ಬಿಸಿಲಿನಿಂದಲೇ ಬದುಕು (ರೈತರೇ ಬದುಕಲು ಕಲಿಯಿರಿ-೮)

ಬಿಸಿಲಿನಿಂದಲೇ ಬದುಕು (ರೈತರೇ ಬದುಕಲು ಕಲಿಯಿರಿ-೮)

ಬರಹ

ಸಸ್ಯಗಳ ಬೆಳವಣಿಗೆಗೆ ಏನು ಬೇಕು ಎಂಬುದು ಈಗ ಗೊತ್ತಾಯಿತು. ಆದರೆ ಇವನ್ನು, ಅಂದರೆ ನೀರು, ಗಾಳಿ, ಸೂರ್ಯನ ಬಿಸಿಲು ಮತ್ತು ಭೂಮಿಯ ಸತ್ವ ಬಳಸಿಕೊಂಡು ಸಸ್ಯಗಳು ಬೆಳೆಯುವುದು ಹೇಗೆ ಎಂಬುದನ್ನು ನೋಡೋಣ.

ಸಸ್ಯಗಳು ತಮ್ಮ ಚಟುವಟಿಕೆಗೆ ಪ್ರಮುಖವಾಗಿ ಅವಲಂಬಿಸುವುದು ಸೂರ್ಯನ ಬಿಸಿಲನ್ನು. ಯಾವ ಬಿಸಿಲನ್ನು ನಾವು ಶಪಿಸುತ್ತೇವೆಯೋ, ಯಾವ ಬಿಸಿಲು ಬರ ತರುತ್ತದೆ ಎಂದು ನಂಬಿದ್ದೇವೋ, ಆ ಸೂರ್ಯನ ಬಿಸಿಲೇ ಸಸ್ಯಗಳ ಜೀವನಕ್ಕೆ ಪ್ರಮುಖ ಆಧಾರ.

ಸಸ್ಯಗಳ ಎಲೆಗಳು ಸಾಮಾನ್ಯವಾಗಿ ಹಸಿರಾಗಿರುತ್ತವೆ. ಇದಕ್ಕೆ ಕಾರಣ ಅವುಗಳಲ್ಲಿರುವ ಪತ್ರ ಹರಿತ್ತು. ಅಂದರೆ ಕ್ಲೋರೋಫಿಲ್ ಎಂಬ ವಸ್ತು. ಈ ವಸ್ತುವಿನಿಂದಾಗಿ ಎಲೆಗಳು ಹಸಿರಾಗಿರುತ್ತವೆ.

ಸೂರ್ಯನ ಬೆಳಕು ಎಲೆಗಳ ಮೇಲೆ ಬಿದ್ದಾಗ ಅವುಗಳಲ್ಲಿರುವ ಪತ್ರ ಹರಿತ್ತು ಬೆಳಕನ್ನು ಹೀರಿಕೊಂಡು, ನೀರು ಮತ್ತು ಗಾಳಿಯ ಸಹಾಯದೊಂದಿಗೆ ಆಹಾರ ತಯಾರಿಸುತ್ತದೆ. ಪ್ರತಿಯೊಂದು ಚದರ ಅಡಿ ಹಸಿರು ಎಲೆ ಮೇಲೆ ೧,೨೫೦ ಕಿಲೋ ಕ್ಯಾಲರಿ (ಶಕ್ತಿ ಮಾಪಕ) ಶಕ್ತಿ ಬೀಳುತ್ತದೆ. ಆದರೆ ಎಲೆಗಳು ಈ ಎಲ್ಲ ಶಕ್ತಿಯನ್ನು ಹೀರಿಕೊಳ್ಳುವುದಿಲ್ಲ. ಕೇವಲ ಶೇ.೧ರಷ್ಟು, ಅಂದರೆ ೧೨.೫ ಕಿಲೋ ಕ್ಯಾಲರಿ ಶಕ್ತಿಯನ್ನಷ್ಟೇ ಹೀರಿಕೊಂಡು ಅದನ್ನು ಆಹಾರ ತಯಾರಿಕೆಗೆ ಬಳಸಿಕೊಳ್ಳುತ್ತದೆ. ಅದೇ ರೀತಿ ಈ ಪ್ರಮಾಣದ ಶಕ್ತಿಗೆ ಬೇಕಾದ ಪ್ರಮಾಣದ ನೀರು ಮತ್ತು ಗಾಳಿಯನ್ನಷ್ಟೇ ನಿಸರ್ಗದಿಂದ ಅದು ಹೀರಿಕೊಳ್ಳುತ್ತದೆ.

ಇಷ್ಟು ಪ್ರಮಾಣದ ಬಿಸಿಲಿನಿಂದ ಒಂದು ಚದರ ಅಡಿ ಅಗಲದ ಎಲೆ ಒಂದು ದಿನದಲ್ಲಿ ೪.೫ ಗ್ರಾಮ್ ಆಹಾರ ತಯಾರಿಸುತ್ತದೆ. ಇಲ್ಲಿ ಆಹಾರ ಎಂದರೆ ಗಿಡದ ಒಟ್ಟು ಬೆಳವಣಿಗೆ ಎಂದರ್ಥ. ಒಂದು ವೇಳೆ ಬತ್ತ, ರಾಗಿ, ಗೋದಿ, ಜೋಳ, ನವಣೆ, ಸಜ್ಜೆ, ಉದ್ದು, ಅವರೆಯಂತಹ ಆಹಾರ ಧಾನ್ಯಗಳಾದರೆ ಅವುಗಳ ನಿರ್ಮಾಣಕ್ಕೆಂದು ೧.೫ ಗ್ರಾಮ್ ಆಹಾರ ಬಳಕೆಯಾಗುತ್ತದೆ. ಒಂದು ವೇಳೆ ಕಬ್ಬು, ಬಾಳೆ, ಗೆಡ್ಡೆ, ಗೆಣಸು, ಹಣ್ಣಿನ ಗಿಡಗಳಾದರೆ ಅವುಗಳ ಆಹಾರಕ್ಕೆ ೨.೫ ಗ್ರಾಮ್ ವಿನಿಯೋಗವಾಗುತ್ತದೆ.

ನೀವು ಎಷ್ಟೇ ಗೊಬ್ಬರ ಹಾಕಿ, ಎಂಥದೇ ಪೂರಕ ವಾತಾವರಣ ಸೃಷ್ಟಿಸಿ. ಇದಕ್ಕಿಂತ ಹೆಚ್ಚಿನ ಪ್ರಮಾಣದ ಆಹಾರವನ್ನು ಪಡೆಯುವುದು ಸಾಧ್ಯವಿಲ್ಲ. ಇದು ನಿಸರ್ಗ ನಿಯಮ.
ಹೀಗಾಗಿ ಹೆಚ್ಚು ಗೊಬ್ಬರ ಹಾಕುವುದರಿಂದ, ಹೈಬ್ರೀಡ್ ಬೀಜಗಳನ್ನು ಬಳಸುವುದರಿಂದ ಹೆಚ್ಚು ಆಹಾರ ಬೆಳೆಯಬಹುದು ಎಂಬುದು ಬರೀ ಬೊಗಳೆ. ನಾವು ಮಾಡಬಹುದಾದ ಕೆಲಸವೇನೆಂದರೆ ಗಿಡಗಳಿಗೆ ಸೂಕ್ತ ಪ್ರಮಾಣದಲ್ಲಿ ಸೂರ್ಯನ ಬೆಳಕು ದೊರೆಯುವಂತೆ, ಸರಿಯಾದ ಪ್ರಮಾಣದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುವುದು. ಹೊಲದಲ್ಲಿ ಮುಚ್ಚುಗೆ ಚೆನ್ನಾಗಿ ಇರುವಂತೆ ನೋಡಿಕೊಂಡರೆ ಕರ್ನಾಟಕದ ಬಹುತೇಕ ಪ್ರದೇಶದಲ್ಲಿ ಯಥೇಚ್ಛವಾಗಿ ಬೀಳುವ ಬಿಸಿಲನ್ನು ಬಳಸಿಕೊಂಡು ಅತ್ಯುತ್ತಮ ಇಳುವರಿ ಪಡೆಯುವುದು ಸಾಧ್ಯವಿದೆ. ಅದಕ್ಕಾಗಿ ಕೆಲವೊಂದು ತಂತ್ರಗಳನ್ನು, ನಿಸರ್ಗದ ನಿಯಮಗಳನ್ನು ಅರ್ಥ ಮಾಡಿಕೊಳ್ಳಬೇಕಷ್ಟೇ.

ನಮ್ಮ ಮಣ್ಣಿನಲ್ಲಿದೆ ಚಿನ್ನ

ಇಲ್ಲೊಂದು ಉದಾಹರಣೆ ಕೊಡುವುದು ಸೂಕ್ತ ಅನ್ನಿಸುತ್ತದೆ.

ಭಾರತದಲ್ಲಿ ಇರುವಷ್ಟು ಜೀವವೈವಿಧ್ಯ ಬಹುಶಃ ಬೇರೆ ಯಾವ ದೇಶದಲ್ಲಿಯೂ ಇಲ್ಲ. ಅದೇ ರೀತಿ ಕರ್ನಾಟಕದಲ್ಲಿ ಇರುವಂಥ ಜೀವವೈವಿಧ್ಯ ಹೊಂದಿದ ರಾಜ್ಯಗಳು ಕಡಿಮೆ.
ನಮ್ಮ ದೇಶದ ಹಾಗೂ ರಾಜ್ಯದ ಮಣ್ಣಿನಲ್ಲಿ ಸಸ್ಯದ ಬೆಳವಣಿಗೆಗೆ ಬೇಕಾದ ಎಲ್ಲ ಪೋಷಕಾಂಶಗಳೂ ಸಾಕಷ್ಟಿವೆ. ಎಲ್ಲಕ್ಕಿಂತ ಮುಖ್ಯ ನಮ್ಮಲ್ಲಿ ಹೇರಳವಾದ ಬಿಸಿಲಿದೆ. ನಿಜಕ್ಕೂ ಈ ಬಿಸಿಲೇ ನಮ್ಮ ಅಸಲಿ ಸಂಪತ್ತು ಎಂದರೆ ಆಶ್ಚರ್ಯವಾಗುತ್ತದೆಯೆ?

ಹೌದು. ಬಿಸಿಲು ನಮ್ಮ ನಿಜವಾದ ಸಂಪತ್ತು. ಏಕೆಂದರೆ ನೀರನ್ನು ಸಾವಿರಾರು ಕಿಲೋಮೀಟರ್ ದೂರದಿಂದ ಕೊಳಾಯಿಗಳ ಮೂಲಕ ತರಬಹುದು. ಆದರೆ ಬಿಸಿಲನ್ನು ಹಾಗೆ ತರಲಾಗದು. ಬೇಕೆಂದಾಗ ಕೊಳವೆ ಬಾವಿ ಕೊರೆದು ನೀರು ಚಿಮ್ಮಿಸಬಹುದು. ಆದರೆ ಬಿಸಿಲನ್ನು ಹಾಗೆ ಚಿಮ್ಮಿಸಲು ಸಾಧ್ಯವಿಲ್ಲ.

ಕೇವಲ ದಿನದ ಅರ್ಧ ಸಮಯದಲ್ಲಿ ಮಾತ್ರ ಬಿಸಿಲು ದೊರಕುತ್ತದೆ. ಇನ್ನು ತೀಕ್ಷ್ಣ ಬಿಸಿಲು ದೊರಕುವುದು ಬೆಳಿಗ್ಗೆ ೧೦ರಿಂದ ಸಂಜೆ ೪ರವರೆಗೆ ಮಾತ್ರ.

ಈ ಲೆಕ್ಕದಲ್ಲಿ ಮಧ್ಯ ಮತ್ತು ಉತ್ತರ ಕರ್ನಾಟಕದ ಜನ ನಿಜಕ್ಕೂ ಪುಣ್ಯವಂತರು. ಇಲ್ಲಿ ವರ್ಷದ ಒಂಬತ್ತು ತಿಂಗಳು ಬಿಸಿಲು ಚೆನ್ನಾಗಿ ಬೀಳುತ್ತದೆ. ಬಾಕಿ ಉಳಿದ ಮೂರು ತಿಂಗಳು ಮಳೆಗಾಲವಾಗಿದ್ದು, ಇಲ್ಲಿ ಸುರಿವ ಸರಾಸರಿ ಮಳೆಯಲ್ಲಿ ಖಂಡಿತವಾಗಿ ಒಂದು ಅತ್ಯುತ್ತಮ ಬೆಳೆಯನ್ನು ಬೆಳೆಯುವುದು ಸಾಧ್ಯವಿದೆ. ಕೊಳವೆ ಬಾವಿ ತೋಡಿಸಿದ್ದರೆ ಇನ್ನೊಂದು ಬೆಳೆಯನ್ನೂ ಅನಾಯಾಸವಾಗಿ ಬೆಳೆಯಬಹುದು.

ಏಕೆಂದರೆ ಸಮೃದ್ಧ ಬಿಸಿಲು ಹಾಗೂ ಸುಭಾಷ ಪಾಳೇಕರ ತೋರಿಸಿರುವ ನೈಸರ್ಗಿಕ ಕೃಷಿ ವಿಧಾನ ನಮಗೆ ಅತ್ಯುತ್ತಮ ಇಳುವರಿ ತಂದುಕೊಡುವುದರಲ್ಲಿ ಯಾವುದೇ ಸಂದೇಹವಿಲ್ಲ. ರಾಸಾಯನಿಕಗಳನ್ನು ದೂರ ಮಾಡಿ, ನಿಸರ್ಗಕ್ಕೆ ಹತ್ತಿರವಾದ ಕೃಷಿ ಮಾಡಿದರೆ ಕರ್ನಾಟಕ ನಂದನವನವಾಗುತ್ತದೆ. ಮಳೆ ಬರಲಿಲ್ಲ ಎಂದು ಗುಳೆ ಹೋಗುವ ಅನಿವಾರ್ಯತೆ ಬರುವುದಿಲ್ಲ. ಬೆಳೆ ಕೈಗೆ ಹತ್ತಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ದುರಂತ ದೂರವಾಗುತ್ತದೆ.

ಭಾರತದ ಭೂಮಿಯಲ್ಲಿ ಬೆಳೆಗಳಿಗೆ ಬೇಕಾದ ಎಲ್ಲ ಪೋಷಕಾಂಶಗಳೂ ಸಮೃದ್ಧವಾಗಿವೆ ಎಂಬುದು ನಮ್ಮ ಹಿರಿಯರಿಗೆ (ಅಂದರೆ ಐವತ್ತು ವರ್ಷಗಳ ಹಿಂದಿನ ಜನಾಂಗಕ್ಕೆ) ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಅವರು ಭೂಮಿಯ ಫಲವತ್ತತೆ ಹೆಚ್ಚಿಸುವ ಯಾವ ಸಂಶೋಧನೆಗಳನ್ನೂ ಮಾಡಲು ಹೋಗಲಿಲ್ಲ. ಇದಕ್ಕೆ ಪೂರಕವಾಗಿ ಈ ಉದಾಹರಣೆ ಓದಿ.

ಭಾರತದ ವಿವಿಧ ಪ್ರದೇಶಗಳಲ್ಲಿ ತೈಲ ನಿಕ್ಷೇಪಗಳನ್ನು ಪತ್ತೆ ಹಚ್ಚಲು ೧೯೨೪ರಲ್ಲಿ ಅಮೆರಿಕದ ಖ್ಯಾತ ಭೂಗರ್ಭ ವಿಜ್ಞಾನಿಗಳಾದ ಡಾ. ಕ್ಲಾರ್ಕ್ ಹಾಗೂ ಡಾ. ವಾಷಿಂಗ್ಟನ್ ಭಾರತಕ್ಕೆ ಬಂದಿದ್ದರು. ಬರ್ಮಾಸೆಲ್ ಎಂಬ ಕಂಪನಿ ಈ ಉದ್ದೇಶಕ್ಕಾಗಿ ಅವರನ್ನು ಕಳಿಸಿಕೊಟ್ಟಿತ್ತು. ದೇಶದ ವಿವಿಧ ಪ್ರದೇಶಗಳಲ್ಲಿ ಈ ವಿಜ್ಞಾನಿಗಳು ಸಾವಿರಾರು ಅಡಿ ಆಳಗಳುಳ್ಳ ನೂರಾರು ಕೊಳವೆ ಬಾವಿಗಳನ್ನು ಕೊರೆದರು. ಪ್ರತಿ ಬಾರಿ ಕೊರೆದಾಗಲೂ ಅಲ್ಲಿಯ ವಿವಿಧ ಮಣ್ಣಿನ ಪದರುಗಳ ಮಾದರಿಗಳನ್ನು ಸಂಗ್ರಹಿಸಿದರು.

ಪ್ರತಿ ಅರ್ಧ ಅಡಿಗೊಂದರಂತೆ ಸಂಗ್ರಹಿಸಲಾದ ಈ ಮಾದರಿಗಳನ್ನು ನಂತರ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಅದರಲ್ಲಿ ಅಡಗಿರುವ ಪೋಷಕಾಂಶಗಳು, ಖನಿಜಗಳು ಹಾಗೂ ಇತರ ವಸ್ತುಗಳ ಪ್ರಮಾಣವನ್ನು ಅಳೆದರು. ಡಾ. ಕ್ಲಾರ್ಕ್ ಮತ್ತು ಡಾ. ವಾಷಿಂಗ್ಟನ್ ಅವರ ಪ್ರಕಾರ, ಭಾರತದ ಪ್ರತಿ ಇಂಚು ಮಣ್ಣಿನಲ್ಲಿಯೂ ಸಸ್ಯದ ಬೆಳವಣಿಗೆಗೆ ಬೇಕಾದ ಎಲ್ಲ ರೀತಿಯ ಪೋಷಕಾಂಶಗಳೂ ಹೇರಳವಾಗಿವೆ. ಸಾವಿರಾರು ಅಡಿ ಆಳದ ಮಣ್ಣಿನಲ್ಲಿಯೂ ಈ ಪೋಷಕಾಂಶಗಳು ಸಮೃದ್ಧ ಪ್ರಮಾಣದಲ್ಲಿ ದೊರಕಿವೆ. ಇದೊಂದು ಅಧಿಕೃತ ಸಂಶೋಧನೆಯಾಗಿದ್ದರೂ ವರದಿಗೆ ಸಿಗಬೇಕಾದ ಪ್ರಮಾಣದ ಪ್ರಚಾರ ಸಿಗಲಿಲ್ಲ.

ಯಾವುದಕ್ಕೂ ಇರಲಿ ಎಂದು ಗುಲ್ಬರ್ಗಾದಲ್ಲಿರುವ ಭಾರತ ಸರ್ಕಾರದ ಕೃಷಿ ಸಂಶೋಧನಾ ಕೇಂದ್ರ ಇಂತಹ ಹಲವಾರು ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿ ಅದೇ ನಿರ್ಧಾರಕ್ಕೆ ಬಂದಿತು. ಈ ವರದಿಯ ಪ್ರಕಾರವೂ ಭಾರತದ ಮಣ್ಣಿನಲ್ಲಿ ಸಸ್ಯಗಳ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳು ಹೇರಳವಾಗಿವೆ. ದೇಶದ ವಿವಿಧೆಡೆ ಆಗಾಗ ಇಂತಹ ಪ್ರಯೋಗಗಳು ನಡೆದಿವೆ. ಪ್ರತಿ ಬಾರಿಯೂ ಫಲಿತಾಂಶ ಅದೇ ಆಗಿದೆ.

ಆದರೂ ನಮ್ಮ ಹೊಲಗಳಲ್ಲಿ ಪೋಷಕಾಂಶದ ಕೊರತೆ ಇದೆ. ಅದಕ್ಕಾಗಿ ರಾಸಾಯನಿಕ ಗೊಬ್ಬರ ಸುರಿಯಬೇಕು ಎಂಬ ವ್ಯವಸ್ಥಿತ ಪ್ರಚಾರವನ್ನು ವಿದೇಶಗಳ ಕೃಷಿ ಕಂಪನಿಗಳು ನಡೆಸಿದವು. ನಮ್ಮ ದೇಶದ ರಾಜಕಾರಣಿಗಳು ಹಾಗೂ ಉದ್ಯಮಿಗಳು ಅದನ್ನು ಬೆಂಬಲಿಸಿದರು. ದಶಕಗಳ ಕಾಲ ಪತ್ರಿಕೆ, ದೂರದರ್ಶನ, ರೇಡಿಯೋ, ಹಾಗೂ ಸಾರ್ವಜನಿಕ ಭಾಷಣಗಳಲ್ಲಿ ಈ ಪ್ರಚಾರ ನಡೆಯಿತು. ಕೋಟ್ಯಂತರ ಟನ್‌ಗಳಷ್ಟು ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಭೂಮಿಗೆ ಸುರಿಯಲಾಯಿತು.

ಭೂತಾಯಿ ನಮ್ಮ ಒಂದು ಪೈಸೆ ಋಣವನ್ನೂ ಇಟ್ಟುಕೊಳ್ಳಳು. ಹೀಗಾಗಿ ನಾವು ಸುರಿದ ವಿಷವನ್ನೇ ಬೆಳಗಳ ಮೂಲಕ ಆಕೆ ನಮಗೆ ವಾಪಸ್ ಕೊಡುತ್ತಿದ್ದಾಳೆ. ಇಂತಹ ಆಹಾರ ಸೇವಿಸಿದ ನಾವು ಅಕಾಲಿಕ ರೋಗಗಳಿಗೆ ತುತ್ತಾಗುತ್ತಿದ್ದೇವೆ.

ಇದು ಒಂದು ಮುಖವಾಗಿದ್ದರೆ, ಗೊಬ್ಬರ ಹಾಗೂ ಕೀಟನಾಶಕಗಳಿಗೆಂದು ಕೃಷಿಯ ವೆಚ್ಚ ಹೆಚ್ಚಾಗಿ ಲಾಭಾಂಶ ಕಡಿಮೆಯಾಗುತ್ತಿರುವುದು ಇನ್ನೊಂದು ಮುಖ. ಇವುಗಳಿಂದಾಗಿ ಕೃಷಿ ಇವತ್ತು ದುಬಾರಿ ಕೆಲಸ ಎಂಬ ಹೆಸರು ಪಡೆದಿದೆ. ಭೂಮಿಯ ರೋಗನಿರೋಧಕ ಶಕ್ತಿ ಕುಗ್ಗಿ, ಇಳುವರಿ ಕುಸಿದು, ರೋಗಗಳ ಪ್ರಮಾಣ ಹೆಚ್ಚಾಗಿ ರೈತ ಆತ್ಮಹತ್ಯೆಯ ಕಡೆಗೆ ಮುಖ ಮಾಡುವಂತಾಗಿದೆ.

ನಮಗೆ ಇಷ್ಟೊಂದು ಹಾನಿ ಮಾಡುವ ರಾಸಾಯನಿಕ ಕೃಷಿ ನಮಗೆ ಬೇಕಾ? ನಿಮ್ಮ ಬದುಕನ್ನೇ ಬದಲಾಯಿಸುವ ಪ್ರಶ್ನೆ ಇದು. ಯೋಚಿಸಿ. ನಿರ್ಧರಿಸಿ.

(ಮುಂದುವರಿಯುವುದು)

- ಚಾಮರಾಜ ಸವಡಿ