ಬಿಸಿಲಿನ ಶಾಖ ಮತ್ತು ಮೈಟ್ ಹಾವಳಿ

ಬಿಸಿಲಿನ ಶಾಖ ಮತ್ತು ಮೈಟ್ ಹಾವಳಿ

ಈ ವರ್ಷದ ಬೇಸಿಗೆಯ ಬಿಸಿಲಿನ ಝಳಕ್ಕೆ ಸಸ್ಯಗಳ ಎಲೆಗಳಿಗೆ ಸೂರ್ಯನ ಶಾಖದ ಬಿಸಿ ಅತಿಯಾಗಿ ತಟ್ಟಿದೆ. ಎಲೆಗಳು ಹಳದಿಯಾಗಿವೆ. ಕೆಲವು ಕಡೆ ಎಲೆಗಳಲ್ಲಿ ಹರಿತ್ತು ನಶಿಸಿ ಕಡ್ಡಿಗಳು ಮಾತ್ರ ಕಾಣಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ ಬಿಸಿಲಿನ ಶಾಖವಾದರೂ ಈ ಅತಿಯಾದ ಶಾಖಕ್ಕೆ ಉಲ್ಬಣಿಸುವ ತಿಗಣೆಯೂ ಒಂದು ಕಾರಣ. ಅಡಿಕೆ ಮರ, ತೆಂಗಿನ ಮರ ಹಾಗೆಯೇ ತಾಳೆ ಜಾತಿಯ ಎಲ್ಲಾ ಸಸ್ಯಗಳಿಗೂ ಎಲೆಗಳಿಗೆ ಒಂದು ರೀತಿಯ ತಿಗಣೆ ಬಾಧಿಸಿ ಹರಿತ್ತು ನಾಶಕ್ಕೆ ಕಾರಣವಾಗುತ್ತದೆ.    

ಅಡಿಕೆ ಮರಗಳಲ್ಲಿ, ಸಸಿಗಳಲ್ಲಿಎಲೆ ಸಂಖ್ಯೆ ಕಡಿಮೆಯಾಗಿರುವುದೇ ಆದರೆ, ಎಲೆಗಳು ಬೆಂಕಿ ಕೊಟ್ಟ ತರಹ ಒಣಗಿ ಹೋಗಿದ್ದರೆ, ಕೆಲವು ಸಸಿಗಳು ಸುಳಿ ತನಕ ಎಲೆಗಳೆಲ್ಲಾ ಒಣಗಿ ಹೋಗಿ ಇನ್ನೇನು ಸಸಿಗಳು ಸಾಯುವ ಹಂತಕ್ಕೆ ತಲುಪಿದ್ದರೆ ಆ ಸಸಿಯಲ್ಲಿ ಮೈಟ್ ಗಳು ಇರುವ ಸಾಧ್ಯತೆ ಹೆಚ್ಚು. ಅಡಿಕೆ ಮರಗಳ, ಸಸಿಗಳ ಎಲೆಗಳಿಗೆ ಬಿಳಿ ಮತ್ತು ಕೆಂಪು ತಿಗಣೆಗಳ ಉಪಟಳ ಇದ್ದು ‘Red and White Mites’ (Raoiella indica and Oligonychus indicus) ಈ ತಿಗಣೆಗಳು (ಚಿತ್ರ ೧) ಎಲೆಯ ಹರಿತ್ತನ್ನು ನಾಶ ಮಾಡಿ ಎಲೆಗಳ ಸಂಖ್ಯೆ ಕಡಿಮೆಯಾಗುವಂತೆ  ಮಾಡುತ್ತವೆ.  ಇದನ್ನು phytophagous mites,  ಹುಸಿ ಜೇಡರ ಮೈಟ್ (ಚಿತ್ರ ೨) ಎಂದೂ ಹೇಳುತ್ತಾರೆ. ಇವು ತೀರಾ ಸಣ್ಣದಾಗಿದ್ದು, ಬರಿ ಕಣ್ಣಿಗೆ ಕಾಣಿಸುವುದಿಲ್ಲ. 245 microns (0.01 inches) long and 182 microns (0.007 inches) wide ಮಸೂರದ ಮೂಲಕ ನೋಡಿದಾಗ ಮಾತ್ರ ಕಾಣುತ್ತದೆ. ತೀರಾ ಕಡಿಮೆ ಅವಧಿಯಲ್ಲಿ ಸಂಖ್ಯಾಭಿವೃದ್ದಿಯಾಗುತ್ತವೆ. ಅಡಿಕೆಯ ಜೊತೆಗೆ ತೆಂಗು ಬಾಳೆಗಳಿಗೂ ಇದು ತೊಂದರೆ ಮಾಡುತ್ತದೆ. ಎಲೆಗಳ ಸಂಖೆ ಕಡಿಮೆಯಾದರೆ ಸಸ್ಯದ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಸಸ್ಯ ಬೆಳವಣಿಗೆ ಕುಂಠಿತವಾಗುತ್ತದೆ.  ಬೇಸಿಗೆಯಲ್ಲಿ ತಾಪಮಾನ ೩೪ ಡಿಗ್ರಿಗಿಂತ  ಹೆಚ್ಚಾದಾಗ ಈ ಮೈಟ್‌ಗಳು ಹೆಚ್ಚು ಕ್ರಿಯಾತ್ಮಕವಾಗುತ್ತದೆ. ಹೆಚ್ಚು ಉಪಟಳ ಕೊಡುತ್ತವೆ. ಮಳೆ ಬಂದ ತಕ್ಷಣ ಇವು ಕಡಿಮೆಯಾಗುತ್ತವೆ. ಒಮ್ಮೆ ಈ ಮೈಟ್ ಹಾವಳಿ ಪ್ರಾರಂಭವಾದರೆ ಪ್ರತೀ ವರ್ಷ ಬರುವ ಸಾಧ್ಯತೆ ಇರುತ್ತದೆ.

ಇವು ಎಲೆಯ ಅಡಿ ಭಾಗದಲ್ಲಿ ಅದರಲ್ಲೂ ಎಲೆಯ ತುದಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಸವಾಗಿರುತ್ತವೆ. ಅಲ್ಲಿಂದ ಹಾನಿ ಪ್ರಾರಂಭಿಸಿ ಮುಂದುವರಿಯುತ್ತಾ ಇಡೀ ಎಲೆಗೆ ವ್ಯಾಪಿಸುತ್ತವೆ. ಸುಳಿ ಭಾಗದ ಎಳೆ ಎಲೆಗೆ ಜಾಸ್ತಿ ತೊಂದರೆ ಉಂಟುಮಾಡುತ್ತವೆ. 

ಇದರ ನಿಯಂತ್ರಣಕ್ಕೆ  ಅಗತ್ಯವಾಗಿ ಕ್ರಮ ಕೈಗೊಳಲೇ ಬೇಕು. ಇದು ಮಳೆಗಾಲ ಬರುವ ತನಕ ಮುಂದುವರೆಯುವ ಕಾರಣ ಇನ್ನೂ  ಇನ್ನೂ ಬೇಸಿಗೆಯ ಬೇಗೆ ಹೆಚ್ಚಳವಾಗುವ ಕಾರಣ ಇದರ ಸಂಖ್ಯಾಭಿವೃದ್ದಿಯಾಗುತ್ತಾ, ಬಾಧಿಸದ ಸಸ್ಯಗಳಿಗೂ ಹರಡುವ ಸಾಧ್ಯತೆ ಇದೆ. ಇದನ್ನು ಸಾಬೂನು ದ್ರಾವಣದಲ್ಲಿ ಅಥವಾ ಗಂಧಕದ ದ್ರಾವಣದಲ್ಲಿ ತೊಳೆದು ನಾಶ ಮಾಡಬಹುದು. (ವೆಟ್ಟೆಬಲ್ ಸಲ್ಫರ್ ಅನ್ನು ಮಳೆಗಾಲ ಮುಗಿಯುವ ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಎಲೆಗಳಿಗೆ ಸಿಂಪರಣೆ ಮಾಡಿದರೆ ಮೈಟ್ ಸಮಸ್ಯೆ ಕಡಿಮೆಯಾಗುತ್ತದೆ) ಇದು ಸಣ್ಣ ಗಿಡಗಳಿಗೆ ಮಾತ್ರ ಸಾಧ್ಯವಾಗುತ್ತದೆ. ಇದಕ್ಕೆ  ಡೈಮಿಥೋಯೇಟ್ ಕೀಟನಾಶಕ (ರೋಗರ್) ಶಿಫಾರಸು ಮಾಡಲಾಗುತ್ತದೆ. ಈಗ ಮಾರುಕಟ್ಟೆಯಲ್ಲಿ ಇದಕ್ಕಿಂತ ಉತ್ತಮ ಮೈಟ್ ನಿಯಂತ್ರಕ ಬಂದಿದ್ದು ಅದನ್ನೂ ಬಳಕೆ ಮಾಡಬಹುದು. ಸಿಂಪರಣೆ ಮಾಡುವಾಗ ಎಲೆಯ ಅಡಿ ಭಾಗಕ್ಕೆ  ಬೀಳುವಂತೆ ಸಿಂಪರಣೆ ಮಾಡಬೇಕು. ಎಣ್ಣೆ ಅಂಶ ಎಲೆಯ ಭಾಗದಲ್ಲಿ ಅಂಟಿಕೊಂಡಿದ್ದರೆ ಈ ಕೀಟದ ಹಾವಳಿ ಕಡಿಮೆಯಾಗುತ್ತದೆ. ಆದ ಕಾರಣ ಬೇವಿನ ಎಣ್ಣೆಯನ್ನೂ ಸಿಂಪರಣೆ ಮಾಡಬಹುದು. ಇದರ ನಿಯಂತ್ರಣಕ್ಕೆ ಒಂದು ಪರಾವಲಂಬಿ ಜೀವಿ ಕೀಟ ಇದೆ. ಇದನ್ನು Amblyseius ಎನ್ನುತ್ತಾರೆ. ಸಿಂಜೆಂಟಾ ಕಂಪೆನಿಯವರು ಈ ಪರಭಕ್ಷಕಗಳನ್ನು (Biloline) ಒದಗಿಸುತ್ತಾರೆ. ಇದಲ್ಲದೆ lady beetle Stethorus tetranychus , Stethorus parcempunctatusi ಈ ಕೀಟವೂ (ಚಿತ್ರ ೩) ಸಹ ಇದನ್ನು  ಭಕ್ಷಿಸುತ್ತದೆ.

ಅಡಿಕೆ ಸಸ್ಯಗಳಿಗೆ ಗಂಧಕ ಯುಕ್ತ ಗೊಬ್ಬರಗಳನ್ನು  ಕೊಡುವುದರಿಂದ ಈ ಮೈಟ್ ಹಾವಳಿಯನ್ನು  ಸ್ವಲ್ಪ ಮಟ್ಟಿಗೆ  ಕಡಿಮೆ ಮಾಡಬಹುದು. ಎಲ್ಲದಕ್ಕೂ  ರಾಸಾಯನಿಕ ಕೀಟನಾಶಕ ಸಿಂಪರಣೆ ಅಂತಿಮ ಅಲ್ಲ. ಇದರಿಂದ ಅದನ್ನು ಭಕ್ಷಿಸುವ ಪರಾವಲಂಬಿ ಜೀವಿಗಳು ಕಡಿಮೆಯಾಗುತ್ತವೆ. ಸಾಧ್ಯವಾದಷ್ಟು ನೈರುತ್ಯ ದಿಕ್ಕಿನ ಬಿಸಿಲನ್ನು ತಡೆಯುವಂತ ಸ್ಥಳದಲ್ಲಿ ಅಡಿಕೆ ಸಸಿ ಬೆಳೆಸುವುದು ಸೂಕ್ತ.

ಮಾಹಿತಿ: ರಾಧಾಕೃಷ್ಣ ಹೊಳ್ಳ