ಬೀಜ ಸಂರಕ್ಷಣೆಗೊಂದು ಬೀಜತಿಜೋರಿ

ಬೀಜ ಸಂರಕ್ಷಣೆಗೊಂದು ಬೀಜತಿಜೋರಿ

ಬರಹ

ವಿಶ್ವಮಟ್ಟದಲ್ಲಿ ಆಹಾರವೈವಿಧ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಐದು ದೇಶಗಳ ಮುಖಂಡರು ಬೀಜರಕ್ಷಣೆಯ ಅತಿಸುಭದ್ರ ವ್ಯವಸ್ಥೆಯೊಂದನ್ನು ತಾವು ಮಾಡುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ನಾರ್ವೆ, ಸ್ವೀಡನ್, ಡೆನ್ಮಾರ್ಕ್, ಫಿನ್ಲೆಂಡ್ ಮತ್ತು ಐಸ್‍ಲ್ಯಾಂಡ್ ಇವೇ ಆ ಐದು ದೇಶಗಳು.

ಈ ತಿಜೋರಿ ಅಂತಿಂಥದಲ್ಲ. ಅತ್ಯಂತ ಬಲಿಷ್ಟವಾದ ೫೦ ಮೀಟರ್ ಉದ್ದದ ಆ ತಿಜೋರಿಯಲ್ಲಿ ಭೂಮಿಯ ಮೇಲಿನ ಎಲ್ಲಾ ರೀತಿಯ ಆಹಾರ ಬೆಳೆಗಳ ಮಾದರಿ ಬೀಜಗಳನ್ನು ಸಂಗ್ರಹಿಸಿಡಲಾಗುವುದು. ತಿಜೋರಿಯನ್ನು ಉತ್ತರ ಧ್ರುವದಿಂದ ಒಂದು ಸಾವಿರ ಕಿಮೀ ದೂರದಲ್ಲಿರುವ ಸ್ವಾಲ್‍ಬಾರ್ಡ್ ಪರ್ವತದ ಬೃಹದಾಕಾರದ ಬಂಡೆಯನ್ನು ಬಗೆದು ಅಲ್ಲಿ ಹೂಳಿಡಲಾಗುವುದು. ತಿಜೋರಿಯ ಹೊರಗೋಡೆ ಒಂದು ಮೀಟರ್ ದಪ್ಪದ ಕಾಂಕ್ರೀಟಿನದ್ದು. ಭವಿಷ್ಯದಲ್ಲಿ ಎಂತಹ ಭಯಂಕರ ನೈಸರ್ಗಿಕ ವಿಪತ್ತಾಗಲೀ, ಭೂಬಿಸಿಯಾಗಲೀ, ಬಾಂಬುದಾಳಿಯಾಗಲೀ ಅಥವಾ ಅಣುಯುದ್ಧವಾಗಲೀ ಸಂಭವಿಸಿದಲ್ಲಿ ತಿಜೋರಿಗೆ ಅಪಾಯವಾಗಬಾರದೆಂದು ಈ ವಿಶೇಷ ವ್ಯವಸ್ಥೆ. ಈ ತಿಜೋರಿಯ ನಿಯಂತ್ರಣಕ್ಕೆ ರಿಮೋಟ್ ಕಂಟ್ರೋಲ್ ವ್ಯವಸ್ಥೆಯಿರುತ್ತದೆ. ಒಳಗಡೆ ತಾಪಮಾನವನ್ನು ಹತೋಟಿಯಲ್ಲಿಡಲೆಂದು(-೧೮ಡಿಗ್ರಿ ಸೆಂಟಿಗ್ರೇಡ್) ವಿದ್ಯುತ್ ವ್ಯವಸ್ಥೆಯೂ ಇದೆ. ಅಕಸ್ಮಾತ್ ವಿದ್ಯುತ್ ನಿಲುಗಡೆಯಾದರೂ ತೊಂದರೆಯಿಲ್ಲ, ಏಕೆಂದರೆ ಅಲ್ಲಿ ವಾತಾವರಣದ ಉಷ್ಣತೆ -೩ ಡಿಗ್ರಿಯನ್ನು ಎಂದೂ ದಾಟುವುದಿಲ್ಲ. ಈ ಶೀತಲ ಲೋಕದಲ್ಲಿ ಅಕ್ಕಿ, ಗೋಧಿ ಹಾಗೂ ಕಾಳುಗಳು ಒಂದು ಸಾವಿರ ವರ್ಷಗಳವರೆಗೂ ಹಾಳಾಗದೆ ಉಳಿಯಲಿವೆ. ಭಯಂಕರ ಚಳಿಯಿರುವ ಪ್ರದೇಶವದಾದ್ದರಿಂದ ಹಿಮಬಿರುಗಾಳಿ, ಹಿಮಕರಡಿಗಳ ಓಡಾಟಗಳು ಬೀಜತಿಜೋರಿಗೆ ಕನ್ನ ಹಾಕಬಯಸುವವರಿಂದ ಸದಾ ಪ್ರ್‍ಆಕೃತಿಕ ರಕ್ಷಣೆಯನ್ನು ಒದಗಿಸುತ್ತವೆ. ಆರ್ಕ್ಟಿಕ್ ಖಂಡದಲ್ಲೇನಾದರೂ ಸಮುದ್ರದ ನೀರು ಉಕ್ಕಿತೆಂದರೆ ಎತ್ತರದಲ್ಲಿರುವ ಈ ತಿಜೋರಿಯ ಭದ್ರತೆಗೆ ಯಾವ ಅಪಾಯವೂ ಇರುವುದಿಲ್ಲ.

ಭೂಮಿಯ ಮೇಲೆ ಬೇಸಾಯ ಪ್ರಾರಂಭವಾದಾಗಿನಿಂದ ಅಂದರೆ ಸುಮಾರು ಹತ್ತು ಸಾವಿರ ವರ್ಷಗಳಿಂದ ಮಾನವ ಜೀವಿ ತನ್ನ ಆಹಾರಕ್ಕೆಂದು ಬೆಳೆಯುತ್ತಿದ್ದ ಎಲ್ಲಾ ರೀತಿಯ ಆಹಾರ ಧಾನ್ಯಗಳಲ್ಲಿ ಅನೇಕವು ಕಣ್ಮರೆಯಾಗಿವೆ. ಉಳಿದಿರುವ ಎಲ್ಲ ಜಾತಿಯ ಬೀಜಗಳನ್ನೂ ಇಲ್ಲಿ ಸಂಗ್ರಹಿಸಿಡಲಾಗುತ್ತದೆ. ಪ್ರತಿಬಗೆಯ ಬೀಜಗಳನ್ನು ವಿಶೇಷವಾದ ಲಕೋಟೆಗಳಲ್ಲಿ ಹಾಕಿ ಅವನ್ನು ಕಪ್ಪು ಪೆಟ್ಟಿಗೆಗಳಲ್ಲಿ ಇಡಲಾಗುವುದು. ಯಾವುದಾದರೂ ಸಸ್ಯ ಭೂಮಿಯಲ್ಲಿ ಸಂಪೂರ್ಣ ಅವನತಿ ಹೊಂದಿದ ಸಂದರ್ಭದಲ್ಲಿ ಮಾತ್ರ ಈ ತಿಜೋರಿಯಿಂದ ಆ ಸಸ್ಯದ ಬೀಜಗಳನ್ನು ಹೊರತೆಗೆದು ಬಳಸಬಹುದು. ತಿಜೋರಿಯೊಳಕ್ಕೆ ಪ್ರವೇಶಿಸಲು ಒಂದೇ ಒಂದು ಬಾಗಿಲಿದ್ದು ಅದಕ್ಕೆ ಆರು ಬೀಗದ ಕೈಗಳಿರುತ್ತವೆ. ಈ ಐದು ದೇಶಗಳ ಬಳಿ ಒಂದೊಂದು ಹಾಗೂ ವಿಶ್ವಸಂಸ್ಥೆಯ ಸುಪರ್ದಿಯಲ್ಲಿ ಆರನೆಯ ಬೀಗದಕೈ ಇಡಲಾಗುತ್ತದೆ.

೨೦೦೬ರಲ್ಲಿ ಬೀಜತಿಜೋರಿಯ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು ೨೦೦೮ ರಿಂದ ಎಲ್ಲಾ ದೇಶಗಳಿಂದ ಬೀಜಗಳ ಸಂಗ್ರಹ ಆರಂಭಗೊಳ್ಳಲಿದೆ. ಒಟ್ಟೂ ಇಪ್ಪತ್ತು ಲಕ್ಷ ಜಾತಿಯ ಸುಮಾರು ೧೨೦ ಕೋಟಿ ಬೀಜಗಳು ಒಂಭತ್ತು ವರ್ಷ ಕಾಲಾವಧಿಯೊಳಗೆ ಸಂಗ್ರಹಗೊಳುವ ನಿರೀಕ್ಷೆ ಇದೆ.

ಈ ಕಾರ್ಯಕ್ಕೆಂದು ನಾರ್ವೆ ಹಾಗೂ ಸದಸ್ಯ ದೇಶಗಳು ಐವತ್ತು ಕೋಟಿ ಡಾಲರ್ ಹಣ ಹೂಡಿದೆ. ಬೀಜತಿಜೋರಿಯ ನಿರ್ವಹಣಾ ವೆಚ್ಚವನ್ನು 'ವಿಶ್ವ ಜೀವವೈವಿಧ್ಯತಾ ಟ್ರಸ್ಟ್' ಸಂಸ್ಥೆ ವಹಿಸಿಕೊಂಡಿದೆ. 'ಈಗ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸುಮಾರು ೧೪೦೦ ಬೀಜ ಬ್ಯಾಂಕುಗಳಿವೆ. ಯುದ್ಧ, ಪ್ರಾಕೃತಿಕ ವಿಕೋಪ ಹೀಗೆ ಹಲವಾರು ಕಾರಣಗಳಿಂದಾಗಿ ನಲವತ್ತು ಬೀಜ ಬ್ಯಾಂಕುಗಳು ನಾಶಗೊಂಡಿವೆ. ಆ ದೃಷ್ಟಿಯಿಂದ ಭವಿಷ್ಯದಲ್ಲಿ ಎಂಥಹ ಆಪತ್ತಿನ ದಿನಗಳಲ್ಲೂ ಈ ತಿಜೋರಿಯಲ್ಲಿ ಬೀಜಗಳು ಉಳಿದಿರುತ್ತವೆ. ಇಲ್ಲಿರುವ ಬೀಜ, ಧಾನ್ಯಗಳು ಜನರ ಹೊಟ್ಟೆ ತುಂಬಿಸದಿದ್ದರೂ ಅವರ ಭವಿಷ್ಯಕ್ಕೊಂದು ಆಧಾರವಾಗಲಿವೆ' ಎನ್ನುತ್ತಾರೆ ಟ್ರಸ್ಟ್‍ನ ಜಾಫ್ ಹಾವ್ಟಿನ್ ಅವರು. ಮೂವತ್ತು ಮಿಲಿಯನ್ ಡಾಲರ್ ಧನಸಹಾಯ ಮಾಡಿರುವ ಬಿಲ್ ಗೇಟ್ಸ್ ಫೌಂಡೇಶನ್ ಬೀಜಗಳ ಲೆಕ್ಕ ನಿರ್ವಹಣೆಗೆಂದು ಉಚಿತ ತಂತ್ರಾಂಶವನ್ನು ಒದಗಿಸಲೂ ಮುಂದೆ ಬಂದಿದೆ.

ನಮ್ಮ ರಾಜ್ಯದಲ್ಲಿ ಸುಮಾರು ಅರವತ್ತು ಬೀಜ ಬ್ಯಾಂಕುಗಳಿವೆ. ಗ್ರೀನ್ ಫೌಂಡೇಶನ್ ಸಂಸ್ಥೆ ನಲವತ್ತು ಬೀಜ ಬ್ಯಾಂಕುಗಳನ್ನು ವಿವಿಧ ಜಿಲ್ಲೆಗಳಲ್ಲಿ ಸ್ಥಳೀಯರ ನೆರವಿನಿಂದ ಸ್ಥಾಪಿಸಿದೆ. ಈ ಬೀಜಬ್ಯಾಂಕುಗಳು ಆಗಾಗ ಬೀಜಮೇಳವನ್ನು ನಡೆಸಿ ರೈತರು ವಿನಿಮಯ ಕ್ರಮದ ಮೂಲಕ ತಮ್ಮಲ್ಲಿಲ್ಲದ ಬೀಜಗಳನ್ನು ಪಡೆಯುವಲ್ಲಿ ನೆರವಾಗುತ್ತಿವೆ. ಅಳಿವಿನ ಅಂಚಿನಲ್ಲಿರುವ, ಬಳಕೆಯಲ್ಲಿರುವ ಹಾಗೂ ಬಳಕೆಯಲ್ಲಿರದ ಜೀವವೈವಿಧ್ಯಗಳನ್ನು ರಕ್ಷಿಸಲೆಂದು ಜನರು ಕಂಡುಕೊಂಡ ಮಾರ್ಗ ಇದು. ಬೀಜಗಳನ್ನು ಭದ್ರವಾಗಿ ಅಡಗಿಸಿಡುವ ಬದಲು ಮತ್ತೆ ಮತ್ತೆ ಬೆಳೆಯುತ್ತ, ಬಳಸುತ್ತ ತಲೆಮಾರುಗಳಿಗೆ ವರ್ಗಾಯಿಸುತ್ತಿರುವುದೇ ಅವುಗಳನ್ನು ಉಳಿಸಿಕೊಳ್ಳಲು ಸಮರ್ಪಕ ಮಾರ್ಗ ಎಂದು ಹಿರಿಯರು ಹೇಳುತ್ತಾರೆ. ಉದಾಹರಣೆಗೆ ದಕ್ಷಿಣಕನ್ನಡದ ಮಿತ್ತಬಾಗಿಲು ಎಂಬಲ್ಲಿ ದೇವರಾಯ ಎನ್ನುವ ರೈತ ಕಳೆದ ನಾಲ್ಕು ದಶಕಗಳಿಂದ ಪ್ರತಿ ವರ್ಷವೂ ಸುಮಾರು ನಲವತ್ತಾರು ಜಾತಿಯ ಭತ್ತದ ತಳಿಗಳನ್ನು ಬೆಳೆಸುತ್ತಿದ್ದಾರೆ. ಇಷ್ಟೆಲ್ಲ ತರದ ಅಕ್ಕಿಯನ್ನು ಅವರು ಉಣ್ಣುತ್ತಾರೆಯೇ? ಇಲ್ಲ. ಬಳಸುವುದು ಕೆಲವೇ ಜಾತಿಯ ಅಕ್ಕಿಯಾದರೂ ಭವಿಷ್ಯಕ್ಕಾಗಿ ಉಳಿಸಿಡಬೇಕೆಂಬ ಒಂದೇ ಕಾರಣಕ್ಕಾಗಿ ಅಲ್ಪ ಪ್ರಮಾಣದಲ್ಲಾದರೂ ಸರಿ, ತಮ್ಮಲ್ಲಿರುವ ಎಲ್ಲ ಭತ್ತದ ತಳಿಗಳನ್ನೂ ಪ್ರತಿ ವರ್ಷ ನಾಟಿ ಮಾಡುತ್ತಿದ್ದಾರೆ. ಕುರುಬರಹಳ್ಳಿಯ ಪಾಪಮ್ಮ ಪ್ರತಿವರ್ಷವೂ ತನ್ನಂಗಳದ ಒಂದಿಂಚು ಬಿಡದಂತೆ ಉತ್ತಮ ತರಕಾರಿಗಳನ್ನು ಬೆಳೆಯುತ್ತಾರಲ್ಲದೆ ತನ್ನಲ್ಲಿರುವ ಬೀಜಗಳನ್ನು ಉಳಿದವರಿಗೆ ಹಂಚಿ ಅವರೂ ನೆಲವನ್ನು ಹಸಿರುಗೊಳಿಸುವಂತೆ ಉತ್ತೇಜಿಸುತ್ತಾರೆ. ಅಡ್ಯನಡ್ಕದ ವಾರಣಾಶಿ ಸಂಶೋಧನಾ ಕೇಂದ್ರದಲ್ಲಿ ತರಕಾರಿ ಹಾಗೂ ಭತ್ತದ ಬೀಜಗಳನ್ನು ಗ್ರಾಮೀಣ ಸಾಂಪ್ರದಾಯಿಕ ಪದ್ಧತಿಯಂತೆ ಬಿಸಿಲಲ್ಲಿ ಒಣಗಿಸಿ, ಮಡಕೆಗಳಲ್ಲಿ ಹಾಗೂ ಸೋರೆ ಅಥವಾ ಕುಂಬಳಕಾಯಿಗಳ ಒಣಬುರುಡೆಗಳಲ್ಲಿಟ್ಟು ಹೊಗೆಗೂಡಿನ ಬೆಚ್ಚನೆಯ ಜಾಗದಲ್ಲಿ ರಕ್ಷಿಸಿಡಲಾಗುತ್ತಿದೆ.

ಮೇಲಿನ ಬೀಜತಿಜೋರಿಯ ಕಲ್ಪನೆ ಕೇಳಲಿಕ್ಕೇನೋ ಸೊಗಸಾಗಿದೆ. ಆದರೆ ಅಪಾರ ಹಣಹೂಡಿ ಮಾಡಿದ ಆ ವ್ಯವಸ್ಥೆ ಸದಾಕಾಲ ಉಳಿಯಲು ರಾಜಕೀಯ, ಆರ್ಥಿಕ ಬೆಂಬಲಗಳು ಬೇಕೇಬೇಕು. ಅದರ ನಿರ್ಮಾಣ, ನಿರ್ವಹಣೆ ಕೂಡ ಅತಿ ಕಷ್ಟಕರವಾದದ್ದು. ಅದಕ್ಕಿಂತ ಈಗಿರುವಂತೆ ಅಲ್ಲಲ್ಲಿ ಬೀಜಬ್ಯಾಂಕುಗಳನ್ನು ಸ್ಥಾಪಿಸಿ ಅದರ ನಿರ್ವಹಣೆಯನ್ನೂ ಸ್ಥಳೀಯ ಜನರೇ ನಡೆಸುವಂತಾದರೆ ಬೀಜಗಳ ಸಂರಕ್ಷಣೆಯ ಕಾರ್ಯ ಹೆಚ್ಚು ಸಮರ್ಥವಾಗಿ ನಡೆಯುತ್ತದೆ. ಇದು ಸುಸ್ಥಿರ ಬೀಜಸಂರಕ್ಷಣಾ ಮಾರ್ಗವಷ್ಟೇ ಅಲ್ಲ, ಗಾಂಧೀಜಿಯವರ ವಿಕೇಂದ್ರೀಕರಣ ಸೂತ್ರದ ಅನುಷ್ಠಾನವೂ ಕೂಡ.

**********************************