ಬುಗುರಿ
‘ಬುಗುರಿ’ ಕವನ ಸಂಕಲನವು ವಿಜಯ ಪದ್ಮಶಾಲಿಯವರ ಹೊಸ ಕವನ ಸಂಕಲನವಾಗಿದೆ. ಈ ಕವನ ಸಮಕಾಲೀನ ಸಂಕಲನದ ಕೌತುಕವಾಗಿದೆ ವಿಷಯ ವೈವಿಧ್ಯತೆ, ಸಂದರ್ಭದ ಅನೇಕ ವಿಷಯಗಳನ್ನು ಒಳಗೊಂಡು ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. “ಸಂಜೆಯೊಲವಿನ ರಂಗು" ಕವನದಲ್ಲಿ ಸಂಜೆಯೊಲವಿನ ರಂಗನ್ನು ಎಲ್ಲರ ನಯನಗಳಲ್ಲಿ ತುಂಬಿರುವ ಅವರ ಚಮತ್ಕಾರ ಮೆಚ್ಚುವಂತದ್ದು. “ಕುರುಡು ಕಂಚಾಣ” ಕವನದಲ್ಲಿ ಒಲಿಯದ ಕುರುಡು ಕಾಂಚಾಣದ ನಿರೀಕ್ಷೆಯಲ್ಲಿ ತಲ್ಲಣಗೊಂಡು ಕನಸುಗಳ ತೆಕ್ಕೆಯೊಳಡಗಿದೆ ಎನ್ನುವ ವಾಸ್ತವ ವಿವರಿಸಿದ್ದಾರೆ ಎನ್ನುತ್ತಾರೆ ಸಾಹಿತಿ ಎ. ಸರಸಮ್ಮ. ಅವರು ಲೇಖಕಿ ವಿಜಯ ಪದ್ಮಶಾಲಿ ಅವರ ಬುಗುರಿ ಕವನಸಂಕಲನಕ್ಕೆ ಬರೆದ ಮುನ್ನುಡಿ ಬರಹದಲ್ಲಿ ಬರೆದದ್ದು ಹೀಗೆ...
“ಕನ್ನಡ ಸಾಹಿತ್ಯವು ನಮ್ಮ ಸಂಸ್ಕೃತಿಯನ್ನು ಜೀವನ ಮೌಲ್ಯಗಳು, ವರ್ತಮಾನವನ್ನು ರೂಪಿಸುತ್ತ ಸಹೃದಯರ ಚಿಂತನೆ, ಸಾಹಿತ್ಯಾಭಿರುಚಿ ಹೆಚ್ಚಿಸುತ್ತ ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಸಾಗುತ್ತ ಕಾವ್ಯಕಲ್ಪವಲ್ಲಿ ಎಂಬ ಕಾವ್ಯ ನಾಮದಿಂದ ಜನಪ್ರಿಯತೆ ಹೊಂದುತ್ತಿರುವ ಶ್ರೀಮತಿ ವಿಜಯ ಪದ್ಮಶಾಲಿಯವರು ಗೃಹಿಣಿಯಾಗಿ, ಪ್ರೀತಿಯ ನಿರ್ವಹಣೆ ಮಾತೆಯಾಗಿ ಸಂಸಾರ ಮಾಡುತ್ತ ಅಷ್ಟಕ್ಕೆ ಸೀಮಿತವಾಗದೆ ಸಾಹಿತ್ಯ ರಚನೆಯನ್ನು ತನ್ನ ಪ್ರವೃತ್ತಿಯಾಗಿಸಿಕೊಂಡು ಈಗಾಗಲೇ ಕವನ ಸಂಕಲನ, ಮುಕ್ತಕ ಸಂಕಲನ, ಸಾಮಾಜಿಕ ಕಾದಂಬರಿ ಮೂರು ಕೃತಿಗಳನ್ನು ರಚಿಸಿ, ಸಾಹಿತ್ಯಾಸಕ್ತರ ಮನಸೆಳೆದ ಇವರು ಈಗ ತಮ್ಮ ನಾಲ್ಕನೆ ಕೃತಿಯಾಗಿ ವೈವಿಧ್ಯಮಯವಾದ ಕವನ ಸಂಕಲನವನ್ನು ರಚಿಸಿದ್ದಾರೆ. ಹೀಗೆ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಇವರ ಸೃಜನಶೀಲ ಚಟುವಟಿಕೆ ಏಕಾಗ್ರತೆಗೆ ಸಾಕ್ಷಿಯಾಗಿದೆ. ಈ ಕವನ ಸಂಕಲನದಲ್ಲಿ ಭಕ್ತಿಗೀತೆ,ವಿಡಂಬನೆ,ಬಂಡಾಯ ಸಾಹಿತ್ಯ, ಪ್ರೀತಿ,ಪ್ರೇಮ, ಸಾಮಾಜಿಕ ಕಳಕಳಿ, ಪ್ರಕೃತಿ, ದೇಶಪ್ರೇಮ ಹೀಗೆ ಹಲವು ವಿಷಯಗಳನ್ನು ಒಳಗೊಂಡ ಕವನ ಸಂಕಲನವನ್ನು ರಚಿಸಿದ್ದಾರೆ.
ಈ ಕವನ ಸಮಕಾಲೀನ ಸಂಕಲನದ ಕೌತುಕವೆಂದರೆ ವಿಷಯ ವೈವಿಧ್ಯತೆ, ಸಂದರ್ಭದ ಅನೇಕ ವಿಷಯಗಳನ್ನು ಒಳಗೊಂಡು ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಸ್ತುತಿಯೊಂದಿಗೆ ಪ್ರಾರಂಭಿಸಿ ಭಗವಂತನ ನಾಮ ಸ್ಮರಣೆ ಮಾಡುತ್ತ ಭಕ್ತಿ ಭಾವ ತೋರಿದರು. “ಸಂಜೆಯೊಲವಿನ ರಂಗು" ಕವನದಲ್ಲಿ ಸಂಜೆಯೊಲವಿನ ರಂಗನ್ನು ಎಲ್ಲರ ನಯನಗಳಲ್ಲಿ ತುಂಬಿರುವ ಅವರ ಚಮತ್ಕಾರ ಮೆಚ್ಚುವಂತದ್ದು. “ಕುರುಡು ಕಂಚಾಣ” ಕವನದಲ್ಲಿ ಒಲಿಯದ ಕುರುಡು ಕಾಂಚಾಣದ ನಿರೀಕ್ಷೆಯಲ್ಲಿ ತಲ್ಲಣಗೊಂಡು ಕನಸುಗಳ ತೆಕ್ಕೆಯೊಳಡಗಿದೆ ಎನ್ನುವ ವಾಸ್ತವ ವಿವರಿಸಿದ್ದಾರೆ.
ಇಲ್ಲಿ ಮತ್ತೊಂದು ಕವನ “ಭಾವೀ ನಾಯಕರು” ಕವನದಲ್ಲಿ ಮಕ್ಕಳಿಗೆ ಹೇಳುವ ಕಿವಿಮಾತು ಹೀಗಿದೆ.
ದೇಶಭಕ್ತಿ, ಧರ್ಮ ಸಹಿಷ್ಣುತೆ
ಉಕ್ಕಿ ಹರಿಯಲಿ ನರನಾಡಿಗಳಲ್ಲಿ
ದೇಶಪ್ರೇಮ ಸಹೋದರತೆ
ಏಕತೆಯ ಮಂತ್ರ ಅನುರಣಿಸುತಿರಲಿಎಂದು ದೇಶದ ಭಾವೀ ನಾಯಕರಾಗುವ ಮಕ್ಕಳಲ್ಲಿ ದೇಶ ಪ್ರೇಮವನ್ನು ತುಂಬುವ ಕವನ ಮೌಲ್ಯಯುತವಾಗಿದೆ “ಸ್ವಾತಂತ್ರ್ಯ” ಎನ್ನುವ ಕವನದಲ್ಲಿ ಹೆಣ್ಣಿನ ಪರತಂತ್ರದ ಬದುಕಿನ ಬಗ್ಗೆ ತುಂಬಾ ಚೊಕ್ಕವಾಗಿ ಬಿಂಬಿಸಿದ್ದಾರೆ.
ನಿಜ ಎಲ್ಲಿಯ ಸ್ವಾತಂತ್ರ್ಯ |
ಹೆಣ್ಣಿಗೆ ? ಯಾರಿಗೆ ಬಂತು
ಸ್ವಾತಂತ್ರ್ಯ ? ಎಂದಿನಂತೆಯೆ
ಪರತಂತ್ರದ ಬದುಕೇ ಸ್ಥಿರವಾಯಿತು |
ಹೆಣ್ಣು ತನ್ನ ಸಂಸಾರ, ಮಕ್ಕಳಿಗಾಗಿ ಎಷ್ಟೇ ತ್ಯಾಗ ಮಾಡಿದರು ಸ್ವಾತಂತ್ರ್ಯವಿಲ್ಲದೆ ಅವಳ ಬದುಕು ಪರರ ಹಂಗಿನಲ್ಲಿ ಜೀವಿಸುವಂತಾಯಿತು ಎಂದು ಹೆಣ್ಣಿನ ಅಸಹಾಯಕತೆಯನ್ನು ತಿಳಿಸುವ ಕವನ ಹೆಣ್ಣು ಮಕ್ಕಳ ಕಣ್ಣು ತೆರೆಸುವಂತಿದೆ. ಯುದ್ಧದಿಂದಾಗುವ ನೋವು, ವೇದನೆ, ಹಾಹಾಕಾರಗಳನ್ನು ಮನ ಮಿಡಿಯುವಂತೆ ವಿವರಿಸಿದ್ದಾರೆ.
ದ್ವೇಷದ ದಳ್ಳುರಿಯ ಬಲೆಗೆ ಸಿಲುಕಿದ
ಅಮಾಯಕ ಜೀವಗಳ ಬಲಿದಾನ
ಆಸರೆಯಿಲ್ಲದ ಹೆಂಗರುಳಿನ ಚೀತ್ಕಾರ
ಅನಾತ ಮಕ್ಕಳ ಹಾಹಾಕಾರ
ಹೀಗೆ ಕಾಳಗದ ವಿಕೃತ ರೂಪದಿಂದ ಆಗುವ ಅನಾಹುತಗಳನ್ನು ವಿವರಿಸಿದ ರೀತಿ ಹೃದಯ ವಿದ್ರಾವಕವಾಗಿದೆ. ಯುದ್ಧದ ಸಾಧನಗಳಿಗೆ ತುಕ್ಕು ಹಿಡಿದು ಶಾಂತಿ ಕಹಳೆ ಮೊಳಗಲಿ ಎಂದು ಆಶಿಸುವ ಅವರ ಹೃದಯ ವೈಶಾಲ್ಯತೆಯನ್ನು ಬಿಂಬಿಸುತ್ತದೆ. ಮುಂದಿನ ಕವನ “ಬಾಪು” ರಾಮರಾಜ್ಯದ ಕನಸು ಕಂಡವರು ನಮ್ಮ ಬಾಪು. ಅವರ ಕನಸಿನ ಭಾರತದಲ್ಲಿ ನಡೆಯುತ್ತಿರುವ ಅನಾಚಾರ, ಭ್ರಷ್ಟಾಚಾರ, ಅನ್ಯಾಯ, ಅತ್ಯಾಚಾರಗಳಿಂದ ಆದರ್ಶದ ಪರಿಕಲ್ಪನೆಗಳು ಮಾಯವಾಗಿವೆ ಎಂದು ಗಾಂಧೀಜಿಯವರಿಗೆ ನಿವೇದಿಸುವ ಕವನ ಇವರ ಆದರ್ಶವನ್ನು ಮೆರೆಸುವಂತಿದೆ.
ಸಂತರಂತೆ ಬಾಳಿದ “ಮೇರುಗುರು ಕೈವಾರ ತಾತಯ್ಯ' ಎಂಬ ಕವನವು ಜೀವನ ಮೌಲ್ಯಗಳನ್ನು ತಿಳಿಸಿದ ಕಾಲಜ್ಞಾನ ಬೋಧಿಸಿ, ಭವಿಷ್ಯ ನುಡಿದ ಅಂತದೃಷ್ಠಿ ಜ್ಞಾನಿ ಸಂತನ ಹಾಗೆ ಬಾಳಿದರೆಂದು ಅರಹುತ ಅವರ ಮಹಿಮೆ ಸಾರಿದರು. ನಾವು ತಿನ್ನುವ ಆಹಾರದ ಶುದ್ಧತೆ ಮರೆಯಾಗಿದೆ ಎಂದು ಸೂಚಿಸುವ ಕವನ ಕವನದಲ್ಲಿ ಕುಡಿಯುವ ನೀರು, ಉಸಿರಾಡುವ ಗಾಳಿ, ತಿನ್ನುವ ಪದಾರ್ಥ ಬೆರಕೆಯಾಗಿದೆ. ತಾಯಿ ಗರ್ಭದಲ್ಲೂ ಬೆರಕೆ ಹೀಗೆ ಕಲಿಯುಗದ ನಕಲಿ, ಕಲಬೆರಕೆ ಬಗ್ಗೆ ವಿವರಿಸಿದ ಕವನ ಎಲ್ಲರ ಕಣ್ಣು ತೆರೆಸುವಂತಿದೆ.
ಹೀಗೆ ಇವರು ನೀತಿ ನಿಯತ್ತು, ಪಕ್ಷಿ ಸಂಕುಲ,ವಿಶ್ವೇಶ್ವರಯ್ಯ, ಧರಣಿ, ಮಲ್ಲಿಗೆ, ಕರ್ನಾಟಕ, ಸರ್ಕಾರಿ ಶಾಲೆ, ಓ ರೈತ, ಜಡೆ ಕವನ, ಬುದ್ಧ, ಹರಕೆಯ ಕುರಿ,ರಾಕ್ಷಸ, ವಿಶ್ವ ಮಾನವ ದಿನ, ಗೋಮುಖ ವ್ಯಾಘ್ರ ಇನ್ನೂ ಮೊದಲಾದ ಇನ್ನೂರಿಪ್ಪತ್ತಾರು ಕವನಗಳನ್ನು ಬರೆದು ಗದ್ಯ-ಪದ್ಯ ಎರಡರಲ್ಲೂ ಅಪರೂಪದ ಗತ್ತುಗಮ್ಮತ್ತು ಗಳಿಸಿಕೊಂಡಿರುವ “ಸ್ನೇಹಮಯಿ” “ಸೌಜನ್ಯಶೀಲೆ" ವಿಜಯ ಪದ್ಮಶಾಲಿಯವರಿಂದ ಮತ್ತಷ್ಟು ಚೇತೋಹಾರಿ ಕೃತಿಗಳು ಹೊರಬರಲಿ” ಎಂದು ಹಾರೈಸಿದ್ದಾರೆ.