ಬುದ್ಧನಾಗಬೇಕೆಂಬ ಆಸೆ ಇದೆ...!?

ಬುದ್ಧನಾಗಬೇಕೆಂಬ ಆಸೆ ಇದೆ...!?

ಕವನ

ಹೊತ್ತುರಿಯುವ ದೇಶ ದೇಶಗಳ ಮಧ್ಯದಲಿ

ಹಿಂಸೆಯೇ ಬೇಡ ಎಂಬ ನೀತಿ ಬೋಧಿಸಲು

ನೆತ್ತರ ದಾಹ ತಣಿಸಿ ಮುಳ್ಳಿರದ ಹೂವ ಬೆಳೆಸಲು

ಬುದ್ಧನಾಗಬೇಕೆಂಬ ಆಸೆ ಇದೆ ಮನದಲಿ..||೧||

 

ನಾಲ್ಕು ಕಾಲಿನ ಆಸನದ ಮೇಲಿನಾಸೆಗಾಗಿ

ಕಿತ್ತಾಡುವ ಮಂದಿಯ ಮುಂದಲಿಗೆ ಬಡಿದು

ಅರೆ ಬುದ್ಧಿ ಪೂರ್ಣಗೊಳಿಸುವ ಶಿಕ್ಷಣ ನೀಡಲು

ಬುದ್ಧನಾಗಬೇಕೆಂಬ ಆಸೆ ಇದೆ ಮನದಲಿ..||೨||

 

ಹಸಿದಾಗ ಎದೆಯ ಹಾಲು ಕುಡಿದು ಬೆಳೆದು 

ಕಾಮ ಮತ್ತಿನಲ್ಲಿ ಸೆರಗು ಮುಟ್ಟುವವರನು

ಮೆಟ್ಟಿನಲ್ಲಿ ಹೊಡೆವ ಜನರ ಮನದಲ್ಲಿ ನೆಲೆಸಲು

ಬುದ್ಧನಾಗಬೇಕೆಂಬ ಆಸೆ ಇದೆ ಮನದಲಿ..||೩||

 

ನರನು ನರರನ್ನೇ ಸ್ವಾರ್ಥಕ್ಕೆ ಕೊಲ್ಲುವಾಗ

ನೆನಪಲ್ಲಿ ಉಳಿದವನು ಅಂಗುಲಿಮಾಲ

ಅವನ ಪರಿವರ್ತನೆಯಂತೆ ಇವರನ್ನೂ ಬದಲಿಸಲು

ಬುದ್ಧನಾಗಬೇಕೆಂಬ ಆಸೆ ಇದೆ ಮನದಲಿ..||೪||

 

ಮತ ಬಿಟ್ಟು ಮತವನ್ನೇ ಮತಕ್ಕಾಗಿ ಮುತ್ತಿದ

ಅವರಿವರ ಮತಿಹೀನ ಮಿತಿಗಿರದ ಜನಗಳಲಿ

ಕುವೆಂಪುರಂತೆ ನೂರು ಮತದ ಹೊಟ್ಟ ತೂರಿಸಲು

ಬುದ್ಧನಾಗಬೇಕೆಂಬ ಆಸೆ ಇದೆ ಮನದಲಿ..||೫||

 

-ದ್ಯಾವಪ್ಪ ಎಂ.(ಮುಗುಳ್ನಗೆಯ ಮೌನಿ)

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್