ಬುದ್ದಿ ಹೇಳುವುದು ತುಂಬಾ ಸುಲಭ. ಆದರೆ ಅನುಸರಿಸುವುದು…?

ಬುದ್ದಿ ಹೇಳುವುದು ತುಂಬಾ ಸುಲಭ. ಆದರೆ ಅನುಸರಿಸುವುದು…?

ಒಂದು ವೇಳೆ, ಭಗವದ್ಗೀತೆ, ಬೈಬಲ್, ಖುರಾನ್, ಗ್ರಂಥಾ ಸಾಹಿಬ್, ಬುದ್ದ ಪ್ರಜ್ಞೆ, ಮಹಾವೀರರ ಸಂದೇಶ, ಬಸವ ವಚನ ಈ ರೀತಿಯ ಶಿಕ್ಷಣ ಕಲಿಸಲೇ ಬೇಕು ಎನ್ನುವುದಾದರೆ ಅದರೆ ಅವಶ್ಯಕತೆ ಯಾರಿಗಿದೆ? ನಿಜವಾಗಲೂ ಈ ಧಾರ್ಮಿಕ ಸಂದೇಶಗಳ ಪಾಠ ಮಾಡಬೇಕಿರುವುದು ಮೊದಲು ರಾಜಕಾರಣಿಗಳಿಗೆ. ದುಡ್ಡು ಹೆಂಡ ಕೊಟ್ಟು ಚುನಾವಣೆಯಲ್ಲಿ ಗೆದ್ದು ಮತ್ತೆ ಹಣಕ್ಕೆ ‌ಮಾರಾಟವಾಗಿ ಅಲ್ಲಿಯೂ ಭ್ರಷ್ಟಾಚಾರ ಮಾಡುವ ಇವರುಗಳಿಗೆ ಇಲ್ಲದ ಭ - ಬೈ - ಖು - ಗಳು ನಮಗೇಕೆ?

ಸಾರ್ವಜನಿಕರ ತೆರಿಗೆ ಹಣದಲ್ಲಿ ತಮ್ಮ ಇಡೀ ಬದುಕನ್ನೇ ಕಳೆಯುವ ಸರ್ಕಾರಿ ಅಧಿಕಾರಿಗಳು ಇವತ್ತು ಬರ್ತ್ ಸರ್ಟಿಫಿಕೇಟ್ ಗೂ ಡೆತ್ ಸರ್ಟಿಫಿಕೇಟಗೂ ಲಂಚ ಪಡೆಯುವ ಕೆಳ ಮಟ್ಟಕ್ಕೆ ಇಳಿದಿರುವಾಗ ನಿಜಕ್ಕೂ ಭ - ಬೈ - ಖು - ಕಲಿಸಬೇಕಿರುವುದು ಇವರಿಗೆ. ಸರ್ವಸಂಗ ಪರಿತ್ಯಾಗಿಗಳಾಗಿ ಇಡೀ ಮಾನವಕುಲವನ್ನು ಒಂದೇ ಎಂದು ಪರಿಗಣಿಸಿ ಜನರಲ್ಲಿ ಆ ಮೌಲ್ಯಗಳನ್ನು ಬಿತ್ತಬೇಕಾದ ಎಲ್ಲಾ ಧರ್ಮಗಳ ಧರ್ಮಾಧಿಕಾರಿಗಳು ಇವತ್ತು ರಾಜಕೀಯ ಆರ್ಥಿಕ ಭ್ರಷ್ಟತೆಗೆ ಒಳಗಾಗಿ ಅತ್ಯಂತ ಸಂಕುಚಿತವಾಗಿ ಮನಬಂದಂತೆ ವರ್ತಿಸುತ್ತಿರುವಾಗ ಅವರಿಗೆ ಬೇಕಾಗಿದೆ ಭ - ಬೈ - ಖು - ಗಳು.

ಬ್ರೇಕಿಂಗ್ ನ್ಯೂಸ್ ಹೆಸರಲ್ಲಿ ಇಡೀ ಸಮಾಜದಲ್ಲಿ ವಿರುದ್ಧ ಮತ್ತು ದುಷ್ಟ ಮೌಲ್ಯಗಳನ್ನು  ತುಂಬಿ ಒಂದು ಪೀಳಿಗೆಯ ಚಿಂತನಾ ಶಕ್ತಿಯನ್ನೇ ದಾರಿ ತಪ್ಪಿಸುತ್ತಿರುವ ಪತ್ರಕರ್ತ ಸಮೂಹಕ್ಕೆ ಪಾಠವಾಗಬೇಕಿದೆ ಭ - ಭೈ - ಖು....ಎಂಬ ಧರ್ಮ ಗ್ರಂಥಗಳು. ಕಾನೂನನ್ನು ಪಾಲನೆ ಮಾಡಿ‌ ದೇಶದ ಜನರು ನೆಮ್ಮದಿಯಿಂದ ಜೀವನ ಮಾಡುವಂತೆ ಮಾಡಲು ರೂಪಿಸಿಕೊಂಡ ಪೋಲೀಸ್ ವ್ಯವಸ್ಥೆ ವರ್ಗಾವಣೆ ಹೆಲ್ಮೆಟ್ ರೋಲ್ ಕಾಲ್ ಬಡವರ ಮೇಲೆ ದರ್ಪ ಶ್ರೀಮಂತರ ಗುಲಾಮಗಿರಿ ಒಳಗಾಗಿ ಸಾಮಾನ್ಯ ಜನರ ನಂಬಿಕೆಯನ್ನೇ ಕಳೆದುಕೊಂಡಿರುವಾಗ ಅವರಿಗೆ ಭೋದಿಸಬೇಕಿದೆ ಭ - ಬೈ - ಖು....ಅನ್ನು.

‘ವೈದ್ಯೋ ನಾರಾಯಣೋ ಹರಿ’ ಎಂಬ ಸಂಸ್ಕೃತಿಯ ಮೇಲೆ ಕಟ್ಟಿದ ಆರೋಗ್ಯ ಎಂಬ ಡಾಕ್ಟರ್ ವೃತ್ತಿ ಇವತ್ತು ಬಹುತೇಕ ಒಂದು ಮಾಫಿಯಾ ಆಗಿ ಪರಿವರ್ತನೆ ಹೊಂದಿ ಜನರು ಆಸ್ಪತ್ರೆಗಳಿಗೆ ಹೋಗಲು‌ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿರುವಾಗ ಅವರಿಗೆ ಮತ್ತೆ ತಮ್ಮ ವೃತ್ತಿ ಧರ್ಮ ನೆನಪಿಸಲು ಹೇಳಿಕೊಡಬೇಕಾಗಿದೆ ಭ - ಬೈ - ಖು.

ಮಾನವೀಯ ಮೌಲ್ಯಗಳನ್ನು ಒಂದು ಜನಾಂಗದಿಂದ ಇನ್ನೊಂದು ಜನಾಂಗಕ್ಕೆ ವರ್ಗಾವಣೆ ಮಾಡುವ ಬಹುದೊಡ್ಡ ಜವಾಬ್ದಾರಿ ಹೊಂದಿರುವ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕರು ಸಮಾಜದ ನಿಜವಾದ ಗುರುಗಳು. ಆದರೆ ಇಡೀ ಶಿಕ್ಷಣ ವ್ಯವಸ್ಥೆ ಹಣ ದಾಹಕ್ಕೆ ಬಲಿಯಾಗಿ ಸರ್ಟಿಫಿಕೇಟ್ ಕೊಡುವ ಯಂತ್ರವಾಗಿರುವಾಗ ಅವರಿಗೆ ಕಲಿಸಬೇಕಾಗಿದೆ ಭ-  ಬೈ - ಖು. ಹಾಲಿಗೆ ಯೂರಿಯ ಬೆರೆಸಿ ಮಾರುವ ಖದೀಮರಿಗೆ ಬೇಕಾಗಿದೆ, ಎಣ್ಣೆಗೆ ಪೆಟ್ರೋಲ್ ಸೇರಿಸಿ ಮಾರುವ ದಗಾಕೋರರಿಗೆ ಬೇಕಾಗಿದೆ, ಗ್ರಂಥಾಲಯಗಳು ಸ್ಥಾಪಿಸಬೇಕಾದ ಜಾಗದಲ್ಲಿ ಬಾರುಗಳಿಗೆ ಅನುಮತಿ ನೀಡಿ ಸರ್ಕಾರ ನಡೆಯುವುದೇ ಸಾರಾಯಿಯಿಂದ ಎಂದು ಭ್ರಮೆಗೆ ಒಳಗಾಗಿರುವ ನೀಚ ಆಡಳಿತ ವ್ಯವಸ್ಥೆಗೆ ಬೇಕಾಗಿದೆ, ಕ್ರೀಡಾ ಸಂಸ್ಕೃತಿಗೆ ಬದಲಾಗಿ ಡಾಬಾ ಸಂಸ್ಕೃತಿ ಬೆಳೆಸುತ್ತಿರುವ ಜನರಿಗೆ ಬೇಕಾಗಿದೆ ಭ - ಬೈ- ಖು ಎಂಬ ಧರ್ಮ ಗ್ರಂಥಗಳ ಭೋದನೆ. ಅದು ಬಿಟ್ಟು ವ್ಯವಸ್ಥೆಯನ್ನು ವಿಷಮಯಗೊಳಿಸಿ ತಾವು ಮಜಾ ಮಾಡುತ್ತಾ ಈಗ ಪಾಪ ಏನೂ ಅರಿಯದ ಮಕ್ಕಳಿಗೆ ಆಡಿ ನಲಿಯಬೇಕಾದ ಕಂದಮ್ಮಗಳಿಗೆ ಭ - ಬೈ - ಖು - ಭೋದಿಸುವ ನಾಟಕ ಏಕೆ?

ಒಬ್ಬ ಶಾಸಕ ಮಂತ್ರಿಗೆ, ಒಬ್ಬ ಐ ಏ ಎಸ್ - ಕೆ ಎ ಎಸ್ ಅಧಿಕಾರಿಗೆ, ಒಬ್ಬ ವ್ಯಾಪಾರಿಗೆ ಹಾಗೆ ಸಮಾಜದ ಬಹುತೇಕ ದೊಡ್ಡ ಮಟ್ಟದ ವೃತ್ತಿ ನಿರತರಿಗೆ ಲಂಚ ತೆಗೆದುಕೊಳ್ಳಬಾರದು ಕೊಡಬಾರದು  ಅದು ಅಸಹ್ಯ ಅಪರಾಧ ಎಂದು ತಿಳಿದಿದ್ದರೂ ಅದರಲ್ಲಿಯೇ ಬದುಕು ಕಟ್ಟಿಕೊಳ್ಳುತ್ತಿರುವಾಗ ಮಕ್ಕಳಿಗೆ ಭ-  ಬೈ - ಖು - ಭೋದಿಸುವ ನೈತಿಕತೆ ಈ ಸಮಾಜಕ್ಕೆ ಇದೆಯೇ? ತಿಳಿವಳಿಕೆ ನಡವಳಿಕೆಯಾದಾಗ ಸಹಜವಾಗಿಯೇ ಮಕ್ಕಳು ಅದರ ಭಾಗವಾಗುತ್ತಾರೆ. ಮನಶಾಸ್ತ್ರಜ್ಞರ ಪ್ರಕಾರ ಮಕ್ಕಳು ನಾವು ಹೇಳುವುದನ್ನು ಮಾಡುವುದಿಲ್ಲ ನಾವು ಮಾಡುವುದನ್ನು ಅನುಸರಿಸುತ್ತಾರೆ. ಅಂದರೆ ಭ - ಬೈ - ಖು ಪಾಠ ಬೇಕಿರುವುದು ನಮಗೆ.

ಬುದ್ದಿ ಮಾತು ಹೇಳುವುದು ತುಂಬಾ ಸುಲಭ. ಆದರೆ ಅನುಸರಿಸುವುದು? ಆದ್ದರಿಂದ ಧರ್ಮ ಗ್ರಂಥಗಳ ಭೋದನೆ ಮೊದಲು ವಿಧಾನಸಭೆಯಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ಟಿವಿ  ಪತ್ರಿಕಾ ಮಾಧ್ಯಮಗಳಲ್ಲಿ, ಆಸ್ಪತ್ರೆಗಳಲ್ಲಿ, ಪೋಲೀಸ್ ಠಾಣೆಗಳಲ್ಲಿ, ನ್ಯಾಯಾಲಯಗಳಲ್ಲಿ, ಮಂದಿರ ಮಸೀದಿ ಚರ್ಚುಗಳಲ್ಲಿ ಇತ್ಯಾದಿ ಸಮಾಜದ ಮುಖ್ಯ ಸ್ಥಳಗಳಲ್ಲಿ ಮಾಡಿ ಮತ್ತು ಅದನ್ನು ಅನುಸರಿಸಿ. ಆಮೇಲೆ ಮಕ್ಕಳಿಗೆ ಅದನ್ನು ಭೋದಿಸುವ ಅವಶ್ಯಕತೆಯೇ ಇಲ್ಲ. ಅದು ತಾನಾಗಿಯೇ ಜಾರಿಯಾಗುತ್ತದೆ.

Success at any cost, ಯಾವ ರೀತಿಯಲ್ಲಾದರೂ ಹಣ ಮಾಡಿ ಅಧಿಕಾರ ಹಿಡಿ ನಿನಗೆ ಸಮಾಜದಲ್ಲಿ ಗೌರವ ಸಿಗುತ್ತದೆ ಎಂಬ ಸಾಮೂಹಿಕ ವಾತಾವರಣ ನಿರ್ಮಾಣ ಮಾಡಿ ಈಗ ಮತ್ತೆ ಮಕ್ಕಳಿಗೆ ಬುದ್ದಿ ಹೇಳ ಹೊರಟಿರುವ ಹಿರಿಯ ಮಹಾತ್ಮರೆ ಮೊದಲು ನಾವು ಸರಿಯಾಗೋಣ. ಆಮೇಲೆ ಇತರರಿಗೆ ಪಾಠ ಮಾಡೋಣ. ದೊಡ್ಡವರು ತಿಳಿದವರು ಬುದ್ದಿವಂತರು ಒಳ್ಳೆಯವರಾಗಲು ಸಾಧ್ಯವಿಲ್ಲದಿರುವಾಗ ಮಕ್ಕಳ ಮೇಲೆ ಪ್ರಯೋಗ ಮಾಡುವ ಆತ್ಮವಂಚನೆ ಬೇಡ. ನೀನು ಸರಿಯಾದ ಮಾರ್ಗದಲ್ಲಿ ನಡೆ ಮಕ್ಕಳು ನಿನ್ನನ್ನು ಅನುಸರಿಸುತ್ತಾರೆ. ಚಿಕ್ಕ ಮಕ್ಕಳಿಗೆ ‌ಆಧ್ಯಾತ್ಮ ಒಂದು ಹೊರೆ. ಅದನ್ನು ಅವರಿಗೆ ಹೊರಿಸದೆ ನಾವು ಹೊರೋಣ…

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ