ಬುಡುಬುಡುಕೆ ದಾಸ...!
ಬುಡುಬುಡುಕೆ ದಾಸ, ಸಾಕ್ನಿನ್ಸಾವಾಸ
ನೂರೆಂಟ್ತರ ವೇಷ, ಮಾಡೋಕೆ ಮೋಸ
ಒಪ್ಪತ್ಗೊಂದ್ಮಾತು, ಒತಾರೆಗೇನೆ ತೂತು
ಹಚ್ಕೊಂಡು ಆಡ್ಕೊಂಡು , ಬದ್ಕೆ ಹಾಳಾಯ್ತು ||
ಹಾಳ್ಹೊಟ್ಟೆ ಸಾವಾಸ, ಮಾಡಿಸ್ತಾ ನಾಟ್ಕಾ
ಘಂಟೆಗೊಂದ್ಗಳ್ಗೆಗೊಂದ್, ತೋರುಸ್ತಾ ಜಾತ್ಕಾ
ಮಟ್ಟಾ ಹಾಕ್ತೀನಂತ, ಹೊರಟಿದ್ದು ಗುದ್ದಾಟಕ್ಕೆ
ಗುದ್ಬಿದ್ರು ತಿದ್ಕೊಳ್ದೆ, ಬರಿ ನರಳಾಟ ಗೊರಕೆ ||
ಅವನ್ಹತ್ತೋಕೆ ಹೊರಟ, ಕಾಲೆಳ್ಯೋದೆ ಕೆಲಸ
ಹತ್ತೋಕ್ಬಿಡ್ದೆ ಕಪ್ಪೆ , ಬಾವಿಗ್ಬೀಳ್ಸೋದೆ ಪ್ರತಿ ದಿವಸ
ಅಪ್ಪಿತಪ್ಪಿ ಹತ್ತೀದೊನ್ಗೆ, ಒದಿಯೋದೆ ಸುಲಭ
ಮೇಲ್ಯಾರು ಹತ್ತದಂಗೆ, ಕಾಯ್ತಾನೆ ಕಿರುಬ ||
ಕೂತ್ಮೇಲೆ ತಳಾರ, ಬರಿ ಅವರದೆ ವ್ಯಾಪಾರ
ಮೈಮುರ್ದು ಅವ್ರಿವ್ರ್ಗೆ , ದುಡಿಯೋ ಗ್ರಾಚಾರ
ಮೂರ್ಕಾಸಿನ್ ದೋಸೆಗ್, ಆರ್ಕಾಸಿನ್ ಕೆಲ್ಸಾ
ಸಾಯೊದ್ರೊಳಗುದ್ದಾರ, ಮಾಡ್ಬೇಕ್ನಂಬ್ದೋರ ||
ಈ ದಾಸಯ್ಯನ್ಸಂತೇಲಿ, ಗೂಸಾನೆ ಜಾಸ್ತಿ
ಮಾಡ್ತಾರೆ ತಿಂದೇನೆ, ಅವರಿವರಿಗ್ ಆಸ್ತಿ
ಅನ್ಭವ್ಸೋಕು ಮನಶ್ಯಾಂತಿ, ಇಲ್ದೇನೆ ಸುತ್ಸುತ್ತಿ
ಸಿವುನ್ಪಾದ ಸೇರ್ದಾಗ್ಲು, ಪಾಪಾಪುಣ್ಯದ್ಡೋಲಿ ||
Comments
ಉ: ಬುಡುಬುಡುಕೆ ದಾಸ...!
ರಾಯರೇ, ಕವನ ತುಂಬಾ ಚೆನ್ನಾಗಿ ಮೂಡಿಬಂದಿದೆ. ರಾಜರತ್ನಂರವರ ಜಾನಪದ ಧಾಟಿಯಲ್ಲಿ ಅಧ್ಯಾತ್ಮವನ್ನು ಇಂದಿನ Corporate ಜಗತ್ತಿಗೂ ಅನ್ವಯಿಸುವಂತೆ ಬರೆದದ್ದು ಬಹಳ ಸೊಗಸಾಗಿದೆ. ಹಂ ತೋ ಆಪ್ ಪೇ ಫಿದಾ ಹೋ ಗಯೇ! Very nice poemಊ, ರಾಯರೇ.
In reply to ಉ: ಬುಡುಬುಡುಕೆ ದಾಸ...! by santhosha shastry
ಉ: ಬುಡುಬುಡುಕೆ ದಾಸ...!
ಶಾಸ್ತ್ರಿಗಳೇ ನಮಸ್ಕಾರ.. ಆ ಕವನಾ ಹೇಗಾದ್ರೂ ಇರ್ಲಿ , ನಿಮ್ಮ ಮಾತಿಗೆ ನಾನಂತೂ ಫ್ಲಾಟ್ ಆಗೋದೆ ! ಹಾಡ್ಕೊಳೊಕೆ ಪ್ರಾಸ , ಸ್ವಲ್ಪ ಆಡುಭಾಷೆ ಸಾವಾಸ - ಎರಡೂ ಸೇರಿದ್ರೆ ಹೇಗಿರುತ್ತೆ ಅಂತ ಟ್ರೈ ಮಾಡಿದ್ದರ ಫಲ ಇದು. ನಿಮಗೆ ಹಿಡಿಸ್ತಲ್ಲಾ ಸಾಕು ಬಿಡಿ :-)
ಉ: ಬುಡುಬುಡುಕೆ ದಾಸ...!
ಇಂತಹ ಬುಡಬುಡಕೆ ದಾಸರೇ ಈಗ ಮಧ್ಯವರ್ತಿಗಳು! ನನ್ನ ಸೇವಾವಧಿಯಲ್ಲಿ ಕಂಡ ನೂರಾರು ಬಡಬುಡಕೆ ದಾಸರುಗಳ ಮುಖಪಟಲಗಳು ಕಣ್ಣಮುಂದೆ ಬಂದವು!
ಸಣ್ಣವರಿದ್ದಾಗ ಕಾಮನಹುಣ್ಣಿಮೆ ಹಬ್ಬದ ಸಂದರ್ಭದಲ್ಲಿ ಕಾಮಣ್ಣನನ್ನು ಸುಡುವ ಮುನ್ನ ಬೀದಿ ಬೀದಿ ಸುತ್ತಿ ಸೌದೆ ಸಂಗ್ರಹಿಸುತ್ತಿದ್ದ ಹುಡುಗರ ಗುಂಪಿನಲ್ಲಿ ನಾನೂ ಕುಣಿಯುತ್ತ ಸೇರಿಕೊಳ್ಳುತ್ತಿದ್ದೆ. ಆಗ ಕೋರಸ್ಸಿನಲ್ಲಿ ಹಾಡುತ್ತಿದ್ದ "ಕಾಮಣ್ಣ ಮಕ್ಕಳು ಕಳ್ಳ ಸೂ..ಮಕ್ಕಳು, ಏನೇನ್ ಕದ್ದರು ಬೆಣ್ಣಿ ಸೌದೆ ಕದ್ದರು. . . . ." ಸಾಲುಗಳೂ ನೆನಪಿಗೆ ಬಂದವು. ಧನ್ಯವಾದಗಳು, ನಾಗೇಶರೇ.
In reply to ಉ: ಬುಡುಬುಡುಕೆ ದಾಸ...! by kavinagaraj
ಉ: ಬುಡುಬುಡುಕೆ ದಾಸ...!
ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ಬುಡುಬುಡಿಕೆ ದಾಸರ ಬಡಬಡಿಕೆ ಬಡಾಯಿಯ ನಡುವೆಯೆ ಬದುಕುವ ಅನಿವಾರ್ಯ ಈ ಜಗದಲ್ಲಿ. ಜತೆಗೆ ಏಗಬೇಕೆಂದರೆ ಅವರಂತಾಗದಿದ್ದರು ಆದಂತೆ ವರ್ತಿಸಬೇಕು - ಇಲ್ಲದಿದ್ದರೆ ಹುರಿದು ಮುಕ್ಕಿ ತೇಗಿಬಿಡುತ್ತಾರೆ ಪಾಪದವರನ್ನು! ಬಹುಷಃ ಎಲ್ಲ ಕಾಲದಲ್ಲೂ ಇಂತಹವರು ಇದ್ದೆ ಇರುತ್ತಿದ್ದರೇನೊ.. ಈಗ ಕಲಿಯುಗದಲ್ಲಿ ಜಾಸ್ತಿ ಸಂಖ್ಯೆ :-)