ಬೀಜಾಮೃತ: ಬಿತ್ತನೆ ಬೀಜಗಳಿಗೆ ಅಮೃತ (ರೈತರೇ ಬದುಕಲು ಕಲಿಯಿರಿ-೧೩)

ಬೀಜಾಮೃತ: ಬಿತ್ತನೆ ಬೀಜಗಳಿಗೆ ಅಮೃತ (ರೈತರೇ ಬದುಕಲು ಕಲಿಯಿರಿ-೧೩)

ಬರಹ

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ಎಲ್ಲಕ್ಕೂ ಮೂಲ ಎಂದರೆ ಬಿತ್ತನೆ ಮತ್ತು ಬಿತ್ತನೆ ಬೀಜಗಳಿಗೆ ಮಾಡಬೇಕಾದ ಪ್ರಥಮ ಉಪಚಾರ.

ಇದುವರೆಗಿನ ಅಧ್ಯಾಯಗಳನ್ನು ನೀವು ಸರಿಯಾಗಿ ಓದಿದ್ದೇ ಆದರೆ ಭೂಮಿಯಲ್ಲಿ ಉಳುಮೆಯ ಅವಶ್ಯಕತೆ ಇಲ್ಲ ಎಂಬುದು ನಿಮಗೆ ಮನದಟ್ಟಾಗಿರುತ್ತದೆ.

ಏಕೆಂದರೆ ನಿಮ್ಮ ಹೊಲದಲ್ಲಿಯ ಮಿತ್ರ ಕೀಟಗಳಾದ ಎರೆಹುಳು, ಗೆದ್ದಲು, ವಿವಿಧ ಬಗೆಯ ಕೋಟ್ಯಾನುಕೋಟಿ ಜೀವಾಣುಗಳು, ಇಲಿ, ಹಾವು ಮುಂತಾದ ಪ್ರಾಣಿಗಳು ಆ ಕೆಲಸವನ್ನು ನಿಮಗಾಗಿ ವರ್ಷವಿಡೀ ಮಾಡುತ್ತಲೇ ಇರುತ್ತವೆ. ನೀವು ಮಾಡಬಹುದಾದ ಕೆಲಸವೆಂದರೆ, ಇವುಗಳ ಕೆಲಸಕ್ಕೆ ಅಡ್ಡಿ ಬಾರದೇ ಸುಮ್ಮನಿರುವುದು ಮಾತ್ರ!

ನಿಜ. ನಿಸರ್ಗದಲ್ಲಿ ಉಳುಮೆಯ ಅವಶ್ಯಕತೆ ಇಲ್ಲ. ಉಳದೇ ನಿಮ್ಮ ಹೊಲದಲ್ಲಿಯ ಬದುಗಳು ಸಮೃದ್ಧವಾಗಿವೆ. ದಾರಿ ಪಕ್ಕದ ಪ್ರದೇಶ ಸಮೃದ್ಧವಾಗಿದೆ. ಉಳದೇ ಅರಣ್ಯ ಬೆಳೆದಿದೆ. ಲಕ್ಷಾಂತರ ವರ್ಷಗಳಿಂದ ಇವೆಲ್ಲ ನಡೆದುಕೊಂಡು ಬಂದಿರುವುದೇ ಹೀಗೆ. ದಯವಿಟ್ಟು ಅದನ್ನು ಕೆಡಿಸಬೇಡಿ.

ಹಾಗಾದರೆ ಭೂಮಿ ಉಳದೇ ಬೀಜ ಬಿತ್ತುವುದು ಹೇಗೆ? ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು.

ಆದರೆ ನೈಸರ್ಗಿಕ ಕೃಷಿಯಲ್ಲಿ ನೀವು ಮುಂದುವರೆದಂತೆ ಉಳುವ ಅವಶ್ಯಕತೆ ಇಲ್ಲ ಎಂಬುದು ನಿಮಗೆ ಗೊತ್ತಾಗುತ್ತ ಹೋಗುತ್ತದೆ. ಬಿತ್ತಲಿರುವ ಬೀಜ, ಅಥವಾ ಸಸಿ ಯಾವುದು ಎಂಬುದರ ಮೇಲೆ ಉಳುಮೆಯ ಬೇಕುಬೇಡ ನಿಮಗೆ ತಿಳಿಯುತ್ತದೆ.

ಒಂದು ವೇಳೆ ನೀವು ತೋಟದ ಬೆಳೆಗಳನ್ನು ಬೆಳೆಯಲು ಹೊರಟಿದ್ದೀರಿ ಎಂದು ಇಟ್ಟುಕೊಳ್ಳೋಣ. ಅಲ್ಲಿ ತೆಂಗು, ಬಾಳೆ, ಅಡಿಕೆ, ನುಗ್ಗೆ, ಪಪ್ಪಾಯಿ, ಮಾವು, ಸೀಬೆ(ಪೇರಲ)ಯಂತಹ ಬೆಳೆಗಳನ್ನು ಹಾಕುತ್ತೀರಾದರೆ ಅವಕ್ಕೆ ಖಂಡಿತ ಉಳುಮೆ ಬೇಕಿಲ್ಲ.

ಒಂದು ವೇಳೆ ನಿಮ್ಮ ಭೂಮಿ ಕಾಡಿನಂತಿದೆ. ಏರು ತಗ್ಗುಗಳಿಂದ ಕೂಡಿದೆ. ಸಮತಟ್ಟಾಗಿಲ್ಲ ಎಂದಾದರೆ ಒಳ್ಳೆಯದೇ ಆಯಿತು. ನಿಸರ್ಗ ಹೇಗಿದೆಯೋ ಹಾಗೇ ಇರಲು ಬಿಡಿ. ನಿಮ್ಮ ಮುಖ್ಯ ಫಸಲನ್ನು ಹೊರತುಪಡಿಸಿ ಇತರ ಗಿಡಗಳನ್ನು ಬೇರುಸಹಿತ ಕಿತ್ತು ಹಾಕಿದರೆ ಆಯಿತು. ಉಳಿದಂತೆ ಭೂಮಿಯಲ್ಲಿರುವ ಹುಲ್ಲು ಮುಂತಾದವು ಹಾಗೇ ಇರಲಿ. ಅವನ್ನು ಕೀಳುವುದಾಗಲಿ, ಬೆಂಕಿ ಕೊಟ್ಟು ನಾಶಪಡಿಸುವುದಾಗಲಿ ಮಾಡಬೇಡಿ. ಅವು ಭೂಮಿಗೆ ಹೊದಿಕೆಯಂತೆ ಕೆಲಸ ಮಾಡುತ್ತವೆ. ಮಳೆ ನೀರನ್ನು ಹಿಡಿದಿಡುತ್ತವೆ. ಸೂರ್ಯನ ಬೆಳಕು ಮಣ್ಣಿನಲ್ಲಿಯ ಸೂಕ್ಷ್ಮಜೀವಿಗಳನ್ನು ಘಾಸಿಗೊಳಿಸದಂತೆ ಕಾಪಾಡುತ್ತವೆ. ನಿಮ್ಮ ಮೇಲ್ಮೈ ಮಣ್ಣು ಹರಿದು ಹೋಗದಂತೆ ಕಾಪಾಡುತ್ತವೆ. ಭೂಮಿಯಲ್ಲಿಯ ಏರು ತಗ್ಗುಗಳು ನೀರನ್ನು ಹಿಡಿದಿಡುವ ಟ್ಯಾಂಕ್ (ತೊಟ್ಟಿ)ಗಳಂತೆ ಕೆಲಸ ಮಾಡುತ್ತವೆ. ಅವಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿದರೆ ಸಾಕು.

ಬೀಜೋಪಚಾರ

ಸದ್ಯ ಎಲ್ಲೆಡೆ ಬಿತ್ತನೆಗೂ ಮುಂಚೆ ಬೀಜೋಪಚಾರಕ್ಕೆಂದು ಬಾವಿಸ್ಟಿನ್ ಎಂಬ ವಿಷವನ್ನು ಬಳಸಲಾಗುತ್ತಿದೆ. ಇನ್ನು ಗೆದ್ದಲುಗಳ ನಾಶಕ್ಕಾಗಿ ಫೋರೇಟ್ ಎಂಬ ವಿಷವನ್ನು ಸಿಂಪಡಿಸಲಾಗುತ್ತಿದೆ.

ಇವೆರಡೂ ಎಂತಹ ಅಪಾಯಕಾರಿ ವಿಷಗಳೆಂದರೆ ನಿಮ್ಮ ಬೀಜಗಳನ್ನು ಪ್ರಾರಂಭದಿಂದಲೇ, ಅಂದರೆ ಬಿತ್ತನೆಗೂ ಮುಂಚೆಯೇ ರೋಗಗ್ರಸ್ತವಾಗಿಸುತ್ತವೆ. ಒಂದು ರೋಗವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಹೋಗಿ ಹತ್ತಾರು ರೋಗಗಳನ್ನು ಆಹ್ವಾನಿಸಿದಂತಾಗುತ್ತದೆ.

ಫೋರೇಟ್ ವಿಷವನ್ನೇ ನೋಡಿ. ಇದನ್ನು ಸಿಂಪಡಿಸಿದ ಮರುದಿನ ಗೆದ್ದಲಿನ ವಿಷಯ ಹಾಗಿರಲಿ, ನಿಮ್ಮ ಭೂಮಿಯಲ್ಲಿರುವ ಇಲಿ, ಹಾವು, ಮೊಲ, ಕಾಡುಬೆಕ್ಕು, ಕಪ್ಪೆ, ಹಲ್ಲಿ, ನೆಲಮಟ್ಟದಲ್ಲಿ ಸಂಚರಿಸುವ ಹಕ್ಕಿಗಳು ಎಲ್ಲವೂ ಮಾಯ. ವಿಷದ ಸಂಪರ್ಕಕ್ಕೆ ಬರುವ ಎಲ್ಲವೂ ಸತ್ತು ಹೋಗಿರುತ್ತವೆ. ಅವುಗಳ ದೇಹವನ್ನು ಹುಳು ಕೂಡ ಮುಟ್ಟುವುದಿಲ್ಲ. ಇನ್ನು ಭೂಮಿಯಲ್ಲಿರುವ ಕೋಟ್ಯಾನುಕೋಟಿ ಸೂಕ್ಷ್ಮಜೀವಿಗಳ ಗತಿ ಏನಾಗಿರಬಹುದು ಯೋಚಿಸಿ ನೋಡಿ.

ಏಕೆಂದರೆ ಭೂಮಿಯ ಜೈವಿಕ ಚಟುವಟಿಕೆಯಲ್ಲಿ ಇವೆಲ್ಲವುಗಳ ಅವಶ್ಯಕತೆ ಸಾಕಷ್ಟಿದೆ. ಅವನ್ನು ಕೊಲ್ಲುವ ಮೂಲಕ, ನಿಮ್ಮ ಬೀಜಗಳಿಗೆ ಭೀಕರ ವಿಷವಾದ ಬಾವಿಸ್ಟಿನ್ ಅನ್ನು ಲೇಪಿಸುವ ಮೂಲಕ ಬಿತ್ತಲು ಹೊರಟರೆ ಮೊದಲ ದಿನದಿಂದ ಶತ್ರುಗಳು ನಿಮ್ಮ ಬೆಳೆಗೆ ಗಂಟು ಬೀಳುತ್ತವೆ. ಈ ವಿಷವಸ್ತು ಬೇಗ ನಾಶವಾಗದೇ ಮಣ್ಣಿನಲ್ಲಿ ಜೀವಂತವಾಗಿರುವ ಮೂಲಕ ಬೆಳೆಗಳಿಗೆ ಪ್ರತಿಕೂಲ ವಾತಾವರಣ ನಿರ್ಮಿಸುತ್ತವೆ. ಮಳೆಯ ಮೂಲಕ ಅಂತರ್ಜಲವನ್ನು ಸೇರುತ್ತವೆ. ಹರಿದುಹೋಗಿ ಹಳ್ಳ, ನದಿ ಸೇರಿ ವಾಪಸ್ಸು ನಮ್ಮ ಹೊಟ್ಟೆ ಸೇರುತ್ತವೆ. ಮತ್ತೆ ಬೆಳೆಗಳ ಮೂಲಕ, ಆಹಾರ ರೂಪದಲ್ಲಿ ನಮ್ಮ ದೇಹ ಪ್ರವೇಶಿಸುತ್ತವೆ. ಹೀಗಾಗಿ ಮಣ್ಣಿಗೆ ಹಾಕಿದ ವಿಷ ಮತ್ತೆ ತಲುಪುವುದು ಮನುಷ್ಯನನ್ನೇ. ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮುಂದೆ ಓದುವಿರಿ.

ನಿಸರ್ಗದ ಕೊಂಡಿಯನ್ನು ಮುರಿದು ಹಾಕುವ ಮೂಲಕ ನಮ್ಮ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಿತ್ತನೆ ಬೀಜದ ರೋಗ ನಿರೋಧಕ ಶಕ್ತಿಯನ್ನು ಹಾಳು ಮಾಡಿದ್ದಲ್ಲದೇ ಭೂಮಿಯ ಶಕ್ತಿಯನ್ನೂ ಕುಂದಿಸಲಾಗಿದೆ. ಗೊಬ್ಬರದ ಹೆಸರಿನಲ್ಲಿ ಸುರಿಯುತ್ತಿರುವ ರಾಸಾಯನಿಕಗಳು, ಬೆಳೆ ರಕ್ಷಣೆಗೆಂದು ಸಿಂಪಡಿಸಲಾಗುತ್ತಿರುವ ಭಯಂಕರ ವಿಷಗಳು ಪರಿಸರವನ್ನು ಹದಗೆಡಿಸಿವೆ. ಹೀಗಿರುವಾಗ ವಿಷವುಂಡ ಸಸ್ಯಗಳು ಹೇಗೆ ಬೆಳೆದಾವು? ಒಂದು ವೇಳೆ ಬೆಳೆದರೂ ಅವುಗಳ ಒಡಲಲ್ಲಿ ವಿಷವಿರುವಾಗ, ಅದನ್ನುಂಡ ಮನುಷ್ಯ ಹೇಗೆ ನೆಮ್ಮದಿಯಿಂದ ಬದುಕಿಯಾನು? ಇಷ್ಟೆಲ್ಲ ದುಡ್ಡು ಖರ್ಚು ಮಾಡಿ, ವಿಷ ಹಾಕಿ, ವಿಷ ಉಣ್ಣುವ ಕರ್ಮ ಏಕೆ ಬೇಕು?

ಆದ್ದರಿಂದ ಇನ್ನು ಮುಂದೆ ಬಾವಿಸ್ಟಿನ್, ಫೋರೇಟ್‌ನಂತಹ ವಿಷ ವಸ್ತುಗಳನ್ನು ಬೀಜ ಮತ್ತು ಮಣ್ಣುಗಳಿಗೆ ಬೆರೆಸಬೇಕಾದ ಅವಶ್ಯಕತೆಯಿಲ್ಲ. ಸುಭಾಷ ಪಾಳೇಕರ ಇದಕ್ಕೆ ಅತ್ಯುತ್ತಮ ಬದಲಿ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ಖರ್ಚಿಲ್ಲದ, ಆದರೆ ನಿಮ್ಮ ಬೀಜಕ್ಕೆ ಮತ್ತು ಭೂಮಿಗೆ ಅಮೃತ ನೀಡುವ ಉಪಾಯ ಕಂಡುಹಿಡಿದಿದ್ದಾರೆ.

ಅದರ ಹೆಸರೇ ಬೀಜಾಮೃತ.

ನಿಸರ್ಗಕ್ಕೆ ಯಾವುದೇ ರೀತಿಯ ಹಾನಿ ಮಾಡದೇ, ಬೀಜದೊಳಗೆ ಏನಾದರೂ ದೋಷಗಳಿದ್ದರೆ ಅದನ್ನು ಪ್ರಾರಂಭದಲ್ಲಿಯೇ ಸರಿಪಡಿಸುವ ಮೂಲಕ, ಮೊಳಕೆಯ ಹಂತದಲ್ಲಿ ಬರುವ ರೋಗಗಳನ್ನು ಯಶಸ್ವಿಯಾಗಿ ತಡೆಗಟ್ಟುವ ಮೂಲಕ, ಬೆಳವಣಿಗೆಯನ್ನು ಖಚಿತಪಡಿಸುವ ವಿಧಾನ ಇದು.

(ಮುಂದುವರಿಯುವುದು)

- ಚಾಮರಾಜ ಸವಡಿ