ಬೀchi ಯವರು ಕನ್ನಡವನ್ನೇಕೆ ಅಪ್ಪಿಕೊಂಡರು?

ಬೀchi ಯವರು ಕನ್ನಡವನ್ನೇಕೆ ಅಪ್ಪಿಕೊಂಡರು?

ಆ ಕಾಲದಲ್ಲಿ ಸಂಜೆ ಹೆಂಡತಿ ಜತೆ ವಾಕಿಂಗ್ ಹೋಗುವುದೂ ಒಂದು ರೀತಿಯ ಸಂಪ್ರದಾಯವಾಗಿತ್ತು. ಬೀChi (ಬೀಚಿ) ಕೂಡ ವಾಕಿಂಗ್‌ಗೆ ಹೊರಟಿದ್ದರು. ಹಾಗೆ ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಕಂಡ ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ‘ಸಾಹಿತ್ಯ ಭಂಡಾರ’ದತ್ತ ಕೈತೋರಿ “ಇದೇ ನನ್ನ ಆಫೀಸು, ಈ ಪುಸ್ತಕದಂಗಡಿಯಲ್ಲಿಯೇ ನಾನು ಹೆಚ್ಚು ಕಾಲ ಕಳೆಯುತ್ತೇನೆ” ಎಂದು ಹೆಂಡತಿಗೆ ಹೇಳುತ್ತಾರೆ.

ಸರಕಾರಿ ಗುಮಾಸ್ತರಾಗಿದ್ದ ಬೀಚಿಯವರು ಸಂಜೆ ಕಳೆಯುತ್ತಿದ್ದುದೇ ಸಾಹಿತ್ಯ ಭಂಡಾರದಲ್ಲಿ. ಬೀಚಿಯವರ ಮಾತು ಕೇಳಿಸಿಕೊಂಡ ಅವರ ಪತ್ನಿ “ಅಲ್ಲಿ ಯಾವ ಪುಸ್ತಕಗಳಿವೆ? ತೆಲುಗು ಪುಸ್ತಕಗಳಿವೆಯೇ?” ಎಂದು ಕೇಳುತ್ತಾರೆ. “ಇದು ಹುಬ್ಬಳ್ಳಿ” ಎಂದು ನಗುತ್ತಾ ಹೇಳಿದ ಬೀಚಿ, “ಸುಡುಗಾಡು ಕನ್ನಡ ಪುಸ್ತಕ ಮಾರತಾರ” ಎಂದರು. ಇಂಗ್ಲಿಷ್ ಸಾಹಿತ್ಯದಿಂದ ಬಹುವಾಗಿ ಪ್ರಭಾವಿತರಾಗಿದ್ದ ಅವರು, ಕನ್ನಡ ಪುಸ್ತಕಗಳನ್ನು ಕಣ್ಣೆತ್ತಿಯೂ ನೋಡಿದವರಲ್ಲ.

ಅಂದು ಬೀಚಿಯವರು ‘ಸಾಹಿತ್ಯ ಭಂಡಾರ’ದ ಬಗ್ಗೆ ಹೇಳಿದ್ದನ್ನು ನೆನಪಿಟ್ಟುಕೊಂಡಿದ್ದ ಅವರ ಹೆಂಡತಿ, “ಮಧ್ಯಾಹ್ನ ಕಳೆಯುವುದೇ ಕಷ್ಟವಾಗುತ್ತಿದೆ. ಯಾವುದಾದರೂ ಕನ್ನಡ ಪುಸ್ತಕ ತಂದುಕೊಡಿ” ಎಂದು ಒಂದು ದಿನ ಗಂಡನನ್ನು ಕೇಳಿದರು. ಎಂದಿನಂತೆ ಮರುದಿನ ಸಂಜೆ ಸಾಹಿತ್ಯ ಭಂಡಾರಕ್ಕೆ ಬಂದ ಬೀಚಿ, “ಯಾವುದಾದರೂ ಕನ್ನಡದ ಕಥೆ ಪುಸ್ತಕ ಕೊಡಿ. ನನ್ನ ಹೆಂಡತಿ ಪೀಡಿಸುತ್ತಿದ್ದಾಳೆ. ಓದಿಯಾದ ಮೇಲೆ ತಂದುಕೊಡುತ್ತೇನೆ” ಎಂದು ಸಾಹಿತ್ಯ ಭಂಡಾರ ಸ್ಥಾಪಕರೂ ಹಾಗೂ ಮಾಲೀಕರೂ ಆಗಿದ್ದ ಗೋವಿಂದರಾಯರನ್ನು ಕೇಳಿದರು. ಸೌಜನ್ಯಕ್ಕೆ ಹೆಸರಾಗಿದ್ದ ಗೋವಿಂದರಾಯರು ನಗು ನಗುತ್ತಲೇ ಕಪಾಟದಿಂದ ಪುಸ್ತಕವೊಂದನ್ನು ಹೊರತೆಗೆದು ಕವರ್‌ಗೆ ಹಾಕಿಕೊಟ್ಟರು. ಬೀಚಿ ಯವರು ಅದನ್ನು ಬಿಡಿಸಿಯೂ ನೋಡಲಿಲ್ಲ. “ಅಂಚೆ ಜವಾನನ ಕೆಲಸ ಮಾಡಿದೆ” ಎಂದು ಅವರೇ ತಮ್ಮ ‘ಭಯಾಗ್ರಫಿ”ಯಲ್ಲಿ ಹೇಳಿಕೊಂಡಿದ್ದಾರೆ. ಹೆಂಡತಿಗೆ ಪುಸ್ತಕ ತಂದುಕೊಟ್ಟು, ತಲೆನೋವು ತಪ್ಪಿತು ಎಂದು ಸುಮ್ಮನಾದರು. ಆದರೆ ಮರುದಿನ ಮಧ್ಯಾಹ್ನ ಊಟಕ್ಕೆಂದು ಕಚೇರಿಯಿಂದ ಮನೆಗೆ ಹೋದರೆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಅವರ ಪತ್ನಿ ಬಿಕ್ಕಳಿಸಿ ಅಳುತ್ತಿದ್ದಾರೆ! ಆಶ್ಚರ್ಯಚಕಿತರಾದ ಬೀಚಿ, “ಕನ್ನಡ ಓದಲಿಕ್ಕೆ ಬರುತ್ತಿಲ್ಲ ಅಂತ ಅಳುತ್ತಿದ್ದೀಯೇನು?” ಎಂದು ಕೇಳಿದರು. ಬಳ್ಳಾರಿ ಜಿಲ್ಲೆಯಲ್ಲಿ ಹುಟ್ಟಿ, ಬೆಳೆದಿದ್ದ ಆಕೆಗೆ ಕನ್ನಡ ಓದುವುದಕ್ಕೆ ಕಷ್ಟವಾಗುತ್ತಿದೆ ಎಂಬುದು ಬೀಚಿಯವರ ಊಹೆಯಾಗಿತ್ತು. ಆದರೆ “ಕನ್ನಡ ಮತ್ತು ತೆಲುಗು ಲಿಪಿಗಳಲ್ಲಿ ಯಾವ ಮಹಾಭೇದವಿದೆ? ಒಂದರ ಲಿಪಿಯನ್ನು ತಿಳಿದವರು ಎರಡನ್ನೂ ಓದಬಹುದು” ಎಂದು ಕಣ್ಣೊರೆಸಿಕೊಳ್ಳುತ್ತಾ ಹೇಳಿದ ಆಕೆ, “ಪುಸ್ತಕ ಬಹಳ ಚೆನ್ನಾಗಿದೆ. ಇದನ್ನೊಮ್ಮೆ ನೀವೂ ಓದಬೇಕು” ಎಂದರು! ಇದ್ಯಾವ ಗ್ರಹಚಾರ ಎಂದುಕೊಂಡ ಬೀಚಿ, “ನೀನಂತೂ ಓದಿ ಮುಗಿಸು” ಎಂದು ಊಟಕ್ಕೆ ಅಣಿ ಯಾದರು. ಇತ್ತ ಪುಸ್ತಕವನ್ನು ಓದಿ ಮುಗಿಸಿದ ಕೂಡಲೇ ಕಾಟ ಶುರುವಿಟ್ಟುಕೊಂಡರು ಪತ್ನಿ. ‘ಒಮ್ಮೆ ನೀವೂ ಓದಿ’ ಎಂದು ಗಂಡನ ದುಂಬಾಲು ಬಿದ್ದರು. “ಹೆಂಡತಿಗಾಗಿ ಯಾರ್‍ಯಾರೋ ಏನೇನೋ ಮಾಡಿದ್ದಾರೆ. ಬ್ರಿಟನ್ ರಾಜ ೬ನೇ ಜಾರ್ಜ್ ಪತ್ನಿಗಾಗಿ ಸಿಂಹಾಸನವನ್ನೇ ತ್ಯಾಗ ಮಾಡಲಿಲ್ಲವೆ? ಮದುವೆಯಾದವನು ಎಂತಹ ತ್ಯಾಗಗಳಿಗೂ ಸಿದ್ಧನಾಗಬೇಕು” ಎಂದುಕೊಂಡ ಬೀಚಿ, ಪತ್ನಿಯ ಮಾತಿಗೆ ತಲೆಯಾಡಿಸಿದರು.

ಮರುದಿನ ರೈಲು ಪ್ರಯಾಣವಿತ್ತು.

ಆದರೆ ರೈಲಿನಲ್ಲಿ ಕನ್ನಡ ಪುಸ್ತಕ ಓದಿದರೆ ಮಾನ ಉಳಿಯುವುದಿಲ್ಲ. ಕನ್ನಡ ಪುಸ್ತಕ ಓದುತ್ತಿರುವುದನ್ನು ನೋಡಿ, ಯಾರಾದರೂ ಬೇಡಿ ಕೇಳಿದರೆ ಏನು ಗತಿ? ಎಂದುಕೊಂಡ ಬೀಚಿ, ‘ಇಲಸ್ಟ್ರೇಟೆಡ್ ವೀಕ್ಲಿ’ ಮ್ಯಾಗಝಿನ್‌ನೊಳಗೆ ಕನ್ನಡ ಪುಸ್ತಕವನ್ನಿಟ್ಟುಕೊಂಡು ಓದಲಾರಂಭಿಸಿದರು. ಆರಂಭ ಮಾಡಿದ್ದಷ್ಟೇ ಗೊತ್ತು, ಕಣ್ಣುಗಳು ಅದೆಷ್ಟು ಬಾರಿ ಜಿನುಗಿದ್ದವೋ ಗೊತ್ತಿಲ್ಲ! ‘ಕನ್ನಡದಲ್ಲೂ ಒಳ್ಳೆಯ ಬರಹಗಾರರಿದ್ದಾರೆ ಎಂಬುದು ಅರಿವಾಯಿತು. ಆ ಶುಭಮುಹೂರ್ತದಲ್ಲಿ ಕನ್ನಡದಲ್ಲಿ ದೀಕ್ಷೆ ಸ್ವೀಕರಿಸಿದೆ’ ಎನ್ನುತ್ತಾರೆ ಬೀಚಿ.

ರೈಲಿನಲ್ಲಿ ಅವರು ಓದಿದ್ದು ಅನಕೃ ಅವರ ‘ಸಂಧ್ಯಾರಾಗ”!

ಆ ಘಟನೆ ಬೀಚಿಯವರ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ ಅನಕೃ ಅವರ ಪರಿಚಯ ಬಯಸಿ ಹೊರಟರು. ಕನ್ನಡ ಸಾರಸ್ವತ ಲೋಕಕ್ಕೆ ಕಾಲಿಟ್ಟರು, ಅವರನ್ನು ಪತ್ರಿಕೋದ್ಯಮವೂ ಆಕರ್ಷಿಸದೇ ಬಿಡಲಿಲ್ಲ. ಆ ಕಾಲದಲ್ಲಿ ಪಾಟೀಲ ಪುಟ್ಟಪ್ಪನವರ “ವಿಶಾಲ ಕರ್ನಾಟಕ” ಉತ್ತರ ಕರ್ನಾಟಕದ ಒಂದು ಜನಪ್ರಿಯ ಪತ್ರಿಕೆಯಾಗಿತ್ತು. ಹೊಸ ಪ್ರತಿಭೆಗಳಿಗಾಗಿ ತಡಕಾಡುತ್ತಿದ್ದ ಪಾಟೀಲ ಪುಟ್ಟಪ್ಪನವರಿಗೆ ಕಂಡಿದ್ದು ಬೀಚಿ. ಅವರ ಒತ್ತಾಯಕ್ಕೆ ಮಣಿದ ಬೀಚಿಯವರು ಒಂದು ಅಂಕಣ ಶುರುಮಾಡಿದ್ದರು. “ಕೆನೆ ಮೊಸರು” ಎಂಬ ಹೆಸರಿನ ಅಂಕಣದಲ್ಲಿ ಸಕಾಲಿಕ ವಿಷಯ ಗಳ ಬಗ್ಗೆ ಬರೆಯುತ್ತಿದ್ದ ಬೀಚಿ, ಲೇಖನದ ಕೊನೆಯಲ್ಲಿ ಒಂದು ಜೋಕು ಬರೆಯುತ್ತಿದ್ದರು. ಆ ಜೋಕು ಎಷ್ಟು ಜನಪ್ರಿಯತೆ ಪಡೆಯಿತೆಂದರೆ ಒಮ್ಮೆ ಬೀಚಿಯವರು ಏಕಾಏಕಿ ಅಂಕಣ ಬರೆಯುವುದನ್ನು ನಿಲ್ಲಿಸಿದಾಗ, ಓದುಗರ ಪತ್ರಗಳು ಕಚೇರಿಗೆ ದಾಳಿಯಿಟ್ಟವು. ಸಂಪಾದಕರಾಗಿದ್ದ ಪಾಪು, ‘ಕೆನೆ ಮೊಸರು’ ಹೆಸರಿನಡಿ ಬೀಚಿಯವರ ಫೋಟೋ ಹಾಕಿ, “ಹುಡುಕಿ ಕೊಡಿ” ಎಂದು ಪ್ರಕಟಿಸಿ ಬಿಟ್ಟರು! ಅದೆಲ್ಲಿದ್ದರೋ ಏನೋ ಕಚೇರಿಗೆ ಓಡಿಬಂದ ಬೀಚಿ, ಇನ್ನು ಮುಂದೆ ತಪ್ಪದೆ ಅಂಕಣ ಬರೆಯುವುದಾಗಿ ವಾಗ್ದಾನ ಮಾಡಿದರು. ಅವರು ಲೇಖನದ ಕೊನೆಯಲ್ಲಿ ಬರೆಯುತ್ತಿದ್ದ ಜೋಕುಗಳ ಸಂಗ್ರಹವೇ “ತಿಂಮನ ತಲೆ”. ೧೯೫೦ರಲ್ಲಿ ಮೊದಲ ಮುದ್ರಣ ಕಂಡ “ತಿಂಮನ ತಲೆ” ಮೂವತ್ತಕ್ಕೂ ಹೆಚ್ಚು ಮರುಮುದ್ರಣಗಳನ್ನು ಕಂಡಿದೆ. ಅಷ್ಟೇ ಅಲ್ಲ, ಇಂದಿಗೂ ಕನ್ನಡ ಸಾರಸ್ವತ ಲೋಕದಲ್ಲಿ ಅಂತಹ ಅದ್ಭುತ ಜೋಕುಗಳನ್ನು ಕಾಣಲು ಸಾಧ್ಯವಿಲ್ಲ

(ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣಗಳಿಂದ