ಬೀಗರ ಬಡಾಯಿ (ನಾಟಕ)
ಹತ್ತಾರು ಕಿರು ನಾಟಕಗಳನ್ನು ಬರೆದು ಖ್ಯಾತಿ ಪಡೆದ ಪ್ರೊ. ಆರ್. ಎನ್ ಕುಲಕರ್ಣಿ (ಆರ್ ಎನ್ ಕೆ) ಇವರ ಮತ್ತೊಂದು ನಾಟಕದ ಪುಸ್ತಕ ‘ಬೀಗರ ಬಡಾಯಿ'. ಇದೊಂದು ಹಾಸ್ಯಭರಿತ, ವರದಕ್ಷಿಣೆ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಸಮಸ್ಯಾ ಪ್ರಧಾನ ನಾಟಕ. ರಂಗಸ್ಥಳದಲ್ಲಿ ಸುಮಾರು ೨೦ ರಿಂದ ೩೦ ನಿಮಿಷಗಳಲ್ಲಿ ಮುಗಿದು ಹೋಗುವ ಈ ನಾಟಕವು ಸಮಾಜಕ್ಕೆ ಬಹಳ ಪ್ರಭಾವಶಾಲಿ ಸಂದೇಶವನ್ನು ಕೊಡುತ್ತದೆ.
೭ ಮಂದಿ ಪಾತ್ರಧಾರಿಗಳಿರುವ ಈ ನಾಟಕದಲ್ಲಿ ಮದುಮಗ, ಮದುಮಗಳು, ವರನ ತಂದೆ-ತಾಯಿ, ವರ ಇಬ್ಬರು ಗೆಳೆಯರು ಮತ್ತು ಪುರೋಹಿತರು ಇದ್ದಾರೆ. ಮದುವೆಯ ಮನೆಯ ದೃಶ್ಯದಿಂದ ನಾಟಕ ಆರಂಭವಾಗುತ್ತದೆ. ಮದುವೆ ಮನೆಯ ವ್ಯವಸ್ಥೆಯ ಬಗ್ಗೆ ತಕರಾರು ತೆಗೆಯುವ ವರನ ಗೆಳೆಯರು, ವರದಕ್ಷಿಣೆ ಬಗ್ಗೆ ಗುಸು ಗುಸು ಎನ್ನುವ ವರನ ತಾಯಿ ಹೀಗೆ ನಾಟಕ ಮುಂದುವರೆಯುತ್ತದೆ. ಈ ಎಲ್ಲಾ ಕಾರಣಗಳಿಂದ ಮದುವೆ ಮುರಿದು ಬೀಳುವ ಸಂದರ್ಭಕ್ಕೆ ಹೋಗುತ್ತದೆ. ಕಡೆಗೂ ಮದುವೆ ನಡೆಯಿತಾ? ಎನ್ನುವುದನ್ನು ನೀವು ಈ ಪುಸ್ತಕ ಓದಿ ಅಥವಾ ನಾಟಕ ನೋಡಿಯೇ ತಿಳಿದುಕೊಳ್ಳಬೇಕು.
ನಾಟಕದ ರಚನೆಕಾರ ಪ್ರೊ. ಆರ್. ಎನ್ ಕುಲಕರ್ಣಿ ಇವರು ಸುಮಾರು ೨೫ಕ್ಕೂ ಅಧಿಕ ಕಿರು ನಾಟಕ ಪುಸ್ತಕಗಳನ್ನು ಬರೆದಿದ್ದಾರೆ. ತಮ್ಮ ಮುನ್ನುಡಿಯಾದ ‘ನನ್ನ ಹೃದಯದಿಂದ...' ಇಲ್ಲಿ ಬರೆಯುತ್ತಾರೆ..."ಶಿವಮೊಗ್ಗ, ಬೆಂಗಳೂರು, ಮೈಸೂರು, ಭದ್ರಾವತಿ ಮುಂತಾದ ಕಡೆಯಿಂದ ಅನೇಕ ಹವ್ಯಾಸಿ ಕಲಾಕೂಟದವರು ಪತ್ರ ಬರೆದು ‘ನಿಮ್ಮ ನಾಟಕದಲ್ಲಿಯ ಕೆಲವೊಂದು ಶಬ್ದಗಳು ಅರ್ಥವಾಗುವುದಿಲ್ಲ. ಇದರಿಂದ ನಾಟಕ ಅಭಿನಯಿಸಲು ತುಂಬಾ ತೊಂದರೆಯಾಗುತ್ತದೆ. ಉದಾ-’ದಮ್ ಹಿಡಿರಿ’ ಎಂದರೇನು? ‘ಪಾವಣ' ‘ಜರಾನೂ’, ಪರಕಾರ' ಇವೆಲ್ಲ ಎಲ್ಲಿಯ ಶಬ್ಧಗಳು ಮಾರಾಯ್ರೆ? ಮುಂದಿನ ನಾಟಕಗಳನ್ನು ಎಲ್ಲರಿಗೂ ತಿಳಿಯುವಂತೆ ಬರೆಯಿರಿ ಎಂದಿದ್ದಾರೆ. ಅದಕ್ಕಾಗಿ ನಾನು ಉತ್ತರ ಕರ್ನಾಟಕದ ಭಾಷೆಯಲ್ಲಿನ ಶಬ್ಧಗಳನ್ನು ಸರಳಗೊಳಿಸಿದ್ದೇನೆ. ಕೆಲವರ ಸೂಚನೆಯ ಮೇರೆಗೆ ನಾಟಕದಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದೇನೆ. ಕಾರಣ, ನನ್ನ ನಾಟಕಗಳು ಎಲ್ಲರಿಗಾಗಿ.” ಎಂದಿದ್ದಾರೆ.
ಆದರೂ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯವರಿಗೆ ಇವರ ನಾಟಕದ ಭಾಷೆ ಸ್ವಲ್ಪ ಕ್ಲಿಷ್ಟಕರವಾಗಿಯೇ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುಲಭ ಭಾಷೆಯಲ್ಲಿ ಬರೆಯಬಹುದು ಅನ್ನೋ ಆಶಾಭಾವನೆ ಇದೆ. ಈ ನಾಟಕವು ಸಾಹಿತ್ಯ ಭಂಡಾರದ ಶ್ರೀ ಮ. ಅನಂತಮೂರ್ತಿಯವರ ಹದಿನಾರನೇ ಪುಣ್ಯತಿಥಿಯಂದು ಪ್ರಕಟಗೊಂಡಿದೆ. ೨೦ ಪುಟಗಳಲ್ಲೇ ಈ ನಾಟಕದ ಕರಾಮತ್ತು ಮುಗಿಯುತ್ತದೆ. ಒಮ್ಮೆ ಓದಿ, ಲಘು ಹಾಸ್ಯದೊಂದಿಗೆ ಒಳ್ಳೆಯ ಸಂದೇಶವೂ ಇದೆ.