ಬಿಷ್ಣೋಯಿ ಗ್ಯಾಂಗ್ ದೇಶಕ್ಕೆ ಕಂಟಕವಾದೀತು
ದಾವೂದ್ ಇಬ್ರಾಹಿಂ ಪಾತಕ ಲೋಕ ಅಂತ್ಯವಾದೀತು ಎಂದು ನಿಟ್ಟುಸಿರು ಬಿಡುವ ಹೊತ್ತಿಗಾಗಲೇ ದೇಶದಲ್ಲಿ ಇದೀಗ ಅಂತಹದ್ದೇ ಮಾದರಿಯ ಬಿಷ್ಣೋಯಿ ಗ್ಯಾಂಗ್ ತಲೆ ಎತ್ತಿದ್ದು, ಬಾಲಿವುಡ್, ಉದ್ಯಮಲೀಕವನ್ನು ತಲ್ಲಣಗೊಳಿಸಿದೆ. ಬಿಷ್ಣೋಯಿ ಗ್ಯಾಂಗ್ ನ ನಾಯಕ ಲಾರೆನ್ಸ್ ಬಿಷ್ಣೋಯಿ ೨೦೧೫ರಿಂದಲೇ ಜೈಲಿನಲ್ಲಿದ್ದುಕೊಂಡು ಮಾಜಿ ಸಚಿವ ಬಾಬಾ ಸಿದ್ದೀಕಿ, ಗಾಯಕ ಸಿಧು ಮೂಸೆವಾಲ ಸೇರಿದಂತೆ ಹಲವು ಖ್ಯಾತನಾಮರ ಹತ್ಯೆ ಮಾಡಿಸಿದ್ದಾನೆ ಎನ್ನಲಾಗಿದೆ. ೩೧ ವರ್ಷದ ಲಾರೆನ್ಸ್ ಬಿಷ್ಣೋಯಿ ವಿರುದ್ಧ ಮಾದಕ ವಸ್ತು ಸಾಗಣೆ, ಹತ್ಯೆ, ಬೆದರಿಕೆ, ಸುಲಿಗೆ ಸೇರಿದಂತೆ ಬರೋಬ್ಬರಿ ೭೧ ಪ್ರಕರಣಗಳು ದಾಖಲಾಗಿವೆ. ಎಲ್ಲಕ್ಕಿಂತ ಹೆಚ್ಚಾಗಿ ನಟ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡುವುದಾಗಿ ಬಹಿರಂಗವಾಗಿ ಘೋಷಿಸಿದ್ದಲ್ಲದೆ, ಹತ್ಯೆಗೆ ಯತ್ನವನ್ನೂ ನಡೆಸಿದ್ದಾನೆ. ಜೈಲಿನಲ್ಲಿದ್ದುಕೊಂಡೇ ಪಂಜಾಬ್, ದೆಹಲಿ, ರಾಜಸ್ಥಾನ, ಹರಿಯಾಣ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮತ್ತು ಕೆನಡಾ, ನೇಪಾಳ ಸೇರಿದಂತೆ ಹಲವು ದೇಶಗಳಲ್ಲಿ ತನ್ನ ಗ್ಯಾಂಗ್ ಮೂಲಕ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದಾನೆ ಎನ್ನುವುದನ್ನು ಪೋಲೀಸರು ತಿಳಿಸಿದ್ದಾರೆ.
ಕೆನಡಾ- ಭಾರತದ ಕಲಹದಲ್ಲೂ ಈತನ ಹೆಸರು ಪ್ರಸ್ತಾಪವಾಗಿದೆ. ಇವೆಲ್ಲವನ್ನೂ ಗಮನಿಸಿದರೆ ಲಾರೆನ್ಸ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ದಾರಿಯಲ್ಲಿ ಸಾಗುತ್ತಿದ್ದಾನೆ. ದಾವೂದ್ ಬಾಲಿವುಡ್ ನಲ್ಲಿ ಹಲವರ ಸ್ನೇಹ ಮಾಡುವ ಮೂಲಕ ಮತ್ತು ಹಲವರನ್ನು ಗುರಿಯಾಗಿಸಿಕೊಳ್ಳುವ ಮೂಲಕ ಕುಖ್ಯಾತಿ ಗಳಿಸಿದ್ದ. ಚಿತ್ರರಂಗದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ್ದ. ಲಾರೆನ್ಸ್ ಕೂಡ ಅದೇ ದಾರಿಯಲ್ಲಿ ಸಾಗುತ್ತಿದ್ದು, ಬಾಲಿವುಡ್ ಮೇಲೆ ಹಿಡಿತ ಸಾಧಿಸಲು ಹೊರಟಿದ್ದಾನೆ. ಅದರ ಭಾಗವಾಗಿಯೇ ಚಿತ್ರರಂಗದ ಹಲವರಿಗೆ ಹತ್ತಿರವಾಗಿದ್ದ ಬಾಬಾ ಸಿದ್ದೀಕಿ ಅವರನ್ನು ಹತ್ಯೆ ಮಾಡಿರುವುದು ಮತ್ತು ಸಲ್ಮಾನ್ ಖಾನ್ ಅವರಂಥ ಸ್ಟಾರ್ ನಟನನ್ನು ಗುರಿಯಾಗಿಸಿಕೊಂಡಿದ್ದಾನೆ. ಈ ಗ್ಯಾಂಗ್ ಅನ್ನು ಹೀಗೆಯೇ ಬಿಟ್ಟರೆ ಮತ್ತೊಂದು ಪಾತಕಲೋಕ ಸೃಷ್ಟಿಯಾಗುವುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ ಆರಂಭದಲ್ಲೇ ಈ ಗ್ಯಾಂಗ್ ಅನ್ನು ಚಿವುಟಬೇಕಿದೆ. ಇಲ್ಲವಾದರೆ ಹೆಮ್ಮರವಾಗಿ ಬೆಳೆದರೆ ಇಡೀ ದೇಶಕ್ಕೆ ಕಂಟಕವಾಗುವ ಸಾಧ್ಯತೆ ಇದೆ.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೯-೧೦-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ