ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಿ !

ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಿ !

ಈ ವರ್ಷ ರಾಜ್ಯಾದ್ಯಂತ ಹಿಂದೆಂದೂ ಕಾಣದ ಸೂರ್ಯನ ಶಾಖದ ಪ್ರಖರತೆ  ದಿನ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೂ ಈ  ಪ್ರಖರತೆ ಮೇ ತಿಂಗಳ ಕೊನೆಯವರೆಗೂ ಮುಂದುವರೆಯುವುದರಿಂದ ಖಂಡಿತವಾಗಿ ನಾವು ಕೆಲವೊಂದು ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲೇಬೇಕಿದೆ. ಇಲ್ಲವಾದರೆ ವಯಸ್ಕರು, ಮಕ್ಕಳು, ವಯೋವೃದ್ಧರು ಎಲ್ಲರ ಜೀವಕ್ಕೆ ಅಪಾಯ ತಂದುಕೊಳ್ಳಬೇಕಾದೀತು.

ಮಕ್ಕಳ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ (Dehydration) ಹಾಗೂ ವೃದ್ಧರಲ್ಲಿ ಬಿಸಿಲಿನ ಹೊಡೆತಕ್ಕೆ (Sunstroke) ಸಿಕ್ಕಿ ಅನಾರೋಗ್ಯವಾಗುವುದರಿಂದ ಹಾಗೂ ಮಧ್ಯವಯಸ್ಕರಲ್ಲಿ ವಿಪರೀತ ತಲೆನೋವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕೆಳಗೆ ಸೂಚಿಸುವಂತೆ ಈ ಬೇಸಿಗೆಯಲ್ಲಿ ತಮ್ಮನ್ನು ತಾವು ಕಾಪಾಡಿಕೊಳ್ಳಿ.

1) ಗೃಹಿಣಿಯರು ನಿಮ್ಮ ಹೊರಗಿನ ಕೆಲಸಗಳನ್ನು ಸಂಜೆ ವೇಳೆಯಲ್ಲಿ ಮುಗಿಸಿಕೊಳ್ಳಿ.

2) ಬಿಸಿಲಿನಲ್ಲಿ ಹೊರ ಹೋಗಲೇ ಬೇಕಾದ ಅನಿವಾರ್ಯತೆ ಇದ್ದಲ್ಲಿ ಬಿಳಿ ಬಣ್ಣದ ಛತ್ರಿಯನ್ನು ಬಳಸಿ. 

3) ಬಿಸಿಲಿನ ಪ್ರಖರತೆಯನ್ನು ಕಪ್ಪು ಮತ್ತು ನೀಲಿ ಬಣ್ಣ ಬೇಗ ಹೀರುವುದರಿಂದ ಕಪ್ಪು ಮತ್ತು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬೇಡಿ.

4) ಸಾಧ್ಯವಾದಷ್ಟೂ ಕಾಟನ್ ಬಟ್ಟೆಗಳನ್ನು ಧರಿಸಿ. 

5) ವಯೋವೃದ್ಧರಿಗೆ ಮತ್ತು ಮಕ್ಕಳಿಗೆ ಮನೆಯಲ್ಲಿ ಹೆಚ್ಚು ಹೆಚ್ಚು ನೀರು ಕುಡಿಯಲು ಕೊಡಿ. 

6) ಈ ಬಿಸಿಲಿನಲ್ಲಿ ವಿಟಮಿನ್ "ಸಿ" ಕೊರತೆ ಎದುರಾಗುವುದರಿಂದ ಪ್ರಕೃತಿಯ ಅಮೂಲ್ಯ ಕೊಡುಗೆ "ನಿಂಬೆಹಣ್ಣಿನ" ಪಾನಕ ಮಾಡಿಕೊಂಡು ಕುಡಿಯಿರಿ. ಇಲ್ಲಿ‌ ಸಕ್ಕರೆ ಬದಲು ಬೆಲ್ಲವನ್ನು ಬಳಸಿ.

7) ಬೆಳಗ್ಗೆ ಎದ್ದ ತಕ್ಷಣ "ತುಳಸಿ" ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಎರಡು ಲೋಟದಷ್ಟು ನೀರನ್ನು ಬೆರೆಸಿ ಕುಡಿಯಿರಿ ಇದರಿಂದ ಕೆಲಸ ಮಾಡುವಾಗ ಸುಸ್ತಾಗುವುದಿಲ್ಲ.

8) ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ಹೆಚ್ಚು ಬಳಸಬೇಡಿ, ಇಲ್ಲವಾದರೆ ಗುದದ್ವಾರದಲ್ಲಿ ಉಷ್ಣತೆ ಹೆಚ್ಚಾಗಿ ಮಲವಿಸರ್ಜನೆಗೆ ತೊಂದರೆಯ ಜೊತೆಗೆ ಮೂಲವ್ಯಾಧಿ ಬರುವ ಸಾಧ್ಯತೆ ಹೆಚ್ಚು!

9) ಬೇಸಿಗೆಯ ಸಮಯದಲ್ಲಿ ತಲೆ ಮತ್ತು ಮೆದುಳು ತಂಪಾಗಿರಬೇಕು ಆದ್ದರಿಂದ ಮಕ್ಕಳಿಗೆ ಎರಡು ದಿನಕ್ಕೊಮ್ಮೆ ಕೊಬ್ಬರಿ ಎಣ್ಣೆ ಬದಲು ರಾತ್ರಿ ಮಲಗುವಾಗ  "ಹರಳೆಣ್ಣೆ" ಹಚ್ಚಿ ಬೆಳಗ್ಗೆ ಸ್ನಾನ ಮಾಡಿಸಿ. ವಯಸ್ಕರೂ ಇದನ್ನು ಅನುಸರಿಸಬಹುದು.

10) ರಾತ್ರಿ ಮಲಗುವ ಮೊದಲು ತಣ್ಣೀರಿನ ಬಟ್ಟೆಯಿಂದ ನೆಲವನ್ನು ಒರೆಸಿಕೊಂಡು ತೆಳುವಾದ ಬಟ್ಟೆಯ ಮೇಲೆ ಮಲಗುವುದು ಸೂಕ್ತ. ಹಾಸಿಗೆ ಕೂಡ ಈ ಸಮಯದಲ್ಲಿ ಉಷ್ಣತೆಯನ್ನು ಹೆಚ್ಚು ಮಾಡುತ್ತದೆ.

11) ಹೆಸರು ಕಾಳುಗಳನ್ನು ನೀರಿನಲ್ಲಿ ಅರ್ಧ ಗಂಟೆಯಷ್ಟು ನೆನಸಿಟ್ಟು ನಂತರ ಮಿಕ್ಸಿಯಲ್ಲಿ ಜ್ಯೂಸ್ ಮಾಡಿಕೊಂಡು ದಿನಕ್ಕೆರಡು ಬಾರಿ ಕುಡಿಯಿರಿ ಇದರಿಂದ ದೇಹ ತಂಪಾಗಿರುತ್ತದೆ.

12) ಬಾಣಂತಿ ಹೆಣ್ಣು ಮಕ್ಕಳು ಕಾಯಿಸಿ ಆರಿಸಿದ ನೀರನ್ನೇ ಕುಡಿಯಬೇಕು. ಇಲ್ಲವಾದರೆ ತಾಯಿ ಮತ್ತು ಮಗುವಿಗೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ.

13) ಈ ಸಮಯದಲ್ಲಿ ಗಟ್ಟಿ ಮೊಸರಿನ ಬದಲು ಕಡೆದ ಮಜ್ಜಿಗೆಯನ್ನು ಆಹಾರಕ್ಕೆ ಬಳಸಿ, ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುವುದರಿಂದ ಅಸಿಡಿಟಿ ಆಗುವುದಿಲ್ಲ.

14) 5 ವರ್ಷದ ಒಳಗಿನ ಮಕ್ಕಳಿಗೆ ಪ್ರತಿ ಅರ್ಧ ಗಂಟೆಗೊಮ್ಮೆ ಒಂದು ಚಿಟಿಕೆಯಷ್ಟು  ಅಯೋಡಿನ್ ಉಪ್ಪು ಬೆರೆಸಿದ ನೀರನ್ನು ಕುಡಿಸುತ್ತಿರಬೇಕು ಇದರಿಂದ ಮಕ್ಕಳನ್ನು ಜಲಕೊರತೆ (Dehydration) ಯಿಂದ ಕಾಪಾಡಿಕೊಳ್ಳಬಹುದು.

15) ಈ ಬೇಸಿಗೆ ದಿನಗಳಲ್ಲಿ ತಣ್ಣೀರಿನ ಸ್ನಾನ ಕ್ಷೇಮ, ದಿನಕ್ಕೆರಡು ಬಾರಿ ಅಂದರೆ ಸಂಜೆ ಅಥವಾ ರಾತ್ರಿ ಮಲಗುವ ಮುನ್ನ ಒಂದು ಬಕೆಟ್ ತಣ್ಣೀರಿಗೆ ಕನಿಷ್ಠ 10 ಪುದಿನ ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ತಣ್ಣೀರಿಗೆ ಬೆರೆಸಿ ಸ್ನಾನ ಮಾಡುವುದರಿಂದ ಬೆವರಿನ ದುರ್ಗಂಧ ದೂರವಾಗುವುದಲ್ಲದೇ ಬೆವರು ಗುಳ್ಳೆಗಳು ಚರ್ಮದ ಮೇಲೆ ಬರುವುದಿಲ್ಲ.

16) ಬಿಗಿಯಾದ ಒಳ ಉಡುಪುಗಳನ್ನು ಕಡ್ಡಾಯವಾಗಿ ಬಳಸಬೇಡಿ, ಇದರಿಂದ ರಕ್ತ ಸಂಚಾರಕ್ಕೂ ತೊಂದರೆಯಾಗುತ್ತದೆ ಪರಿಣಾಮ ಕಡಿಮೆ ರಕ್ತದೊತ್ತಡ ಅಥವಾ ಹೆಚ್ಚಿನ ರಕ್ತದೊತ್ತಡ ಆಗಿ ಮಾರಣಾಂತಿಕ ಆಗಬಹುದು 

ಈ ಬೇಸಿಗೆಯಲ್ಲಿ ಮದ್ಯಾಹ್ನದ ಸಮಯದಲ್ಲಿ ಹೊರ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ. ಮಳೆಗಾಲ ಪ್ರಾರಂಭವಾದ ಕೂಡಲೇ ನೆರಳು ಕೊಡುವ ಮರದ ಎರಡು ಸಸಿಗಳನ್ನಾದರೂ ನಿಮ್ಮ ಮನೆಯ ಬಳಿ ನೆಡಿ. ಇದರಿಂದ ಮುಂದಿನ ದಿನಗಳಲ್ಲಿ ವಾತಾವರಣ ಇನ್ನಷ್ಟು ಬಿಸಿಯಾಗುವುದು ತಪ್ಪುತ್ತದೆ. ಈ ಸಂದೇಶಗಳನ್ನು ನೀವೂ ಪಾಲಿಸಿ ...ನಿಮ್ಮ ಮಿತ್ರರಿಗೂ ತಿಳಿಸಿ. 

(ಸಂಗ್ರಹ) - ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ