ಬಿಸಿಹವೆ ಜೀವಕ್ಕೇ ಕುತ್ತು - ಭಾರತ ಸನ್ನದ್ಧವೇ?

ಬಿಸಿಹವೆ ಜೀವಕ್ಕೇ ಕುತ್ತು - ಭಾರತ ಸನ್ನದ್ಧವೇ?

ಇದೇ ಎಪ್ರಿಲ್ ತಿಂಗಳಲ್ಲಿ ಮಹಾರಾಷ್ಟ್ರದ ನವಿಮುಂಬೈಯಲ್ಲಿ ಸರಕಾರ ಆಯೋಜಿಸಿದ ಒಂದು ಬೃಹತ್ ಕಾರ್ಯಕ್ರಮದಲ್ಲಿ 12 ಜನರು ಬಿಸಿಲಿನ ಬೇಗೆಯಿಂದಾಗಿ ಸಾವನ್ನಪ್ಪಿದರು ಮತ್ತು ಹಲವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಯಿತು.

ಗುಜರಾತಿನ ಅಹ್ಮದಾಬಾದಿನಲ್ಲಿ ಉಷ್ಣತೆ 40 ಡಿಗ್ರಿ ಸೆಲ್ಸಿಯಸ್ ದಾಟಿದೆ; ಇದರಿಂದಾಗಿ ರಸ್ತೆಗಳಿಗೆ ಹಾಕಿದ ತಾರು (ಡಾಮಾರು) ಕರಗಿ ವಾಹನಗಳ ಟಯರುಗಳಿಗೆ ಮೆತ್ತಿಕೊಳ್ಳುತ್ತಿದೆ ಎಂಬ ವರದಿಗಳು ಬಂದಿವೆ.

ಜೀವಕ್ಕೇ ಕುತ್ತಾಗುವ ಬಿಸಿಹವೆ  ಭಾರತದಲ್ಲಿ ರುದ್ರನರ್ತನ ಮಾಡುತ್ತಿದೆ. ಕರಾವಳಿಯ ನಗರಪಟ್ಟಣಗಳಲ್ಲಿ ಸಮುದ್ರದ ಮೇಲಿನಿಂದ ಗಾಳಿ ಬೀಸುತ್ತಿರುತ್ತದೆ. ಆದರೆ ಕಳೆದ ಮೂರ್ನಾಲ್ಕು ವರುಷಗಳಿಂದ ಆ ಗಾಳಿಯೂ ಬಿಸಿಬಿಸಿಯಾಗಿದೆ. 2050ರ ಹೊತ್ತಿಗೆ ಭಾರತದಲ್ಲಿ ಬಿಸಿ ಹವೆ ಎರಡರಿಂದ ನಾಲ್ಕು ಪಟ್ಟು ಹೆಚ್ಚಲಿದೆ ಎಂದು ಪರಿಣತರು ಎಚ್ಚರಿಸಿದ್ದಾರೆ. ಜೊತೆಗೆ, ಬಿಸಿಹವೆ ಪ್ರತಿ ವರುಷವೂ ಬೇಗನೇ ಶುರುವಾಗಿ, ಹೆಚ್ಚೆಚ್ಚು ಅವಧಿ ಉಳಿಯಲಿದೆ.

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಹೀಗಿದೆ: 2023ರ ಮೇ ತಿಂಗಳ ಕೊನೆಯ ವರೆಗೆ ಭಾರತದ ಉದ್ದಗಲದಲ್ಲಿ ಉಷ್ಣತೆ ಸರಾಸರಿಗಿಂತ ಹೆಚ್ಚಾಗಿರುತ್ತದೆ ಮತ್ತು ಬಿಸಿಹವೆ ಮುಂದುವರಿಯಲಿದೆ. 1901ರಿಂದ 2018 ಅವಧಿಯಲ್ಲಿ ಭಾರತದ ಸರಾಸರಿ ಉಷ್ಣತೆ 0.9 ಡಿಗ್ರಿ ಸೆಲ್ಸಿಯಸ್ ಜಾಸ್ತಿಯಾಗಿದೆ. ಇದಕ್ಕೆ ಒಂದು ಕಾರಣ ಹವಾಮಾನ ಬದಲಾವಣೆ.

ವಿಪರೀತ ಉಷ್ಣತೆಯಿಂದಾಗಿ ಮನುಷ್ಯನ ಶರೀರದಲ್ಲಿ ಏನೇನು ಬದಲಾವಣೆಗಳು ಆಗುತ್ತವೆ?
1)ಸಾಕಷ್ಟು ನೀರು ಕುಡಿಯದ ಕಾರಣ ತಲೆ ಸುತ್ತುತ್ತದೆ.
2)ಹೃದಯ ಬಡಿತ ಹೆಚ್ಚುತ್ತದೆ ಯಾಕೆಂದರೆ ಶರೀರವನ್ನು ತಂಪಾಗಿಸಲು ಎಲ್ಲ ದೈಹಿಕ ವ್ಯವಸ್ಥೆಗಳೂ ಶ್ರಮಿಸುತ್ತವೆ.
3)ಚರ್ಮದ ಮೂಲಕ ಉಷ್ಣತೆಯನ್ನು ಶರೀರ ಹೊರಹಾಕುವ ಕಾರಣ ಚರ್ಮದಲ್ಲಿ ಬೊಕ್ಕೆಗಳು ಮೂಡುತ್ತವೆ.
4)ಚರ್ಮದಿಂದ ಬೆವರು ಹೊರ ಹರಿಯುತ್ತದೆ. ಬೆವರು ಉಷ್ಣತೆಯನ್ನು ಹೊರ ಹಾಕಿ ಚರ್ಮವನ್ನು ತಂಪಾಗಿಸುತ್ತದೆ.
5)ಜಾಸ್ತಿ ರಕ್ತದ ಹರಿವಿನಿಂದಾಗಿ ಕಾಲಿನ ಮಣಿಗಂಟುಗಳು ಬಾತುಹೋಗಬಹುದು.

ಇವೆಲ್ಲದರ ತಿಳಿವಳಿಕೆ ಇಲ್ಲದಿದ್ದರೆ, ಬಿಸಿಹವೆಯಿಂದ ರಕ್ಷಿಸಿಕೊಳ್ಳಲಿಕ್ಕಾಗಿ ಜನರು ಮುಂಜಾಗ್ರತೆ ವಹಿಸುವುದಿಲ್ಲ. ಇದರಿಂದಾಗಿ ಬಿಸಿಹವೆಯಿಂದಾಗಿ ಸಾಯುವವರ ಸಂಖ್ಯೆ ಹೆಚ್ಚುತ್ತದೆ. ಅತ್ಯಧಿಕ ಉಷ್ಣತೆಯಿರುವ ಭಾರತದ ಮಹಾನಗರಗಳಲ್ಲೊಂದು ಅಹ್ಮದಾಬಾದ್. ಅಲ್ಲಿ ಮೇ 2010ರಲ್ಲಿ “ಎಲ್ಲ ಕಾರಣಗಳಿಂದಾಗಿ ಆದ ಅಧಿಕ ಸಾವು” 800 ಎಂಬುದನ್ನು ಪ್ರೊ. ದಿಲೀಪ್ ಮವ್‌ಲಾನ್‌ಕರ್ ಗಮನಿಸಿದರು. ಅವರು, ಗುಜರಾತಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‌ ಸಂಸ್ಥೆಯ ನಿರ್ದೇಶಕರು. ದಾಖಲೆ ನಿರ್ಮಿಸುವ ಭಯಂಕರ ಉಷ್ಣತೆಯ ಒಂದು ವಾರದಲ್ಲಿ, ಹಿಂದಿನ ಕೆಲವು ವರುಷಗಳ ಅದೇ ಅವಧಿಯಲ್ಲಿ ಸಂಭವಿಸಿದ ಸಾವುಗಳಿಗೆ ಹೋಲಿಸಿದಾಗ, ಎಷ್ಟು ಹೆಚ್ಚು ಸಾವುಗಳು ಸಂಭವಿಸಿದವು ಎಂಬುದನ್ನು “ಎಲ್ಲ ಕಾರಣಗಳಿಂದಾಗಿ ಆದ ಅಧಿಕ ಸಾವು" ಸೂಚಿಸುತ್ತದೆ. ಈ ಅಧ್ಯಯನದಿಂದ ಅಧಿಕ ಉಷ್ಣತೆಯು ಹೆಚ್ಚೆಚ್ಚು ಜನರ ಸಾವಿಗೆ ಕಾರಣವಾಗುತ್ತಿದೆ ಎಂಬುದು ಸ್ಪಷ್ಟವಾಗಿ ಕಂಡು ಬಂದಿತು. ಅದಾದ ನಂತರ, ಅಹ್ಮದಾಬಾದ್ ನಗರಕ್ಕಾಗಿ “ಹವಾಮಾನ ಉಷ್ಣತೆಯ ಬಣ್ಣದ ಮುನ್ನೆಚ್ಚರಿಕೆ”ಗೆ ಪ್ರಚಾರ ನೀಡಲಾಯಿತು. ಅಂದರೆ, ಉಷ್ಣತೆ 45 ಡಿಗ್ರಿ ಸೆಲ್ಸಿಯಸ್ ದಾಟಿದಾಗ “ಕೆಂಪು ಮುನ್ನೆಚ್ಚರಿಕೆ” (ರೆಡ್ ಅಲರ್ಟ್) ಘೋಷಿಸಲಾಗುತ್ತದೆ.

ಅನಂತರ ಸರಕಾರದ ಇಲಾಖೆಗಳು ಮತ್ತು ಜನಪರ ಸಂಸ್ಥೆಗಳ ಸಹಕಾರದಿಂದ ಅಹ್ಮದಾಬಾದಿಗೆ “ಹವಾಮಾನ ಉಷ್ಣತೆ ಕಾರ್ಯಯೋಜನೆ” ರೂಪಿಸಿ, 2013ರಲ್ಲಿ ಜ್ಯಾರಿಗೆ ತರಲಾಯಿತು. ಈ ಯೋಜನೆಯ ಅನುಸಾರ, ಬಿಸಿಹವೆಯ ಸಂದರ್ಭದಲ್ಲಿ ಜೀವ ಉಳಿಸಿಕೊಳ್ಳಲಿಕ್ಕಾಗಿ ಅನುಸರಿಸಬೇಕಾದ ಸರಳ ಕ್ರಮಗಳ ಬಗ್ಗೆ ಪ್ರಚಾರ ನೀಡಲಾಯಿತು:
-ಬಿಸಿ ಹವೆ ಇದ್ದಾಗ, ಮನೆಯೊಳಗೇ ಇರುವುದು.
-ಮನೆಯಿಂದ ಹೊರಗೆ ಕಾಲಿಡುವ ಮುಂಚೆ ನಾಲ್ಕೈದು ಲೋಟವಾದರೂ ನೀರು ಕುಡಿಯುವುದು.
-ದೇಹದಲ್ಲಿ ಅನಾರೋಗ್ಯದ ಕಿಂಚಿತ್ ಸೂಚನೆ ಕಂಡರೂ ಹತ್ತಿರದ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡಿಗೆ ಹೋಗಿ ಪರೀಕ್ಷಿಸಿಕೊಳ್ಳುವುದು.

ಇಂತಹ ಸರಳ ಕ್ರಮಗಳನ್ನು ಪಾಲಿಸಿದ ಕಾರಣ 2018ರ ಹೊತ್ತಿಗೆ ಅಹ್ಮದಾಬಾದಿನಲ್ಲಿ “ಬಿಸಿಹವೆಯಿಂದಾಗುವ ಸಾವುಗಳ ಹೆಚ್ಚಳ"ವು ಶೇಕಡಾ. 33ರಷ್ಟು ಕಡಿಮೆಯಾಯಿತು. ಉಳಿದ ನಗರಗಳ ಪರಿಸ್ಥಿತಿ ಹೇಗಿದೆ? ಭಾರತದ ನಗರ, ಜಿಲ್ಲೆ ಮತ್ತು ರಾಜ್ಯ ಮಟ್ಟದ 37 “ಬಿಸಿಹವೆ ಕಾರ್ಯಯೋಜನೆ”ಗಳನ್ನು “ಸೆಂಟರ್ ಫಾರ್ ಪಾಲಿಸಿ ರೀಸರ್ಚ್” ಎಂಬ “ಚಿಂತಕರ ಚಾವಡಿ” ಅಧ್ಯಯನ ಮಾಡಿದೆ. ಅದರ ವರದಿಯ ಅನುಸಾರ, ಈ ಕಾರ್ಯಯೋಜನೆಗಳಲ್ಲಿ ಹಲವಾರು ದೋಷಗಳಿವೆ. ಎಲ್ಲದಕ್ಕಿಂತ ಮುಖ್ಯವಾಗಿ ಅವು ಪಾರದರ್ಶಕವಾಗಿಲ್ಲ ಮತ್ತು ಅವುಗಳ ಪರಿಣಾಮಕಾರಿ ಜ್ಯಾರಿಯ ಬಗ್ಗೆ ಯಾರಿಗೂ ಜವಾಬ್ದಾರಿ ಇಲ್ಲ!

ಈ ನಿಟ್ಟಿನಲ್ಲಿ ನಾವು ಗಮನಿಸಲೇ ಬೇಕಾದ ಕೆಲವು ಸಂಗತಿಗಳು:
#ಭಾರತದಲ್ಲಿ, ಕಟ್ಟಡ ಮತ್ತು ರಸ್ತೆಗಳ ನಿರ್ಮಾಣದಲ್ಲಿ, ಗಣಿಗಳಲ್ಲಿ, ತೆರೆದ ಬಯಲಿನಲ್ಲಿ ಬಿರುಬೇಸಗೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಪಾಡು ಏನು? ಬೆಂಕಿಬಿಸಿಲಿನಲ್ಲಿ ಕೆಲಸ ಮಾಡುವುದಿಲ್ಲ ಎಂದರೆ ಅವರಿಗೆ ಆದಾಯವೇ ಇರುವುದಿಲ್ಲ.
#ಹಾಗೆಯೇ, ಜನಸಾಮಾನ್ಯರಲ್ಲಿ ಎಷ್ಟು ಜನರಿಗೆ ಕೂಲರುಗಳನ್ನು ಖರೀದಿಸಿ, ಬಳಸಿ ಪ್ರಚಂಡ ಉಷ್ಣತೆಯ ದುಷ್ಪರಿಣಾಮಗಳಿಂದ ಬಚಾವಾಗಲು ಸಾಧ್ಯವಿದೆ?
#ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ನಮ್ಮಲ್ಲಿ ಎಷ್ಟು ಜನರಿಗೆ ಅರಿವಿದೆ? ಉದಾಹರಣೆಗೆ, ಬಿಸಿಲು ಮತ್ತು ಉಷ್ಣತೆ ಏರುತ್ತಿದ್ದಂತೆ, ಆಸ್ಪತ್ರೆಗಳ ಅತ್ಯಂತ ಮೇಲಿನ ಮಹಡಿಯ ರೋಗಿಗಳನ್ನು ಕೆಳಮಹಡಿಗಳಿಗೆ ಸ್ಥಳಾಂತರಿಸಿದರೆ, ಬಿಸಿಹವೆಯ ಹೊಡೆತದಿಂದ ಹಲವಾರು ಜನರನ್ನು ಉಳಿಸಬಹುದು.

"ಇದಕ್ಕಿಂತ ಜಾಸ್ತಿ ಬಿಸಿಲು ನೋಡಿದ್ದೇನೆ; ಏನೂ ಆಗೋದಿಲ್ಲ ಬಿಡು” ಎಂಬ ಉಡಾಫೆ
-ಇದು  ಬಿಸಿಹವೆಗೆ ಬಹುಪಾಲು ಜನರ ಪ್ರತಿಕ್ರಿಯೆ! (ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದ ಅಹ್ಮದಾಬಾದಿನ ಸಾರ್ವಜನಿಕ ಕಾರ್ಯಕ್ರಮದ ಫೋಟೋಗಳನ್ನು ಗಮನಿಸಿದರೆ, ಅಲ್ಲಿ ಜಮಾಯಿಸಿದ್ದ ಸುಮಾರು ಒಂದು ಲಕ್ಷ ಜನರಲ್ಲಿ ಎಲ್ಲೋ ಕೆಲವರು ಬಿಸಿಲಿನ ಝಳದಿಂದ ರಕ್ಷಿಸಿಕೊಳ್ಳಲು ತಲೆಗೆ ಬಟ್ಟೆ ಹಾಕಿಕೊಂಡಿದ್ದರು ಅಥವಾ ಕೊಡೆ ಬಿಡಿಸಿ ಹಿಡಿದಿದ್ದರು.)

ಇಂಥವರಿಗೆ ಸರಕಾರದ ಅಧಿಕೃತ ಅಂಕೆಸಂಖ್ಯೆಗಳ ಅನುಸಾರ 1992ರಿಂದ 2015 ಅವಧಿಯಲ್ಲಿ ಬಿಸಿಹವೆಯು ಭಾರತದಲ್ಲಿ 22,000 ಜನರ ಸಾವಿಗೆ ಕಾರಣವಾಗಿದೆ ಎಂಬುದು ತಿಳಿದಿದೆಯೇ? (ಪರಿಣತರ ಅನುಸಾರ ಈ ಸಂಖ್ಯೆ ಇನ್ನೂ ಜಾಸ್ತಿ; ಯಾಕೆಂದರೆ, ಭಾರತದಲ್ಲಿ ಸಾವಿನ ಕಾರಣವನ್ನು ದಾಖಲಿಸುವ ವ್ಯವಸ್ಥೆಯಲ್ಲಿ ಬಹಳಷ್ಟು ಲೋಪದೋಷಗಳಿವೆ.)  

"ದ ಲಾನ್ಸೆಟ್” ಎಂಬ ಪ್ರಸಿದ್ಧ ವೈದ್ಯಕೀಯ ನಿಯತಕಾಲಿಕದಲ್ಲಿ ಪ್ರಕಟವಾದ ವರದಿಯ ಅನುಸಾರ, 2000 - 2004ರಿಂದ    2017 - 2021 ಅವಧಿಯಲ್ಲಿ ವಿಪರೀತ ಹವಾಮಾನ ಉಷ್ಣತೆಯಿಂದಾಗಿ ಭಾರತದಲ್ಲಿ ಆದ ಸಾವುಗಳ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳ ಶೇಕಡಾ 55. ಅದೇ ಕಾರಣದಿಂದಾಗಿ, ನಮ್ಮ ದೇಶವು 2021ರಲ್ಲಿ 167.2 ದಶಲಕ್ಷ ಕಾರ್ಮಿಕ ಗಂಟೆಗಳನ್ನು (ಅಂದರೆ ಕೆಲಸಕಾರ್ಯಗಳನ್ನು) ಕಳೆದು ಕೊಂಡಿತು ಎಂದು ಆ ವರದಿ ದಾಖಲಿಸಿದೆ.

ಇಷ್ಟೆಲ್ಲ ಆದರೂ, ತಮ್ಮ ಮನೆಯ ಕಂಪೌಂಡಿನಲ್ಲಿ ಐದಾರು ನೆರಳು ನೀಡುವ ಮರಗಳನ್ನು ಬೆಳೆಸಲು ನಮ್ಮಲ್ಲಿ ಎಷ್ಟು ಜನರು ತಯಾರಿದ್ದಾರೆ? ನೆನಪಿರಲಿ: ಬಿಸಿಹವೆಯಿಂದ ಪಾರಾಗಲು ಹೆಚ್ಚೆಚ್ಚು ಮರಗಳನ್ನು ಬೆಳೆಸುವುದು ಅತ್ಯಂತ ಪರಿಣಾಮಕಾರಿ ವಿಧಾನ. ನಮ್ಮ ಪೂರ್ವಿಕರು ಇದನ್ನು ಶ್ರದ್ಧೆಯಿಂದ ಪಾಲಿಸುತ್ತಿದ್ದರು; ಅದರ ಲಾಭವನ್ನು ನಮ್ಮ ತಲೆಮಾರಿನ ವರೆಗೆ ನಾವು ಪಡೆದಿದ್ದೇವೆ. ನಮ್ಮ ಮುಂದಿನ ತಲೆಮಾರಿನವರಿಗಾಗಿ ನಾವೂ ಅದೇ ಪರಿಣಾಮಕಾರಿ ವಿಧಾನವನ್ನು ಅನುಸರಿಸೋಣ.
ಫೋಟೋ: ಬಿಸಿಲಿನ ಝಳದಿಂದ ಮಹಿಳೆಯರು ರಕ್ಷಿಸಿಕೊಳ್ಳುವ ಪರಿ … ಕೃಪೆ: ಬಿಸಿನೆಸ್ ಸ್ಟಾಂಡರ್ಡ್