ಬೀಜದುಂಡೆ ತಯಾರಿ ಅಭಿಯಾನ
ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗವು "ಬೀಜದುಂಡೆ ತಯಾರಿ ಅಭಿಯಾನ”ದ ಎರಡನೇ ಕಾರ್ಯಕ್ರಮವನ್ನು ಸಾರ್ವಜನಿಕ ರಂಗದ ಕಾರ್ಪೊರೇಷನ್ ಬ್ಯಾಂಕಿನ ಸಹಯೋಗದಲ್ಲಿ ೨೧ ಮೇ ೨೦೧೭ರಂದು ಹಮ್ಮಿಕೊಂಡಿತ್ತು.
ಪಾಂಡೇಶ್ವರದ ಕಾರ್ಪೊರೇಷನ ಬ್ಯಾಂಕಿನ ಪ್ರಧಾನ ಕಚೇರಿಯ ಆವರಣದಲ್ಲಿ ಅಂದು ಬೆಳಗ್ಗೆ ೭ ಗಂಟೆಗೆ ಕೆ. ಗೋಪಾಲಕೃಷ್ಣ ಮಯ್ಯ, ಡೆಪ್ಯುಟಿ ಜನರಲ್ ಮೆನೇಜರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾಮಾಜಿಕ ಅರಣ್ಯದ ವಿಸ್ತರಣೆಗಾಗಿ “ಅಂಕುರ್" ಯೋಜನೆ ಅನ್ವಯ ಕಾರ್ಪೊರೇಷನ ಬ್ಯಾಂಕ್ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದೆಯೆಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ, ಅಭಿಯಾನದ ಸಂಚಾಲಕ ಅನಿಲ್ ರಾವ್ ಬೀಜದುಂಡೆ ತಯಾರಿ ಹಾಗೂ ಬಿತ್ತನೆಯ ಮಹತ್ವದ ಬಗ್ಗೆ ಮಾತನಾಡಿದರು. ಸಾವಯವ ಕೃಷಿಕ ಬಳಗದ ಅಧ್ಯಕ್ಷ ಅಡ್ಡೂರು ಕೃಷ್ಣ ರಾವ್, ಸಂಘಟನಾ ಕಾರ್ಯದರ್ಶಿ ರತ್ನಾಕರ ಕುಳಾಯಿ, ಇತರ ಪದಾಧಿಕಾರಿಗಳು ಹಾಗೂ ಸದಸ್ಯರು, ಬ್ಯಾಂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿ, ಆಸಕ್ತ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಮುನ್ನ, ೧೪ ಮೇ ೨೦೧೭ರಂದು ಮೊದಲನೇ ಬೀಜದುಂಡೆ ತಯಾರಿ ಕಾರ್ಯಕ್ರಮವನ್ನು ಇತರ ಸಂಘಟನೆಗಳ ಸಹಕಾರದೊಂದಿಗೆ ಮಂಗಳೂರಿನ ಕೆನರಾ ಬಾಲಕಿಯರ ಹೈಸ್ಕೂಲಿನಲ್ಲಿ ಸಾವಯವ ಕೃಷಿಕ ಗ್ರಾಹಕ ಬಳಗ ಆಯೋಜಿಸಿತ್ತು. ಬಳಗದಿಂದ ಈ ಹಂಗಾಮಿನಲ್ಲಿ ೫೦,೦೦೦ ಬೀಜದುಂಡೆಗಳನ್ನು ತಯಾರಿಸುವ ಗುರಿ ಇರಿಸಿಕೊಳ್ಳಲಾಗಿದೆ.
ಮಣ್ಣು, ದನದ ಸೆಗಣಿ ಮತ್ತು ಗೋಮೂತ್ರದ ಮಿಶ್ರಣದ ಉಂಡೆಯೊಳಗೆ ಹೊಂಗೆ, ಹುಣಿಸೆ, ಹಲಸು, ನೇರಳೆ ಹಾಗೂ ಸುಬಾಬುಲ್ ಬೀಜ ಇರಿಸಿ ಬೀಜದುಂಡೆಗಳನ್ನು ತಯಾರಿಸಲಾಗುತ್ತಿದೆ. ಮಳೆಗಾಲ ಶುರುವಾಗಿ ಒಂದು ವಾರದ ನಂತರ ಇವನ್ನು ಗುಡ್ಡಗಳು ಹಾಗೂ ಖಾಲಿ ಜಮೀನುಗಳಲ್ಲಿ ಎರಚಲಾಗುವುದು.
ಕಳೆದ ಮೂರು ವರುಷಗಳ ಸತತ ಬರಗಾಲದಿಂದ ನಮ್ಮ ದೇಶ ತತ್ತರಿಸಿದೆ. ಎಲ್ಲೆಡೆ ನೀರಿನಾಸರೆಗಳು ಬತ್ತಿ ಹೋಗಿ, ನೀರಿಗಾಗಿ ಹಾಹಾಕಾರ ಎದ್ದಿದೆ. ಹಲವೆಡೆ ಉಷ್ಣಾಂಶ ಕಳೆದ ಶತಮಾನದಲ್ಲೇ ಅತ್ಯಧಿಕ ಮಟ್ಟಕ್ಕೇರಿದ್ದು, ಬೇಸಗೆಯಲ್ಲಿ ಬೆಂಕಿ ಬಿದ್ದಂತಾಗಿದೆ. ಗಿಡಮರಗಳನ್ನು ಬೆಳೆಸದಿದ್ದರೆ ಮುಂದಿನ ವರುಷಗಳಲ್ಲಿ ಪರಿಸ್ಥಿತಿ ಬಿಗಡಾಯಿಸಲಿದೆ. ಈ ಹಿನ್ನೆಲೆಯಲ್ಲಿ, ಬೀಜದುಂಡೆಗಳನ್ನು ಎರಚಿ, ಅವುಗಳಿಂದ ಮೊಳೆಯುವ ಸಸಿಗಳಿಂದ ಹಸುರು ಹಬ್ಬಿಸುವ ಆಶಯದೊಂದಿಗೆ ಸಾವಯವ ಕೃಷಿಕ ಗ್ರಾಹಕ ಬಳಗವು ಈ ಅಭಿಯಾನವನ್ನು ಕೈಗೆತ್ತಿಕೊಂಡಿದೆ.