ಬೀದಿಯ ಬದಿಯ ಬಿಕ್ಷುಕ !

ಬೀದಿಯ ಬದಿಯ ಬಿಕ್ಷುಕ !

ಕಾರಿನಲ್ಲಿ ಸಾಗುತ್ತಿದ್ದೆ. ಭಾನುವಾರ ಮಧ್ಯಾನ್ನವಾದ್ದರಿಂದ ಸ್ವಲ್ಪ ಕಡಿಮೆ ಟ್ರಾಫಿಕ್ ಇತ್ತು. ಸಿಗ್ನಲ್ ದೀಪ ಕೆಂಪು ನಿಶಾನೆ ತೋರಿದ್ದರಿಂದ ನಿಂತೆ. ಬದಿಯ ರೋಡ್ ಡಿವೈಡರ್ ಮೇಲೆ ಮುದುಕನೊಬ್ಬ ಕುಳಿತ್ತಿದ್ದ ...

ಆತನೊಬ್ಬ ಭಿಕ್ಷುಕ.
 
ಸಾಮಾನ್ಯವಾಗಿ ಭಿಕ್ಷೆ ಹಾಕದ ನಾನು, ಮರುಕ ಹುಟ್ಟಿ ಒಂದು ಡಾಲರ್ ಕೈಗೆ ತೆಗೆದುಕೊಂಡು, ಕಿಟಕಿ ಗಾಜನ್ನು ಇಳಿಸಿ ಅವನಿಗೆ ನೀಡಿದೆ. ಆತ, ಕುಳಿತಲ್ಲಿಂದ ಕದಲದೆ ತನ್ನ ಬಳಿಯಿದ್ದ ರಿಮೋಟ್’ನಂತಹುದನ್ನು ತೆಗೆದುಕೊಂಡು ಬಟನ್ ಒತ್ತಿದ. ಗಾಡಿಯನ್ನು ಮೇಲಕ್ಕೆತ್ತುವ ಜ್ಯಾಕ್’ನಂತೆ ಅವನ ಪಾತ್ರೆಯನ್ನು ಫಳ ಫಳ ಹೊಳೆವ ಒಂದು ಸಾಧನ ಭಿಕ್ಷಾ ಪಾತ್ರೆಯನ್ನು ಎತ್ತಿಕೊಂಡು ಕಿಟಕಿಯ ಬಳಿ ಬಂತು.
 
ನಾನು ಯಾವುದೋ ಮೋಡಿಗೆ ಒಳಗಾದಂತೆ ಸುಮ್ಮನೆ ಡಾಲರ್ ನೋಟನ್ನು ಅವನ ಪಾತ್ರೆಗೆ ಇಳಿಬಿಟ್ಟೆ. ನೋಟು ಪಾತ್ರೆಯನ್ನು ಮುಟ್ಟುತ್ತಿದ್ದಂತೆ, ನಾ ಹಾಕಿದ ಭಿಕ್ಷೆಗೆ ನಗು ಮುಖ ಸೂಸಿ ಧನ್ಯವಾದ ಹೇಳಿದನಾತ. ಪಾತ್ರೆ ವಾಪಸ್ಸಾಯಿತು.
 
ಕೆಂಪು ನಿಶಾನೆ ಕಳೆದು ಹಸಿರು ಮೂಡಿತು. ಹಿಂದೆ ಯಾವುದಾದರೂ ವಾಹನ್ ಇದೆಯೇ ಎಂದು ಕನ್ನಡಿಯಲ್ಲಿ ಒಮ್ಮೆ ನೋಡಿದೆ. ಇಡೀ ರೋಡಿನಲ್ಲಿ ನನ್ನ ಕಾರು ಬಿಟ್ಟರೆ ಯಾವುದೂ ಇರಲಿಲ್ಲ. ಹಾಗಾಗಿ, ಕಾರು ನಿಂತೆಡೆಯೇ ನಿಂತು ಇವನ ವ್ಯವಹಾರ ಗಮನಿಸುತ್ತಿದ್ದೆ.
 
ವಾಪಸಾದ ಪಾತ್ರೆಯಿಂದ ನೋಟನ್ನು ತೆಗೆದುಕೊಂಡು ಒಂದು ರಟ್ಟಿನ ಮೇಲೆ ಹರಡಿಟ್ಟುಕೊಂಡು ಕ್ಲಿಪ್ ಮಾಡಿದ. ನೋಟು ಹಾರದಿರಲಿ ಎಂದು. ನಂತರ ತನ್ನ ಕೊಳಕು ಚೀಲದಿಂದ ಒಂದು ಕರಿಬಣ್ಣದ ಲ್ಯಾಪ್-ಟಾಪ್ ಅನ್ನು ಹೊರಗೆಳೆದು, ಕಟ ಕಟ ಏನನ್ನೋ ಕುಟ್ಟಿದ. ಕುತೂಹಲ ಹೆಚ್ಚಾಯಿತು. ನಾನು ಗಾಡಿ ಆಫ್ ಮಾಡಿದೆ.
 
ತನ್ನ ಕೆಲಸ ಮುಗಿಸಿ ಮತ್ತೆ ಲ್ಯಾಪ್-ಟಾಪ್ ಅನ್ನು ಚೀಲಕ್ಕೆ ಸೇರಿಸಿದ. ನಾನು ಬಿಟ್ಟ ಬಾಯಿ ಬಿಟ್ಟಂತೆ ಅವನನ್ನು ಕೇಳಿದೆ ’ಇಷ್ಟು ಹೊತ್ತೂ ನೀನು ಕುಟ್ಟಿದ್ದೇನು?" ಎಂದು
 
ನಸುನಗುತ್ತ ಅವನು ಹೇಳಿದ "ನನ್ನ spreadsheet’ಅನ್ನು ಅಪ್ಡೇಟ್ ಮಾಡಿದೆ. ಮೊದಲು ನಿಮ್ಮ ಗಾಡಿಯ ನಂಬರ್ ಹಾಕಿದೆ. ನಂತರ ನೀವು ಕೊಟ್ಟ ನೋಟೀನ ಸಂಖ್ಯೆ ಹಾಕಿದೆ. ಈ ಎರಡೂ ಮಾಹಿತಿಗಳನ್ನು  ವೆಹಿಕಲ್ ಡಿಪಾರ್ಟ್ಮೆಂಟ್’ಗೆ ಕಳಿಸಿಸುತ್ತೇನೆ. ಅವರು ನೀವು ನೀಡಿದ ನೋಟಿನ ಸಂಖ್ಯೆಯನ್ನು ಮತ್ತು ನಿಮ್ಮ ವಿಳಾಸವನ್ನು ಪೋಲೀಸರಿಗೆ ಕಳಿಸುತ್ತಾರೆ. ನೋಟು ಅಸಲಿಯಾಗಿದ್ರೆ ಪೋಲೀಸ್ ಡಿಪಾರ್ಟ್ಮೆಂಟ್’ನವರು ನಿಮಗೆ ಒಂದು ಧನ್ಯವಾದದ ಈ-ಮೈಲ್ ಕಳಿಸುತ್ತಾರೆ. ನೋಟು ಖೋಟ ಆಗಿದ್ರೆ ಅಥವಾ ಬೇರೆ ಇನ್ಯಾವುದಾದರೂ ರೀತಿಯಿಂದ ನೀವು ಪಡೆದದ್ದೇ ಆಗಿದ್ದರೆ, ನಿಮ್ಮ ಮನೆಗೆ ಪೋಲೀಸಿನವರು ಬರುತ್ತಾರೆ. ಮಿಕ್ಕ ವಿಷಯ ನನಗೆ ಗೊತ್ತಿಲ್ಲ. ನಾನು ಕಳಿಸುವ ಪ್ರತಿ ಮಾಹಿತಿಗೆ ನನಗೆ ಇಷ್ಟು ಅಂತ ಕಮಿಷನ್ ವೆಹಿಕಲ್ ಡಿಪಾರ್ಟ್ಮೆಂಟ್’ನವರು ಕೊಡುತ್ತಾರೆ" ಎಂದ
 
ಮಾತು ಹೊರಡುವುದಿರಲಿ ಉಸಿರೇ ನಿಲ್ಲುತ್ತೇನೋ ಎನ್ನುವ ಭಾವನೆ ಮೂಡಿಬಂತು.
 
ನಾ ಕೊಟ್ಟ ನೋಟು ಅಸಲಿಯೇ ಆಗಿದ್ದರೂ, ನನ್ನಿಂದ ಭಿಕ್ಷೆ ಪಡೆದು, ನನ್ನ ಬಗೆಗಿನ ಮಾಹಿತಿಯನ್ನು ಮಾರಿಕೊಂಡು ನನ್ನ ಮುಂದೆಯೇ ದುಡ್ಡೂ ಮಾಡಿದ ಮುದುಕನ ಬಗ್ಗೆ ಅಸಾಧ್ಯ ಸಿಟ್ಟು ಬಂತು. ಅವನ ಲ್ಯಾಪ್-ಟಾಪ್’ನಲ್ಲಿ ನನ್ನ ಬಗೆಗಿನ ಮಾಹಿತಿಯನ್ನು ಅಳಿಸಲು, ಅವನ ಕೊಳಕು ಚೀಲದ ಕಡೆ ಕಿಟಕಿಯಿಂದ ಕೈ ಹೊರಚಾಚಿದೆ ... ಚಾಚಿದೆ .. ಚಾಚಿದೆ .. ಕೈ ಉದ್ದ ಆಗುತ್ತಲೇ ಇದೆ .. ಮರೀಚಿಕೆಯಂತೆ ಅವನು ದೂರ ಹೋಗುತ್ತಲೇ ಇದ್ದಾನೆ ... ನನ್ನ ಬಗೆಗಿನ ಮಾಹಿತಿ ಕದ್ದವ ಅಟ್ಟಿಸಿಕೊಂಡು ಹೋದಷ್ಟು ದೂರ ಹೋಗುತ್ತಿದ್ದಾನೆ ಎಂದೆನಿಸಿ ಸಹಾಯಕ್ಕಾಗಿ ಕಿರುಚಿದೆ ...
 
ಅಡುಗೆ ಮನೆಯಿಂದ ಧ್ವನಿ ಬಂತು "ಮತ್ತೆ ಹಗಲು ಕನಸಾ?" .... ಊಟವಾದ ಸೋಫಾದ ಮೇಲೆ ಒರಗಿದವನಿಗೆ ಹಾಗೇ ನಿದ್ದೆ ಬಂದಿತ್ತು ...
 

 

Comments

Submitted by Prakash Narasimhaiya Wed, 01/02/2013 - 10:37

ಆತ್ಮೀಯ ಭಲ್ಲೇಜಿ, ನಿಮ್ಮ ಕನಸು ಬೆಳಗಿನ ಜಾವದ ಕನಸಾಗಿದ್ದರೆ, ನಿಜವಾಗ ಬಹುದೇನೋ ಅಂದುಕೊಳ್ಳುತ್ತಿದ್ದೆ. ಸಧ್ಯ, ಇದು ಹಗಲು ಕನಸು! ಏನೇ ಆದರು ನಿಮಗೆ ಬೀಳುವ ಕನಸು ಕೂಡ ಒಂದತರಾ ಈಸ್ಟ್ ಮ್ಯಾನ್ ಕಲರ್ ಫಿಲಿಂ ನೋಡಿದಹಾಗೆ ಇರುತ್ತೆ. ಸಕತ್ತಾಗಿದೆ, ನಿಮ್ಮ ಕನಸಿನ ಜೊತೆಗೆ ಒಂದುಚೂರು ಮಸಾಲೆ, ಒಂದೆರಡು ಫೈಟು, ಐಟಂ ಸಾಂಗ್ ಮತ್ತೆ ಎರಡು ಡುಯೆಟ್ ಹಾಕಿದರೆ ಜಬರ್ದಸ್ತ್ ಮೂವಿ. ಈ ನಿಮ್ಮ ಸಿನಿಮಾ ಮಾಡಿದರೆ ಖಂಡಿತ ನೂರು ಕೋಟಿ ಲಾಭ ಸಿಕ್ಕ ಹಾಗೆ ಕನಸು ಬೀಳಬಹುದು. once again ಹಗಲು ಕನಸು. ನಿಮಗೆ ಒಳಿತನ್ನೇ ಆಶಿಸುವ ನಿಮ್ಮ ಆತ್ಮೀಯ.
Submitted by bhalle Wed, 01/02/2013 - 20:56

In reply to by Prakash Narasimhaiya

ಕಲ್ಪನೆಯ ಕನಸಿಗೆ ಕಲ್ಪನೆಯ ಅದ್ಬುತವಾಗಿ ಅಂಗಾಂಗಗಳನ್ನು ಜೋಡಿಸಿ ವಿಭಿನ್ನವಾಗಿಸಿದ್ದೀರ ... ಊಹಿಸಿಕೊಂಡು ಮಜಾ ಬಂತು ... ಧನ್ಯವಾದಗಳು ಪ್ರಕಾಶರೇ ... ಹೊಸ ವರ್ಷದಲ್ಲಿ ಇಂತಹ ಅಪಾಯಕಾರಿ ಸಂದರ್ಭಗಳ ಬಗ್ಗೆ ಜಾಗರೂಕರಾಗಿರೋಣ ... ಏನಂತೀರಾ? ಅಮೇರಿಕದ ಪೂರ್ವಭಾಗದಲ್ಲಿ ನೆಲೆಸಿರುವ ನಾನು 'ಈಸ್ಟ್ ಮ್ಯಾನ್' ಹೌದು :-)))
Submitted by bhalle Wed, 01/02/2013 - 21:15

In reply to by kavinagaraj

ಹೌದು ಕವಿಗಳೇ ... ಇಲ್ಲಿ ಭಿಕ್ಷುಕ ಒಂದು ಸಂಕೇತ ... ಆ ಜಾಗದಲ್ಲಿ, ನಿಮ್ಮ ಕೈಯಿಂದ ಕ್ರೆಡಿಟ್ ಕಾರ್ಡ್ ಪಡೆದು ಒಳ ನೆಡೆದ ಪಂಚತಾರ ಹೋಟಲ್ ವೈಟರ್ ಕೂಡ ಇರಬಹುದು ... ಇದು ಬಿಳೀ ಕಾಲರ್ ಮೋಸಗಾರಿಕೆ ದಂಧೆ ::‍‍((
Submitted by bhalle Wed, 01/02/2013 - 21:17

In reply to by sathishnasa

ಕೈ ಎತ್ತಿ ನೀಡಿದರೆ ಕೈಯನ್ನೇ ಕತ್ತರಿಸುವ ಜನರಿದ್ದಾರೆ ... ಇಂದಿನ ದಿನದಲ್ಲಿ ಭಿಕ್ಷೆ ನೀಡುವುದೂ ಅಪಾತ್ರ ದಾನವೇ ಆಗಿದೆ :-(( ಧನ್ಯವಾದಗಳು ಸತೀಶ್
Submitted by venkatb83 Wed, 01/02/2013 - 17:26

"ನೋಟು ಅಸಲಿಯಾಗಿದ್ರೆ ಪೋಲೀಸ್ ಡಿಪಾರ್ಟ್ಮೆಂಟ್’ನವರು ನಿಮಗೆ ಒಂದು ಧನ್ಯವಾದದ ಈ-ಮೈಲ್ ಕಳಿಸುತ್ತಾರೆ. ನೋಟು ಖೋಟ ಆಗಿದ್ರೆ ಅಥವಾ ಬೇರೆ ಇನ್ಯಾವುದಾದರೂ ರೀತಿಯಿಂದ ನೀವು ಪಡೆದದ್ದೇ ಆಗಿದ್ದರೆ, ನಿಮ್ಮ ಮನೆಗೆ ಪೋಲೀಸಿನವರು ಬರುತ್ತಾರೆ. ಮಿಕ್ಕ ವಿಷಯ ನನಗೆ ಗೊತ್ತಿಲ್ಲ. ನಾನು ಕಳಿಸುವ ಪ್ರತಿ ಮಾಹಿತಿಗೆ ನನಗೆ ಇಷ್ಟು ಅಂತ ಕಮಿಷನ್ ವೆಹಿಕಲ್ ಡಿಪಾರ್ಟ್ಮೆಂಟ್’ನವರು ಕೊಡುತ್ತಾರೆ" ಎಂದ" ;()) ಹೀಗೂ ಉ0ಟು....!!ಕನಸಿನಲ್ಲಿ...!! ವಿದೇಶ್ಹದಲ್ಲಿ ಅದೂ ಆಗಬಹ್ದುಏನೊ...!! ಮಜಾ ಕೊಟ್ಟ ಬರಹ‌... ನನ್ನಿ ಒಳಿತಾಗಲಿ \|/
Submitted by bhalle Wed, 01/02/2013 - 21:22

In reply to by venkatb83

ಯಾವ ಹುತ್ತದಲ್ಲಿ ಯಾವ ಹಾವು ಇದೆಯೋ ಯಾವಾನಿಗ್ಗೊತ್ತು? ನೀವು ದಯ ತೋರಿದರೆ ನಿಮ್ಮನ್ನು ನಿರ್ದಯವಾಗಿ ಹಿಂಸೆ ಮಾಡೋ ಜನರಿದ್ದಾರೆ ... ಹೊಸ ವರ್ಷದಲ್ಲಿ ಇಂಥವರಿಂದ ದೂರವಿರಿ ... ಹೊಸ ವರ್ಷದ ಶುಭಾಶಯಗಳು ವೆಂಕಟೇಶ್
Submitted by partha1059 Wed, 01/02/2013 - 21:54

ಬೆಳಗ್ಗೆಯೆ ಓದಿದೆ, ಪ್ರತಿಕ್ರಿಯೆ ಹಾಕೋಣ ಅಂದರೆ ಆಗಲಿಲ್ಲ , ಎನೆಲ್ಲ ಕನಸು ಕಾಣುವಿರಿ ನೀವು !! . ಕಾರಣವೇನಿರಬಹುದು , ಏನಾದರು ನಿಮ್ಮ ಹತ್ತಿರ ಅಂತ ನೋಟು ಸೇರಿದೆಯ ??
Submitted by bhalle Wed, 01/02/2013 - 23:13

In reply to by partha1059

ಇಲ್ಲ ಪಾರ್ಥರೇ ... ಖಂಡಿತ ಇಲ್ಲ ... ರಾತ್ರಿಯಲ್ಲಿ ಕನಸು ಕಾಣಬಾರದು ಅಂತ ಹೊಸ ವರ್ಷಕ್ಕೆ ರೆಸಲ್ಯೂಶನ್ ಹಾಕಿಕೊಂಡಿದ್ದರಿಂದ ಹೀಗೊಂದು ಹಗಲು ಕನಸ್ ಬಿತ್ತು :-))