ಬುದ್ಧನಿಂದ ಬದುಕಿಗೆ ಬೆಳಕು

ಬುದ್ಧನಿಂದ ಬದುಕಿಗೆ ಬೆಳಕು

ಕೋಟಿಗಟ್ಟಲೆ ಜನರ ಬದುಕಿಗೆ ಬೆಳಕಾದ ಮಹಾಜ್ನಾನಿ ಗೌತಮ ಬುದ್ಧ. ಇವತ್ತು, ವೈಶಾಖ ಮಾಸದ ನುಣ್ಣಿಮೆ ದಿನವೇ ಬುದ್ಧ ಜಯಂತಿ. ಬುದ್ಧ ಹುಟ್ಟಿದ ದಿನ ಮತ್ತು ಬುದ್ಧನಿಗೆ ಜ್ನಾನೋದಯವಾದ ದಿನವೇ ಇದು ಎಂಬುದು ವಿಶೇಷ.

ಬುದ್ಧನ ಉಪದೇಶಗಳು ಸಾರ್ವಕಾಲಿಕ. ಧರ್ಮ ಹಾಗೂ ಸಂಸ್ಕೃತಿಗಳ ಗಡಿಗಳನ್ನೆಲ್ಲ ಮೀರಿ ಅವು ನಮ್ಮೆಲ್ಲರ ಮನಸ್ಸಿಗೆ ತಟ್ಟುತ್ತವೆ. ಪ್ರತಿಯೊಬ್ಬನನ್ನೂ ಜಾಗೃತಗೊಳಿಸುವ ಮತ್ತು ಲೌಕಿಕ ಬಂಧನಗಳಿಂದ ಬಿಡುಗಡೆಗೊಳಿಸುವ ಶಕ್ತಿ ಅವಕ್ಕಿದೆ. ನಮ್ಮೆಲ್ಲರನ್ನೂ ಆತ್ಮಾವಲೋಕನಕ್ಕೆ ಪ್ರೇರೇಪಿಸಿ, ಅಧ್ಯಾತ್ಮದ ಹಾದಿಯಲ್ಲಿ ಮುನ್ನಡೆಸಬಲ್ಲ ಉಪದೇಶಗಳು ಅವು.

ನಮ್ಮನ್ನು ಚಿಂತನೆಗೆ ಹಚ್ಚುವ ಬುದ್ಧನ ಕೆಲವು ಚಿಂತನೆಗಳು ಇಲ್ಲಿವೆ:

1.ಶಾಂತಿ ನಮ್ಮೊಳಗಿನಿಂದ ಮೂಡಿ ಬರುತ್ತದೆ. ಅದನ್ನು ಬಾಹ್ಯದಲ್ಲೆಲ್ಲೂ ಹುಡುಕಬೇಡ.
2.ನಿನ್ನ ಜಗತ್ತನ್ನು ಕಂಡುಕೊಂಡು, ಸಂಪೂರ್ಣ ಹೃದಯಪೂರ್ವಕವಾಗಿ ನಿನ್ನನ್ನು ಅದಕ್ಕೆ ಸಮರ್ಪಿಸಿಕೊಳ್ಳುವುದೇ ನಿನ್ನ   ಕೆಲಸ.
3.ಎಲ್ಲವೂ ಪರಿಪೂರ್ಣವಾಗಿದೆ ಎಂದು ಅರ್ಥವಾದಾಗ, ನೀನು ನಿನ್ನ ತಲೆಯನ್ನು ಹಿಂದಕ್ಕೆ ವಾಲಿಸಿ, ಆಕಾಶದತ್ತ ನಕ್ಕು ಬಿಡುತ್ತಿ.
4.ಗತಕಾಲದಲ್ಲಿ ಮುಳುಗಬೇಡ, ಭವಿಷ್ಯದ ಕನಸು ಕಾಣಬೇಡ, ನಿನ್ನ ಮನಸ್ಸನ್ನು ಈಗಿನ ಕ್ಷಣದಲ್ಲೇ ಕೇಂದ್ರೀಕರಿಸು.
5.ವ್ಯಕ್ತಿಯನ್ನು ದುಷ್ಟ ಕೆಲಸಗಳಿಗೆ ಸೆಳೆಯುವುದು ವ್ಯಕ್ತಿಯ ಮನಸ್ಸು; ಶತ್ರು ಅಥವಾ ವೈರಿಯಲ್ಲ.
6.ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕು; ಬೇರೆ ಯಾರಿಂದಲೂ ಅದು ಸಾಧ್ಯವಿಲ್ಲ. ನಮ್ಮ ಪಥದಲ್ಲಿ ನಾವೇ ಮುನ್ನಡೆಯಬೇಕು.
7.ದೈಹಿಕ ಸೌಂದರ್ಯ ಕಣ್ಣುಗಳನ್ನು ಸೆಳೆಯುತ್ತದೆ, ಒಳ್ಳೆಯತನ ಮನಸ್ಸನ್ನು ಸೆಳೆಯುತ್ತದೆ.
8.ಭಯ ಇಲ್ಲದಿರುವುದೇ ನಮ್ಮ ಅಸ್ತಿತ್ವದ ರಹಸ್ಯ. ನೀನು ಏನಾಗುತ್ತೀಯೋ ಎಂದು ಭಯ ಪಡಬೇಡ, ಯಾರನ್ನೂ ಅವಲಂಬಿಸಬೇಡ. ಎಲ್ಲ ಸಹಾಯವನ್ನೂ ನಿರಾಕರಿಸಿದ ಕ್ಷಣದಲ್ಲೇ ನೀನು ಸ್ವತಂತ್ರನಾಗುತ್ತಿ.
9.ಪ್ರತಿಯೊಂದನ್ನೂ ಅನುಮಾನಿಸು. ಕೊನೆಗೆ ನಿನ್ನದೇ ಜ್ನಾನ ಪಡೆದುಕೋ.
10.ಪವಿತ್ರವಾದ ಎಷ್ಟು ಪದಗಳನ್ನು ನೀನು ಓದಿದರೇನು, ನುಡಿದರೇನು,
ಅವುಗಳ ಅನುಸಾರ ನೀನು ಬದುಕಿನಲ್ಲಿ ನಡೆಯದಿದ್ದರೆ ಅವುಗಳಿಂದ ನಿನಗೆ ಏನು ಒಳಿತು ಆಗಲಿದೆ?