ಬಿ. ಎಂ. ಶ್ರೀ ಸಾಹಿತಿ ಮತ್ತು ಸಾಮಾಜಿಕ ಮುತ್ಸದ್ದಿ ... ! !
ಬಿ. ಎಂ. ಶ್ರೀ ಸಾಹಿತಿ ಮತ್ತು ಸಾಮಾಜಿಕ ಮುತ್ಸದ್ದಿ ... ! !
ಮೈಸೂರು ಅಸೋಸಿಯೇಷನ್ ಬಂಗಾರದ ದತ್ತೀ ಹಬ್ಬದ ಪ್ರಯುಕ್ತ ಯೋಗಿಸಲಾಗಿದ್ದ ದತ್ತಿ ಉಪನ್ಯಾಸ ಶನಿವಾರ ೬ ನೇ ಜನವರಿ ೨೦೦೭ರಂದು ಸಯಕಾಲ ೬-೩೦ ಕ್ಕೆ ಶುರುವಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಮತಿ ಶ್ಯಾಮಲ ಮತ್ತು ವೃಂದದವರಿಂದ ಬಿ. ಎಂ. ಶ್ರೀ ರವರು ಬರೆದ ಕವನಗಳ ವಾಚನವಾಯಿತು. ಮೊದಲು 'ಕರುಣಾಳು ಬಾ ಬೆಳಕೆ' ಪ್ರಾರಂಭವಾಗಿ 'ವಸಂತ ಬಂದ ಋತುಗಳ ರಾಜ' ದಿಂದ ಮುಕ್ತಾಯವಾಯಿತು. ಮೈಸೂರ್ ಅಸೊಸಿಯೇಷನ್ ಅಧ್ಯಕ್ಷರಾದ ಶ್ರೀ. ದೊರೈಸ್ವಾಮಿಯವರು ಮಾತನಾಡಿ, ದತ್ತಿ ಉಪನ್ಯಾಸಮಾಲೆಯ ೨೫ ನೇ ವರ್ಷದ ಜೊತೆಗೆ ೨೫ ವರ್ಷಗಳಿಂದ ನಡೆದುಕೊಂಡು ಬಂದ ಪತ್ರಿಕೆ, 'ನೇಸರು'ವಿನ ಪ್ರತಿಯನ್ನು ರಾಯರ ಅಮೃತಹಸ್ತದಿಂದ ಬಿಡುಗಡೆಮಾಡಲಾಯಿತು. ಮೊದಲನೆಯ ದಿನದ, ಪ್ರಾಸ್ತಾವಿಕ ಭಾಷಣವನ್ನು ಡಾ. ತಾಳ್ತಜೆ ವಸಂತ ಕುಮಾರ್ ಮಾಡಿದರು. ಎಲ್.ಎಸ್.ಶೇಷಗಿರಿರಾಯರ ಪರಿಚಯ ಹೀಗಿತ್ತು.
೭೫ ವರ್ಷವಯಸ್ಸಿನ ಶ್ರೀ ಎಲ್.ಎಸ್.ಶೇಷಗಿರಿರಾಯರು, ಆಂಗ್ಲ ಬಾಷೆಯನ್ನು ಸುಮಾರು ೪ ದಶಕಗಳಕಾಲ ಹೇಳಿಕೊಟ್ಟಿದ್ದಾರೆ. ಕನ್ನಡ ಪುಸ್ತಕ ಪ್ರಾಢಿಕಾರದ ಪ್ರಥಮ ಚೇರ್ಮನ್ನಾಗಿ ನೇಮಕಗೊಂಡಿದ್ದರು. ಇಂಗ್ಲೀಷಿನಲ್ಲಿ ಅವರ ಕೃತಿಗಳು : ಕನ್ನಡದಲ್ಲಿ ಕೆಲಸ :೧. ಸಾಹಿತ್ಯ- ಮನುಷ್ಯ, ೨. ಫ್ರಾನ್ಸ್ ಕಾವ್ಯ ೩. ವಿಲಿಯಮ್ ಶೇಕ್ಸ್ ಪಿಯರ್, ಸಾಹಿತ್ಯ ಬದುಕು ೪. ಸಾಹಿತ್ಯ ವಿಶ್ಲೇಷಣೆ, ೫. ಟಿ.ಪಿ. ಕೈಲಾಸಂ
ಅವರಿಗೆ(ಎಲ್.ಎಸ್.ಎಸ್.ರವರಿಗೆ) ಬಂದ ಬಿರುದು ಬಾವಲಿಗಳು :
೧. ರಾಜ್ಯೋತ್ಸವ ಅವಾರ್ಡ್, ೨. ಕನ್ನಡ ಸಾಹಿತ್ಯ ಅಕ್ಯಾಡಮಿ ಅವಾರ್ಡ್, ೩. , ಪರಿಷತ್ ವರ್ಧಮಾನ ಅವಾರ್ಡ್, ಡಾ. ಅ.ನ.ಕೃ ಅವಾರ್ಡ್, ಬಿ. ಎಮ್. ಇನಾಮ್ದಾರ್ ಅವಾರ್‍ಡ್, ಕಾವ್ಯಾನಂದ ಅವಾರ್ಡ್,ಅವರು ನ್ಯಾಷನಲ್ ಬುಕ್ ಟ್ರಸ್ಟ್, ಕೇಂದ್ರ ಸಾಹಿತ್ಯ ಅಕ್ಯಾಡಮಿ, ಭಾರತ ಭಾರತಿ ಪುಸ್ತಕ ಸಂಘ, ಮುಖ್ಯ ಸಂಪಾದಕರಾಗಿದ್ದರು. ಆಗ ಹೊರಗೆ ಬಂದ ೫೧೦ ವ್ಯಕ್ತಿ ಚಿತ್ರಗಳು ಅನನ್ಯ.ಶ್ರೀಯುತರು, ಹಿಂದು, ಡೆಕ್ಕನ್ ಹೆರಾಲ್ಡ್, ಟೈಮ್ಸ್ ಆಫ್ ಇಂಡಿಯ, ಆನಂದ ಬಝಾರ್ ಪತ್ರಿಕೆ, ಮತ್ತು ವೀಕ್ ಪತ್ರಿಕೆಗಳಲ್ಲಿ ಇಂದಿಗೂ ಬರೆಯುತ್ತಲೇ ಇರುತ್ತಾರೆ.
ಬಿ.ಎಂ.ಶ್ರಿ. ಯವರ ಬಗ್ಗೆ ಸಮರ್ಥವಾಗಿ ಎಲ್.ಎಸ್.ಎಸ್. ರವರು ಒಂದು ಗಂಟೆ ನಿರರ್ಗಳವಾಗಿಯೂ ಪಾಂಡಿತ್ಯ ಪೂರಕವಾಗಿಯೂ ಮಾತನಾಡಿದರು !
'ಬಿ. ಎಂ .ಶ್ರೀ. ಸಾಹಿತಿ ಮತ್ತು ಸಮಾಜಿಕ ಮುತ್ಸದ್ದಿ'. ( ೧೮೮೧- ೧೯೪೬ )
ಸುಮಾರು ೭ ದಶಕಗಳ ಹಿಂದೆ ಕನ್ನಡಕ್ಕೆ ಯಾವ ಸ್ಥಾನಮಾನಗಳೂ ಇರಲಿಲ್ಲ. ಅಂತಹ ಕಾಲದಲ್ಲಿ ಒಬ್ಬ ಇಂಗ್ಲೀಷ್ ಪ್ರಾಧ್ಯಾಪಕರು ಇದನ್ನು ತೀವ್ರವಾಗಿ ಮನಗಂಡು, ಕನ್ನಡದ ಏಳಿಗೆಗೆ ಅವಿಶ್ರಾಂತವಾಗಿ ದುಡಿದು ಸಹಸ್ರಾರು ಕನ್ನಡಿಗರ ಹೃದಯದಲ್ಲಿ ಮನೆಮಾಡಿದ ಸದ್ ಹೃದಯರು 'ಕನ್ನಡದ ಕಣ್ವ'ರೆಂದೇ ಕರೆಯಲ್ಪಟ್ಟ ಶ್ರಿ. ಬಿ. ಎಂ. ಶ್ರೀಕಂಠಯ್ಯನವರು ! ಕ್ಲೋಸ್ ಕಾಲರ್ ಕೋಟು, ಜರಿಪೇಟ, ನೋಡಲು ತುಂಬಾ ಸ್ಪುರದ್ರೂಪಿ, ರಾಜಗಾಂಭೀರ್ಯ, ಯಾವಾಗಲೂ ಹಸನ್ಮುಖ ; ನಡೆ ನುಡಿ ಎಲ್ಲದರಲ್ಲೂ ಅಚ್ಚುಕಟ್ಟು. ನೋಡಲು ಅವರು ತಿದ್ದಿದ ಗೌರಮ್ಮನಂತೆ ಕಾಣಿಸುತ್ತಿದ್ದರಂತೆ !. ಅವರ ಮಾತುಗಳನ್ನು ಕೇಳುವುದೇ ಸೊಗಸು ! ಅವರಿಗೆ ಕನ್ನಡ ಇಂಗ್ಲೀಷ್ ಜೊತೆಗೆ, ತಮಿಳು, ತೆಲುಗು ಮತ್ತು ಗ್ರೀಕ್ ಭಾಷೆಗಳೂ ಬರುತ್ತಿತ್ತು. ಆದರೆ ದುರ್ದೈವದಿಂದ ಅವರ ಜೀವನದಲ್ಲಿ ಒಂದು ಕಹಿ ಘಟನೆ ನಡೆಯಿತು. ಕಣ್ಣಿಗೆ ಹಾಕಬೇಕಾಗಿದ್ದ ಔಷಧಿಯ ಬದಲಿಗೆ ಬೇರೆ ಡ್ರಾಪ್ಸ್ ನಿಂದ ಆದ ಅಚಾತುರ್ಯದಿಂದ ಅವರ ಮಗನ ಕಣ್ಣೀನ ದೃಷ್ಟಿ ಹೊರಟುಹೋಯಿತು. ಇದು ಅವರ ಹೆಂಡತಿಯ ಕೈನಿಂದಲೇ ಆಗಿ, ಆ ಪಾಪಪ್ರಜ್ಞೆಯಿಂದ ಹೊರಗೆಬರಲಾಗದೆ ಈ ಎಲ್ಲಾ ಸಂಕಟಗಳನ್ನು ಸಹಿಸಲಾರದೆ ಹೆಂಡತಿ ಕಣ್ಣು ಮುಚ್ಚಿದರು. ಅದೇ ಸಮಯದಲ್ಲಿ ಮಗಳು ವಿಧವೆಯಾಗಿ ಮನೆಸೇರಿದಳು. ಈ ಆಘಾತಗಳು ಅವರ ೨೮ ನೆ ವರ್ಷದಲ್ಲೇ ಆಗಿಹೋದವು. ಆದರೂ ಅವರು ಧ್ರೃತಿಗೆಡದೆ, ಮರು ಮದುವೆಯೂ ಆಗದೆ, ತಮ್ಮ ಇಡೀ ಜೀವನವನ್ನು ಏಕಾಂಗಿಯಾಗಿಯೇ ಕಳೆದರು. ಅವರು ಅವಿಶ್ರಾಂತವಾಗಿ ನಡೆಸಿಕೊಂಡು ಬಂದ ಕನ್ನಡ ಪರ ಚಟುವಟಿಕೆಗಳು ಅವರಿಗೆ ಶಾಂತಿನೀಡಿದವು ! ಕನ್ನಡದ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು !
ಶ್ರೀಯುತರು ಹುಟ್ಟಿದ್ದು, ೧೮೮೧ ನೆ ಇಸವಿಯ ಸಂಪಿಗೆ ಎಂಬ ಹಳ್ಳಿಯಲ್ಲಿ; ಇದು ಮಂಡ್ಯಾ ಜಿಲ್ಲೆಯ ನಾಗಮಂಡಲ ತಾಲ್ಲೂಕಿನಲ್ಲಿದೆ. ತಂದೆ ಮೈಲಾರಯ್ಯನವರು. ತಾಯಿ ಭಾಗೀರಥಮ್ಮ. ಬಾಲ್ಯದ ಶಿಕ್ಷಣವನ್ನು ಶ್ರೀರಂಗಪಟ್ಟಣ ಮತ್ತು ಮೈಸೂರಿನಲ್ಲಿ. ತಮ್ಮ ಬಿ. ಎ. ಡಿಗ್ರಿಯನ್ನು ಬೆಂಗಳೂರಿನಲ್ಲಿ ಮುಗಿಸಿ, ಎಮ್. ಎ. ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಮಾಡಿದರು. ತಮ್ಮ ೨೫ ನೆಯ ವಯಸ್ಸಿನಲ್ಲಿ ಮಹಾರಾಜ ಕಾಲೆಜ್ ನಲ್ಲಿ ಉಪನ್ಯಾಸಕರಾಗಿ ನೇಮಕಗೊಂಡರು. ಅವರಿಗೆ ೧೯೩೦ ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೆಜಿಗೆ ವರ್ಗವಾಯಿತು. ೧೯೨೭ ನೆಯ ಇಸವಿಯಲ್ಲಿ ಮೈಸೂರ್ ವಿಶ್ವವಿದ್ಯಾನಿಲಯ ಸ್ಥಾಪನೆಯಾಯಿತು. ಮುಂದೆ ಅವರು ಅಲ್ಲಿನ ಕನ್ನಡವಿಭಾಗದ ಗೌರವ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದರು. ೧೯೪೪ ರಲ್ಲಿ ಕೆ.ಯಿ. ಬೋರ್ಡ್ ಅಧ್ಯಕ್ಷರಾಗಿ ಕೆಲಸಮಾಡಿದರು. ಅದೇ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ಆರ್ಟ್ಸ್ ಕಾಲೇಜಿನ ಪ್ರಾಂಶುಪಾಲರಾಗಿ ಸೇರಿದ ಅವರು ತಮ್ಮ ಕೊನೆಯತನಕ ಅಲ್ಲೇ ಸೇವಾನಿರತರಾಗಿ ಅಲ್ಲಿಯೇ ನಿಧನರಾದರು.
ಇವರ ಶಿಷ್ಯರಲ್ಲಿ ಪ್ರಾಮುಖ್ಯರು :೧. ಕುವೆಂಪು, ೨. ಮಾಸ್ತಿ, ೩. ಎಸ್.ವಿ.ರಂಗಣ್ಣನವರು, ೪. ತೀ ನಂ ಶ್ರೀ, ೫. ಜಿ.ಪಿ.ರಾಜರತ್ನಂ. ೬. ಡಿ. ಎಲ್. ನರಸಿಂಹಾಚಾರ್, ಎ. ಎನ್. ಮೂರ್ತಿರಾಯರು, ಎಲ್.ಎಸ್. ಶೇಷಗಿರಿರಾಯರು ಮುಂತಾದವರು.
ಕನ್ನಡದಲ್ಲಿ ಅವರು ರಚಿಸಿದ ಕೃತಿಗಳು :೧. ಗದಾಯುದ್ಧ ೨. ಅಶ್ವತ್ಥಾಮನ್, ೩. ಪಾರಸಿಕರು- ಇವೆಲ್ಲಾ ನಾಟಕಗಳು.೨. ಹೊಂಗನಸು, ಕನ್ನಡ ಗೀತೆಗಳು- ಕವನ ಸಂಕಲನ. ಇದರಲ್ಲಿ ಕನ್ನಡ ತಾಯ್ನೋಟ, ಶುಕ್ರ ಗೀತೆಗಳು ಪ್ರಮುಖವಾದವುಗಳು. ಕನ್ನಡಿಗರಿಗೆ ಒಳ್ಳೆ ಸಾಹಿತ್ಯ ೨. ಕನ್ನಡ ಕೈಪಿಡಿ ( History of Kannada literature ಗದಾಯುದ್ಧದ ಸನ್ನಿವೇಶ ಅದಕ್ಕೆ ಪೂರಕವಾದ ಭೀಮ ದುರ್ಯೋಧನರ ಸಂವಾದಗಳನ್ನು ವಿಶ್ಲೇಷಿಸಿದ ರೀತಿ ಅನನ್ಯವಾಗಿತ್ತು.ಮತ್ತೆ ಪಾರ್ಸಿಕರು ನಾಟಕದ ಹಿನ್ನೆಲೆ ಬಹಳ ಸೊಗಸಾಗಿತ್ತು.ಅಶ್ವತ್ಥಾಮನ್ ಒಂದು ರುದ್ರನಾಟಕ. ಸಾಮಾನ್ಯವಾಗಿ ನಮ್ಮೆಲ್ಲಾ ನಾಟಕಗಳೂ ಸುಖಾಂತ್ಯದಲ್ಲಿಯೇ ಮುಗಿಯುತ್ತವೆ. ಮೇಲಿನ ೩ ನಾಟಕಗಳಬಗ್ಗೆ ಅವರು ಆರಿಸಿಕೊಂಡ ಸನ್ನಿವೇಶಗಳು, ಗ್ರೀಕ್ ಮತ್ತು ನಮ್ಮ ಮಹಾಭಾರತದ ಹೋಲಿಕೆಗಳನ್ನು ಎಲ್.ಎಸ್.ಎಸ್. ರವರು ಅದ್ಬುತವಾಗಿ ಬಣ್ಣಿಸಿದರು.
ಗದಾಯುದ್ಧದಲ್ಲಿ ನಮಗೆ 'ಟ್ರ್ಯಾಜಿಕ್ ಇಲ್ಲ್ಯುಮಿನೇಷನ್' ಹೆಚ್ಚಾಗಿ ಕಾಣದಿದ್ದರೂ ಆ ನಾಟಕ ಶ್ರೇಶ್ಟವಾಗಿರುವುದು ಅಲ್ಲಿ ಕೊನೆಯಲ್ಲಿ ಹೇಳುವ ವಾಕ್ಯಗಳಿಂದ 'ಕ್ಷಮೆಯೇ ಜಯ'. 'ನಿಮ್ಮ ಮನಸ್ಸಿಗೆ ಸರಿಯಾಗಿ ಕಂಡಾಗ ಮಾತ್ರ' ಇತ್ಯದಿ !..ಅವರ ನಾಟಕಗಳು ಗಂಭೀರ ಮತ್ತು ಪರಿಪೂರ್ಣ. 'ಪಾರ್ಸಿಕರು' ಗ್ರೀಕ್ ನಾಟಕದ ಸೊಗಸಾದ ಅನುವಾದ. ಕೇವಲ ಕೆಲವೇ ಸಾವಿರಜನರ ಬೀಡಾಗಿದ್ದ 'ಅಥೆನ್ಸ್'ನಗರ ಆ ಕಾಲದಲ್ಲಿ ಮೇಲೆ ಹೇಳಿದ ೩ ಶ್ರೇಷ್ಟ ನಾಟಕಗಳನ್ನು ಕೊಟ್ಟಿದೆ.
ಇಂಗ್ಲೀಷ್ ಗೀತೆಗಳು (ತರ್ಜುಮೆ), ಅನುವಾದ ಹೇಗಿರಬೇಕೆಂಬ ಬಗ್ಗೆ ಅವರು ಹೇಳುವ ಮಾತು ಬಹು ಪ್ರಸ್ತುತ. ಶ್ರೀ ನ್ಯುಮನ್ ಬರೆದ 'ಇಂಗ್ಲೀಷ್' ಕವಿತೆಯ ಕನ್ನಡ ರೂಪಾಂತರ. "ಕರುಣಾಳು ಬಾ ಬೆಳಕೆ ಕೈಹಿಡಿದು ನಡೆಸೆನ್ನನು" ರವೀಂದ್ರನಾಥ ಟ್ಯಾಗೋರ್ ರ ಮತ್ತೊಂದು ಕವನ, , Where the mind is without fear...... 'ಎಲ್ಲಿ ಮನಗಳುಕಿರಿದೊ; ಎಲ್ಲಿ ತಲೆ ಬಾಗಿರದೋ....' ಎನ್ನುವ ಅನುವಾದ ಮೂಲಕ್ಕಿಂತ ಸೊಗಸಾಗಿದೆ ಎನ್ನುವುದು ಪರಾಮರ್ಶಕರ ಅಭಿಮತ. ಅದನ್ನೆ ಸುಬ್ಬರಾಯರು ಮಾಡಿದ ಅನುವಾದ, ಅಷ್ಟೇನೂ ಪ್ರಭಾವ ಶಾಲಿಯಾಗಿರಲಿಲ್ಲ.
ಬಿ. ಎಂ. ಶ್ರೀ. ೧೯೨೮ ರಲ್ಲಿ ಗುಲ್ಬರ್ಗದಲ್ಲಿ ನಡೆದ ಕನ್ನಡ ಸಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.೧೯೩೮ ರಲ್ಲಿ ಅವರ ಅವಿಸ್ಮರಣೀಯ ಕಾರ್ಯಕ್ಕಾಗಿ ಮೈಸೂರ್ ಮಹಾರಾಜರು ಅವರಿಗೆ ' ರಾಜ ಸೇವಾಸಕ್ತ' ಎಂಬ ಬಿರುದನ್ನು ದಯಪಾಲಿಸಿದರು. ಅವರು ಕೆಲಕಾಲ ಕನ್ನಡ ಸಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ದುಡಿದರು.
ಕನ್ನಡದ ಬೆಳವಣಿಗೆಗೆ ಅವರು ಮಾಡಿದ ಕೆಲಸಗಳು :
ಕ್ಲಾಸಿಕ್ ಮತ್ತು ರೋಮ್ಯಾಂಟಿಕ್ ನಲ್ಲಿ ಮೊದಲಯದು ವ್ಯವಸ್ಥೆ, ಶಕ್ತಿ, ಎರಡನೆಯದು, ಭಾವದ ಗಾಢತೆ. 'ಕ್ಲಾಸಿಕ್ ಟೆಂಪರ್ಮೆಂಟ್ ಬೇಕಷ್ಟೆ' ! ಆಡಿಗರು ಶ್ರೀಯವರ ಶತಮಾನೋತ್ಸವದ ಸಮಯದಲ್ಲಿ ಅವರನ್ನು 'ಗೌರಮ್ಮ' ಎಂದು ಕರೆದರು.ಅದಕ್ಕೆ ಕಾರಣ ಅವರು ತಿದ್ದಿದ ಗೊಂಬೆಯಂತೆ ಕಾಣುತ್ತಿದ್ದದ್ದು. ಮತ್ತೆ 'ಬೆದರು ಬೊಂಬೆ' ಎಂದು.
"ಮಾರ್ಗ ತೋರಿಸಿದರು ಆದರೆ, ಗುರಿಯ ತೋರದಾದಿರಿ" ಏಕೆಂದರೆ ಅದರಲ್ಲಿ ತಳಮಳ ಇಲ್ಲ.ಇದೊಂದು ಮಾತು ಆಗಾಗ ಕೇಳಿಬರುತ್ತಿತ್ತು.ಅದು ಶ್ರಿಯವರ ಬಗ್ಗೆ ಇದ್ದ ವಿಧೇಯತೆಯ ಸಂಕೇತ. ೧೯೪೧-೧೯೪೩ ರ ಸಮಯದಲ್ಲಿ ಅವರು ಒಟ್ಟು ೯ 'ಪ್ರಗತ'ಗಳನ್ನು ಬರೆದರು. ಕೃಷ್ಣರಾಜ ಒಡೆಯರು ತಮ್ಮ ೨೫ ನೆವರ್ಷದ ಹಬ್ಬವನ್ನು ಸಡಗರದಿಂದ ನೆರವೇರಿಸಿದಾಗ. ಮತ್ತೆ ಅವರು ಮೃತರಾದಾಗ. ಅವರಿಗೆ 'ರೆಸ್ಪಾನ್ಸೀವ್ ಇಮ್ಯಾಜಿನೇಷನ್' ಇತ್ತು. ಆದರೆ ಅವರದೇ ಆದ ಯಾವ ಕವನಗಳನ್ನು ಅವರು ಬರೆಯಲಿಲ್ಲ. ಅವರು ಮಾಡಿದ ಪ್ರಮುಖ ಕೆಲಸಗಳಲ್ಲಿ 'ಹೊಸಯುಗ'ದ ಅಗತ್ಯಗಳನ್ನು ಗುರುತಿಸಿ ಮುಂದೆ ಆಗಬೇಕಾದ ಬದಲಾವಣೆಗೆ ಯುಗವನ್ನು ಅಣಿಮಾಡಿತ್ತು. ಅದರ ಜೊತೆಗೆ ಅದಕ್ಕೆ ಬೇಕಾದ ಪರಿಕರಗಳನ್ನು ಒದಗಿಸಿದ್ದು, ಒಂದು 'ಅತಿದೊಡ್ಡ ಕೊಡುಗೆ' ಎನ್ನಬಹುದು.
ಡಿ.ವಿ.ಜಿ. ಹೇಳುತ್ತಿದ್ದಂತೆ ಆಗ ಇದ್ದದ್ದು 'ರಾಜ ಕೇಳೆಂದ ಸಾಹಿತ್ಯ' ! ಕೇವಲ ರಾಜ ಮಹಾರಾಜರಿಗೆ, ಇಲ್ಲವೆ ವಿದ್ವಾಂಸ ಶಿಖಾಮಣಿಗಳಿಗೆ ಮಾತ್ರ ಸೀಮಿತವಾದ ಸಾಹಿತ್ಯ ರಚನೆ. ಆಗ ಬಿ.ಎಂ.ಶ್ರೀ ಜನಸಾಮಾನ್ಯರ, ಒಕ್ಕಲಿಗರ ಜೀವನಕ್ಕೆ, ಆಶೋತ್ತರಗಳಿಗೆ ಸ್ಪಂದಿಸುವ ಕಾವ್ಯ ರಚನೆಗೆ ಒತ್ತುಕೊಟ್ಟರು. ಡಾ.ಎ.ಎನ್.ಮೂರ್ತಿರಾಯರೆ ಹೇಳುವಂತೆ, ಛಂದಸ್ಸು ಹಾಗೂ ಕಾವ್ಯ ರಚನೆಯ ಪ್ರಾಕಾರಗಳು, ಬಹಳ ಮಡಿವಂತಿಕೆಗೆ ಹೆಸರಾಗಿದ್ದು ಕಾವ್ಯ ರಚಿಸುವವರಿಗೆ, ನವ ಯುವಕರಿಗೆ ಅದು ಕಬ್ಬಿಣದ ಕಡಲೆಯಾಗಿತ್ತು. ಉದಾ: ಸೂರ್ಯನಿಗೆ (Orb of day) ತಂಗಾಳಿಗೆ (A gentle gale)ಇತ್ಯಾದಿ. ಅರ್ಜುನ ಎಂದು ಪದೇ ಪದೆ ಹೇಳುವಂತಿಲ್ಲ. ಧನಂಜಯ, ಕಿರೀಟಿ, ಪಾರ್ಥ ಎಂಬ ಹೊಸ ಹೊಸ ಪದಗಳನ್ನು ಬಳಸಬೇಕಾಗಿತ್ತು....ಹೀಗೆ ಪರಿಸ್ಥಿತಿ ಇತ್ತು. ಇನ್ನೊಂದು ಉದಾ : "ಹರಶರಪ್ರಥಮಾವತರ ಲೋಚನೆ, ಮಹೇಶ್ವರ ಚಾಪತಾಂಗ ವಷೋಜಾತೆ" ! ಹೀಗೆ ಬಳಸಿದರೇನೆ ಆ ಕಾವ್ಯದ ಘನತೆ ಹೆಚ್ಚುವುದು ಎಂದು ತಿಳಿದಿದ್ದ ಕಾಲ ಅದು ! ಹರಶರ ಪ್ರಥಮಾವತರ ಲೋಚನೆ, ಎಂದರೆ 'ಮೀನಲೋಚನೆ' ಎಂದರ್ಥ. ಅಷ್ಟುದೊಡ್ಡ ಪದಗಳ ಸಮೂಹದ ಅಗತ್ಯವಿತ್ತೆ ? ಆದರೆ ಹೊಸ ಕಾವ್ಯವನ್ನು/ಕವಿತೆಯನ್ನು ಗಮನಿಸಿ :
ಹೊಳೆ ಬೆಳಗಿ ಜಾರುವುದು
ಗಿಳಿ ನೆಗೆದು ಹಾರುವುದು
ಈ ಸರಳ, ಜನಸಾಮಾನ್ಯರ ಹೃದಯವನ್ನು ತಟ್ಟುವ, ಮೀಟುವ ಸಾಲುಗಳೂ ಕೊಡುವ ಆನಂದಕ್ಕೆ ಸೀಮೆಯೆಲ್ಲಿದೆ ? ಹೀಗೆ, ಆಗಲೇ ಜನರ 'ಅತೃಪ್ತಿಯ ಹೊಗೆ'ಯಾಡುತ್ತಿದ್ದ ಕಾಲಕ್ಕೆ ಅವರು ಚಿಕ್ಕ 'ಬೆಂಕಿಯ ಕಿಡಿ'ಯನ್ನು ಸ್ಪರ್ಷಿಸುತ್ತಾರೆ ! 'ಸೃಜನಶೀಲ ಮನೋಭಾವ'ಕ್ಕೆ ಎಡೆಮಾಡಿಕೊಡುತ್ತಾರೆ. ಸಾಹಿತ್ಯಸ್ರುಷ್ಟಿಗೆ, ಮನೊಸ್ವಾತಂತ್ರ್ಯವೂ ಪೂರಕ ಎನ್ನುವುದು ಎಷ್ಟು ದಿಟ ! ಕನ್ನಡದ ಬಗ್ಗೆ ಹೇಳುವ ಬಿ.ಎಂ.ಶ್ರೀ. ರವರ ಮಾತುಗಳು ಎಲ್ಲರ ಕಣ್ಣುಗಳನ್ನೂ ತೆರೆಸಿರಬೇಕು !
" ಕನ್ನಡ ಮಹಾನದಿಯಾಗಿ ಪ್ರವಹರಿಸಬೇಕಾದರೆ ಅದಕ್ಕೆ ಅನೇಕ ಉಪನದಿಗಳು ಬೇಕು- ಇಂಗ್ಲಿಷ್, ಆ ಉಪನದಿಗಳಲ್ಲೊಂದಾಗಬಾರದೇಕೆ "? "ಕನ್ನಡ ಚಕ್ರವರ್ತಿಯಾಗಿ ಮೆರೆಯಬೇಕಾದರೆ, ಆಸ್ಥಾನದಲ್ಲಿ ಸಾಮಂತರಿರಬೇಕು. ಇಂಗ್ಲಿಷ್ ಆ ಸಾಮಂತ ಭಾಷೆಯಾಗಿ ಬಂದರೆ ಅಡ್ಡಿಯೇನು "? ಈ ಮಾತುಗಳು ಒಬ್ಬ ದೂರದೃಶ್ಟಿಯಿರುವ ಮಹತ್ಸಾದ್ಧಕನಿಗೆ ಮಾತ್ರ ಗೋಚರಿಸುವ ವಿಶೇಷ ಸಂಗತಿಗಳು !
ಡಾ. ತಾಳ್ತಜೆ ವಸಂತಕುಮಾರ್, ಮುಖ್ಯಸ್ತರು, ಕನ್ನಡದ ವಿಭಾಗ, ಮುಂಬೈ ವಿಶ್ವವಿದ್ಯಾಲಯ, ಎರಡನೆದಿನದ 'ಪ್ರಾಸ್ತಾವಿಕ ಭಾಷಣ'ದಲ್ಲಿ, ಡಾ.ಎಲ್.ಎಸ್.ಎಸ್ ರವರನ್ನು ಸಭೆಗೆ ಪರಿಚಯಿಸಿದರು. ಬಿ.ಎಂ ಶ್ರೀ ರವರ ಇಂಗ್ಲೀಷ್ ಅನುವಾದಿತ ಕವಿತೆ " ದುಖಃ ಸೇತು"ವಿನ ಬಗ್ಗೆ ಮಾತನಾಡುತ್ತ, ಒಮ್ಮೆ ಕರಾವಳಿಯ ಒಂದು ಕಾರ್ಯಕ್ರಮ- ಬಹುಶಃ ಪಂಜೆ ಮಂಗೇಶರಾಯರ ನೆನಪಿಗೆ ಆಯೋಜಿಸಿದ ಸಮಾರಂಭ- ಅಲ್ಲಿ 'ಶ್ರೀ' ಅವರ " ದುಖಃ ಸೇತು"ವಿನ ಪ್ರಸ್ತಾಪವಾಯಿತು. ಆ ಕವಿತೆಯಲ್ಲಿ ಒಬ್ಬ, ತಾನು ಪ್ರೀತಿಸಿದ ಹುಡುಗಿ ಬಸುರಿಯಾದ ವಿಷಯ ತಿಳಿದು ಹೆದರಿ ಅವಳನ್ನು ಒಪ್ಪಿಕೊಳ್ಳದ ಸಂದರ್ಭ. ಬೇಸತ್ತ ಹೆಣ್ಣು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅದನ್ನು ಕಂಡು ಅವಳಿಗೆ 'ಅಯ್ಯೊ ಪಾಪ' ಎನ್ನುವರೀತಿಯಲ್ಲಿ ಪ್ರತಿಕ್ರಯಿಸುತ್ತಾರೆ- ಶ್ರೀಯವರು. ಅದನ್ನು ಓದಿದಾಗ ಸಭೆಯಿಂದ, "ನಾನು ಅವಳನ್ನು ಎಂದಿಗೂ ಬಿಟ್ಟಿಲ್ಲ, ಬಿಡೊಲ್ಲ "ಎಂಬ ಉದ್ಗಾರದಿಂದ ಸಭೆಯ ಗಮನವನ್ನು ಒಬ್ಬ ಯುವಕ ಸೆಳೆಯುತ್ತಾನೆ. ಇಲ್ಲಿ ನಾವು ಗಮನಿಸಬೇಕಾದದ್ದು, ಬಿ. ಎಂ. ಶ್ರೀ ರವರು ತಮ್ಮ ಕವಿತೆಯಲ್ಲಿ ದುಡಿಸಿಕೊಂಡ ಭಾಷೆಯ ಪರಿಣಾಮ ಎಷ್ಟು ಪ್ರಭಾವಶಾಲಿಯಾಗಿದೆ ? ಎಂಬುವ ಮಾತು !
ಅರ್ಧ ಗಂಟೆಗೂ ಹೆಚ್ಚು ಸಮಯವನ್ನು ವಿಚಾರ ವಿನಿಮಯಕ್ಕೆ ಉಪಯೋಗಿಸಲಾಯಿತು. ಅಲ್ಲಿ ನೆರೆದ ಸಹಿತ್ಯಾಭಿಲಾಷಿಗಳು ತಮ್ಮ ತೆರೆದ ಮನಸ್ಸು ಹಾಗೂ ಕಣ್ಣುಗಳಿಂದ ಶ್ರೀ.ಎಲ್.ಎಸ್.ಎಸ್ ರವರು ಕೊಟ್ಟ 'ಹೃದಯಸ್ಪರ್ಷಿ ಭಾಷಣ'ದಲ್ಲಿ ಮಿಂದೆದ್ದರು !
ಕಾರ್ಯಕ್ರಮದ ಕೊನೆಯಲ್ಲಿ ಡಾ. ಬಿ. ಆರ್. ಮಂಜುನಾಥ್ ವಂದನಾರ್ಪಣೆ ಮಾಡಿದರು. ೨೫ನೆ ವರ್ಷದ ದತ್ತಿ ಉಪನ್ಯಾಸ ನಿಜವಾಗಿಯೂ ಅರ್ಥಗರ್ಭಿತವಾಗಿತ್ತು. ೭೬ ರ ಹರೆಯದ ಎಲ್.ಎಸ್.ಎಸ್.ರವರು ೨೫ ವರ್ಷದ ಯುವಕರಂತೆ ಎಲ್ಲರನ್ನೂ ತಮ್ಮ ಭಾಷಣದಿಂದ ರಂಜಿಸಿದರು. ಬಿ. ಎಂ. ಶ್ರೀ. ರವರ ಪರಿಚಯ ಅವರ ಬಾಯಿನಲ್ಲಿ ಒಂದು ಹೊಸ ರೂಪ ಪಡೆದಿತ್ತು !