ಬಿಸಿಲ ತಾಪ ನೀಗಿಸಲು ಕಲ್ಲಂಗಡಿ ಹಣ್ಣು

ಬಿಸಿಲ ತಾಪ ನೀಗಿಸಲು ಕಲ್ಲಂಗಡಿ ಹಣ್ಣು

ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪ ಹೆಚ್ಚುತ್ತಲೇ ಇದೆ. ಜಾಗತಿಕ ತಾಪಮಾನ ಹೆಚ್ಚುವಿಕೆಗೆ ಕಾರಣ ಯಾರು? ನಾವೇ. ಇದ್ದ ಮರಗಳನ್ನು ಕಡಿದು ಕಾಡು ಬರಿದಾಗಿಸಿ, ಕಾಂಕ್ರೀಟ್ ಕಾಡುಗಳನ್ನು ಮಾಡಿದರೆ ತಾಪಮಾನ ಹೆಚ್ಚಾಗದೇ ಇನ್ನೇನಾದೀತು? ಬೇಸಿಗೆಯಲ್ಲೂ ತಂಪಾಗಿರುತ್ತಿದ್ದ ಉದ್ಯಾನ ನಗರಿ ಬೆಂಗಳೂರು ಈಗ ಬಿಸಿಯಾಗುತ್ತಿದೆ. ಕರ್ನಾಟಕದ ಕಾಶ್ಮೀರ ಎಂದೇ ಹೆಸರಾಗಿದ್ದ ಮಡಿಕೇರಿಯ ಮನೆಗಳಲ್ಲಿ ಫ್ಯಾನ್, ಎಸಿ ಗಳು ಬಂದುಬಿಟ್ಟಿವೆ. ಚಳಿಗಾಲದ ಸಮಯ ಕಡಿಮೆಯಾಗಿ ಬೇಸಿಗೆ ಅಧಿಕವಾಗುತ್ತಿದೆ. ಪ್ರಾಕೃತಿಕ ವಿದ್ಯಮಾನಗಳನ್ನು ಹುಲು ಮಾನವರಾದ ನಾವು ತಡೆಯಲು ಸಾಧ್ಯವಿಲ್ಲ. ಪ್ರಕೃತಿಯನ್ನು ನಾವು ಹಾಳು ಮಾಡಿ ಆಗಿದೆ. ಇನ್ನು ಅದರ ಪರಿಣಾಮವನ್ನು ಅನುಭವಿಸಬೇಕು ಅಷ್ಟೇ.

ಬೇಸಿಗೆಯ ಸಮಯದಲ್ಲಿ ನಾವು ಯಥೇಚ್ಛವಾಗಿ ನೀರನ್ನು ಸೇವಿಸಬೇಕು. ಇದು ನಮ್ಮ ದೇಹದಲ್ಲಿ ಉಂಟಾಗುವ ನಿರ್ಜಲೀಕರಣದ ಸಮಸ್ಯೆಯನ್ನು ತಡೆಯುತ್ತದೆ. ಇದರ ಜೊತೆಗೆ ನೀರಿನ ಅಂಶ ಅಧಿಕವಾಗಿರುವ ಹಣ್ಣು ತರಕಾರಿಗಳನ್ನು ಆಹಾರದಲ್ಲಿ ಬಳಸಬೇಕು. ಸೌತೇಕಾಯಿ, ಕಲ್ಲಂಗಡಿ ಹಣ್ಣು, ದಾಳಿಂಬೆ, ಕರಬೂಜ ಇವೆಲ್ಲಾ ಬೇಸಿಗೆ ತಾಪ ನಿವಾರಿಸಲು ಸಹಕಾರಿ. ಈ ಹಣ್ಣುಗಳಲ್ಲಿ ಕಲ್ಲಂಗಡಿ ಬಹಳ ಅಧಿಕ ಪ್ರಮಾಣದ ನೀರನ್ನು ಹೊಂದಿರುವ ಹಣ್ಣು. ಈ ಹಣ್ಣನ್ನು ತಿನ್ನುವುದರಿಂದ ನಮ್ಮ ದೇಹದ ತಾಪಮಾನ ನಿಯಂತ್ರಣದಲ್ಲಿರುವುದಲ್ಲದೇ ಮಧುಮೇಹವನ್ನು ನಿಯಂತ್ರಿಸಲೂ ಸಹಕಾರಿಯಾಗುತ್ತದೆ. ಹೃದಯ, ಅಸ್ತಮಾ ಮುಂತಾದ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡುತ್ತದೆ. 

ಕಲ್ಲಂಗಡಿ ಹಣ್ಣಿನಲ್ಲಿ ಅಲ್ಪ ಪ್ರಮಾಣದಲ್ಲಿ ಕ್ಯಾಲೊರಿಗಳು, ವಿಟಮಿನ್ ಸಿ ಮತ್ತು ವಿಟಮಿನ್ ಎ ಇದ್ದು ಅದು ನಿಮ್ಮ ಆರೋಗ್ಯವನ್ನು ರಕ್ಷಿಸುತ್ತದೆ. ಕಲ್ಲಂಗಡಿಯ ಹಣ್ಣಿನ ಶೇಕಡಾ ೯೦ ಭಾಗ ನೀರಿನಂಶವನ್ನು ಹೊಂದಿದೆ. ಇದು ಹಸಿವನ್ನು ನಿವಾರಿಸಲೂ ಸಹಕಾರಿ. ಕಲ್ಲಂಗಡಿ ಹಣ್ಣಿನ ಸಿಪ್ಪೆ ಹಾಗೂ ಬೀಜವೂ ಆರೋಗ್ಯದಾಯಕ. ಬೇಸಿಗೆ ಸಮಯದಲ್ಲಿ ಈ ಹಣ್ಣು ಪ್ರಕೃತಿಯು ನಮಗೆ ನೀಡಿದ ವರದಾನವೇ ಸರಿ.

ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶವು ಸಾಕಷ್ಟು ಪ್ರಮಾಣದಲ್ಲಿರುವುದರಿಂದ ನಮಗೆ ಇದರ ಸೇವನೆಯಿಂದ ದಾಹವಾಗುವುದಿಲ್ಲ. ಇದರ ಸೇವನೆ ದೇಹಕ್ಕೆ ಶಕ್ತಿ ಮತ್ತು ಮನಸ್ಸಿಗೆ ಉಲ್ಲಾಸ ನೀಡುತ್ತದೆ. ದೇಹಕ್ಕೆ ಬೇಕಾದ ಖನಿಜಾಂಶಗಳು ಮತ್ತು ವಿಟಮಿನ್ ಗಳು ಸಿಗುತ್ತದೆ. ಇದರ ಸೇವನೆ ನಿರ್ಜಲೀಕರಣದಿಂದ ನಿಮ್ಮ ದೇಹದಲ್ಲಿ ಉಂಟಾಗುವ ಅಸಹಜತೆ, ಬಾಯಿಯ ಶುಷ್ಕತೆ, ರಕ್ತನಾಳದ ತೊಂದರೆಗಳು ನಿವಾರಣೆಯಾಗುತ್ತದೆ. ಕಲ್ಲಂಗಡಿ ಸೇವನೆ ದೇಹವನ್ನು ತಂಪಾಗಿಸುತ್ತದೆ. ಪ್ರತೀ ದಿನ ನಾಲ್ಕೈದು ಹೋಳು ಕಲ್ಲಂಗಡಿಯನ್ನು ಸೇವಿಸುವುದು ಬಹಳ ಉತ್ತಮ.

ಕಲ್ಲಂಗಡಿಯಲ್ಲಿರುವ ಪೊಟ್ಯಾಷಿಯಂ ಮತ್ತು ಮೆಗ್ನೀಶಿಯಂ ಪ್ರಮಾಣವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಲ್ಲಂಗಡಿಯಲ್ಲಿ ಕ್ಯಾಲೋರಿಗಳ ಪ್ರಮಾಣ ಕಡಿಮೆ ಇದ್ದರೂ ಮಿಟಮಿನ್ ಅಂಶ ಅಧಿಕ ಪ್ರಮಾಣದಲ್ಲಿವೆ. ವಿಟಮಿನ್ ಎ, ಸಿ, ಪೊಟ್ಯಾಶಿಯಂ, ಮೆಗ್ನೀಷಿಯಂ ಜೊತೆಗೆ ವಿಟಮಿನ್ ಬಿ೧, ಬಿ೫ ಮತ್ತು ಬಿ೬ ಅಂಶಗಳು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಕಲ್ಲಂಗಡಿಯಲ್ಲಿರುವ ಫೈಬರ್ ಅಂಶ ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ. ಕಲ್ಲಂಗಡಿ ಸೇವನೆಯು ರಕ್ತನಾಳದಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಿಸುತ್ತದೆ. 

ಕ್ಯಾನ್ಸರ್ ವಿರುದ್ಧ ಹೋರಾಡಲು ಕಲ್ಲಂಗಡಿ ಸಹಕಾರಿ. ಕಲ್ಲಂಗಡಿ ಹಣ್ಣಿನಲ್ಲಿ ಕಂಡು ಬರುವ ನೈಸರ್ಗಿಕವಾದ ಲೈಪೊಪಿನ್ ಅಂಶವು ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ದೇಹದಲ್ಲಿನ ಇನ್ಸುಲಿನ್ ಪ್ರಮಾಣವನ್ನು ತಗ್ಗಿಸಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಬೇಸಿಗೆ ಸಮಯದಲ್ಲಿ ಹಗಲಿನ ಸಮಯದಲ್ಲಿ ಕಲ್ಲಂಗಡಿ ಸೇವನೆ ಉತ್ತಮ. ರಾತ್ರಿಯ ಸಮಯದಲ್ಲಿ ಕಲ್ಲಂಗಡಿ ಹಣ್ಣನ್ನು ಕಡಿಮೆ ತಿನ್ನಿ. 

ಟೊಮೆಟೋ ಮತ್ತು ಕಲ್ಲಂಗಡಿ ಹಣ್ಣಿಗೆ ಕೆಂಪು ಬಣ್ಣ ನೀಡುವ ಅಂಶ ಯಾವುದು ಗೊತ್ತೇ? ಅದು ಲೈಕೋಪೀನ್ ಎನ್ನುವ ಅಂಶ. ಬೇಸಿಗೆ ಸಮಯದಲ್ಲಿ ಯಥೇಚ್ಛವಾಗಿ ಮಾರುಕಟ್ಟೆಯಲ್ಲಿ ಸಿಗುವ ಕಲ್ಲಂಗಡಿ ಹಣ್ಣನ್ನು ಧಾರಾಳವಾಗಿ ತಿನ್ನಿ, ಆರೋಗ್ಯವನ್ನು ಕಾಪಾಡಿ.

(ಆಧಾರ)

ಚಿತ್ರ ಕೃಪೆ: ಇಂಟರ್ನೆಟ್ ತಾಣ