ಬುದ್ದತ್ವದೆಡೆಗೆ ಹೆಜ್ಜೆ ಹಾಕುತ್ತಾ…(ಭಾಗ 1)
ಬುದ್ದ ಪೂರ್ಣಿಮೆಯ ಬೆಳದಿಂಗಳಲ್ಲಿ ಬುದ್ದನನ್ನೇ ಹುಡುಕುತ್ತಾ… ಈ ನೆಲದ ನಿಜವಾದ ಮಣ್ಣಿನ ಮಗ ಬುದ್ದ, ಈ ಮಣ್ಣಿನ ವಾಸ್ತವದ ಸಾಂಸ್ಕೃತಿಕ ವಕ್ತಾರ ಬುದ್ಧ. ಬುದ್ದನಂತ ಕೆಲವು ಚಿಂತಕರು ಈ ಜಗತ್ತಿನಲ್ಲಿ ಆಗಿಹೋಗಿದ್ದಾರೆ. ಆದರೆ ಬುದ್ದನ ಹೆಚ್ಚುಗಾರಿಗೆ ಆತನ ಪ್ರಜ್ಞೆ ಟಿಸಿಲೊಡೆಯುವುದು ಸ್ವತಃ ತನ್ನ ದೇಹ ಮತ್ತು ಮನಸ್ಸುಗಳ ದಂಡನೆಯಿಂದ. ಅಂದರೆ ಅದು ಎರವಲು ಜ್ಞಾನವಲ್ಲ ಆಂತರ್ಯದ ಸೃಷ್ಟಿ. ಬಹುಶಃ ಆ ಕಾರಣದಿಂದಲೇ ಬುದ್ದ ಈಗಲೂ ಸಾಕಷ್ಟು ಜನರ ಬೆಳಗಿನ ಶುಭೋದಯದ ಮೊದಲ ಬೆಳಕು. ಬುದ್ದ ಬದುಕನ್ನು ಹುಡುಕಿದರೆ ನಾವು ಬುದ್ದನನ್ನು ಹುಡುಕುತ್ತಿದ್ದೇವೆ. ಬುದ್ದನಿಗೆ ಬದುಕಿನ ಜ್ಞಾನೋದಯವಾದರೆ ನಮಗೆ ಬುದ್ಧ ಸಿಗುತ್ತಲೇ ಇಲ್ಲ. ಕಾರಣ ಬುದ್ದ ನಮ್ಮೊಳಗೆ ಇಳಿಯಲು ಸ್ಥಳಾವಕಾಶವೇ ಇಲ್ಲದಂತಾಗಿದೆ.
ಕ್ರಿಸ್ತ ಪೂರ್ವದ ಬುದ್ದ - 21 ನೆಯ ಶತಮಾನದ ನಾವು ಈ ಬೆಳದಿಂಗಳಲ್ಲಿ ಮುಖಾಮುಖಿಯಾದಾಗ… ಧ್ಯಾನಸ್ಥ ಬುದ್ದ ಟ್ರಾಫಿಕ್ ನಲ್ಲಿ ಕಳೆದುಹೋದ, ನಿಸ್ವಾರ್ಥ ಬುದ್ದ ಭ್ರಷ್ಟಾಚಾರದಲ್ಲಿ ಮುಳುಗಿಹೋದ, ಅಹಿಂಸೆಯ ಬುದ್ದ ಪರಮಾಣು ಬಾಂಬುಗಳಲ್ಲಿ ಅಡಗಿಹೋದ, ಜ್ಞಾನದ ಬದ್ದ ಅಂಕಗಳಲ್ಲಿ ಮರೆಯಾಗಿ ಹೋದ, ನಿರ್ಲಿಪ್ತ ಬುದ್ದ ಹಣ ಆಸ್ತಿ ಜಮೀನುಗಳಲ್ಲಿ ಹುದುಗಿ ಹೋದ, ಎಲ್ಲಿಯಾದರೂ ಸಿಕ್ಕಾನೆಯೇ ಬುದ್ದ?
ಸುಖ ಭೋಗಗಳನ್ನು ತ್ಯಜಿಸಿ ಇನ್ನೇನೋ ಹುಡುಕುತ್ತಾ ಸಿದ್ದಾರ್ಥ ಎಂಬ ಮನುಷ್ಯ ಬುದ್ಧನಾದ. ಬುದ್ದನನ್ನು ಹುಡುಕುತ್ತಾ ಮತ್ತೊಬ್ಬ ಸುಖ ಭೋಗಗಳ ದಾಸನಾದ. ಸಿದ್ದಾರ್ಥನನ್ನು ಹುಡುಕಬಹುದು, ಆತ ಸಿಗುತ್ತಾನೆ. ಆದರೆ ಬುದ್ದನನ್ನು ಹುಡುಕುವುದೆಲ್ಲಿ? ಒಳಗೋ ಹೊರಗೋ...
ಕ್ರಿಸ್ತ ಪೂರ್ವದ ಬುದ್ಧನೆಲ್ಲಿ, 2023 ರ ಬುದ್ದು ( ದಡ್ಡ ) ಎಲ್ಲಿ, ಸ್ವಂತ ಮನೆಯಲ್ಲಿ ಕುಳಿತು ಆಹಾರ ಸೇವಿಸುತ್ತಾ ಟಿವಿ ನೋಡುತ್ತಾ ಬುದ್ದನನ್ನು ಹುಡುಕಿದನೊಬ್ಬ...ಲೈಬ್ರರಿಯಲ್ಲಿ ಕುಳಿತು ಪುಸ್ತಕ ಓದುತ್ತಾ, ಬರೆಯುತ್ತಾ ಹುಡುಕಿದ ಬುದ್ದನನ್ನು ಇನ್ನೊಬ್ಬ.. ಅಧ್ಯಯನ ಮಾಡುತ್ತಾ, ಚಿಂತಿಸುತ್ತಾ ಉಪನ್ಯಾಸ ನೀಡುತ್ತಾ ಬುದ್ದನನ್ನು ಹುಡುಕಿದ ಮಗದೊಬ್ಬ… ಪ್ರಶಸ್ತಿಗಾಗಿ, ಪ್ರಚಾರಕ್ಕಾಗಿ, ಪ್ರಖ್ಯಾತಿಗಾಗಿ, ಬುದ್ದಿಯ ಪ್ರದರ್ಶನಕ್ಕಾಗಿ ಹುಡುಕುತ್ತಲೇ ಇದ್ದಾರೆ ಅನೇಕ ಸಿದ್ದಾರ್ಥರು ಬುದ್ದನನ್ನು.. ಸಿಕ್ಕಾನೆಯೇ ಬುದ್ದ…? ಕಾಡು ಮೇಡುಗಳಲ್ಲಿ ಅಲೆದು, ದೇಹ ಮನಸ್ಸುಗಳನ್ನು ದಂಡಿಸಿ, ಚರ್ಚೆ ಸಂವಾದ ಮಂಥನಗಳನ್ನು ಮಾಡಿ, ಧ್ಯಾನದ ಉತ್ತುಂಗ ತಲುಪಿ ಬುದ್ದನಾದವನನ್ನು ಹುಡುಕುವುದು ಸುಲಭವೇ…?
ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ಸಂಜೆಯ ಉಪಹಾರ, ರಾತ್ರಿಯ ಭೋಜನ ಮಾಡಿ, ಬೆಚ್ಚಗಿನ ಮನೆಯಲ್ಲಿ, ಕುಟುಂಬದೊಂದಿಗೆ, ನಾಳಿನ ಯೋಚನೆಗಳೊಂದಿಗೆ, ಸ್ನಾನ ಶೌಚಗಳ ಅನುಕೂಲದೊಂದಿಗೆ, ಮೈಥುನದ ಸುಖದೊಳಗೆ, ಮೊಬೈಲ್ ಮಾಯೆಯೊಳಗೆ ಸಿಕ್ಕಾನೆಯೇ ಬುದ್ದ.
ದೇಹದಲ್ಲಿ ಅಡಗಿದ್ದಾನೆಯೇ ಬುದ್ದ,
ಮನಸ್ಸಿನಲ್ಲಿ ಅಡಗಿದ್ದಾನೆಯೇ ಬುದ್ದ,
ಹೃದಯದಲ್ಲಿ ಅಡಗಿದ್ದಾನೆಯೇ ಬುದ್ದ,
ಜ್ಞಾನದಿಂದ ಸಿಗುವನೇ ಬುದ್ದ,
ಭಕ್ತಿಯಿಂದ ಸಿಗುವನೇ ಬುದ್ದ,
ಕರ್ಮದಿಂದ ಸಿಗುವನೇ ಬುದ್ದ,
ಯೋಗ ಧ್ಯಾನಗಳಿಂದ ಸಿಗುವನೇ ಬುದ್ದ.
ಇವುಗಳಿಂದ ದೇವರನ್ನು ಹುಡುಕಬಹುದು,
ಆದರೆ ಬುದ್ದನನ್ನು ಹುಡುಕಬಹುದೆ....
ಹೌದು, ಬುದ್ದನನ್ನು ಹುಡುಕಬಹುದು, ಎಲ್ಲಿ ? ಹೇಗೆ ?....
ಮಾನವೀಯ ಮೌಲ್ಯಗಳಲ್ಲಿ ಬುದ್ದನನ್ನು ಹುಡುಕಬಹುದು.
ಪ್ರೀತಿಯಲ್ಲಿ,
ತ್ಯಾಗದಲ್ಲಿ,
ಕರುಣೆಯಲ್ಲಿ,
ವಿನಯದಲ್ಲಿ,
ಸಭ್ಯತೆಯಲ್ಲಿ,
ಕ್ಷಮಾಗುಣದಲ್ಲಿ,
ಸ್ನೇಹದಲ್ಲಿ,
ಸಂಬಂಧಗಳಲ್ಲಿ,
ತಾಳ್ಮೆಯಲ್ಲಿ,
ಸಂಯಮದಲ್ಲಿ,
ಧೈರ್ಯದಲ್ಲಿ,
ನಿರಂತರ ಪ್ರಯತ್ನದಲ್ಲಿ,...
ಬುದ್ದ ಸಿಕ್ಕರೂ ಸಿಗಬಹುದು…
ವೈರಸ್ಸಿನ ಭಯದಲ್ಲಿ,
ಸಾವಿನ ಆತಂಕದಲ್ಲಿ,
ಸೋಲುವ ಭೀತಿಯಲ್ಲಿ,
ಕುಟುಂಬದ ಮೋಹದಲ್ಲಿ,
ಹಣದ ದಾಹದಲ್ಲಿ,
ಅಧಿಕಾರದ ಗುಂಗಿನಲ್ಲಿ,
ಪ್ರಚಾರದ ಅಮಲಿನಲ್ಲಿ,
ಸಾಧನೆಯ ಅಹಂಕಾರದಲ್ಲಿ....
ಬುದ್ದನನ್ನು ಹುಡುಕುವ ನಾಟಕವೇಕೆ?
ನಾನು ಸಹ ಹುಡುಕುತ್ತಲೇ ಇದ್ದೇನೆ ಬುದ್ದನನ್ನು,
ನನ್ನೊಳಗಿನ ಬೆಳಕನ್ನು ಬೆಳಗಿಸುವಾ ಬುದ್ದನನ್ನು..
ಸಿಕಿಲ್ಲ ಆತ ಇನ್ನೂ…
-ವಿವೇಕಾನಂದ. ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ