ಬೀಭತ್ಸ (ಭಾಗ ೨)

ಬೀಭತ್ಸ (ಭಾಗ ೨)

"ಎಷ್ಟು ಬೇಗ ಈ ಆಚರಣೆ ಮರುಕಳಿಸಿತು ಅಲ್ಲವಾ.."? ಎಂದವಳು ಶ್ರೀಮತಿ ಡೆಲಾಕ್ರೋಕ್ಸ್. ಅವಳ ಮಾತಿಗೆ ಸಮ್ಮತಿಸುವಂತೆ ತಲೆಯಾಡಿಸಿದ ಶ್ರೀಮತಿ ಗ್ರೇವ್ಸ್,"ಹೌದು.ಮೊನ್ನೆಮೊನ್ನೆಯಷ್ಟೇ ಕಳೆದ ವರ್ಷದ ಚೀಟಿಯೆತ್ತುವಿಕೆಯ ಆಚರಣೆ ಮುಗಿದಿತ್ತೇನೋ ಎಂದು ಭಾಸವಾಗುತ್ತಿದೆ.ಕಾಲ ಎಷ್ಟು ಬೇಗ ಸರಿದು ಹೋಗುತ್ತದಲ್ಲವಾ..’?"ಎಂದು ನುಡಿದಳು.ಅಷ್ಟರಲ್ಲಿ ಕ್ಲಾರ್ಕ್ ನ ಸರದಿ ಮುಗಿದು ಡೆಲಾಕ್ರೋಕ್ಸ್ ತನ್ನ ಪಾಳಿಗಾಗಿ ಕಾಯುತ್ತ ನಿಂತಿದ್ದ."ಅಲ್ನೋಡು ನನ್ನ ಗಂಡನ ಸರದಿ ಬಂದೇ ಬಿಟ್ಟಿತು"ಎಂದ ಅವನ ಮಡದಿಗೆ ಒಂದು ಕ್ಷಣ ಉಸಿರು ನಿಂತ ಅನುಭವ.ಡೆಲಾಕ್ರೊಕ್ಸ್ ಚೀಟಿಯನ್ನೆತ್ತಿಕೊಂಡು ಸ್ವಸ್ಥಾನಕ್ಕೆ ಮರಳಿದ. "ಡನ್ಬರ್" ಎಂಬ ಹೆಸರು ಕೇಳುತ್ತಲೇ ಕಾಲು ಮುರಿದುಕೊಂಡು ಮನೆಯಲ್ಲಿಯೇ ಮಲಗಿದ್ದ ಡನ್ಬರನ ಮಡದಿ ನಿಧಾನವಾಗಿ ಕಪ್ಪುಪೆಟ್ಟಿಗೆಯ ಬಳಿ ನಡೆಯಲಾರಂಭಿಸಿದಳು.ಆಕೆಯನ್ನು ಗಮನಿಸಿದ ಮಹಿಳೆಯೊಬ್ಬಳು "ಧೈರ್ಯವಾಗಿ ಹೋಗು ಜೇನಿ,ಭಯ ಬೇಡ"ಎನ್ನುತ್ತ ಆಕೆಯನ್ನು ಹುರಿದುಂಬಿಸಿದಳು."ನಮ್ಮದು ಮುಂದಿನ ಸರದಿ"ಎನ್ನುತ್ತ ಕೊಂಚ ಗಂಭೀರಳಾದಳು ಶ್ರೀಮತಿ ಗ್ರೇವ್ಸ್.ತನ್ನ ಪತಿ ಗಡಿಬಿಡಿಯಾಗಿ ಕರಿಪೆಟ್ಟಿಗೆಯತ್ತ ತೆರಳಿ ಸಮ್ಮರ್ಸನಿಗೊಂದು ನಮಸ್ಕಾರ ಹೇಳಿ,ಚೀಟಿಯನ್ನು ಎತ್ತಿದ್ದನ್ನು ದೂರದಿಂದಲೇ ಗಮನಿಸಿದಳಾಕೆ.ಸಾಕಷ್ಟು ಸಮಯ ಕಳೆದಿತ್ತು.ಅದಾಗಲೇ ಚೀಟಿಯನ್ನು ಎತ್ತುಕೊಂಡಿದ್ದ ಜನ ಚೀಟಿಯನ್ನು ತೆರೆದು ನೋಡಲಾಗದೆ,ಕುತೂಹಲವನ್ನು ತಡೆದುಕೊಳ್ಳಲಾಗದೆ ನಿಂತಲ್ಲೆ ಸಣ್ಣಗೆ ಕಂಪಿಸುತ್ತಿದ್ದರು.ಡನ್ಬರನ ಮಡದಿ ಸಹ ಕೊಂಚ ಆತಂಕದಿಂದಲೇ ತನ್ನೆರಡು ಮಕ್ಕಳೊಡಗೂಡಿ ಮೂಲೆಯೊಂದರಲ್ಲಿ ನಿಂತಿದ್ದಳು.ಅಷ್ಟರಲ್ಲಿ ಹರ್ಬರ್ಟನ ಸರದಿ ಮುಗಿದು,ಹಚ್ಚಿಸನ್ನನ ಸರದಿ ಬಂದಿತ್ತು."ಬೇಗ ಹೋಗಿ ಚೀಟಿ ಎತ್ತು, ಬಿಲ್"ಎಂದ ಟೆಸ್ಸಿಯ ಮಾತಿನ ಶೈಲಿಯೇ ನೆರೆದಿದ್ದ ಕೆಲವರಿಗೆ ನಗು ತರಿಸಿತ್ತು.ಹಚ್ಚಿಸನ್ನನ ನಂತರ ಚೀಟಿಯೆತ್ತುವ ಸರದಿ ಜೋನ್ಸಳದ್ದು. 

ಸರ್ವಪ್ರಥಮವಾಗಿ ಚೀಟಿಯನ್ನು ಆರಿಸಿಕೊಂಡಿದ್ದ ಆಡಮ್ಸ್,ತನ್ನ ಪಕ್ಕದಲ್ಲಿ ನಿಂತಿದ್ದ ಊರಿನ ಹಿರಿಯ ವಾರ್ನರನನ್ನುದ್ದೇಶಿಸಿ,"ನಿಮಗೆ ಗೊತ್ತೆ ತಾತ,ಉತ್ತರದ ಕೆಲವು ಹಳ್ಳಿಗಳಲ್ಲಿ ಚೀಟಿ ಎತ್ತುವಿಕೆಯ ಈ ಸಾಂಪ್ರದಾಯಿಕ ಆಚರಣೆಯನ್ನು ನಿಲ್ಲಿಸಿಬಿಡುವ ಬಗ್ಗೆ ಚರ್ಚಿಸುತ್ತಿದ್ದಾರಂತೆ"ಎಂದು ನುಡಿದ.ಆಡಮ್ಸನ ಮಾತುಗಳು ಮುದಿಯನಲ್ಲಿ ಕೋಪ ಮೂಡಿಸಿತ್ತು."ಹಾಗೆ ಚರ್ಚಿಸುವವರು ಮೂರ್ಖ ಶಿಖಾಮಣಿಗಳೇ ಸರಿ"ಎಂದ ಮುದಿಯ,"ಹೊಸ ತಲೆಮಾರಿನ ಯುವಕರ ಯೋಚನಾಶಕ್ತಿಯೇ ಇಷ್ಟು.ಅವರಿಗೆ ಎಲ್ಲ ಆಚರಣೆಗಳು ಅಸಂಭದ್ದವೇ.ಹೀಗೆ ಎಲ್ಲ ಆಚರಣೆಗಳನ್ನು ಹೀಗೆಳೆಯುತ್ತ ನಿಷೇಧಿಸುತ್ತ ಹೋದರೆ ಕೊನೆಗೆ ಇವರೆಲ್ಲ ಆದಿಮಾನವರಂತೆ ಗುಹೆಗಳಲ್ಲಿ ವಾಸಿಸುತ್ತಾರೇನು.? ಚೀಟಿ ಎತ್ತುವಿಕೆಯಂತಹ ಸಂಪ್ರದಾಯಗಳಿಂದಲೇ ಕಾಲಕಾಲಕ್ಕೆ ಮಳೆಬೆಳೆಯಾಗುತ್ತಿರುವುದು.ಇಂಥಹ ಆಚರಣೆಗಳು ಅನಾದಿಕಾಲದಿಂದಲೂ ನಡೆದು ಬರುತ್ತಿವೆ ,ಮುಂದೆಯೂ ಇರಬೇಕು"ಎಂದ ವೃದ್ಧ ಕೊಂಚ ಸಿಡಿಮಿಡಿಗೊಳ್ಳುತ್ತ,"ನಮ್ಮೂರಿನಲ್ಲಿ ಆಚರಣೆ ನಡೆಯುತ್ತಿದೆಯಾದರೂ ತನ್ನ ಗಾಂಭೀರ್ಯತೆಯನ್ನು ಅದು ಕಳೆದುಕೊಂಡಿದೆ,ಅಲ್ಲಿ ನೋಡು, ಇಷ್ಟು ಗಂಭೀರವಾದ ಆಚರಣೆಯಲ್ಲಿ ಪ್ರತಿಯೊಬ್ಬರೊಂದಿಗೂ ತಮಾಷೆ ಮಾಡುತ್ತ ಸಮ್ಮರ್ಸ್ ಹೇಗೆ ಕಾರ್ಯಕ್ರಮದ ಘನತೆಯನ್ನು ಹಾಳುಗೆಡುವುತ್ತಿದ್ದಾನೆ "ಎಂದ."ಅದೇನೋ ನಿಜ ತಾತ,ಆದರೆ ಈಗಾಗಲೇ ಕೆಲವು ಊರುಗಳಲ್ಲಿ ಈ ಸಂಪ್ರದಾಯ ನಿಲ್ಲಿಸಿಬಿಟ್ಟಿದ್ದಾರಂತೆ"ಎಂದ ಆಡಮ್ಸ್."ನೋಡುತ್ತಿರು.ಇಂಥದ್ದೊಂದು ಪಾಪದ ಫಲವನ್ನು ಖಂಡಿತವಾಗಿಯೂ ಅನುಭವಿಸುತ್ತಾರೆ ಆ ಯುವ ಮೂರ್ಖರು"ಎಂದ ಹಿರಿಯ. ಬಾಬಿ ಮಾರ್ಟಿನ್ ದೂರದಲ್ಲಿಯೇ ನಿಂತು ತನ್ನ ತಂದೆ ಚೀಟಿಯೆತ್ತುತ್ತಿರುವುದನ್ನು ಗಮನಿಸುತ್ತಿದ್ದ.ಮಾರ್ಟಿನ್ನನ ಸರದಿಯ ನಂತರ ಓವರ್ಡೈಕ್,ಪರ್ಸಿ ಕ್ರಮಬದ್ಧವಾಗಿ ಚೀಟಿಯನ್ನೆತ್ತಿದರು.

"ಇವರೆಲ್ಲ ಕೊಂಚ ಅವಸರಿಸಿದ್ದರೇ ಒಳ್ಳೆಯದಿತ್ತು"ಎಂದು ಪದೆಪದೆ ಗೊಣಗಿಕೊಳ್ಳುತ್ತಿದ್ದವಳು.ಡನ್ಬರ್ ನ ಮಡದಿ.ತಾಯಿಯ ಆತಂಕವನ್ನು ಗಮನಿಸಿದ ಆಕೆಯ ಮಗ "ಇನ್ನೇನು ಮುಗಿದೇ ಹೊಯ್ತು ಬಿಡಮ್ಮ"ಎಂದು ಆಕೆಯನ್ನು ಸಮಾಧಾನಿಸಿದ."ಹೂಂ.ಚೀಟಿ ಎತ್ತುವಿಕೆ ಮುಗಿದ ತಕ್ಷಣ ನೀನು ಇದರ ಫಲಿತಾಂಶವನ್ನು ನಿನ್ನ ತಂದೆಗೆ ತಿಳಿಸಲು ಮನೆಗೆ ಹೋಗಬೇಕು.ಯಾವುದಕ್ಕೂ ತಯ್ಯಾರಿರು"ಎನ್ನುತ್ತ ತನ್ನ ಹಣೆಯಲ್ಲಿ ಜಿನುಗುತ್ತಿದ್ದ ಬೆವರೊರೆಸಿಕೊಂಡಳು ಅವನ ಅಮ್ಮ.ಅಷ್ಟರಲ್ಲಿ ಸಮ್ಮರ್ಸ್ ತನ್ನದೇ ಹೆಸರನ್ನೊಮ್ಮೆ ಜೋರಾಗಿ ಕೂಗಿ,ತಾನೂ ಸಹ ಕಪ್ಪುಪೆಟ್ಟಿಗೆಯೊಳಗಿನ ಒಂದು ಚೀಟಿಯನ್ನೆತ್ತಿಕೊಂಡು ತನ್ನ ಕೈಯಲ್ಲಿ ಮಡಚಿಕೊಂಡ.ಮುಂದಿನ ಸರದಿ ವಾರ್ನರನದ್ದಾಗಿತ್ತು."ನಾನೀಗ ನೋಡುತ್ತಿರುವುದು ಎಪ್ಪತ್ತೇಳನೆಯ ಚೀಟಿ ಎತ್ತುವಿಕೆಯ ಕಾರ್ಯಕ್ರಮ "ಎಂದು ಹೆಮ್ಮೆಯಿಂದ ಹೇಳಿಕೊಂಡ ಹಿರಿಯ ವಾರ್ನರ್,ಕಪ್ಪು ಪೆಟ್ಟಿಗೆಯಿಂದ ಚೀಟಿಯೊಂದನ್ನುಆರಿಸಿಕೊಂಡು,"ನಾನೆತ್ತಿಕೊಂಡ ಎಪ್ಪತ್ತೇಳನೆಯ ಚೀಟಿಯಿದು"ಎಂದು ಪುನರುಚ್ಚರಿಸಿದ."ವಾಟ್ಸನ್" ಎಂಬ ಹೆಸರು ಕೇಳುತ್ತಲೇ ಕೊಂಚ ಹಿಂಜರಿಕೆಯಿಂದಲೇ ಪೆಟ್ಟಿಗೆಯತ್ತ ಬಂದವನು ಆರಡಿಯ ಯುವಕ."ಹೆದರಬೇಡ ವ್ಯಾಟ್ಸನ್,ಆರಾಮಾಗಿ ಚೀಟಿ ಎತ್ತು"ಎಂದು ಅವನನ್ನು ಪ್ರೋತ್ಸಾಹಿಸಿದ ಸಮ್ಮರ್ಸ್.ಕೊನೆಯದಾಗಿ ಚೀಟಿ ಎತ್ತಿದವಳ ಹೆಸರು ಝನಿನಿ.

ಹಾಗೆ ಝನಿನಿ ಚೀಟಿ ಎತ್ತಿದ ನಂತರ ಸಭೆಯಲ್ಲೊಂದು ಕ್ಷಣಕಾಲದ ಮೌನ ಅವರಿಸಿತು.ಎಲ್ಲರೆದೆಯೂ ಢವಡವ.ಅಷ್ಟರಲ್ಲಿ ಸಮ್ಮರ್ಸ್,"ಇಲ್ಲಿಗೆ ಚೀಟಿ ಎತ್ತುವಿಕೆಯ ಕಾರ್ಯಕ್ರಮದ ಮೊದಲ ಹಂತ ಮುಗಿಯಿತು,ಈಗ ಎಲ್ಲರೂ ತಮ್ಮತಮ್ಮ ಚೀಟಿಗಳನ್ನು ತೆರೆದು ನೋಡಬಹುದು"ಎಂದ.ಕ್ಷಣಾರ್ಧದಲ್ಲೇ ಎಲ್ಲ ಚೀಟಿಗಳು ತೆರೆಯಲ್ಪಟ್ಟವು.ಚೀಟಿಗಳನ್ನು ತೆರೆದು ನೋಡಿದ ಎಲ್ಲರ ಬಾಯಿಯಲ್ಲಿಯೂ ಒಂದೇ ಪ್ರಶ್ನೆ."ಯಾರಿಗೆ ಬಂತು ಆ ಚೀಟಿ.?ಯಾರ ಕೈ ಸೇರಿತು ಆ ವಿಶೇಷ ಚೀಟಿ.."?ಒಂದರೆಕ್ಷಣ ಅಲ್ಲಿ ಗೊಂದಲದ ವಾತಾವರಣ."ಬಹುಶ: ಡನ್ಬರ್ ಕುಟುಂಬದವರ ಕೈ ಸೇರಿರಬೇಕು"ಎಂದು ಕೆಲವರು ಅನುಮಾನಿಸಿದರೆ,"ಊಹುಂ,ವ್ಯಾಟ್ಸನ್ನನ ಪಾಲಿಗೆ ಬಂದಿರಬೇಕು ಆ ಚೀಟಿ"ಎಂದವರು ಕೆಲವರು. "ಓಹೋ ಈ ಬಾರಿ ಚೀಟಿ ಹಚ್ಚಿಸನ್ನನ ಕುಟುಂಬದ ಪಾಲಾಗಿದೆ,ಹೌದು ಹೌದು ಬಿಲ್ ನ ಕೈಯಲ್ಲಿದೆ ನೋಡಿ ಚೀಟಿ"ಎಂದು ಮೂಲೆಯಲ್ಲಿ ನಿಂತಿದ್ದ ಕೆಲವರು ಕೂಗಿಕೊಂಡರು.

ಒಮ್ಮೆ ಜೋರಾಗಿ ನಿಟ್ಟುಸಿರು ಬಿಟ್ಟ ಡನ್ಬರನ ಮಡದಿ,"ಹೋಗಿ ನಿನ್ನ ಅಪ್ಪನಿಗೆ ಸುದ್ದಿ ತಿಳಿಸು"ಎಂದು ಮಗನನ್ನು ಮನೆಗೆ ಕಳುಹಿಸಿದಳು.ಈಗ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರ ಕಣ್ಣು ಬಿಲ್ ಹಚ್ಚಿಸನ್ನನ ಮೇಲೆ ನೆಟ್ಟಿತ್ತು.ಬಿಲ್ ಮೌನವಾಗಿ ತನ್ನ ಕೈಯಲ್ಲಿದ್ದ ಚೀಟಿಯನ್ನೇ ನೋಡುತ್ತ ನಿಂತಿದ್ದ.ಅಷ್ಟರಲ್ಲಿ,"ಇದು ಅನ್ಯಾಯ..!! ನೀನು ನನ್ನ ಪತಿಗೆ ಚೀಟಿ ಆಯ್ದುಕೊಳ್ಳಲು ಬೇಕಾಗುವಷ್ಟು ಕಾಲಾವಕಾಶವನ್ನೇ ನೀಡಲಿಲ್ಲ ಸಮ್ಮರ್ಸ್,ನಾನು ನನ್ನ ಕಣ್ಣಾರೇ ನೋಡಿದ್ದೇನೆ"ಎನ್ನುತ್ತ ಜೋರಾಗಿ ಕಿರುಚಿಕೊಂಡಳು ಟೆಸ್ಸಿ ಹಚ್ಚಿಸನ್."ಹಾಗೇನೂ ಇಲ್ಲ ಟೆಸ್ಸಿ,ಎಲ್ಲರಿಗೂ ಸಿಗುವಷ್ಟೇ ಸಮಯ ನಿನ್ನ ಗಂಡನಿಗೂ ಸಿಕ್ಕಿದೆ"ಎಂದು ಶಾಂತವಾಗಿಯೇ ನುಡಿದ ಸಮ್ಮರ್ಸ್.ಕೋಪಗೊಂಡ ಬಿಲ್,"ಬಾಯಿ ಮುಚ್ಚು ಟೆಸ್ಸಿ"ಎನ್ನುತ್ತ ತನ್ನ ಮಡದಿಯನ್ನೊಮ್ಮೆ ಗದರಿದ.

"ಸರಿ ಈ ಬಾರಿಯ ಚೀಟಿಯೆತ್ತುವಿಕೆಯಲ್ಲಿ ಹಚ್ಚಿಸನ್ನನ ಕುಟುಂಬ ಆಯ್ಕೆಯಾಗಿದೆ.ಈಗ ನಾವು ಮುಂದಿನ ವಿಧಿವಿಧಾನಗಳನ್ನು ಬೇಗಬೇಗ ಮುಗಿಸೋಣ"ಎಂದ ಸಮ್ಮರ್ಸ್,"ಬಿಲ್,ನಿನ್ನನ್ನು ಹೊರತುಪಡಿಸಿ ನಿನ್ನ ಕುಟುಂಬದ ಯಜಮಾನ ಅಂತ ಇನ್ಯಾರಾದರೂ ಇದ್ದಾರೆಯೇ"ಎಂದು ಕೇಳಿದ."ಇದ್ದಾರೆ ಇದ್ದಾರೆ,ಡಾನ್ ಮತ್ತು ಈವಾ ಇದ್ದಾರೆ ಅವರನ್ನೇ ಆಯ್ಕೆ ಮಾಡಿ"ಎಂದು ಕೂಗಿಕೊಂಡಳು ಟೆಸ್ಸಿ.ಆದರೆ ಆಕೆಯ ಮಾತಿಗೆ,"ನಿನ್ನ ಅಳಿಯ ಡಾನ್ ನಿನ್ನ ಕುಟುಂಬದ ಯಜಮಾನ ಎನ್ನಿಸಿಕೊಳ್ಳುವುದಿಲ್ಲ ಟೆಸ್ಸಿ,ಆತನದ್ದು ಬೇರೆಯದ್ದೆ ಕುಟುಂಬ ಎನ್ನಿಸಿಕೊಳ್ಳುತ್ತದೆ.ಅದು ನಿನಗೂ ಗೊತ್ತಲ್ಲವೇ.."?ಎಂದು ತಣ್ಣಗಿನ ದನಿಯಲ್ಲಿ ಉತ್ತರಿಸಿದ ಸಮ್ಮರ್ಸ್.ಅವನ ಮಾತಿನೆಡೆಗೆ ಗಮನ ಹರಿಸದ ಟೆಸ್ಸಿ,"ಇದು ಅನ್ಯಾಯ,ಇದು ಅನ್ಯಾಯ"ಎಂದು ಕಿರುಚುತ್ತಲೇ ಇದ್ದಳು.ಹೆಂಡತಿಯ ವರ್ತನೆಯಿಂದ ಕಸಿವಿಸಿಗೊಳಗಾಗಿದ್ದ ಹಚ್ಚಿಸನ್.ಆಕೆಗೆ ಸಮಾಧಾನ ಮಾಡುತ್ತ,"ಇಲ್ಲ ಟೆಸ್ಸಿ,ಸಮ್ಮರ್ಸ್ ಹೇಳಿದ್ದು ನ್ಯಾಯಯುತವಾಗಿಯೇ ಇದೆ.ನನ್ನ ಕುಟುಂಬಕ್ಕೆ ನಾನೊಬ್ಬನೇ ಹಿರಿಯ"ಎಂದ ಹಚ್ಚಿಸನ್ನನ ದನಿಯಲ್ಲೊಂದು ಪಶ್ಚಾತಾಪದ ಭಾವ.

"ಸರಿ ಹಾಗಿದ್ದರೆ,ನಾವೀಗ ಮುಂದಿನ ಹಂತವನ್ನು ಆರಂಭಿಸೋಣ"ಎನ್ನುತ್ತ ,"ನಿನಗೆಷ್ಟು ಮಕ್ಕಳು ಹಚ್ಚಿಸನ್.."?ಎಂದು ಪ್ರಶ್ನಿಸಿದ ಸಮ್ಮರ್ಸ್."ಮೂರು ಜನ ಸಮ್ಮರ್ಸ್,ಮೊದನೆಯವನು ಬಿಲ್ ಜ್ಯೂನಿಯರ್ ,ನ್ಯಾನ್ಸಿ ಮತ್ತು ಕೊನೆಯವನು ಆರು ತಿಂಗಳ ಮಗು ಡೇವ್.ಇವರನ್ನು ಹೊರತು ಪಡಿಸಿ ಮನೆಯಲ್ಲಿ ನಾನು ಮತ್ತು ಟೆಸ್ಸಿ ಒಟ್ಟು ಐದು ಜನ"ಎಂದ ಹಚ್ಚಿಸನ್.ಹಚ್ಚಿಸನ್ನನ ಉತ್ತರದ ನಂತರ ಗ್ರೇವ್ಸನತ್ತ ನೋಡಿದ ಸಮ್ಮರ್ಸ್,"ಹ್ಯಾರಿ,ಐದೂ ಜನರ ಕೈಯಲ್ಲಿರುವ ಚೀಟಿಗಳನ್ನು ಇಸಿದುಕೊಂಡು ಪುನ: ಕಪ್ಪುಪೆಟ್ಟಿಗೆಗೆ ಹಾಕು"ಎಂದು ಆದೇಶಿಸಿದ.ಹ್ಯಾರಿ ಡೇವ್ಸ್ ಸಮ್ಮರ್ಸನ ಆಜ್ನೆಯಂತೆ ಬಿಲ್ ನ ಕೈಯಲ್ಲಿದ್ದ ಚೀಟಿಯನ್ನು ಇಸಿದುಕೊಳ್ಳುತ್ತಿದ್ದರೆ,"ಇದು ಅನ್ಯಾಯ,ಚೀಟಿ ಎತ್ತಲು ನನ್ನ ಗಂಡನಿಗೆ ಸರಿಯಾದ ಕಾಲಾವಕಾಶ ಸಿಗಲಿಲ್ಲ ,ಇಡೀ ಕಾರ್ಯಕ್ರಮವನ್ನೇ ಮೊದಲಿನಿಂದ ಆರಂಭಿಸಬೇಕು" ಎಂದು ಉನ್ಮಾದಳಾಗಿ ಕಿರುಚುತ್ತ ನಿಂತಿದ್ದಳು ಟೆಸ್ಸಿ.ಆಕೆಯ ಮಾತಿನತ್ತ ಲಕ್ಷ್ಯ ಹರಿಸದ ಗ್ರೇವ್ಸ್,ಒಂದೊಂದಾಗಿ ಹಚ್ಚಿಸನ್ ಕುಟುಂಬದ ಎಲ್ಲ ಸದಸ್ಯರ ಕೈಯಲ್ಲಿದ್ದ ಚೀಟಿಯನ್ನು ಇಸಿದುಕೊಂಡು ಪುನ: ಕಪ್ಪುಪೆಟ್ಟಿಗೆಗೆ ಹಾಕಿದ."ಯಾರಾದರೂ ನನ್ನ ಮಾತು ಕೇಳ್ರಪ್ಪಾ"ಎಂದು ಟೆಸ್ಸಿ ಕೂಗುತ್ತಲೇ ಇದ್ದಳಾದರೂ ಯಾರೂ ಆಕೆಯ ಕಿರುಚಾಟದತ್ತ ಗಮನ ಹರಿಸಲಿಲ್ಲ. 

"ನೆನಪಿರಲಿ ಬಿಲ್,ಈಗ ಮೊದಲಿನಂತೆಯೇ ನಿನ್ನ ಕುಟುಂಬ ಮತ್ತೊಮ್ಮೆ ಚೀಟಿ ಎತ್ತಬೇಕು.ಎಲ್ಲರೂ ಚೀಟಿ ಎತ್ತುವ ತನಕ ಯಾರೂ ಸಹ ಚೀಟಿ ತೆರೆದು ನೋಡುವಂತಿಲ್ಲ ಎನ್ನುವುದನ್ನು ಪುನ: ಹೇಳಬೇಕಿಲ್ಲ ತಾನೆ.."?ಎಂದು ಕೇಳಿದ ಸಮ್ಮರ್ಸ್. ಬಿಲ್ ಸುಮ್ಮನೇ ತಲೆಯಾಡಿಸಿದ.ಸಮೀಪದಲ್ಲೇ ನಿಂತಿದ್ದ ಗ್ರೇವ್ಸನನ್ನುದ್ದೇಶಿಸಿ,"ಹ್ಯಾರಿ,ಪುಟ್ಟ ಡೇವನಿಗೆ ಚೀಟಿಯೆತ್ತಲು ನೀನು ಸಹಾಯ ಮಾಡು"ಎಂದ ಸಮ್ಮರ್ಸ್.ಹಾಗೆ ಚೀಟಿ ಎತ್ತಿದ ಹಚ್ಚಿಸನ್ ಕುಟುಂಬದ ಅತಿ ಕಿರಿಯ ಕುಡಿ ಡೇವ್ ಮೊದಲನೆಯವನಾಗಿ ತನ್ನ ಅದೃಷ್ಟ ಪರೀಕ್ಷೆಗೆ ತಯ್ಯಾರಾದ.ಸರಿಯಾಗಿ ಚೀಟಿಯನ್ನು ಕೈಯಲ್ಲಿ ಹಿಡಿದುಕೊಳ್ಳಲು ಸಹ ತಿಳಿಯದ ಡೇವನ ಚೀಟಿಯನ್ನು ಗ್ರೇವ್ಸ್,ತನ್ನ ಕೈಯಲ್ಲಿ ಹಿಡಿದುಕೊಂಡಿದ್ದ."ನಂತರ ದ ಪಾಳಿ ನಿನ್ನದು ನ್ಯಾನ್ಸಿ"ಎಂದು ಸಮ್ಮರ್ಸ್ ನುಡಿದ ತಕ್ಷಣ ,ಹನ್ನೆರಡರ ಹರೆಯದ ನ್ಯಾನ್ಸಿ ಚೀಟಿಯನ್ನೆತ್ತಿಕೊಳ್ಳಲು ಕಪ್ಪುಪೆಟ್ಟಿಗೆಯ ಬಳಿಗೆ ತೆರಳಿದಳು.ಆಕೆ ಚೀಟಿಯನ್ನೆತ್ತಿಕೊಳ್ಳಲು ಪೆಟ್ಟಿಗೆಯೊಳಗೆ ಕೈಯನ್ನು ಇಳಿಬಿಟ್ಟದ್ದರೆ,ಆಕೆಯ ಶಾಲಾ ಸಹಪಾಠಿಗಳಿಗೇನೋ ಆತಂಕ.ಆಕೆಯ ನಂತರ ಹಚ್ಚಿಸನ್ನನ ಮಗ ಕಿರಿಯ ಬಿಲ್ ಬಂದ.ಮೂರನೆಯದಾಗಿ ಟೆಸ್ಸಿಯ ಹೆಸರನ್ನು ಕರೆಯಲಾಯಿತು.ಮೊದಮೊದಲು ಪ್ರತಿರೋಧ ತೋರಿದ ಟೆಸ್ಸಿ,ಕೊನೆಗೆ ಅನಿವಾರ್ಯವೆನ್ನುವಂತೆ ಚೀಟಿಯನ್ನೆತ್ತಿಕೊಂಡಳು.ಕೊನೆಯದಾಗಿ ಕುಟುಂಬದ ಯಜಮಾನ ಬಿಲ್ ಹಚ್ಚಿಸನ್ ಚೀಟಿಯನ್ನೆತ್ತಿಕೊಂಡ.

ಎಲ್ಲವನ್ನು ನೋಡುತ್ತ ಸುಮ್ಮನೇ ನಿಂತಿದ್ದ ಜನರಲ್ಲೊಂದು ಅಸಹನೀಯ ಮೌನ."ಛೇ,ಈ ಬಾರಿಯ ಸರದಿ ನ್ಯಾನ್ಸಿಯದಾಗಿರದಿದ್ದರೇ ಸಾಕು"ಎಂದಳೊಬ್ಬ ಹುಡುಗಿ.ಅವಳ ಮಾತಿಗೆ ಹೌದೆನ್ನುವಂತೆ ಅನೇಕರು ದನಿಗೂಡಿಸಿದರು.ನಿಂತಲ್ಲೇ ಚಡಪಡಿಸುತ್ತಿದ್ದ ಟೆಸ್ಸಿಯನ್ನು ನೋಡಿ ಅಸಹನೆ ವ್ಯಕ್ತ ಪಡಿಸಿದ ಹಿರಿಯ ವಾರ್ನರ್,"ಛೇ..!! ಈಗಿನ ತಲೆಮಾರಿನವರಿಗೆ ಸಂಪ್ರದಾಯಗಳಿಗೆ ಬೆಲೆ ಕೊಡುವುದೇ ಗೊತ್ತಿಲ್ಲ"ಎನ್ನುತ್ತ ಸಿಡಿಮಿಡಿಗೊಂಡ."ಈಗ ಒಬ್ಬೊಬ್ಬರಾಗಿ ನಿಮ್ಮ ಕೈಯಲ್ಲಿರುವ ಚೀಟಿಯನ್ನು ತೆರೆಯಿರಿ.ಮೊದಲು ಪುಟ್ಟ ಡೇವ್ ನ ಕೈಯಲ್ಲಿದ್ದ ಚೀಟಿಯನ್ನು ತೆರೆಯಿರಿ"ಎಂದ ಸಮ್ಮರ್ಸನ ಮಾತಿಗೆ ತಲೆಯಾಡಿಸಿದ ಗ್ರೇವ್ಸ್,ಡೆವ್ ನ ಪರವಾಗಿ ತಾನೇ ಚೀಟಿಯನ್ನು ತೆರೆದು ನೋಡಿ, ಅದು ಖಾಲಿಯಾಗಿರುವುದನ್ನು ಖಚಿತಪಡಿಸಿಕೊಂಡು,ಚಿಕ್ಕದೊಂದು ಮಂದಹಾಸದೊಂದಿಗೆ ಅದನ್ನೆತ್ತಿ ನೆರೆದ ಸಭೀಕರಿಗೆ ತೋರಿದ.ನ್ಯಾನ್ಸಿ ಮತ್ತು ಕಿರಿಯ ಬಿಲ್ ಕ್ರಮವಾಗಿ ತಮ್ಮ ಕೈಯಲ್ಲಿದ್ದ ಚೀಟಿಯನ್ನು ತೆರೆದು ನೋಡಿದರು.ತಮ್ಮ ಕೈಯಲ್ಲಿನ ಖಾಲಿ ಚೀಟಿಗಳನ್ನು ಕಂಡ ಅವರಿಬ್ಬರಲ್ಲೊಂದು ಸಮಾಧಾನದ ನಗು."ಈಗ ನಿನ್ನ ಸರದಿ ಟೆಸ್ಸಿ"ಎಂದ ಸಮ್ಮರ್ಸನ ಮಾತುಗಳು ತನ್ನ ಕೇಳಿಸಿಯೇ ಇಲ್ಲವೇನೋ ಎನ್ನುವಂತಹ ನೀರವತೆ ಟೆಸ್ಸಿ ಹಚ್ಚಿಸನ್ನಳದ್ದು.ಆಕೆ ಚೀಟಿಯನ್ನು ತೆರೆಯಲೇ ಇಲ್ಲ.ಒಂದೆರಡು ಕ್ಷಣಗಳ ಕಾಲ ಕಾದು ನೋಡಿದ ಸಮ್ಮರ್ಸ್ ತಾನೇ ಮುಂದುವರೆದು ಹಚ್ಚಿಸನ್ನನ ಕೈಯಲಿದ್ದ ಚೀಟಿಯನ್ನು ಬಿಚ್ಚಿ ನೋಡಿದ.ಅದು ಸಹ ಖಾಲಿ ಬಿಳಿಹಾಳೆಯ ತುಣುಕಾಗಿತ್ತು.ಹಾಗಿದ್ದರೆ ಈ ಬಾರಿಯ ಸರದಿ ಟೆಸ್ಸಿಯದ್ದು ಎನ್ನುವುದು ನೆರೆದಿದ್ದ ಎಲ್ಲರಿಗೂ ಖಚಿತವಾಗಿತ್ತು.ಅನ್ಯಮನಸ್ಕಳಾಗಿ ನಿಂತಿದ್ದ ಟೆಸ್ಸಿಯ ಕೈಯಿಂದ ಬಲವಂತವಾಗಿ ಚೀಟಿಯನ್ನು ಕಸಿದ ಆಕೆಯ ಪತಿ ಅದನ್ನು ತೆರೆದು ಸಭೀಕರೆದುರು ಎತ್ತಿ ತೋರಿದ.ಆಕೆಯ ಚೀಟಿಯಲ್ಲಿ ಗುಂಡಗಿನ ಕಪ್ಪು ಚುಕ್ಕೆಯೊಂದನ್ನು ಇಡಲಾಗಿತ್ತು. ಹಿಂದಿನ ದಿನವೇ ತನ್ನ ಕಂಪನಿಯ ಪೆನ್ಸಿಲ್ಲೊಂದರಿಂದ ಆ ಕಾಗದದ ತುಣುಕಿನ ಮೇಲೆ ಕಪ್ಪು ಚುಕ್ಕೆಯನ್ನಿಟ್ಟಿದ್ದ ಸಮ್ಮರ್ಸ್.ನೂರಾರು ಜನರನ್ನು ತಿರಸ್ಕರಿಸಿದ್ದ ಚೀಟಿ ಟೆಸ್ಸಿ ಹಚ್ಚಿಸನ್ನಳ ಕೈ ಸೇರಿತ್ತು.ಅಧಿಕೃತವಾಗಿ ಟೆಸ್ಸಿಯ ಚೀಟಿಯಲ್ಲಿದ್ದ ಕಪ್ಪುಚುಕ್ಕೆಯನ್ನು ಕಂಡ ಹಳ್ಳಿಗರು ಉದ್ವೇಗಕ್ಕೊಳಗಾಗುತ್ತ ಮಾನಸಿಕವಾಗಿ ಮುಂದಿನ ಆಚರಣೆಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಂಡರು."ಹಳ್ಳಿಗರೇ ಈಗ ಆಚರಣೆಯ ಕೊನೆಯ ವಿಧಿ,ಬೇಗ ಮಾಡಿ ಮುಗಿಸೋಣ ಬನ್ನಿ"ಎಂಬ ಸಮ್ಮರ್ಸನ ಮಾತುಗಳನ್ನು ಕೇಳಿದ ಹಳ್ಳಿಗರು ಉದ್ರಿಕ್ತರಾದರು. ಸಂಪ್ರದಾಯದ ಅನೇಕ ಆಚರಣೆಗಳನ್ನು ಮರೆತಿದ್ದರೂ.ಹಳ್ಳಿಗರಿಗೆ ಕಲ್ಲುಗಳ ಬಳಕೆಯ ಆಚರಣೆ ಮಾತ್ರ ಸ್ಪಷ್ಟವಾಗಿ ನೆನಪಿತ್ತು.ಮಕ್ಕಳು ಅದಾಗಲೇ ಸೇರಿಸಿಟ್ಟಿದ್ದ ಕಲ್ಲುಗಳನ್ನು ಹಳ್ಳಿಗರು ತಮ್ಮ ಕೈಗೆತ್ತಿಕೊಂಡರು.ತನ್ನ ಕೈಯಲ್ಲಿದ್ದ ದೊಡ್ಡದಾದ ಕಲ್ಲೊಂದನ್ನು ಡನ್ಬರನ ಮಡದಿಯ ಕೈಗಿತ್ತ ,ಶ್ರೀಮತಿ ಡೆಲಾಕ್ರೋಕ್ಸ್,"ಬೇಗ ಬೇಗ ಮುಗಿಸೋಣ ಬಾ"ಎಂದು ಅವಸರವಸರವಾಗಿ ನುಡಿದಳು.ಕುಂಟುತ್ತಲೇ ಕೈಯಲ್ಲೊಂದು ಕಲ್ಲನೆತ್ತಿಕೊಂಡ ಡನ್ಬರ್ ,ತನ್ನ ಮಡದಿಯತ್ತ ನೋಡಿ,"ನನ್ನಿಂದ ಒಂದು ಕಲ್ಲು ಮಾತ್ರ ಸಾಧ್ಯ,ನಾನು ಓಡಲಾರೆ"ಎಂದ.ಚಿಕ್ಕ ಮಕ್ಕಳು ಸಹ ಉತ್ಸಾಹಿತರಾಗಿ ಸಣ್ಣಸಣ್ಣ ಕಲ್ಲುಗಳನ್ನೆತ್ತಿಕೊಂಡು ತಯ್ಯಾರಾಗಿದ್ದರು.

ಚೀಟಿ ಎತ್ತುವಿಕೆಯ ಮೂಲಕ ಪ್ರಥಾಪೂರ್ವಕವಾಗಿ ಆಯ್ಕೆಯಾಗಿದ್ದ ಟೆಸ್ಸಿ ಹಚ್ಚಿಸನ್ ಈಗ ಬಟಾಬಯಲಿನಲ್ಲಿ ಗಾಬರಿಯಾಗಿ ನಿಂತಿದ್ದಳು.ಹಳ್ಳಿಗರು ಕಲ್ಲನೆತ್ತಿಕೊಂಡು ನಿಧಾನವಾಗಿ ಆಕೆಯತ್ತ ನಡೆಯತೊಡಗಿದರೆ,ಗಡಗಡ ನಡಗುವ ಕೈಗಳನ್ನೆತ್ತಿ ಜನರತ್ತ ದೈನ್ಯತೆಯಿಂದ ಬೇಡಿಕೊಳ್ಳತ್ತ "ಇದು ಅನ್ಯಾಯ "ಎಂದು ಅಳತೊಡಗಿದಳು.ಅಷ್ಟರಲ್ಲಿ ಜನಸಮೂಹದಿಂದ ರೊಯ್ಯನೇ ಅವಳತ್ತ ನುಗ್ಗಿದ ಕಲ್ಲೊಂದು ಆಕೆಯ ಹಣೆಗೆ ಬಡಿಯಿತು."ಬೇಗ ಬೇಗ ಮುಗಿಸಿ ಹಳ್ಳಿಗರೇ"ಎಂದು ಹಳ್ಳಿಗರನ್ನು ಹುರಿದುಂಬಿಸಿದ ವೃದ್ಧ ವಾರ್ನರ್ ತಾನೊಂದು ಕಲ್ಲನ್ನೆತ್ತಿ ಟೆಸ್ಸಿಯ ಮೇಲೆಸೆದ. "ಇದು ನ್ಯಾಯವಲ್ಲ,ಅನ್ಯಾಯ,ಅನ್ಯಾಯ"ಎಂದು ಪದೇ ಪದೇ ನುಡಿಯುತ್ತ ಟೆಸ್ಸಿ ಕಿರುಚಾಡುತ್ತಿದ್ದಳು.ಹಳ್ಳಿಗರು ಒಬ್ಬರಾದ ಮೇಲೊಬ್ಬರಂತೆ ಆಕೆಯ ಮೇಲೆ ಕಲ್ಲುಗಳನ್ನೆಸೆಯಲಾರಂಭಿದರು.ಕ್ಷಣಮಾತ್ರದಲ್ಲಿ ಆಕೆಯ ಮೇಲೆ ರಪರಪನೇ ಸುರಿದ ಕಲ್ಲಿನ ಮಳೆಯಡಿ ಆಕೆಯ ಆಕ್ರಂದನ ಸ್ಥಬ್ದವಾಯಿತು.

ಆರಂಭದಲ್ಲಿ ಒಂದು ಸಾಮಾನ್ಯ ಕತೆಯಂತೆ ಭಾಸವಾಗುತ್ತ ,ಅಂತ್ಯದಲ್ಲಿ ಓದುಗನ ಬೆನ್ನಹುರಿಯಾಳದಲ್ಲೊಂದು ನಡುಕ ಹುಟ್ಟಿಸುವ ಈ ವಿಲಕ್ಷಣ ಕತೆಯ ಮೂಲ ಹೆಸರು "The Lottery".1948ರಲ್ಲಿ ಅಮೇರಿಕಾದ ಸಾರ್ವಕಾಲಿಕ ಶ್ರೇಷ್ಠ ಹಾರರ್ ಕತೆಗಳ ಬರಹಗಾರ್ತಿ ಶಿರ್ಲೆ ಜಾಕ್ಸನ್ ಇದರ ಸೃಷ್ಟಿಕರ್ತೆ.ಬಹುತೇಕ ಸಂಪ್ರದಾಯಗಳು ಅರ್ಥಹೀನ ಮತ್ತು ನಿರಪಾಯಕಾರಿ.ಆದರೆ ಜೀವಹಾನಿಯನ್ನುಂಟು ಮಾಡಬಲ್ಲ ಕೆಲವು ಸಂಪ್ರದಾಯಗಳು ನಿಜಕ್ಕೂ ಅಪಾಯಕಾರಿ.ಇಂಥಹ ಮೂಢನಂಬಿಕೆಗಳ ಔಚಿತ್ಯವನ್ನು ಕಾಲಕಾಲಕ್ಕೆ ಪ್ರಶ್ನಿಸದೇ ,ಪೂರ್ವಿಕರ ಆಚರಣೆಯೆನ್ನುವ ಒಂದೇ ಕಾರಣಕ್ಕೆ ಒಪ್ಪಿಕೊಂಡರೆ ಆಗುವ ಅನಾಹುತವನ್ನು ವಿವರಿಸುವ ಪ್ರಯತ್ನವೇ ಈ ಕತೆಯ ಹೂರಣ. ವರ್ಷಕ್ಕೊಮ್ಮೆ ಚೀಟಿ ಎತ್ತುವಿಕೆಯ ಮೂಲಕ ಆಯ್ಕೆಯಾದ ವ್ಯಕ್ತಿಯನ್ನು ಕಲ್ಲುಗಳಿಂದ ಹೊಡೆದು ಸಾಯಿಸುವ ಅಮಾನುಷ ಪದ್ದತಿಯನ್ನು ಸಹ ಸಂಪ್ರದಾಯವೆನ್ನುವ ಕಾರಣಕ್ಕೆ ಪ್ರಶ್ನಾತೀತವಾಗಿ ಒಪ್ಪಿಕೊಳ್ಳುವ ಮೂಢ ಹಳ್ಳಿಗರ ಚಿತ್ರಣವುಳ್ಳ ಈ ಅಸಾಧಾರಣ ಕತೆಯನ್ನು ಅಮೇರಿಕಾದ ಪ್ರಸಿದ್ಧ ನಿಯತಕಾಲಿಕೆ, ’ದ ನ್ಯೂಯಾರ್ಕರ್’ ಮೊದಲ ಬಾರಿಗೆ ಪ್ರಕಟಿಸಿತ್ತು.ವಿಚಿತ್ರವೆಂದರೆ ಪ್ರಕಟವಾದ ಮರುದಿನವೇ ಕರ್ಮಠ ವಿಮರ್ಶಕರಿಂದ ಕತೆ ತೀವ್ರವಾದ ನೇತ್ಯಾತ್ಮಕ ಟೀಕೆಗೊಳಗಾಯಿತು.ಕತೆಯಲ್ಲಿ ಬರುವ ಕಪ್ಪು ಪೆಟ್ಟಿಗೆ ಸಂಪ್ರದಾಯದ ಪ್ರತೀಕವಾಗಿದ್ದರೆ,ಮೂರು ಕಾಲಿನ ಪೀಠ,ಕ್ರೈಸ್ತ ಸಂಪ್ರದಾಯದಲ್ಲಿ ಕಾಣಸಿಗುವ ಪಿತ,ಸುತ ಮತ್ತು ಪವಿತ್ರಾತ್ಮನ್ನನ್ನೊಡಗೂಡಿದ ’ತ್ರಿದೇವ’ಸಮೂಹದ ಪ್ರತೀಕವೆನ್ನುವುದು ಅನೇಕ ವಿಮರ್ಶಕರ ಅಭಿಪ್ರಾಯವಾಗಿತ್ತು.ಕತೆಯಲ್ಲಿನ ವೃದ್ಧ ವಾರ್ನರನ ಪಾತ್ರವನ್ನು ಕ್ರೈಸ್ತ ಸನ್ಯಾಸಿಗಳೊಂದಿಗೆ ಸಮೀಕರಿಸಿದ ಕೆಲವು ಸಂಪ್ರದಾಯವಾದಿಗಳಂತೂ ಇಂಥದ್ದೊಂದು ಕತೆಯನ್ನು ಪ್ರಕಟಿಸಿದ್ದಕ್ಕೆ,ನ್ಯೂಯಾರ್ಕರ್ ಪತ್ರಿಕೆಯನ್ನು ದೂಷಿಸುತ್ತ ಚಂದಾದಾರಿಕೆಯನ್ನೂ ಸಹ ನಿಲ್ಲಿಸಿಬಿಟ್ಟರು.ಆದರೆ ಕಾಲಾನಂತರ ಮೂಢನಂಬಿಕೆಗಳಿಂದ ಉಂಟಾಗಬಹುದಾದ ಅಪಾಯವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ ಅದ್ಭುತ ಕತೆಯ ಶ್ರೇಷ್ಠತೆಯನ್ನು ಒಪ್ಪಿಕೊಂಡ ಅಮೇರಿಕಾದ ಪ್ರಜ್ನಾವಂತ ವಿಮರ್ಶಕರು ಅಮೇರಿಕಾದ ಸಾರ್ವಕಾಲಿಕ ಶ್ರೇಷ್ಠ ಕತೆಗಳ ಪೈಕಿ ’ದ ಲಾಟರಿ’ಕೂಡ ಒಂದು ಎಂಬುದಾಗಿ ಸಾರಿದರು.ಒಂದು ವಿಕ್ಷಿಪ್ತ ಕಥಾವಸ್ತುವನ್ನಿಟ್ಟುಕೊಂಡು ಹೀಗೊಂದು ಅದ್ಭುತ ಕತೆಯನ್ನು ಬರೆಯಲು ಹೇಗೆ ಸಾಧ್ಯ ಎಂದು ನನಗೆ ತುಂಬ ಸಲ ಅನ್ನಿಸಿದ್ದಿದ್ದೆ.ಬಹುಶ: ಸಾಹಿತ್ಯಲೋಕದ ಸೃಜನಶೀಲತೆಯ ಶಕ್ತಿಯೇ ಅಂಥದ್ದು.ಹಾಗೊಂದು ಅದ್ಭುತವಾದ ಕ್ರಿಯಾಶೀಲತೆಯೇ ಮಹಾನ್ ಬರಹಗಾರರ ಸೃಷ್ಟಿಗೆ ಕಾರಣವಾಗುತ್ತದೆ ಅಲ್ಲವೇ..??