ಬುದ್ದತ್ವದೆಡೆಗೆ ಹೆಜ್ಜೆ ಹಾಕುತ್ತಾ…(ಭಾಗ 2)

ಬುದ್ದತ್ವದೆಡೆಗೆ ಹೆಜ್ಜೆ ಹಾಕುತ್ತಾ…(ಭಾಗ 2)

ಯಾರೋ ನೀನು ಸಿದ್ಧಾರ್ಥ, ಒಂದು ರಾಜ್ಯದ ರಾಜಕುಮಾರನಂತೆ, ಕಷ್ಟ, ನೋವು, ಬೇಸರ ಏನೂ ಗೊತ್ತಿಲ್ಲದೆ ಬೆಳೆದ ಯುವರಾಜನಂತೆ, ಹೆಂಡತಿ - ಮಕ್ಕಳೊಂದಿಗೆ ಹಾಯಾಗಿದ್ದ ಸುಖಪುರುಷನಂತೆ, ಆದರೆ ಅದೇನಾಯಿತೋ ಸಿದ್ಧಾರ್ಥ ನಿನಗೆ, ಒಮ್ಮೆ ರಾಜ್ಯವನ್ನೆಲ್ಲಾ ಸುತ್ತಾಡುವಾಗ ಜನರ ಬದುಕು ನೋಡಿ ಗಾಬರಿಯಾದೆಯಂತೆ, ಕಷ್ಟ, ನೋವು, ರೋಗ, ಸಾವುಗಳು ನಿನ್ನನ್ನು ಕಾಡಲಾರಂಬಿಸಿದವಂತೆ, ಅದಕ್ಕೆ ಕಾರಣಗಳೇನು, ಪರಿಹಾರಗಳೇನು ಎಂದು ಮನಸ್ಸು ನಿನ್ನನ್ನು ಗಲಿಬಿಲಿಗೊಳಿಸಿತಂತೆ, ಆಗ ಒಂದು ದಿನ ಇದ್ದಕ್ಕಿದ್ದಂತೆ ರಾಜ್ಯ, ಸಂಸಾರ, ಸುಖ ಭೋಗ ಎಲ್ಲಾ ತೊರೆದು ರಾತ್ರೋರಾತ್ರಿ ಹೊರಟೆಯಂತೆ, ಬೀದಿಬೀದಿಗಳನ್ನ, ರಾಜ್ಯ ಪ್ರದೇಶಗಳನ್ನ, ಅಲೆಮಾರಿಯಂತೆ ಸುತ್ತಾಡಿದೆಯಂತೆ, ಮಹಾನ್ ಪಂಡಿತ, ಪಾಮರ, ಜ್ಞಾನಿಗಳನ್ನು ಭೇಟಿ ಮಾಡಿ  ಚರ್ಚಿಸಿದೆಯಂತೆ, ಭಿಕ್ಷುಕನಂತೆ ಭಿಕ್ಷೆ ಬೇಡಿ ತಿಂದು ಬದುಕಿದೆಯಂತೆ, ಉಪವಾಸವಿದ್ದು ತಿಂಗಳುಗಟ್ಟಲೆ ದೇಹ ದಂಡಿಸಿದೆಯಂತೆ, ವರ್ಷಾನುಗಟ್ಟಲೆ ಕಾಡು ಮೇಡುಗಳಲ್ಲಿ ಅಲೆದು ಧ್ಯಾನ, ತಪಸ್ಸು ಮಾಡಿದೆಯಂತೆ,  ಒಂದು ದಿನ ನಿನಗೆ ಭೋದಿವೃಕ್ಷದ ಕೆಳಗೆ ಜ್ಞಾನೋದಯವಾಯಿತಂತೆ.

ಅಬ್ಬಾ,.. ಅದೇನು ಜ್ಞಾನೋದಯವಾಯಿತೋ ಅಥವಾ ನೀನೇ ಜ್ಞಾನವಾದೆಯೋ, ಅಲ್ಲಿಂದ ಆದೆ ನೋಡು ನೀನು ಗೌತಮ ಬುದ್ದ, ಯಪ್ಪಾ, ಅದೇನು ಚಿಂತನೆ, ಅದೇನು ಜ್ಞಾನ, ಅದೇನು ಅರಿವು, ಯಾವ ಡಾಕ್ಟರುಗಳು, ಯಾವ ಮನಶಾಸ್ತ್ರಜ್ಞರು, ಯಾವ ಜೀವ ವಿಜ್ಞಾನಿಗಳಿಗೂ, ಸಾಧ್ಯವಾಗದ ಮನುಷ್ಯನ ಆತ್ಮ, ಮೆದುಳು, ಮನಸ್ಸು, ಭಾವನೆ, ಜೀವನಕ್ರಮವನ್ನು ಅರೆದು ಕುಡಿದು ಅದರ ಎಲ್ಲವನ್ನೂ ತೆರೆದಿಟ್ಟ ಮಹಾನ್ ವ್ಯಕ್ತಿಯಾದೆ,

ಜನರ ಬದುಕು ಇಷ್ಟೊಂದು ಸಂಕೀರ್ಣವಾಗಿರದ, ನಾಗರಿಕತೆಯ ಮೊದಲ ಮೆಟ್ಟಿಲು ಏರುತ್ತಿದ್ದ, ಆ ದಿನಗಳಲ್ಲೇ ಮನುಷ್ಯ ಜನಾಂಗದ ಇಡೀ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ ಅದ್ಭುತ ವ್ಯಕ್ತಿಯಾದೆ, ನಿನ್ನ ಒಂದೊಂದು ಮಾತುಗಳು ಅರಗಿಸಿಕೊಳ್ಳುವುದೇ  ಕಷ್ಟ, ಕಲ್ಲಿನ ಕೆತ್ತನೆಯಿಂದ ಹಿಡಿದು ಫೇಸ್ ಬುಕ್ - ವಾಟ್ಸ್ ಆ್ಯಪ್ - ಟ್ವಿಟರುಗಳ ತನಕ ಎಲ್ಲಾ ಸ್ಥಳಗಳಲ್ಲಿ ನಿನ್ನ ಮಾತುಗಳಿಗೇ ಪ್ರಥಮ ಸ್ಥಾನ. ಅಷ್ಟೇ ಏಕೆ, ಪಾಶ್ಚಾತ್ಯ, ಪೌರಾತ್ಯ ಸಂಸ್ಕೃತಿಗಳನ್ನ, ವಿಶ್ವದ ಬಹುತೇಕ ಧರ್ಮಗಳನ್ನ, ಅಸಾಮಾನ್ಯ ಗ್ರಂಥಗಳನ್ನ, ಅನೇಕ ದೇಶಗಳ ಸಂವಿಧಾನಗಳನ್ನ, ಓದಿ ಅರ್ಥ್ಯೆಸಿಕೊಂಡಿದ್ದ ಬಾಬಾ ಅಂಬೇಡ್ಕರ್ ಅವರೇ ನಿನಗೆ ಶರಣಾದರೆಂದರೆ ನೀನೇನು ಮನುಷ್ಯನೇ, ಪ್ರಕೃತಿಯ ಅದ್ಭುತ, ಆಶ್ಚರ್ಯಕರ, ಸೃಷ್ಟಿಯಾದ ಗೌತಮ ಬುದ್ದನೇ, ನಿನ್ನನ್ನು ಒಂದೇ ಒಂದು ಬಾರಿ ನೋಡಬೇಕೆನಿಸಿದೆ, ಮಾತನಾಡಬೇಕಿನಿಸಿದೆ,

ಈ ಹುಚ್ಚರ ಸಂತೆಯಲ್ಲಿ ನಿನ್ನನ್ನು ನಿಲ್ಲಿಸಿ ಎಲ್ಲರಿಗೂ ಹೇಳಬೇಕಿದೆ, ಮನುಷ್ಯರೆಂದರೆ ಏನೆಂದು  ಈ ಅನಾಗರಿಕರಿಗೆ, ಬಾರೋ ಗೌತಮ ಬುದ್ದನಾದ ಸಿದ್ಧಾರ್ಥನೇ, ಮತ್ತೊಮ್ಮೆ ಹುಟ್ಟಿ ಬಾ, ನನಗೆ ಯೋಗ್ಯತೆ ಇಲ್ಲದಿದ್ದರೂ ಹೇಳುತ್ತಿದ್ದೇನೆ, ಎಲ್ಲರಿಗೂ ಬುದ್ದ ಪೂರ್ಣಿಮೆಯ ನೆನಪಲ್ಲಿ, ಸುಂದರ ಚಂದ್ರ ದರ್ಶನದ ಶುಭಾಶಯಗಳು.

-ವಿವೇಕಾನಂದ. ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ