದಿಯ ಪ್ರಕಾರ ಭಾರತದಲ್ಲಿ ಮುಂದಿನ ವರುಷಗಳಲ್ಲಿ ಹಾಲಿನ ಮಾರಾಟದಲ್ಲಿ ಸತತ ಹೆಚ್ಚಳ ಕಂಡು ಬರಲಿದೆ. ಜೊತೆಗೆ ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟದಲ್ಲಿ ಶೇಕಡಾ ೫೦ ಬೆಳವಣಿಗೆ ಅಂದಾಜಿಸಲಾಗಿದೆ.

ಈ ವಹಿವಾಟಿನಲ್ಲಿ ಭಾರೀ ಲಾಭ ಮಾಡಿಕೊಳ್ಳುವ ಅವಕಾಶ ನಿರೀಕ್ಷಿಸಿವೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಂಪೆನಿಗಳು. ಆದ್ದರಿಂದ ಹಾಲು ಖರೀದಿಯ ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಜಾಲ ವಿಸ್ತರಿಸಿಕೊಳ್ಳುತ್ತಿವೆ. ನಮ್ಮ ದೇಶದ ೭೩ ದಶಲಕ್ಷ ಸಣ್ಣ ಮತ್ತು ಅತಿಸಣ್ಣ ಹಾಲು ಉತ್ಪಾದಕರಿಗೆ ಇದು ಒಳ್ಳೆಯ ಸುದ್ದಿ. ಯಾಕೆಂದರೆ, ೨೦೧೬ರಿಂದೀಚೆಗೆ ಹಾಲಿನ ಉತ್ಪಾದನಾ ವೆಚ್ಚವನ್ನು ಹಾಲಿನ ಮಾರಾಟದಿಂದ ಸರಿದೂಗಿಸಲು ಅವರಿಗೆ ಕಷ್ಟವಾಗುತ್ತಿದೆ.

ಆದರೆ, ಸರಿಯಾಗಿ ಪರಿಶೀಲಿಸಿದರೆ, ಹಾಲು ಉತ್ಪಾದಕರು ಒಳ್ಳೆಯ ದಿನಗಳನ್ನು ನಿರೀಕ್ಷಿಸುವಂತಿಲ್ಲ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮನ್‍ದಮ್‍ಬರ್ ಪಳ್ಳಿ ಗ್ರಾಮದ ಸಣ್ಣ ಹಾಲು ಉತ್ಪಾದಕ ಎನ್. ಆದಿನಾರಾಯಣ ಇದರ ಕಾರಣವನ್ನು ಹೀಗೆಂದು ತಿಳಿಸುತ್ತಾರೆ: “ಹಾಲು ಖರೀದಿ ಘಟಕಗಳು ನಮಗೆ ನ್ಯಾಯಯುತ ಬೆಲೆ ಪಾವತಿಸುತ್ತಿಲ್ಲ. ಹಾಲಿನ ಪೂರೈಕೆ ಜಾಸ್ತಿಯಾಗಿದೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಹಾಲಿನ ಬೆಲೆ ಕುಸಿಯುತ್ತಿದೆ ಎಂಬ ಕಾರಣ ಹೇಳುತ್ತಿದ್ದರು. ಈಗ, ಅವರು ಹೇಳುವ ಕಾರಣ, ಮಾರುಕಟ್ಟೆಗೆ ಅಗ್ಗದ ಹಾಲು ಹರಿದು ಬರುತ್ತಿದೆ ಎಂಬುದು.”

ನಿಜ ಸಂಗತಿ ಏನು? ಅಗ್ಗದ ಹಾಲು ಮಾರುತ್ತಿರುವ ಡೈರಿಗಳು, ಸೋಯಾಹಾಲಿಗೆ ಹೈನುಗಾರಿಕೆಯ ಹಾಲನ್ನು ಬೆರೆಸಿ, ಲೀಟರಿಗೆ ರೂ.೧೫ ದರದಲ್ಲಿ ಮಾರುತ್ತಿವೆ. ಚಿತ್ತೂರು ಜಿಲ್ಲೆಯಲ್ಲಿ ಕಳೆದ ಮೂರು ವರುಷಗಳಲ್ಲಿ ಡೈರಿಗಳ ಹಾಲಿನ ಖರೀದಿ ದರ ಲೀಟರಿಗೆ ರೂ.೧೮ - ರೂ.೨೦ರಲ್ಲೇ ನಿಂತಿದೆ. ಆದರೆ ಹಾಲು ಉತ್ಪಾದನೆಯ ವೆಚ್ಚ ಹೆಚ್ಚಾಗುತ್ತಿದೆ. ಈಗ ಲೀಟರಿಗೆ ರೂ.೨೪ರಿಂದ ರೂ.೨೮ ಹಂತದಲ್ಲಿದೆ.

ಅನೇಕ ಡೈರಿಗಳು ಬೆಣ್ಣೆ ಅಥವಾ ಚೀಸ್ ಉತ್ಪಾದಿಸಲಿಕ್ಕಾಗಿ ಹಾಲಿನ ಕೊಬ್ಬಿಗೆ ತಾಳೆಣ್ಣೆಯಂತಹ ಸಸ್ಯಜನ್ಯ ಎಣ್ಣೆ ಬೆರೆಸುತ್ತಿವೆ. ಹೋಟೆಲುಗಳು ಮತ್ತು ಮಿಠಾಯಿ ಅಂಗಡಿಗಳು ಅವರ ಗ್ರಾಹಕರು. ದೊಡ್ಡ ಕಂಪೆನಿಗಳೂ ಸಸ್ಯಜನ್ಯ ಎಣ್ಣೆಗಳಿಂದ ಉತ್ಪಾದಿಸಿದ ಖಾದ್ಯವಸ್ತುಗಳನ್ನು ಶುದ್ಧ ಡೈರಿ ಉತ್ಪನ್ನಗಳೆಂದು ಮಾರಾಟ ಮಾಡುತ್ತಿವೆ. ಈ ಉತ್ಪನ್ನಗಳನ್ನು ಪರ್ಯಾಯ ಡೈರಿ ಉತ್ಪನ್ನ(ಅನಲೋಗ್ ಡೈರಿ ಪ್ರಾಡಕ್ಟ್)ಗಳೆಂದು ಕರೆಯುತ್ತಾರೆ. ಭಾರತದಲ್ಲಿ ಇವುಗಳ ವ್ಯವಸ್ಥಿತ ಮಾರುಕಟ್ಟೆ ಮೌಲ್ಯ ರೂ.೩೦,೦೦೦ ಕೋಟಿ ಎಂಬುದು ಪರಿಣತರ ಅಂದಾಜು. ವ್ಯವಸ್ಥಿತ ಜಾಲವಿಲ್ಲದ ಮಾರುಕಟ್ಟೆಯನ್ನೂ ಪರಿಗಣಿಸಿದರೆ ಈ ಮೌಲ್ಯ ರೂ.೫೦,೦೦೦ ಕೋಟಿ ಎನ್ನುತ್ತಾರೆ ನವದೆಹಲಿಯ ಪರಿಣತ ವಿಜಯ್ ಸರ್‍ದಾನ.

ಹಿಂದುಸ್ಥಾನ್ ಯುನಿಲಿವರ್ (ಎಚ್.ಯು.ಎಲ್.), ಐಟಿಸಿ ಲಿಮಿಟೆಡ್, ಫ್ಯೂಚರ್ ಗ್ರೂಪ್, ಕಾರ್ಗಿಲ್ ಇಂಡಿಯಾ ಇಂತಹ ದೊಡ್ಡ ಕಂಪೆನಿಗಳು ಮತ್ತು ನೂರಾರು ಭಾರತೀಯ ಕಂಪೆನಿಗಳು ಟನ್ನುಗಟ್ಟಲೆ ಉತ್ಪಾದಿಸಿ ಮಾರುವ ಖಾದ್ಯ ವಸ್ತುಗಳ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಭಾರತದ ಡೈರಿ ಉದ್ಯಮದ ಮುಂದಾಳುಗಳು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. “ಅಮುಲ್” ಬ್ರಾಂಡಿನ ಮಾಲೀಕರಾದ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ೨೦೧೭ರಲ್ಲಿ ಜಾಹೀರಾತು ಸರಣಿಯೊಂದನ್ನು ಪ್ರಕಟಿಸಿತು. ಅದರಲ್ಲಿ ಹಾಲಿನ ಕೊಬ್ಬಿನಿಂದ ಮಾಡಿದ ಐಸ್‍ಕ್ರೀಂ ಮತ್ತು ಸಸ್ಯಜನ್ಯ ಎಣ್ಣೆಯಿಂದ ಮಾಡಿದ ಶೀತಲೀಕೃತ ತಿನಿಸುಗಳ ವ್ಯತ್ಯಾಸವನ್ನು ಸ್ಪಷ್ಟ ಪಡಿಸಲಾಗಿತ್ತು. ಈ ಜಾಹೀರಾತಿನ ವಿರುದ್ಧ ಶೀತಲೀಕೃತ ತಿನಿಸುಗಳ ಮುಂಚೂಣಿ ಮಾರಾಟಗಾರ ಕಂಪೆನಿ ಕ್ವಾಲಿಟಿ ವಾಲ್ ಮೊಕದ್ದಮೆ ಹೂಡಿತು! ಆದರೆ ಭಾರತದ ಆಹಾರ ಸುರಕ್ಷತಾ ಮತ್ತು ಮಾನಕ ಪ್ರಾಧಿಕಾರವು ಅಮುಲ್ ನಿಲುವನ್ನು ಸಮರ್ಥಿಸಿತು. ಮಾತ್ರವಲ್ಲ, ಬಹು-ಬೇಡಿಕೆಯ ಗ್ರಾಹಕ ವಸ್ತುಗಳನ್ನು ಮಾರಾಟ ಮಾಡುವ ಎಲ್ಲ ಕಂಪೆನಿಗಳಿಗೂ ಹೀಗೆಂದು ಆದೇಶಿಸಿತು: ಶೀತಲೀಕೃತ ವಸ್ತುಗಳಲ್ಲಿ ಸಸ್ಯಜನ್ಯ ಕೊಬ್ಬು ಇದ್ದರೆ, ಅದನ್ನು ಐಸ್‍ಕ್ರೀಂ ಎಂದು ಅಥವಾ ಡೈರಿ ಉತ್ಪನ್ನದ ಸುಳ್ಳು ಹೆಸರಿನಲ್ಲಿ ಮಾರಬಾರದು. (ಯಾಕೆಂದರೆ ಅದು ಡೈರಿ ಉತ್ಪನ್ನ ಅಲ್ಲ.)

ಹಾಲಿನ “ಬದಲಿ ಖಾದ್ಯ”ಗಳಲ್ಲಿ (ಬಾದಾಮಿ, ಸೋಯಾಬೀನ್, ಇತರ ಧಾನ್ಯಗಳ ಹಾಲು) ಪೋಷಕಾಂಶಗಳು ಹಾಲಿನಲ್ಲಿ ಇರುವುದಕ್ಕಿಂತ ಕಡಿಮೆ. ಹಾಗಿದ್ದರೂ, ಆರೋಗ್ಯದ ಸಮಸ್ಯೆ ಇರುವ ಕೆಲವರಿಗೆ ಅವು ಸೂಕ್ತ ಆಹಾರ. ಆದರೆ ಅಪಾಯಕಾರಿ ಸಂಗತಿಯೆಂದರೆ, ಖಾದ್ಯ ವಸ್ತುಗಳ ಉತ್ಪಾದನಾ ವೆಚ್ಚ ತಗ್ಗಿಸಲು ಅವು ವ್ಯಾಪಾರಿ ಉತ್ಪಾದನಾ ಘಟಕಗಳಿಗೆ ಭಾರೀ ಅವಕಾಶ ಕಲ್ಪಿಸಿವೆ – ಪಿಜ್ಜಾ, ಟಾಕೊಸ್, ಚೀಸ್, ಯೋಗರ್ಟ್, ಶೀತಲೀಕೃತ ಖಾದ್ಯಗಳು, ಮಿಠಾಯಿಗಳು, ಹಾಲಿನ ಪಾನೀಯಗಳು ಇತ್ಯಾದಿ ಡೈರಿ ಉತ್ಪನ್ನಗಳಂತಹ ಖಾದ್ಯ ವಸ್ತುಗಳ ಉತ್ಪಾದನಾ ವೆಚ್ಚವನ್ನು ತಗ್ಗಿಸಲು.

ಈ ಅಕ್ರಮದಿಂದ ವಾಣಿಜ್ಯ ಉತ್ಪಾದನಾ ಘಟಕಗಳಿಗೆ ಎಷ್ಟು ಲಾಭವಿದೆ ಎಂಬುದನ್ನು ವಿಜಯ್ ಸರ್‍ದಾನ ವಿವರಿಸುವುದನ್ನು ಗಮನಿಸಿ. ಹಿಂದುಸ್ಥಾನ್ ಯುನಿಲಿವರಿನ ಶೀತಲೀಕೃತ ಖಾದ್ಯವನ್ನು “ಐಸ್‍ಕ್ರೀಂ” ಎಂದು ಮಾರಲಾಗುತ್ತಿದೆ; ಆದರೆ, ಅದನ್ನು ತಯಾರಿಸಲಿಕ್ಕಾಗಿ ಕಿಲೋಕ್ಕೆ ರೂ.೭೦೦ ಬೆಲೆಯ ಹಾಲಿನ ಕೊಬ್ಬಿನ ಬದಲಾಗಿ ಕಿಲೋಕ್ಕೆ ರೂ.೬೦ ಬೆಲೆಯ ತಾಳೆಣ್ಣೆಯ ಬಳಕೆ! ಸ್ಕಿಮ್‍ಡ್ ಮಿಲ್ಕ್ ಪೌಡರ್ (ಎಸ್‍ಎಂಪಿ) ಉತ್ಪನ್ನಗಳೆಂದು ಮಾರುವ ಉತ್ಪನ್ನಗಳ ಮುಖ್ಯ ಅಂಶ ಸಕ್ಕರೆ ಮತ್ತು ಮಾಲ್ಟೋಡೆಕ್ಸ್‍ಟ್ರಿನ್ (ಕಾರ್ನ್, ಅಕ್ಕಿ ಮತ್ತು ಆಲೂಗಡ್ಡೆ ಪಿಷ್ಟದಿಂದ ತಯಾರಿಸಿದ ಬಿಳಿಹುಡಿ.) ನೆಸ್ಲೆ ಕಂಪೆನಿಯ ಎವ್‍ರಿಡೇ ಡೈರಿ ವೈಟನರ್ ಎಂಬ ಎಸ್‍ಎಂಪಿ ಉತ್ಪನ್ನದ ಮಾರಾಟ ಬೆಲೆ ಕಿಲೋಕ್ಕೆ ರೂ.೩೫೦. ಆದರೆ, ಅದರಲ್ಲಿರುವ ಮಾಲ್ಟೋಡೆಕ್ಸ್‍ಟ್ರಿನ್ ಮತ್ತು ಸಕ್ಕರೆಯ ಬೆಲೆ ಕಿಲೋಕ್ಕೆ ತಲಾ ಕೇವಲ ರೂ.೩೫.

ಮಾರುಕಟ್ಟೆಯಲ್ಲಿ ಸಿಗುವ ಸಿಹಿತಿಂಡಿಗಳು, ಬೆಣ್ಣೆ ಮತ್ತು ಚೀಸುಗಳಲ್ಲಿಯೂ ತಾಳೆಣ್ಣೆಯಂತಹ ಬದಲಿ ವಸ್ತುಗಳ ವ್ಯಾಪಕ ಬಳಕೆ ಆಗುತ್ತಿದೆ ಎಂದು ತಿಳಿಸುತ್ತಾರೆ ವಿಜಯ್ ಸರ್‍ದಾನ. ಆದರೆ, ಇತ್ತೀಚೆಗಿನ ವರುಷಗಳಲ್ಲಿ ಹಾಲು ಉತ್ಪಾದಕರು ಹಾಲಿಗೆ ಕಲಬೆರಕೆ ಮಾಡಲು ಅವನ್ನು ಬಳಸುತ್ತಿದ್ದಾರೆ ಎಂಬುದು ಆತಂಕಕಾರಿ ಬೆಳವಣಿಗೆ.

ಈ ದಂಧೆಯ ಪುರಾವೆ ಬೇಕೇ? ಢೆಲ್ಲಿಯ ಕೆ.ಸಿ. ಗ್ರೂಪ್ ಎಂಬುದು ಸೋಯಾ ಹಾಲು ಯಂತ್ರಗಳನ್ನು ಉತ್ಪಾದಿಸುವ ಕಂಪೆನಿ. ಅದರ ಅಧಿಕಾರಿಯೊಬ್ಬರು ಹಾಲಿನ ಉತ್ಪನ್ನಗಳ ಬದಲಿ ಖಾದ್ಯಗಳಿಂದಾಗುವ ಲಾಭದ ಅಂಕೆಸಂಖ್ಯೆ ನೀಡುತ್ತಾರೆ. ಒಂದು ಕಿಲೋ ಸೋಯಾಬೀನಿನ ಬೆಲೆ ರೂ.೪೦. ಅದರಿಂದ ಏಳು ಲೀಟರ್ ಸೋಯಾ ಹಾಲು ಪಡೆಯಲು ಸಾಧ್ಯ. ಅಂದರೆ ಒಂದು ಲೀಟರ್ ಸೋಯಾಹಾಲಿನ ಬೆಲೆ ಕೇವಲ ರೂ.೫.೫೦. ಹಾಲು ಉತ್ಪಾದಕರು, ಸೋಯಾ ಹಾಲು ಕಲಬೆರಕೆ ಮಾಡಿದ ಡೈರಿ ಹಾಲನ್ನು ಲೀಟರಿಗೆ ರೂ.೧೫ ಬೆಲೆಗೆ ಮಾರಿದರೂ ಭರ್ಜರಿ ಲಾಭ. ಹೀಗೆ ಲಾಭದ ಕೊಳ್ಳೆ ಹೊಡೆಯಲಿಕ್ಕಾಗಿಯೇ ರೂ.೧.೫ ಲಕ್ಷ ತೆತ್ತು ಸೋಯಾ ಹಾಲು ಯಂತ್ರಗಳನ್ನು ಖರೀದಿಸುತ್ತಿದ್ದಾರೆ, ಅಲ್ಲವೇ?

ಇಂತಹ ದಂಧೆ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ವ್ಯಾಪಕವಾಗಿ ಪತ್ತೆಯಾಗಿದೆ. ಇತರ ರಾಜ್ಯಗಳ ಪರಿಸ್ಥಿತಿ ತನಿಖೆ ಮಾಡಿದರೆ ಬಹಿರಂಗವಾದೀತು. ಪ್ಯಾಕ್ ಮಾಡಿದ ಖಾದ್ಯವಸ್ತುಗಳ ಲೇಬಲುಗಳಲ್ಲಿ ಹಾಲಿನ ಬದಲಿ ವಸ್ತುಗಳ ಮಾಹಿತಿ ಪ್ರಕಟಿಸಲೇ ಬೇಕೆಂಬ ನಿಯಮ ಜ್ಯಾರಿ ಆಗಿಲ್ಲ. ಹಾಗಾಗಿ, ಗ್ರಾಹಕರಿಗೆ ಈ ಮೋಸವನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ.

ಅಂತೂ, ಹಾಲು ಉತ್ಪಾದಿಸುವ ಕೃಷಿಕರಿಗೆ ಸಿಗಬೇಕಾದ ನ್ಯಾಯಬದ್ಧ ಹಣ, ಹಾಲಿನ ಬದಲಿ ವಸ್ತುಗಳಿಂದ ತಯಾರಿಸಿದ ಖಾದ್ಯಗಳನ್ನು “ಇವು ಹಾಲಿನ ಉತ್ಪನ್ನಗಳು” ಎಂಬ ಸುಳ್ಳು ಹೆಸರಿನಲ್ಲಿ ಮಾರಾಟ ಮಾಡುವ ವಾಣಿಜ್ಯ ಘಟಕಗಳ ಕೈಸೇರುತ್ತಿದೆ. ಈ “ಕಲಬೆರಕೆ”ಯಿಂದಾಗಿ, ಅವನ್ನು ಸೇವಿಸುವ ಗ್ರಾಹಕರ ಆರೋಗ್ಯ ಕೆಡುತ್ತಿದೆ. ಇದು ಎಲ್ಲರಿಗೂ ಎಚ್ಚರಿಕೆಯ ಗಂಟೆ, ಅಲ್ಲವೇ?