ಬುಡುಬುಡಿಕೆಯ ಹಾಲಕ್ಕಿ !

ಪಕ್ಷಿ ವೀಕ್ಷಕ ಮಿತ್ರರ ನಡುವೆ ebird ಎಂಬುದು ಬಹಳ ಪರಿಚಿತವಾದ ಹೆಸರು. ಇದೇ ebird ಎಂಬ ಹೆಸರಿನ ಮೊಬೈಲ್ app ನಿಮಗೆ ಪ್ಲೇಸ್ಟೋರ್ನಲ್ಲಿ ಸಿಗುತ್ತದೆ. ಪಕ್ಷಿ ವೀಕ್ಷಣೆಯ ಆಸಕ್ತರು ತಮ್ಮ ಪಕ್ಷಿವೀಕ್ಷಣೆಯ ಮಾಹಿತಿಯನ್ನು ದಾಖಲಿಸಲು ಇದನ್ನು ಬಳಸುತ್ತಾರೆ. ಪ್ರತಿವರ್ಷ ebird ಮೂಲಕ ಕ್ಯಾಂಪಸ್ ಬರ್ಡ್ ಕೌಂಟ್ ಎಂಬ ಕಾರ್ಯಕ್ರಮವೂ ನಡೆಯುತ್ತದೆ. ಹಲವಾರು ಶಾಲೆ, ಕಾಲೇಜು ಮತ್ತು ವಿದ್ಯಾಸಂಸ್ಥೆಗಳು ತಮ್ಮ ಸಂಸ್ಥೆಯ ಪರಿಸರದ ಹಕ್ಕಿಗಳನ್ನು ಪಟ್ಟಿಮಾಡಿ ದಾಖಲಿಸುತ್ತವೆ. ಹೀಗೇ ಒಮ್ಮೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದ ಸ್ನೇಹಿತರಾದ ವಿನೀತ್ ಕುಮಾರ್ ಮತ್ತು ಪ್ರಶಾಂತ್ ಕೃಷ್ಣ ಅವರ ಜೊತೆ ವಿಶ್ವವಿದ್ಯಾಲಯದ ಪರಿಸರದಲ್ಲಿ ಪಕ್ಷಿವೀಕ್ಷಣೆಗೆ ಹೋಗಿದ್ದೆ. ಬೆಳ್ಳಂಬೆಳಗ್ಗೆ ಏಳುಗಂಟೆಗೆ ಇನ್ನೊಂದಿಷ್ಟು ಆಸಕ್ತ ವಿದ್ಯಾರ್ಥಿಗಳೂ ಅವರಜೊತೆ ಬಂದಿದ್ದರು. ಗುಡ್ಡದಂತಹ ಎತ್ತರದ ಪ್ರದೇಶದಲ್ಲಿ ಸಮತಟ್ಟಾದ ಬಯಲು. ಅಲ್ಲಿ ಪಕ್ಷಿಗಳನ್ನು ನೋಡುತ್ತಾ, ನೋಡಿದ ಪಕ್ಷಿಗಳ ಹೆಸರು ಮತ್ತು ಸಂಖ್ಯೆಯನ್ನು ದಾಖಲಿಸುತ್ತಾ ಹೋಗುತ್ತಿದ್ದೆವು.
ಅಲ್ಲೊಂದು ಹಳೆಯ ಕಟ್ಟಡದ ಹತ್ತಿರ ಹೋಗುತ್ತಿದ್ದಾಗ ನಮ್ಮಲ್ಲೊಬ್ಬ ಅದೋ ಅಲ್ಲಿ ಗೂಬೆ ಎಂದು ಹೇಳಿದ. ಕಟ್ಟಡದ ಮೂಲೆಯ ಸಂಧಿಯಿಂದ ಗೂಬೆಯೊಂದು ಇಣುಕಿ ನೋಡುತ್ತಿತ್ತು. ನಮ್ಮನ್ನು ನೋಡಿ ಗಾಬರಿ ಆಯ್ತೆಂದು ಕಾಣುತ್ತದೆ ತನ್ನ ಜಾಗದಿಂದ ಹಾರಿ ಪಕ್ಕದ ಮರದ ಮೇಲೆ ಹೋಗಿ ಕುಳಿತುಕೊಂಡಿತು. ಸುಮಾರು ಮೈನಾ ಹಕ್ಕಿಯ ಗಾತ್ರ ಆದರೆ ತಲೆ ಕುತ್ತಿಗೆ ಎಲ್ಲ ಸೇರಿ ಒಂದು ಚೆಂಡಿನಂತಹ ದೇಹ. ನಮಗೆ ಬೆನ್ನು ಹಾಕಿ ಕುಳಿತ ಗೂಬೆ ಸ್ವಲ್ಪಹೊತ್ತಿನಲ್ಲಿ ನಮ್ಮತ್ತ ತಿರುಗಿತು. ತಿರುಗಿದ್ದು ಗೂಬೆಯ ತಲೆಮಾತ್ರ, ಗೂಬೆಯ ದೇಹ ಇನ್ನೂ ನಮಗೆ ಬೆನ್ನುಕಾಕಿ ಕುಳಿತುಕೊಂಡಿತ್ತು. ಮುಖವೂ ಬೆನ್ನೂ ನಮ್ಮ ಕಡೆಗೆ ತಿರುಗಿದ ಸ್ಥಿತಿಯನ್ನು ನೋಡಿದಾಗ ನನಗೆ ಫಟ್ಟನೆ ನೆನಪಾದದ್ದು ಸಿನೆಮಾಗಳಲ್ಲಿ ಬರುವ ಪಿಶಾಚಿ ಅಥವಾ ಭೂತದ ಕಲ್ಪನೆ.
ಬಹುಷಃ ನಮ್ಮ ಹಿಂದಿನವರು ರಾತ್ರಿ ಹೊತ್ತು ಸಂಚರಿಸುವ, ದೊಡ್ಡಕಣ್ಣುಗಳ, ಕುತ್ತಿಗೆಯನ್ನು ಸುಮಾರು ತನ್ನ ಕತ್ತಿನಸುತ್ತಲೂ ಈ ಕಡೆಯಿಂದ ಆ ಕಡೆ ತಿರುಗಿಸಬಲ್ಲ, ನಿಶ್ಶಬ್ದವಾಗಿ ಹಾರುವ ಗೂಬೆಗಳನ್ನು ನೋಡಿಯೇ ಭೂತ ಅಥವಾ ಪಿಶಾಚಿಯ ಕಲ್ಪನೆ ಮಾಡಿರಬೇಕು. ಅದಕ್ಕೇ ಚಿಕ್ಕಂದಿನಲ್ಲಿ ನಮ್ಮ ಅಜ್ಜಿ ಹೊರಗೆ ಹೋಗಬೇಡ ಗುಮ್ಮ ಬರ್ತದೆ ಅಂತ ಹೆದರಿಸ್ತಾ ಇದ್ದದ್ದು ಅಂತ ಈಗ ಅರ್ಥವಾಯಿತು. ದೊಡ್ಡ ಮರದ ಪೊಟರೆಯಲ್ಲಿ ಅಥವಾ ಪಾಳುಬಿದ್ದ ಕಟ್ಟಡಗಳ ಸಂದಿಗಳಲ್ಲಿ ವಾಸಿಸುವ ಈ ಗೂಬೆಯನ್ನು ನೋಡಲು ಬಹಳ ಮುದ್ದಾಗಿದೆ. ಕೆಲವೊಮ್ಮೆ ಮರಿಗಳು ಇರುವ ಕಾಲದಲ್ಲಿ ಎರಡು ಅಥವಾ ಮೂರು ಹಕ್ಕಿಗಳು ಒಟ್ಟಾಗಿ ಕಟ್ಟಡದ ಸಂದಿಗಳಲ್ಲಿ ಇರುವ ಚಿತ್ರಗಳನ್ನು ಹಲವು ಪಕ್ಷಿವೀಕ್ಷಕರು ಸೆರೆ ಹಿಡಿದಿದ್ದಾರೆ. ಇಲಿ, ಹಲ್ಲಿ ಕೀಟಗಳನ್ನು ಹಿಡಿದು ತಿನ್ನುವ ಈ ಜೀವಿಗಳು ಪರಿಸರ ಸಮತೋಲನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ.
ಜಯವಾಗುತೈತೆ, ಶುಭವಾಗುತೈತೆ, ಹಾಲಕ್ಕಿ ಶಕುನ ನುಡಿತೈತೆ ಎಂದು ಬುಡುಬುಡಿಕೆ ಆಡಿಸುತ್ತಾ ಬರುತ್ತಿದ್ದ ಬುಡುಬುಡಿಕೆಯವನು, ಹೇಳುತ್ತಿದ್ದ ಹಾಲಕ್ಕಿ ಇದೇ ಎಂದು ತಿಳಿದವರು ಹೇಳುತ್ತಾರೆ. ಈಗಂತೂ ಬುಡುಬುಡಿಕೆಯವರೂ ಇಲ್ಲ. ರಸ್ತೆ ಅಗಲೀಕರಣ, ಹೊಸ ಕಟ್ಟಡ ನಿರ್ಮಾಣ, ಮರಮಟ್ಟುಗಳಿಗೆ ಹೆಚ್ಚಿರುವ ಬೇಡಿಕೆ ಮೊದಲಾದ ಕಾರಣಗಳಿಂದಾಗಿ ಹಾಲಕ್ಕಿಯನ್ನು ನೋಡಲು ಸಿಗುವುದು ಅಪರೂಪ. ನಿಶಾಚರಿಯಾದ ಈ ಹಕ್ಕಿ ಹಗಲಿನಲ್ಲಿ ಎಲ್ಲಾದರೂ ಸುಮ್ಮನೆ ಕಣ್ಣುಮುಚ್ಚಿ ಕುಳಿತಿರುತ್ತದೆ. ಬಹುಷಃ ಅದರಿಂದಲೇ ಹಲವಾರು ಜನ ಗೂಬೆಗೆ ಹಗಲಿನಲ್ಲಿ ಕಣ್ಣು ಕಾಣುವುದಿಲ್ಲ ಎಂದು ತಪ್ಪು ತಿಳಿದಿದ್ದಾರೆ. ನಿಮ್ಮ ಮನೆಯ ಆಸುಪಾಸಿನಲ್ಲೂ ಈ ಹಕ್ಕಿ ಕಣ್ಣುಮುಚ್ಚಿ ಕುಳಿತಿರಬಹುದು. ಹುಡುಕಿದರೆ ಸಿಗಬಹುದು..
ಕನ್ನಡ ಹೆಸರು: ಹಾಲಕ್ಕಿ
ಇಂಗ್ಲೀಷ್ ಹೆಸರು: Spotted Owlet
ವೈಜ್ಞಾನಿಕ ಹೆಸರು: Athene brama
-ಅರವಿಂದ ಕುಡ್ಲ, ಬಂಟ್ವಾಳ