ಬುದ್ಧನಿಲ್ಲದ ಅರಮನೆ
ಬುದ್ಧ ಗೆದ್ದು ಬಿಟ್ಟನು
ಅಂದು ಕ್ರೂರಿಯ ಮನವೊಲಿಸಿ
ಬದ್ಧತೆಯ ಬುದ್ಧಿಯಿರದ
ಜಗವಿನ್ನೂ ನಿದ್ದೆಯಲಿಹುದು
ಶುದ್ಧ ಮನವೆಲ್ಲಿದೆ
ಖುದ್ದು ದೇವರೇ ಮೌನ
ಪೆದ್ದ ಮಂದಿಯಂಗಳದಲಿ ಎದ್ದರು ಅಂಗುಲಿಮಾಲರು
ಯುದ್ಧೋನ್ಮಾದ ಮನಸು
ಬಿದ್ದ ಶವಗಳ ನಡುವೆ
ರಕ್ತದ ಮಡುವಲೇ
ಕೋಟೆ ಕಟ್ಟುವ ಮನಸುಗಳು
ವಿಕಾರತೆಯ ಮನೋಬಲದ
ಎದುರು ಕುಸಿದ ಮಾನವತೆ..
ಪರರ ನೋವ ಪೊರೆಯಲಿ
ಜೀವನ ಪೊರೆವ ಮೌಢ್ಯದರಸರು;
ತನ್ನ ತಲೆಯುಳಿಸೆ ಶಿರಗಳ
ಮಾಲೆ ಮಾಡುವರು!
ಅಹಿಂಸೆಯ ಜ್ಯೋತಿ ಬೆಳಗುವರು!
ಬುದ್ಧ ಶಾಂತಿಗಾಗಿ ಶತಾಸಿದ್ಧ
ನಮ್ಮವರಿಗೋ ಅವನು ನಿಷಿದ್ಧ
ದೊರೆಯಾಗಿದ್ದ ಮನೆಯಿಂದ
ತ್ಯಾಗ ಮಾಡಿ ಹೊರಬಿದ್ದ..
ಅರಮನೆಯ ಪ್ರೀತಿ ಭೀತಿ ಮತ್ತು ಭ್ರಾಂತಿಯೆನಿಸಿತೇತಕೋ...
ಅರಮನೆ ಬಿಟ್ಟ ಮೇಲೆ ಅಲ್ಲೂ
ಅವನಿರದೆ ಹಿಂಸೆಯಿತ್ತು ನೋವಿತ್ತು..
ಆದರೂ ಅವನು ಬಿಟ್ಟು ಬರಬೇಕಿತ್ತು
ಬಹುಬಗೆಯ ಮೃಷ್ಟಾನ್ನ ಉಂಡು
ಸುಖದ ನಿದ್ದೆಯಲಿದ್ದ
ಸಿದ್ಧಾರ್ಥನನು ಎಚ್ಚರಿಸಿ
ಬುದ್ಧಿ ಹೇಳಿ ವಿಶ್ವವ ತಿದ್ದುವ
ಬುದ್ಧನೆಂಬ ಬಂಧುವಾಗಿಸಿದ
ಆ ಅನವರತನಿಗೆ ಶರಣು!
ಗೌತಮ ಬುದ್ಧ ಜಗಕೆ ಬೆಳಕು
ಅವನೀಗ ನಮಗೆ ಬೇಕು..
ಬೇಕು ಬೇಕೇನುವ ಮನವ
ತಡೆದು ದುಃಖದಿಂದ ಪಾರಾಗಬೇಕು..!
ಜ್ಞಾನದ ಬುದ್ಧನಿಲ್ಲದ
ಲೋಕದರಮನೆಯಲಿ
ಯುದ್ಧ ಹಿಂಸೆ ನಿಲ್ಲದು!!
- *ಕಾ.ವೀ.ಕೃಷ್ಣದಾಸ್*
ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು